ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ನಮ್ಮ ಸಂವಿಧಾನ - ನಮ್ಮ ಸ್ವಾಭಿಮಾನ ಅಭಿಯಾನ


ಪ್ರಯಾಗರಾಜ್‌ನ ಅರೈಲ್ ಘಾಟ್‌ನ ಪರಮಾರ್ಥ್ ತ್ರಿವೇಣಿ ಪುಷ್ಪದಲ್ಲಿ ಆಯೋಜಿಸಲಾದ ಕಾರ್ಯಕ್ರಮ

Posted On: 24 JAN 2025 8:04PM by PIB Bengaluru

ಭಾರತೀಯ ಸಂವಿಧಾನದ 75ನೇ ವಾರ್ಷಿಕೋತ್ಸವ ಮತ್ತು ಭಾರತ ಗಣರಾಜ್ಯವಾಗಿ ರೂಪುಗೊಂಡಿರುವುದರ ನೆನಪಿಗಾಗಿ 'ನಮ್ಮ ಸಂವಿಧಾನ - ನಮ್ಮ ಸ್ವಾಭಿಮಾನ ಅಭಿಯಾನ' ಆಯೋಜಿಸಲಾಗುತ್ತಿದೆ.  ಈ ನಿಮಿತ್ತ ಇಂದು ಸಂಜೆ ಪ್ರಯಾಗರಾಜ್‌ನ ಅರೈಲ್ ಘಾಟ್‌ನ ಪರಮಾರ್ಥ್ ತ್ರಿವೇಣಿ ಪುಷ್ಪದಲ್ಲಿ ಸಂಜೆ 4:30 ರಿಂದ 5:30 ರವರೆಗೆ ಆಯೋಜಿಸಲಾಗಿದ್ದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ರಾಷ್ಟ್ರದ್ಯಂತ ವರ್ಷಪೂರ್ತಿ ನಡೆಯುವ ಅಭಿಯಾನದ ಭಾಗವಾಗಿ ಆಯೋಜಿಸಲಾದ ಪ್ರಾದೇಶಿಕ ಕಾರ್ಯಕ್ರಮಗಳ ಸರಣಿಯಲ್ಲಿ ಇದು  ನಾಲ್ಕನೇಯದ್ದು. Designing Innovative Solutions for Holistic Access to Justice (DISHA) ಯೋಜನೆಯ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದನ್ನು ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯ,  ನ್ಯಾಯ ಇಲಾಖೆ ಜಾರಿಗೆ ತರಲಿದೆ. 

ಕಾನೂನು ಮತ್ತು ನ್ಯಾಯ ಸಚಿವಾಲಯದ ಸಹಾಯಕ ಸಚಿವ (ಸ್ವತಂತ್ರ ಹೊಣೆ) ಮತ್ತು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವರಾದ  ಶ್ರೀ. ಅರ್ಜುನ್ ರಾಂ ಮೇಘವಾಲ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಮುಖ ಭಾಷಣ ಮಾಡಿದರು. ಶ್ರೀ. ಮೇಘವಾಲ್ ಅವರು ಸಾಂವಿಧಾನಿಕ ಅರಿವು ಮತ್ತು ಕಾನೂನು ಸಬಲೀಕರಣದ ಮಹತ್ವದ ಕುರಿತು ಒತ್ತಿ ಹೇಳಿದರು. ಪರ್ಮಾರ್ಥ್ ನಿಕೇತನದ ಅಧ್ಯಕ್ಷ ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಎಚ್.ಎಚ್. ​​ಪೂಜ್ಯ ಸ್ವಾಮಿ ಚಿದಾನಂದ್ ಸರಸ್ವತಿ ಅವರು ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದರು. ಪರ್ಮಾರ್ಥ್ ನಿಕೇತನ ಅಂತಾರಾಷ್ಟ್ರೀಯ ನಿರ್ದೇಶಕ ಪೂಜ್ಯ ಸಾಧ್ವಿ ಭಗವಾತಿ ಸರಸ್ವತಿಯವರು ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಯಾಗಿ ಹಾಜರಾಗಿದ್ದರು.

ವೇದಿಕೆಯನ್ನು ಅಲಂಕರಿಸಿದ  ಗಣ್ಯರನ್ನು ಹಾಗು ಸಭಿಕರೆಲ್ಲರನ್ನು  ಸ್ವಾಗತಿಸಿದ, ನ್ಯಾಯ ಇಲಾಖೆ ಕಾರ್ಯದರ್ಶಿ, ನಮ್ಮ ಸಂವಿಧಾನ ನಮ್ಮ ಸ್ವಾಭಿಮಾನ ಅಭಿಯಾನದ ವಿವಿಧ ಅಂಶಗಳು ಮತ್ತು ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಮೂರು ಉತ್ಪನ್ನಗಳ ಕುರಿತು ಮಾಹಿತಿ ಹಂಚಿಕೊಂಡರು- ನಮ್ಮ ಸಂವಿಧಾನ ನಮ್ಮ ಸ್ವಾಭಿಮಾನ ಅಭಿಯಾನದ ವರ್ಷಪೂರ್ತಿ ಚಟುವಟಿಕೆಗಳ ಸಾಧನೆಗಳನ್ನು ಬಿಂಬಿಸುವ ಕಿರುಪುಸ್ತಕ, ನ್ಯಾಯಾಂಗ ಇಲಾಖೆಯ ಪ್ರಮುಖ ಘಟನೆಗಳನ್ನು ಒಳಗೊಂಡ 2025ರ ನ್ಯಾಯಾಂಗ ಇಲಾಖೆಯ ಕ್ಯಾಲೆಂಡರ್ ಬಿಡುಗಡೆಗೊಂಡ ೨ ಕೃತಿಗಳು.  ಮೂರನೇಯದಾಗಿ  ಬಿಡುಗಡೆಯಾದ  ನಮ್ಮ ಸಂವಿಧಾನ ನಮ್ಮ ಸಮ್ಮಾನ ಅಭಿಯಾನದ ಚಲನಚಿತ್ರವು ಅಭಿಯಾನದಡಿ  ನಡೆಯುವ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುತ್ತದೆ.

ಕಾನೂನು ಮತ್ತು ನ್ಯಾಯ ಇಲಾಖೆಯಾ ಮಾನ್ಯ ಸಹಾಯಕ ಸಚಿವರ ಪ್ರಧಾನ ಭಾಷಣ ಸೇರಿದಂತೆ ಗೌರವಾನ್ವಿತ ಅತಿಥಿಗಳು  ಮತ್ತು ಗಣ್ಯರ ಭಾಷಣಗಲು ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದವು .

ಕಾರ್ಯಕ್ರಮದ ಮಹತ್ವವನ್ನು ಸಾರಿ ಹೇಳಿದ ಪೂಜ್ಯ ಸ್ವಾಮಿಜಿಯವರು ಭಾರತದ ಸಂವಿಧಾನವನ್ನು ದೇಶದ ಮೂಲಭೂತ ಕಾನೂನು ಎಂದು ಪ್ರತಿಬಿಂಬಿಸಿದರು “ಜಹಾ ಸಬ್ ಸಮಾನ್ ಸಬ್ಕಾ ಸಮ್ಮಾನ್, ಯಹಿ ಹೈ ಭಾರತ್ ಕಾ ಸಂವಿಧಾನ್” ಅಂದರೆ ಎಲ್ಲಿ ಎಲ್ಲರನ್ನು ಸಮಾನವಾಗಿ ಪರಿಗಣಿಸಲಾಗುತ್ತದೆಯೋ ಅಲ್ಲಿ ಎಲ್ಲರಿಗೂ ಗೌರವ ಲಭಿಸುತ್ತದೆ, ಇದೆ ನಮ್ಮ ಭಾರತದ ಸಂವಿಧಾನವಾಗಿದೆ ಎಂದರ್ಥ. ಈ ಕಾರ್ಯಕ್ರಮವು ಮಹಾಕುಂಭದಲ್ಲಿ ಸಂಗಮದ ಸಾಂಕೇತವಾಗಿದೆ ಎಂದು ಅದರ ಮಹತ್ವವನ್ನು ಒತ್ತಿ ಹೇಳಿದರು. ಸಂಗಮದ ಮೂಲಕ ಪ್ರಪಂಚದಾದ್ಯಂತ ಏಕತೆಯ ಸಂದೇಶವನ್ನು ಇದು ಸಾರುತ್ತದೆ ಎಂದರು. ಒಂದು ರಾಷ್ಟ್ರದ ಶಕ್ತಿ ಅದರ ಜನರು ಮತ್ತು ಅವರ ಸ್ವಭಾವದಲ್ಲಿ ಅಡಗಿರುತ್ತದೆ ಎಂದು ಅವರು ನಂಬಿದ್ದಾರೆ. ನನಗಾಗಿ ಏನಿದೆ ಎಂಬುದರ ಮೇಲೆ ನಾವು ಗಮನ ಕೇಂದ್ರೀಕರಿಸದೆ ನನ್ನ ಮೂಲಕ ಏನಾಗಬಹುದು ಎಂಬುದರತ್ತ ಗಮನ ಕೇಂದ್ರೀಕರಿಸಬೇಕು ಎಂದು ಅವರು ಒತ್ತಿ ಹೇಳಿದರು. ರಾಷ್ಟ್ರದ ಗೌರವವನ್ನು ಕಾಪಾಡಿದ ಭಾರತದ ಸಂವಿಧಾನದ 75 ವೈಭವಯುತ ವರ್ಷಗಳನ್ನು ಗೌರವಿಸಲು ನಾವು ಇಲ್ಲಿ ಸೇರಿದ್ದೇವೆ ಎಂದು ಅವರು ಹೇಳಿದರು. ಎಲ್ಲಾ ಸರ್ಕಾರಿ ನೌಕರರು ವೇತನದಿಂದ ವತನ್ ಕಡೆಗೆ ಅಂದರೆ ರಾಷ್ಟ್ರದೆಡೆಗೆ ಗಮನ ಹರಿಸುವ ಮೂಲಕ ರಾಷ್ಟ್ರದ ದೊಡ್ಡ ಗುರಿಯೆಡೆಗೆ ಕೆಲಸ ಮಾಡುವ ಅಗತ್ಯತೆ ಬಗ್ಗೆ ಅವರು ಒತ್ತಿ ಹೇಳಿದರು.

ಭಾರತದ ಸಂಸ್ಕೃತಿ ಮತ್ತು ಧರ್ಮಕ್ಕೆ ಒತ್ತು ನೀಡಿದ ಸಾಧ್ವಿಯವರು ಭಾರತದ ಶ್ರೀಮಂತ ಪರಂಪರೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿದರು.  ಅಲ್ಲದೆ ಯಾವುದೇ ದೇಶವು ಭಾರತದಂತಹ ನೈತಿಕತೆ ಮತ್ತು ಗಹನ ಮೌಲ್ಯಗಳನ್ನು ಒಳಗೊಂಡಿಲ್ಲ ಎಂದು ಹೇಳಿದರು. ಅವರು "ಭಾರತದಲ್ಲಿರುವ  ಸಂಸ್ಕೃತಿ, ಪರಂಪರೆ, ಧರ್ಮ ವಿಶ್ವದಲ್ಲಿ ಬೇರೆಲ್ಲೂ ಕಾಣಸಿಗದು" ಎಂದು ಒತ್ತಿ ಹೇಳಿದರು. ಸನಾತನ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಿದ ಮೌಲ್ಯಗಳನ್ನು ನಂಬುವ ಮೂಲಕ ನಾವು ನಮ್ಮನ್ನು ನಂಬಬೇಕು ಏಕೆಂದರೆ ಇಲ್ಲಿಯೇ ಅಪ್ರತಿಮ ಸಾರವಿದೆ. ದೇಶವು ಸ್ವರಾಜ್ಯವನ್ನು ಬಹಳ ಹಿಂದೆಯೇ ಸಾಧಿಸಿದೆ, ಈಗ ನಮ್ಮ ಮನಸ್ಸನ್ನು ಜಾತಿ, ಬಣ್ಣ, ಭಾಷೆ ಮತ್ತು ಧರ್ಮದ ಸಂಕೋಲೆಗಳಿಂದ ಮುಕ್ತಗೊಳಿಸುವ ಸಮಯ ಬಂದಿದೆ ಎಂದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಗೌರವಾನ್ವಿತ ಸಚಿವರು, ಭಾರತದ ಸಂವಿಧಾನವು ದೇಶದ ನಾಗರಿಕರನ್ನು ರಕ್ಷಿಸುತ್ತದೆ ಎಂದು ಹೇಳಿದರು. 1950ರ ಜನವರಿ 24 ರಂದು ಅಂಗೀಕರಿಸಲ್ಪಟ್ಟ ರಾಷ್ಟ್ರ ಗೀತೆಯ ಮಹತ್ವದ ಬಗ್ಗೆ ಅವರು ಪ್ರಸ್ತಾಪಿಸಿದರು. ರಾಷ್ಟ್ರಧ್ವಜ ಮತ್ತು ರಾಷ್ಟ್ರ ಗೀತೆಯು ಬೇರೆ ಬೇರೆ ದಿನಾಂಕಗಳಲ್ಲಿ ಅಂಗೀಕರಿಸಲ್ಪಟ್ಟಿದ್ದರೂ, ಯಾವುದೇ ಔಪಚಾರಿಕ ಸಂದರ್ಭದಲ್ಲಿ ಪರಸ್ಪರ ಪೂರಕವಾಗಿ, ಗೌರವ ವೃದ್ಧಿಯನ್ನು ಮಾಡುತ್ತವೆ ಎಂದು ಅವರು ಒತ್ತಿ ಹೇಳಿದರು. ಇಂದಿನ 'ನಮ್ಮ ಸಂವಿಧಾನ, ನಮ್ಮ ಸಮ್ಮಾನ', ನಾಡಿದ್ದು ಮತದಾತರ ದಿನ ಮತ್ತು ಜನವರಿ 26 ರಂದು ಗಣರಾಜ್ಯೋತ್ಸವದ ಮೂರು ಕಾರ್ಯಕ್ರಮಗಳು ಸಂಗಮದಲ್ಲಿ ಗಂಗಾ, ಜಮುನಾ, ಸರಸ್ವತಿಯ ಸಾಂಕೇತಿಕ ಸಂಗಮವನ್ನು ಪ್ರತಿನಿಧಿಸುತ್ತವೆ ಎಂದು ಅವರು ಹೇಳಿದರು.

ಮಹಿಳಾ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಬೇಕು ಮತ್ತು ಅವರನ್ನು "ನ್ಯಾಯ ಸಖಿಗಳು" ಮಾಡುವ ಮೂಲಕ ಜನಸಾಮಾನ್ಯರಿಗೆ ಸಂವಿಧಾನದ ಅಂಗೀಕೃತ ಸಂದೇಶವನ್ನು ತಲುಪಿಸಲು ಒಂದು ಮಾಧ್ಯಮವಾಗಿ ಬಳಸಬೇಕು ಎಂದು ಅವರು ಒತ್ತಿ ಹೇಳಿದರು.

ಸರ್ಕಾರದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು, ಮಹಾ ಕುಂಭದಲ್ಲಿ  ಒಂದೆಡೆ ಸೇರುವ ತ್ರಿವೇಣಿ-ಸಂಗಮದಂತೆ ಎಂದು ಸಾಂಕೇತಿಕವಾಗಿ  ಉಲ್ಲೇಖಿಸುವುದರ ಮೂಲಕ  ಅವರು ಈ ಕಾರ್ಯಕ್ರಮದ ಮಹತ್ವವನ್ನು ಹೋಲಿಸಿದರು.

‘ನಮ್ಮ ಸಂವಿಧಾನ - ನಮ್ಮ ಸ್ವಾಭಿಮಾನ’ ಅಭಿಯಾನದಡಿಯಲ್ಲಿ, ಪ್ರಸ್ತುತ ಕೇಂದ್ರ ಕಾನೂನು ಸಚಿವರ ಅಧಿಕಾರ ಅವಧಿಯಲ್ಲಿ ಇಲ್ಲಿಯವರೆಗೆ, ಒಂದು ರಾಷ್ಟ್ರೀಯ ಕಾರ್ಯಕ್ರಮ ಮತ್ತು ಮೂರು ಪ್ರಾದೇಶಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೊತೆಗೆ, ಈ ಉಪಕ್ರಮವನ್ನು ಮುಂದಕ್ಕೆ ಕೊಂಡೊಯ್ಯಲು, ಅಭಿಯಾನವನ್ನು ಈಗ “ನಮ್ಮ ಸಂವಿಧಾನ - ನಮ್ಮ ಸ್ವಾಭಿಮಾನ” ಎಂದು ಕರೆಯಲಾಗುವುದು. ಭಾರತದ ಸಂವಿಧಾನದ ಪೀಠಿಕೆಯ ಪ್ರತಿಯನ್ನು ಫಲಕವಾಗಿ ಕಾರ್ಯಕ್ರಮದ ಗಣ್ಯರಿಗೆ ನೀಡಲಾಯಿತು. ನ್ಯಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀ.  ನೀರಜ್ ಕುಮಾರ್ ಗಯಾಗಿ ಅವರು ಅಭಿನಂದನಾ ಭಾಷಣವನ್ನು ಮಾಡಿದರು.

ಅಲಹಾಬಾದ್‌ ಉಚ್ಚ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರು, ಅಲಹಾಬಾದ್‌ ಉಚ್ಚ ನ್ಯಾಯಾಲಯ ವಕೀಲ ಸಂಘದ ಸದಸ್ಯರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿನಿಧಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಪ್ರತಿನಿಧಿಗಳು, ಮಹಾ ಕುಂಭದ ಭಕ್ತರು ಮತ್ತು ಪರ್ಮಾರ್ಥ್ ನಿಕೇತನದ ಸ್ವಯಂಸೇವಕರು ಸೇರಿದಂತೆ 2000 ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಫೇಸ್‌ಬುಕ್, ಯುಟ್ಯೂಬ್, ದೂರದರ್ಶನ ಇತ್ಯಾದಿಗಳಲ್ಲಿ ನೇರ ಪ್ರಸಾರ ಮಾಡಲಾದ ಈ ಕಾರ್ಯಕ್ರಮದಲ್ಲಿ ಸಿಎಸ್‌ಸಿಯ ಮೂಲಭೂತ ಕಾರ್ಯಕರ್ತರು ಮತ್ತು ಸಾರ್ವಜನಿಕರು ವರ್ಚುವಲ್ ಆಗಿ ಭಾಗವಹಿಸಿದ್ದರು. ಜೊತೆಗೆ, ನ್ಯಾಯ ಇಲಾಖೆಯ ಹಲವಾರು ಹಿತಾಸಕ್ತರು ವರ್ಚುವಲ್ ಆಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮದ ವ್ಯಾಪ್ತಿ ಮತ್ತು ಭಾಗವಹಿಸುವಿಕೆಗೆ ಕೊಡುಗೆ ನೀಡಿದರು.

24 ಜನವರಿ 2024 ರಂದು ನವ ದೆಹಲಿಯ ಡಾ|| ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳು ಅಧಿಕೃತವಾಗಿ ಪ್ರಾರಂಭಿಸಿದ 'ನಮ್ಮ ಸಂವಿಧಾನ - ನಮ್ಮ ಸ್ವಾಭಿಮಾನ' ಅಭಿಯಾನವು, ಭಾರತೀಯ ಸಂವಿಧಾನದ ಕುರಿತು ತಿಳುವಳಿಕೆಯನ್ನು ಹೆಚ್ಚಿಸುವ ಮತ್ತು ನಾಗರಿಕರಲ್ಲಿ ಕಾನೂನು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಈ ಪ್ರಯತ್ನಗಳ ಒಂದು ಭಾಗವಾಗಿ ದೇಶಾದ್ಯಂತ ಪ್ರಾದೇಶಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಬಿಕಾನೇರ್, ಪ್ರಯಾಗರಾಜ್, ಗುವಾಹಟಿಯಂಥ ಸ್ಥಳಗಳು ಕಳೆದ ವರ್ಷ ಯಶಸ್ವಿ ಕಾರ್ಯಕ್ರಮಗಳನ್ನು ಈಗಾಗಲೇ ಆಯೋಜಿಸಿವೆ.

ಕಾನೂನು ಮಾಹಿತಿಯನ್ನು ಸರಳೀಕರಿಸಲು ಮತ್ತು ನಾಗರಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು, ಪ್ರಾದೇಶಿಕ ಕಾರ್ಯಕ್ರಮಗಳ ಜೊತೆಗೆ ಈ ಅಭಿಯಾನದಲ್ಲಿ , ಸಬ್ಕೋ ನ್ಯಾಯ್  ಹರ್ ಘರ್ ನ್ಯಾಯ್, ನವ್  ಭಾರತ್ ನವ್ ಸಂಕಲ್ಪ್  ಮತ್ತು ವಿಧಿ ಜಾಗೃತಿ ಅಭಿಯಾನದಂತಹ ಉಪ-ಅಭಿಯಾನಗಳನ್ನು ಸಹ ಪ್ರಾರಂಭಿಸಲಾಯಿತು. ವಿವಿಧ ಸಂಪನ್ಮೂಲಗಳು ಮತ್ತು ಕಾನೂನು ಸೇವೆಗಳೊಂದಿಗೆ ನಾಗರಿಕರು ತೊಡಗಿಸಿಕೊಳ್ಳಲು, 'ನಮ್ಮ ಸಂವಿಧಾನ - ನಮ್ಮ ಸ್ವಾಭಿಮಾನ ಅಭಿಯಾನ' ಪೋರ್ಟಲ್ ಮೂಲಕ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲಾಗಿದೆ.

ಇಂದಿನ ಕಾರ್ಯಕ್ರಮದ ಯಶಸ್ಸು ಅಭಿಯಾನದ ಪ್ರಮುಖ ಸಂದೇಶಕ್ಕೆ ಮತ್ತಷ್ಟು ಪುಷ್ಟಿ ನೀಡಿತು: ಭಾಗವಹಿಸುವಿಕೆ ಮತ್ತು ತೊಡಗಿಸಿಕೊಳ್ಳುವಿಕೆಗೆ ಒತ್ತು ಕೊಡುವ ಮೂಲಕ, ಕಾನೂನು ಕಾರ್ಯವಿಧಾನಗಳದಿಂದ  ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು  ನಾಗರಿಕರಿಗೆ ಜ್ಞಾನ ಮತ್ತು ಸಾಧನಗಳನ್ನು ನೀಡಿ  ಸಶಕ್ತರನ್ನ ಮಾಡುವ ಗುರಿ ಹೊಂದಿದೆ.

 

*****
 


(Release ID: 2096049) Visitor Counter : 15


Read this release in: English , Urdu , Hindi