ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಜಾಗತಿಕ ಹೂಡಿಕೆದಾರರ ಶೃಂಗಸಭೆ 2025 ರಲ್ಲಿ, ಶ್ರೀ ಅಶ್ವಿನಿ ವೈಷ್ಣವ್ ಅವರು ಭಾರತದ ಮೊದಲ ದೇಶೀಯ ಸೆಮಿಕಂಡಕ್ಟರ್ ಚಿಪ್ 2025 ರ ವೇಳೆಗೆ ಉತ್ಪಾದನೆಗೆ ಸಿದ್ಧವಾಗಲಿದೆ ಎಂದು ಘೋಷಿಸಿದರು
ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಮಧ್ಯಪ್ರದೇಶದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಉತ್ಕರ್ಷವನ್ನು ಶ್ರೀ ಅಶ್ವಿನಿ ವೈಷ್ಣವ್ ಎತ್ತಿ ತೋರಿಸಿದರು
1 ಲಕ್ಷ ಚದರ ಅಡಿ ವಿಸ್ತೀರ್ಣದ ತನ್ನ ಮೊದಲ ಐಟಿ ಕ್ಯಾಂಪಸ್ ನಲ್ಲಿ 150 ಕೋಟಿ ರೂ. ಹೂಡಿಕೆ ಮಾಡುವ ಮೂಲಕ ಮಧ್ಯಪ್ರದೇಶ ಐಟಿ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ
Posted On:
25 FEB 2025 8:33PM by PIB Bengaluru
ಭೋಪಾಲ್ ನಲ್ಲಿ ಆಯೋಜಿಸಲಾದ 'ಜಾಗತಿಕ ಹೂಡಿಕೆದಾರರ ಶೃಂಗಸಭೆ 2025' ರ ಎರಡನೇ ದಿನದಂದು ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದರು. ಈ ಸಂದರ್ಭದಲ್ಲಿ, ಮಹಾಶಿವರಾತ್ರಿಯ ಮುನ್ನಾದಿನದಂದು ಹೊಸ ಸ್ಥಾವರಕ್ಕಾಗಿ ಶ್ರೀ ಅಶ್ವಿನಿ ವೈಷ್ಣವ್ ಅವರು ಎಚ್ ಎಲ್ ಬ ಇ ಎಸ್ ಕುಟುಂಬವನ್ನು ಅಭಿನಂದಿಸಿದರು. ಮೊದಲ 'ಮೇಡ್ ಇನ್ ಇಂಡಿಯಾ' ಸೆಮಿಕಂಡಕ್ಟರ್ ಚಿಪ್ 2025 ರ ವೇಳೆಗೆ ಉತ್ಪಾದನೆಗೆ ಸಿದ್ಧವಾಗಲಿದೆ ಎಂದು ಅವರು ಘೋಷಿಸಿದರು.
ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಮಧ್ಯಪ್ರದೇಶದ ತ್ವರಿತ ಬೆಳವಣಿಗೆ
ಈ ಮೈಲಿಗಲ್ಲು ಸಾಧಿಸುವಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಅವರ ಮಹತ್ವದ ಕೊಡುಗೆಯನ್ನು ಶ್ರೀ ವೈಷ್ಣವ್ ಅವರು ಉಲ್ಲೇಖಿಸಿದರು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಮಧ್ಯಪ್ರದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯು ಗಮನಾರ್ಹ ವೇಗವನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.
ಮಾನ್ಯ ಪ್ರಧಾನ ಮಂತ್ರಿಯವರು ಭೋಪಾಲ್ ಮತ್ತು ಜಬಲ್‌ಪುರದಲ್ಲಿ ಎರಡು ಎಲೆಕ್ಟ್ರಾನಿಕ್ ಉತ್ಪಾದನಾ ಕ್ಲಸ್ಟರ್ ಗಳನ್ನು ಅನುಮೋದಿಸಿದ್ದಾರೆ. ಪ್ರಸ್ತುತ, 85 ಕಂಪನಿಗಳು ರಾಜ್ಯದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನಾ ವಲಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡಕ್ಕೂ ಒಂದು ದೊಡ್ಡ ಯಶಸ್ಸಾಗಿದೆ ಎಂದು ಅವರು ಹೇಳಿದರು.

ಮಧ್ಯಪ್ರದೇಶದಲ್ಲಿ 20,000 ಎಂಜಿನಿಯರ್ ಗಳಿಗೆ ತರಬೇತಿ
ಮಧ್ಯಪ್ರದೇಶದಲ್ಲಿ ಭವಿಷ್ಯದ ಕೌಶಲ್ಯ ಕಾರ್ಯಕ್ರಮದಡಿಯಲ್ಲಿ 20,000 ಎಂಜಿನಿಯರ್ ಗಳಿಗೆ ತರಬೇತಿ ನೀಡುವುದಾಗಿ ಘೋಷಿಸುವ ಮೂಲಕ ತಾಂತ್ರಿಕ ಪ್ರಗತಿಗೆ ಸರ್ಕಾರದ ಬದ್ಧತೆಯನ್ನು ಕೇಂದ್ರ ಸಚಿವರು ಎತ್ತಿ ತೋರಿಸಿದರು. ಕಳೆದ ದಶಕದಲ್ಲಿ, ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವು ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದ್ದು, ರೂ.10 ಲಕ್ಷ ಕೋಟಿ ಮೌಲ್ಯವನ್ನು ತಲುಪಿದೆ. ಭಾರತವು ಪ್ರಸ್ತುತ ಮೊಬೈಲ್ (ರೂ.4 ಲಕ್ಷ ಕೋಟಿ); ಲ್ಯಾಪ್‌ಟಾಪ್ ಗಳು, ಸರ್ವರ್ ಗಳು, ಟೆಲಿಕಾಂ ಉಪಕರಣಗಳು (ರೂ.75,000 ಕೋಟಿ) ಮತ್ತು ರಕ್ಷಣಾ ಮತ್ತು ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಸೇರಿದಂತೆ ರೂ.5 ಲಕ್ಷ ಕೋಟಿ ಮೌಲ್ಯದ ಎಲೆಕ್ಟ್ರಾನಿಕ್ಸ್ ಅನ್ನು ರಫ್ತು ಮಾಡುತ್ತಿದೆ. ಎಲೆಕ್ಟ್ರಾನಿಕ್ಸ್ ಅಗ್ರ 3 ರಫ್ತು ವಸ್ತುಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
ಭಾರತದ ಸೆಮಿಕಂಡಕ್ಟರ್ ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುವುದು
ಭಾರತವು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ, ಏಕಕಾಲದಲ್ಲಿ ಐದು ಘಟಕಗಳು ನಿರ್ಮಾಣ ಹಂತದಲ್ಲಿವೆ. ಮೊದಲ 'ಮೇಡ್ ಇನ್ ಇಂಡಿಯಾ' ಚಿಪ್ 2025 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರತಿಭಾನ್ವಿತರ ತಂಡವನ್ನು ಮತ್ತಷ್ಟು ಬಲಪಡಿಸಲು, ಸರ್ಕಾರವು ಸುಧಾರಿತ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ 85,000 ಎಂಜಿನಿಯರ್ ಗಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸ್ಪಷ್ಟ ದೃಷ್ಟಿಕೋನ ಮತ್ತು ನಾಯಕತ್ವವನ್ನು ಎತ್ತಿ ಹಿಡಿದ ಶ್ರೀ ವೈಷ್ಣವ್ ಅವರು ಸರ್ಕಾರದ ಅಚಲ ಬದ್ಧತೆಯು ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಒತ್ತಿ ಹೇಳಿದರು. ಅವರು ಈ ಗಮನಾರ್ಹ ಸಾಧನೆಗಾಗಿ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಮತ್ತು ಮಧ್ಯಪ್ರದೇಶದ ಜನರನ್ನು ಅಭಿನಂದಿಸಿದರು ಮತ್ತು ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದರು.
ಹೊಸ ಐಟಿ ಕ್ಯಾಂಪಸ್ ನ ಪ್ರಮುಖ ಲಕ್ಷಣಗಳು
ಹೊಸದಾಗಿ ಉದ್ಘಾಟನೆಯಾದ ಐಟಿ ಕ್ಯಾಂಪಸ್ 1 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಐಟಿ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಒಂದೇ ಸೂರಿನಡಿ ತಯಾರಿಸುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಈ ಘಟಕವು ಸರ್ವರ್, ಡೆಸ್ಕ್‌ಟಾಪ್, ಮದರ್‌ಬೋರ್ಡ್, ಚಾಸಿಸ್, ರ್ಯಾಮ್, ಎಸ್ ಎಸ್ ಡಿ, ಡ್ರೋನ್ ಗಳು ಮತ್ತು ರೋಬೋಟ್ ಗಳನ್ನು ಉತ್ಪಾದಿಸುತ್ತದೆ, ಜೊತೆಗೆ ಇತರ ಎಂಡ್-ಟು-ಎಂಡ್ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಉತ್ಪಾದಿಸುತ್ತದೆ. ಮುಂದಿನ ಆರು ವರ್ಷಗಳಲ್ಲಿ, ಕ್ಯಾಂಪಸ್ ಸುಮಾರು 150 ಕೋಟಿ ರೂ.ಗಳ ಹೂಡಿಕೆಗೆ ಸಾಕ್ಷಿಯಾಗಲಿದ್ದು, ಸುಮಾರು 1,200 ವೃತ್ತಿಪರರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಲಿದೆ. ಈ ಸೌಲಭ್ಯವು ಡೆಸ್ಕ್‌ಟಾಪ್ ಕಂಪ್ಯೂಟರ್ ಗಳು, ಆಲ್-ಇನ್-ಒನ್ ವರ್ಕ್‌ಸ್ಟೇಷನ್‌ಗಳು, ಲ್ಯಾಪ್‌ಟಾಪ್ ಗಳು, ಟ್ಯಾಬ್ಲೆಟ್ ಗಳು ಮತ್ತು ಮಾನಿಟರ್ ಗಳನ್ನು ಸಹ ತಯಾರಿಸುತ್ತದೆ.
ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಮೊದಲ ದಿನದಂದು, ಕೇಂದ್ರ ಸಚಿವರು ಮಧ್ಯಪ್ರದೇಶದಲ್ಲಿ ಗಮನಾರ್ಹ ಹೂಡಿಕೆಗಳನ್ನು ಘೋಷಿಸಿದರು. ಭಾರತೀಯ ರೈಲ್ವೆ ಮತ್ತು ಮಧ್ಯಪ್ರದೇಶ ಸರ್ಕಾರವು ನವೀಕರಿಸಬಹುದಾದ ಇಂಧನ ಯೋಜನೆಗಳ ಕುರಿತು ಒಪ್ಪಂದಗಳಿಗೆ ಸಹಿ ಹಾಕಿದವು, ಇದು ಅವರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಿದೆ.
ಭವಿಷ್ಯಕ್ಕೆ ಸಿದ್ಧವಾಗಿರುವ ಮೂಲಸೌಕರ್ಯದ ಮೇಲೆ ಭಾರತದ ಗಮನ
ಮೋದಿ ಸರ್ಕಾರವು ಭವಿಷ್ಯಕ್ಕೆ ಸಿದ್ಧವಾಗಿರುವ ಮೂಲಸೌಕರ್ಯ ಮತ್ತು ಸಾಮರ್ಥ್ಯ ವೃದ್ಧಿಯ ಮೇಲೆ ವ್ಯಾಪಕವಾಗಿ ಗಮನಹರಿಸುತ್ತಿದೆ. ವಿಕಸಿತ ಭಾರತ್ 2047 ರ ದೃಷ್ಟಿಯನ್ನು ಸಾಧಿಸಲು, ಸರ್ಕಾರವು ಎಲ್ಲಾ ವಲಯಗಳಲ್ಲಿ ನಾಲ್ಕು ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿದೆ, ಅವುಗಳೆಂದರೆ: ಮೂಲಸೌಕರ್ಯ ಹೂಡಿಕೆ, ಒಳಗೊಳ್ಳುವಿಕೆಯ ಬೆಳವಣಿಗೆ, ಉತ್ಪಾದನಾ ವಿಸ್ತರಣೆ ಮತ್ತು ಕಾನೂನುಗಳ ಸರಳೀಕರಣ.
ಎಚ್ ಎಲ್ ಬಿ ಎಸ್ ಎಂದರೇನು?
ಎಚ್ ಎಲ್ ಬಿ ಎಸ್ ಭೋಪಾಲ್ ನಲ್ಲಿ ಉತ್ಪಾದನಾ ಘಟಕ ಮತ್ತು ಭೋಪಾಲ್ ಐಟಿ ಪಾರ್ಕ್ ನಲ್ಲಿ ಸ್ಥಾಪನೆಯಾಗಲಿರುವ ಅತ್ಯಾಧುನಿಕ ಉತ್ಪಾದನೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯವನ್ನು ಹೊಂದಿರುವ ತಂತ್ರಜ್ಞಾನ ಕಂಪನಿಯಾಗಿದೆ. ಇದು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಸೇವೆ ನೀಡಲು ನವೀನ ಮತ್ತು ಹೈಟೆಕ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತದೆ. ಎಲ್ಲರಿಗೂ, ವಿಶೇಷವಾಗಿ ಜನಸಾಮಾನ್ಯರಿಗೆ ಎಲೆಕ್ಟ್ರಾನಿಕ್ ಉತ್ಪನ್ನಗಳ ಕೈಗೆಟುಕುವಿಕೆಯನ್ನು ಹೆಚ್ಚಿಸಲು ಕಡಿಮೆ ವೆಚ್ಚದ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಎಚ್ ಎಲ್ ಬಿ ಎಸ್ ಹೊಂದಿದೆ. ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಬದ್ಧವಾಗಿರುವ ಎಚ್ ಎಲ್ ಬಿ ಎಸ್, ತನ್ನ ಬ್ಯಾನರ್ ಅಡಿಯಲ್ಲಿರುವ ಪ್ರತಿಯೊಂದು ಉತ್ಪನ್ನವು ಅತ್ಯುನ್ನತ ಮಾನದಂಡಗಳನ್ನು ಪೂರೈಸುತ್ತದೆ. ಎಲೆಕ್ಟ್ರಾನಿಕ್ಸ್ ವಲಯಕ್ಕೆ ಅದರ ತಾಂತ್ರಿಕ ಪ್ರಗತಿಗಳು ಮತ್ತು ಕೊಡುಗೆಗಳಿಗಾಗಿ ಕಂಪನಿಯು ಭಾರತದಾದ್ಯಂತ ಗುರುತಿಸಲ್ಪಟ್ಟಿದೆ ಮತ್ತು ವಿಶ್ವಾಸಾರ್ಹವಾಗಿದೆ.
*****
(Release ID: 2106292)
Visitor Counter : 21