ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಮುಂಬೈನಲ್ಲಿ ಭಾರತೀಯ ಸೃಜನಶೀಲ ತಂತ್ರಜ್ಞಾನಗಳ ಸಂಸ್ಥೆ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ -ಐಐಸಿಟಿ) ಸ್ಥಾಪಿಸಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ

Posted On: 11 APR 2025 6:08PM by PIB Bengaluru

ಮುಂಬೈನಲ್ಲಿ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ (ಎವಿಜಿಸಿ-ಎಕ್ಸ್‌‌ ಆರ್) ವಲಯಕ್ಕೆ ಮೀಸಲಾದ ವಿಶ್ವ ದರ್ಜೆಯ ಭಾರತೀಯ ಸೃಜನಶೀಲ ತಂತ್ರಜ್ಞಾನಗಳ ಸಂಸ್ಥೆ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್-ಐಐಸಿಟಿ) ಯನ್ನು ಸ್ಥಾಪಿಸಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇಂದು ಮಹಾರಾಷ್ಟ್ರ ಸರ್ಕಾರ, ಮಹಾರಾಷ್ಟ್ರ ಚಲನಚಿತ್ರ, ರಂಗಭೂಮಿ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ನಿಗಮ ಲಿಮಿಟೆಡ್ (ಎಂ ಎಫ್‌ ಎಸ್‌ ಸಿ ಡಿ ಸಿ ಎಲ್‌) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ (ಐಐಸಿಟಿ) ಜೊತೆಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿತು.

ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಸುಜಾತಾ ಸೌನಿಕ್ ಮತ್ತು ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು ಮತ್ತು ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರ ಸಮ್ಮುಖದಲ್ಲಿ ವಿನಿಮಯ ಮಾಡಿಕೊಂಡರು.

ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ (ಐಐಸಿಟಿ) - ಇಂತಹ ಮೊದಲ ರೀತಿಯ ಸಂಸ್ಥೆಯಾಗಿದ್ದು, ಸೃಜನಶೀಲ ಉದ್ಯಮಗಳಲ್ಲಿ ಪ್ರತಿಭೆ ಮತ್ತು ನಾವೀನ್ಯತೆಯನ್ನು ಪೋಷಿಸುವತ್ತ ಗಮನ ಹರಿಸಲಿದೆ ಎಂದು ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಹೇಳಿದರು.

ಗೋರೆಗಾಂವ್‌ ನ ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಸಿಟಿಯಲ್ಲಿ ಐಐಸಿಟಿ ಸ್ಥಾಪನೆಯಾಗಲಿದ್ದು, ದೇಶದಲ್ಲಿ ಈ ವಲಯದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಭಾರತವು ಈ ಕ್ಷೇತ್ರದಲ್ಲಿ ಅಗ್ರ ಜಾಗತಿಕ ಆಟಗಾರರಲ್ಲಿ ಒಂದಾಗುವ ಮಹತ್ವವನ್ನು ಗುರುತಿಸುವ ಮೂಲಕ ಎವಿಜಿಸಿ-ಎಕ್ಸ್‌ ಆರ್ ವಲಯದಲ್ಲಿ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯ ಶ್ರೇಷ್ಠತಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಸೃಜನಶೀಲ ಆರ್ಥಿಕತೆ ಮತ್ತು ಮನರಂಜನಾ ಕ್ಷೇತ್ರದ ರಾಜಧಾನಿಯಾದ ಮುಂಬೈನಲ್ಲಿ ಸ್ಥಾಪಿಸಲಾಗುವ ಮೊದಲ ಭಾರತೀಯ ಸೃಜನಾತ್ಮಕ ತಂತ್ರಜ್ಞಾನ ಸಂಸ್ಥೆ (ಐಐಸಿಟಿ) ನಗರದ ಮನರಂಜನಾ ಉದ್ಯಮಕ್ಕೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಜಾಗತಿಕ ವಿಸ್ತರಣೆಯನ್ನು ಸುಗಮಗೊಳಿಸುತ್ತದೆ ಎಂದು ಕೇಂದ್ರ ಸಚಿವರಾದ ಶ್ರೀ ವೈಷ್ಣವ್ ಹೇಳಿದರು.

ಐಐಸಿಟಿಯನ್ನು ಲಾಭರಹಿತ ಸೆಕ್ಷನ್ 8 ಕಂಪನಿಯಾಗಿ ಸ್ಥಾಪಿಸಲಾಗಿದೆ, ಒಟ್ಟು ಶೇ.48 ಸರ್ಕಾರಿ ಇಕ್ವಿಟಿ ಭಾಗವಹಿಸುವಿಕೆಯನ್ನು - ಭಾರತ ಸರ್ಕಾರದಿಂದ ಶೇ.34 ಮತ್ತು ಮಹಾರಾಷ್ಟ್ರ ಸರ್ಕಾರದಿಂದ ಶೇ.14 (ಎಂ ಎಫ್‌ ಎಸ್‌ ಸಿ ಡಿ ಸಿ ಎಲ್‌ ಮೂಲಕ) ಒಳಗೊಂಡಿದೆ. ಉಳಿದ ಶೇ.52 ಪ್ರಮುಖ ಕೈಗಾರಿಕಾ ಸಂಸ್ಥೆಗಳಿಂದ ಬರುತ್ತದೆ, ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಫಿಕ್ಕಿ) ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ತಲಾ ಶೇ.26 ಪಾಲನ್ನು ಹೊಂದಿವೆ.

ಮೂಲಸೌಕರ್ಯ ಅಭಿವೃದ್ಧಿ ಮತ್ತು ಆರಂಭಿಕ ಕಾರ್ಯಾಚರಣೆಗಳಿಗಾಗಿ ಭಾರತ ಸರ್ಕಾರವು ಈಗಾಗಲೇ ₹391.15 ಕೋಟಿಗಳ ಆರಂಭಿಕ ಬಜೆಟ್ ಅನುದಾನವನ್ನು ಒದಗಿಸಿದೆ. ನಂತರ ಐಐಸಿಟಿ ಸ್ವಾವಲಂಬಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಸಿಟಿಯಲ್ಲಿ ಎಂ ಎಫ್‌ ಎಸ್‌ ಸಿ ಡಿ ಸಿ ಎಲ್‌ ನಿಂದ 30 ವರ್ಷಗಳ ಕಾಲ ಗುತ್ತಿಗೆಗೆ ಪಡೆದ 10 ಎಕರೆ ಭೂಮಿಯಿಂದಲೂ ಸಂಸ್ಥೆಯು ಪ್ರಯೋಜನ ಪಡೆಯಲಿದೆ, ಇದು ಡಿಜಿಟಲ್ ಮಾಧ್ಯಮ ಮತ್ತು ಸೃಜನಶೀಲ ತಂತ್ರಜ್ಞಾನ ಪೂರಕ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಈ ತಿಳಿವಳಿಕೆ ಒಪ್ಪಂದದ ಮುಖ್ಯಾಂಶಗಳು:

ಎ. ಶಿಕ್ಷಣ, ಕೌಶಲ್ಯ, ಉದ್ಯಮ ಅಭಿವೃದ್ಧಿ ಮತ್ತು ಸಂಶೋಧನೆ ಮತ್ತು ನಾವೀನ್ಯತೆಗಳ ಮೇಲೆ ಕಾರ್ಯತಂತ್ರದ ಗಮನವನ್ನು ಹೊಂದಿರುವ ಎವಿಜಿಸಿ-ಎಕ್ಸ್‌ ಆರ್‌ ಕೇಂದ್ರದ ಸ್ಥಾಪನೆ.

ಬಿ.  ಸರ್ಕಾರ ಮತ್ತು ಉದ್ಯಮಗಳ ಪ್ರತಿನಿಧಿಗಳೊಂದಿಗೆ ಆಡಳಿತ ಮಂಡಳಿ ಮತ್ತು ನಿರ್ದೇಶಕರ ಮಂಡಳಿಯ ರಚನೆ.

ಸಿ.  ವಲಯವಾರು ಜೋಡಣೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಖಚಿತಪಡಿಸಿಕೊಳ್ಳಲು ಶೈಕ್ಷಣಿಕ, ಕೌಶಲ್ಯ, ಉದ್ಯಮ ಅಭಿವೃದ್ಧಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯ ಕುರಿತು ವಿಶೇಷ ಮಂಡಳಿಗಳ ಅಭಿವೃದ್ಧಿ.

ಡಿ.  ಸಾರ್ವಜನಿಕ-ಖಾಸಗಿ ಸಹಯೋಗವನ್ನು ಬೆಳೆಸುವ ಮತ್ತು ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ಆಕರ್ಷಿಸುವ ಬದ್ಧತೆ.

ತಂತ್ರಜ್ಞಾನ ಮತ್ತು ನಿರ್ವಹಣೆಯಲ್ಲಿ ಐಐಟಿಗಳು ಮತ್ತು ಐಐಎಂಗಳಂತೆಯೇ ಮಾಧ್ಯಮ ಮತ್ತು ಮನರಂಜನಾ ವಲಯಕ್ಕೂ ಐಐಸಿಟಿ ವಿಶ್ವ ದರ್ಜೆಯ ಅತ್ಯುನ್ನತ ಸಂಸ್ಥೆಯಾಗಲಿದೆ. ಮುಂಬೈನ ಎನ್‌ ಎಫ್‌ ಡಿ ಸಿ ಆವರಣದಲ್ಲಿ ಐಐಸಿಟಿಯ ತಾತ್ಕಾಲಿಕ ಕ್ಯಾಂಪಸ್ ಅನ್ನು ಸ್ಥಾಪಿಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಹೆಚ್ಚು ಕೌಶಲ್ಯಪೂರ್ಣ ಕಂಟೆಂಟ್‌ ರಚನೆಕಾರರ ಸ್ಥಿರ ಹರಿವನ್ನು ಉತ್ಪಾದಿಸುವ ಮೂಲಕ, ಐಐಸಿಟಿ ಸೃಜನಶೀಲ ಆರ್ಥಿಕತೆಗೆ ಪ್ರಮುಖ ಜಾಗತಿಕ ಕೇಂದ್ರವಾಗಿ ಭಾರತದ ಸ್ಥಾನವನ್ನು ದೃಢವಾಗಿ ಸ್ಥಾಪಿಸುತ್ತದೆ.

ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸಲು, ಸೃಜನಶೀಲ ವೃತ್ತಿಪರರನ್ನು ಸಬಲೀಕರಣಗೊಳಿಸಲು ಮತ್ತು ಉದಯೋನ್ಮುಖ ವಲಯಗಳಲ್ಲಿ ಹೆಚ್ಚಿನ ಮೌಲ್ಯದ ಉದ್ಯೋಗವನ್ನು ಸೃಷ್ಟಿಸುವ ಸರ್ಕಾರದ ಪ್ರಯತ್ನಗಳ ಅಡಿಯಲ್ಲಿ ಈ ತಿಳಿವಳಿಕೆ ಒಪ್ಪಂದವು ಮಹತ್ವದ ಮೈಲಿಗಲ್ಲಾಗಿದೆ.

 

*****


(Release ID: 2121373)