ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರವು ಜಾಗತಿಕ ಶಕ್ತಿಯಾಗಿದೆ: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ
ಜೈಪುರದಲ್ಲಿ ನಡೆದ ನವೀಕರಿಸಬಹುದಾದ ಇಂಧನದ ಪ್ರಾದೇಶಿಕ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಸಚಿವರು ವಹಿಸಿದ್ದರು
Posted On:
21 JAN 2025 6:09PM by PIB Bengaluru
ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರವು ಪ್ರಮುಖ ಜಾಗತಿಕ ಶಕ್ತಿಯಾಗಿದೆ ಮತ್ತು 2030ರ ವೇಳೆಗೆ 500 ಗಿಗಾವ್ಯಾಟ್ ಗುರಿಯನ್ನು ಸಾಧಿಸಲು ಮತ್ತು ಅದನ್ನು ಮೀರಿಸಲು ಉತ್ತಮ ಸ್ಥಾನದಲ್ಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಇಂದು ಜೈಪುರದಲ್ಲಿ ನಡೆದ ನವೀಕರಿಸಬಹುದಾದ ಇಂಧನದ ಪ್ರಾದೇಶಿಕ ಪರಿಶೀಲನಾ ಸಭೆಯನ್ನುದ್ದೇಶಿಸಿ ಸಚಿವರು ಮಾತನಾಡಿದರು. 2032ರ ವೇಳೆಗೆ ಭಾರತದಲ್ಲಿ ದುಪ್ಪಟ್ಟಾಗಲಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ನಮ್ಮ ಇಂಧನ ಮಿಶ್ರಣದಲ್ಲಿ ನವೀಕರಿಸಬಹುದಾದ ಇಂಧನವು ಹೆಚ್ಚು ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಪಂಜಾಬ್, ಚಂಡೀಗಢ, ಹರಿಯಾಣ, ರಾಜಸ್ಥಾನ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ಉತ್ತರ ಭಾಗದ ರಾಜ್ಯಗಳ ನವೀಕರಿಸಬಹುದಾದ ಇಂಧನ ವಲಯದ ಪ್ರಗತಿಯನ್ನು ಪರಿಶೀಲಿಸಲಾಯಿತು.
COP26 ರಿಂದ ಪಂಚಾಮೃತ ಉಪಕ್ರಮದವರೆಗೆ ಸರ್ಕಾರದ ಬದ್ಧತೆಯನ್ನು ಉಲ್ಲೇಖಿಸಿದ ಸಚಿವರು, ಸುಸ್ಥಿರ ಇಂಧನ ಆರ್ಥಿಕತೆಗೆ ಭಾರತದ ಪರಿವರ್ತನೆಯಲ್ಲಿ ನವೀಕರಿಸಬಹುದಾದ ಇಂಧನದ ಪಾತ್ರವನ್ನು ಒತ್ತಿ ಹೇಳಿದರು. ಭಾರತದ ವಿಶ್ವದ ಪ್ರಮುಖ ಹಸಿರು ಹೈಡ್ರೋಜನ್ ಯೋಜನೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಇತ್ತೀಚಿನ ₹32 ಲಕ್ಷ ಕೋಟಿ ಮೌಲ್ಯದ ಹೂಡಿಕೆಗಳು ಸುಸ್ಥಿರ ಮತ್ತು ಇಂಧನ-ಸುರಕ್ಷಿತ ಭವಿಷ್ಯಕ್ಕಾಗಿ ರಾಷ್ಟ್ರದ ದೀರ್ಘಾವಧಿಯ ಬದ್ಧತೆಯನ್ನು ಒತ್ತಿಹೇಳುತ್ತವೆ ಎಂದು ಅವರು ಹೇಳಿದರು.
ರಾಜ್ಯದ ಕೋರಿಕೆಯಂತೆ 2025 ರ ಜನವರಿಯಲ್ಲಿ ಪ್ರಧಾನಮಂತ್ರಿ ಕುಸುಮ್ ಯೋಜನೆಯಡಿ ಕೇಂದ್ರ ಸರ್ಕಾರವು ರಾಜಸ್ಥಾನಕ್ಕೆ ಹೆಚ್ಚುವರಿ 5,000 ಮೆಗಾವ್ಯಾಟ್ ಹಂಚಿಕೆ ಮಾಡಿದೆ ಎಂದು ಸಚಿವರು ಹೇಳಿದರು. ಜೈಸಲ್ಮೇರ್ ನಲ್ಲಿ ಒಟ್ಟು 1,200 ಮೆಗಾವ್ಯಾಟ್ ನ ನಾಲ್ಕು ಸೌರ ವಿದ್ಯುತ್ ಯೋಜನೆಗಳ ಇತ್ತೀಚಿನ ಉದ್ಘಾಟನೆಯನ್ನೂ ಅವರು ಉಲ್ಲೇಖಿಸಿದರು. ಭಾರತದ ನವೀಕರಿಸಬಹುದಾದ ಇಂಧನ ಕ್ರಾಂತಿಯಲ್ಲಿ ರಾಜ್ಯದ ಪ್ರಮುಖ ಪಾತ್ರವನ್ನು ಪುನರುಚ್ಚರಿಸಿದ ಶ್ರೀ ಜೋಶಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳ ಸಾಮೂಹಿಕ ಪ್ರಗತಿಗಾಗಿ ರಾಜ್ಯ ಸರ್ಕಾರಗಳೊಂದಿಗೆ ಸಹಯೋಗಕ್ಕೆ ಒತ್ತು ನೀಡುತ್ತಿದೆ ಎಂದು ಹೇಳಿದರು.
ಗಾಂಧಿನಗರ, ಭುವನೇಶ್ವರ್, ಕೋಲ್ಕತ್ತಾ ಮತ್ತು ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರಾಜ್ಯ ಮಟ್ಟದ ಪರಾಮರ್ಶೆಗಳನ್ನು ನಡೆಸಲಾಗಿದೆ, ಈ ಕ್ಷೇತ್ರದ ಪ್ರಗತಿಯನ್ನು ಮತ್ತಷ್ಟು ಬಲಪಡಿಸಲು ವಿಶಾಖಪಟ್ಟಣಂ, ವಾರಾಣಸಿ ಮತ್ತು ಗುವಾಹಟಿಯಲ್ಲಿ ಮುಂದಿನ ಸಭೆಗಳನ್ನು ಯೋಜಿಸಲಾಗಿದೆ ಎಂದು ಸಚಿವರು ಹೇಳಿದರು. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಸವಾಲುಗಳು ಮತ್ತು ನಿರೀಕ್ಷೆಗಳನ್ನು ಪೂರೈಸಲು ಉದ್ಯಮದ ಪಾಲುದಾರರೊಂದಿಗೆ ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ನಡೆಸುತ್ತಿರುವ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು.
ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಚಿವ ಜೋಶಿ ಅವರು ಮೇಲ್ಛಾವಣಿ ಸೌರಶಕ್ತಿಯನ್ನು ಉತ್ತೇಜಿಸಲು ವಿವಿಧ ಡಿಸ್ಕಾಂಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಿದರು. ಪ್ರೋತ್ಸಾಹಧನಗಳು 2020, 2021, 2022 ಮತ್ತು 2023 ನೇ ಆರ್ಥಿಕ ವರ್ಷಗಳಿಗೆ ಸಂಬಂಧಿಸಿವೆ. 2021, 2022 ಮತ್ತು 2023 ನೇ ಆರ್ಥಿಕ ವರ್ಷಗಳಿಗೆ ಸಂಬಂಧಿಸಿದಂತೆ ರಾಜಸ್ಥಾನ ರಾಜ್ಯದ ಜೋಧಪುರ ಮತ್ತು ಅಜ್ಮೀರ್ ಡಿಸ್ಕಾಮ್ ಗಳಿಗೆ ಕ್ರಮವಾಗಿ 39.43 ಕೋಟಿ ಮತ್ತು 17.59 ಕೋಟಿ ರೂ. ಪ್ರೋತ್ಸಾಹಧನ ನೀಡಲಾಯಿತು. 2020, 2021, 2022 ಮತ್ತು 2023 ನೇ ಆರ್ಥಿಕ ವರ್ಷಗಳಿಗೆ ಕ್ರಮವಾಗಿ ದಕ್ಷಿಣ ಹರಿಯಾಣ ಮತ್ತು ಉತ್ತರ ಹರಿಯಾಣ ಡಿಸ್ಕಮ್ ಗಳಿಗೆ 42.68 ಕೋಟಿ ಮತ್ತು 22.43 ಕೋಟಿ ರೂ. ಪ್ರೋತ್ಸಾಹಕಗಳನ್ನು ನೀಡಲಾಯಿತು. ಪಂಜಾಬ್ ಡಿಸ್ಕಾಂ (PSPCL) 2023 ನೇ ಸಾಲಿಗೆ 11.39 ಕೋಟಿ ರೂ. ಪಡೆದಿದೆ. ಉತ್ತರಾಖಂಡವು 20, 21, 22 ಮತ್ತು 23 ಕ್ಕೆ 9.48 ಕೋಟಿ ರೂ.ಗಳನ್ನು ಪ್ರೋತ್ಸಾಹಕವಾಗಿ ಪಡೆಯಿತು. ಉತ್ತರ ಪ್ರದೇಶದ ಮಧ್ಯಾಂಚಲ್ ಡಿಸ್ಕಾಂ 2021, 22 ಮತ್ತು 23 ನೇ ಸಾಲಿಗೆ 9.51 ಕೋಟಿ ರೂ.ಗಳನ್ನು ಪ್ರೋತ್ಸಾಹಕವಾಗಿ ಸ್ವೀಕರಿಸಿತು.
ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ, ಕೇಂದ್ರ ರಾಜ್ಯ ಸಚಿವ ಶ್ರೀ ಯೆಸ್ಸೋ ನಾಯಕ್, ರಾಜಸ್ಥಾನದ ಇಂಧನ ಸಚಿವ ಶ್ರೀ ಹೀರಾಲಾಲ್ ನಗರ್, ಜಮ್ಮು ಮತ್ತು ಕಾಶ್ಮೀರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಶ್ರೀ ಸತೀಶ್ ಮಿಶ್ರಾ, ಹಿಮಾಚಲ ಪ್ರದೇಶದ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಸಚಿವ ಶ್ರೀ ರಾಜೇಶ್ ಧರ್ಮಾನಿ ಮತ್ತು ಹರಿಯಾಣದ ಇಂಧನ, ಸಾರಿಗೆ ಮತ್ತು ಕಾರ್ಮಿಕ ಸಚಿವ ಶ್ರೀ ಅನಿಲ್ ವಿಜ್ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಹಿಮಾಚಲ ಪ್ರದೇಶದ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಸಚಿವ ಶ್ರೀ ರಾಜೇಶ್ ಧರ್ಮಾನಿ ಮತ್ತು ಹರಿಯಾಣದ ಇಂಧನ, ಸಾರಿಗೆ ಮತ್ತು ಕಾರ್ಮಿಕ ಸಚಿವ ಶ್ರೀ ಅನಿಲ್ ವಿಜ್ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಎಂ ಎನ್ ಆರ್ ಇ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ, ಎಂ ಎನ್ ಆರ್ ಇ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸುದೀಪ್ ಜೈನ್, ರಾಜ್ಯ ರಾಜಕೀಯ ಮತ್ತು ಆಡಳಿತ ನಾಯರು ಮತ್ತು ತಜ್ಞರು, ನವೀಕರಿಸಬಹುದಾದ ಇಂಧನ ವಲಯದಲ್ಲಿನ ವಿನೂತನ ಪರಿಹಾರಗಳು ಮತ್ತು ಪ್ರಗತಿಯ ಕುರಿತು ಒಳನೋಟಗಳನ್ನು ಹಂಚಿಕೊಂಡರು.
ಪ್ರಾದೇಶಿಕ ಪರಿಶೀಲನಾ ಸಭೆಯ ಪ್ರಮುಖ ಮುಖ್ಯಾಂಶಗಳು
ನವೀಕರಿಸಬಹುದಾದ ಇಂಧನದ ಮೈಲಿಗಲ್ಲುಗಳು ಮತ್ತು ಗುರಿಗಳು
ಎಂ ಎನ್ ಆರ್ ಇ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ, ಭಾರತವು ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಈಗಾಗಲೇ 200 ಗಿಗಾವ್ಯಾಟ್ ಅನ್ನು ಮೀರಿದೆ, ಇದರಲ್ಲಿ ಸೌರಶಕ್ತಿ 97 ಗಿಗಾವ್ಯಾಟ್ ನಲ್ಲಿ ಮುಂಚೂಣಿಯಲ್ಲಿದ್ದು, ನಂತರ ಪವನ ಶಕ್ತಿ 48 ಗಿಗಾವ್ಯಾಟ್ ಮತ್ತು ಜಲವಿದ್ಯುತ್ ಶಕ್ತಿ 52 ಗಿಗಾವ್ಯಾಟ್ ಆಗಿದೆ ಎಂದು ಹೇಳಿದರು. ಪ್ರಸ್ತುತ ಸವಾಲುಗಳನ್ನು ಜಯಿಸಲು ಮತ್ತು ಭವಿಷ್ಯದ ಗುರಿಗಳನ್ನು ಪೂರೈಸಲು ಉದಯೋನ್ಮುಖ ಪ್ರದೇಶಗಳಿಂದ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಅವರು ಎತ್ತಿ ತೋರಿಸಿದರು.
ಎಂ ಎನ್ ಆರ್ ಇ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸುದೀಪ್ ಜೈನ್ ಅವರು, 2030 ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮತ್ತು 2047 ರ ವೇಳೆಗೆ 1,800 ಗಿಗಾವ್ಯಾಟ್ ಅನ್ನು ಸಾಧಿಸುವ ಭಾರತದ ಬದ್ಧತೆಯನ್ನು ಒತ್ತಿ ಹೇಳಿದರು. ನಿರ್ದಿಷ್ಟ ಸವಾಲುಗಳನ್ನು ಎದುರಿಸಲು ಮತ್ತು ಈ ಗುರಿಗಳನ್ನು ಪೂರೈಸಲು ಸಹಯೋಗದ ಅವಕಾಶಗಳನ್ನು ಗುರುತಿಸುವತ್ತ ಕಾರ್ಯಾಗಾರವು ಕೇಂದ್ರೀಕರಿಸಿತು. ಆರ್ ಇ ವಲಯದಲ್ಲಿ ಜ್ಞಾನ ಹಂಚಿಕೆ ಮತ್ತು ಸಮಸ್ಯೆ-ಪರಿಹರಿಸಲು ಕಾರ್ಯಾಗಾರಗಳನ್ನು ಯೋಜಿಸುವುದರೊಂದಿಗೆ ಮತ್ತಷ್ಟು ಚಿಂತನ ಮಂಥನ ಮತ್ತು ನವೀನ ಚಿಂತನೆಯನ್ನು ಮುಂದುವರೆಸಲು ಅವರು ಕರೆ ನೀಡಿದರು.
ಪ್ರಾದೇಶಿಕ ಗಮನ: ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ
ಜಮ್ಮು ಮತ್ತು ಕಾಶ್ಮೀರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಶ್ರೀ ಸತೀಶ್ ಮಿಶ್ರಾ ಅವರು ದೇಶೀಯ ವಲಯದಲ್ಲಿ 35 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾಪನೆ ಮತ್ತು 3,000 ಸೌರ ಪಂಪ್ ಗಳ ನಿಯೋಜನೆ ಸೇರಿದಂತೆ ರಾಜ್ಯದ ನವೀಕರಿಸಬಹುದಾದ ಇಂಧನ ಪ್ರಗತಿಯ ಒಳನೋಟಗಳನ್ನು ಹಂಚಿಕೊಂಡರು. ಅವರು ಸೌರ, ಸಣ್ಣ ಜಲವಿದ್ಯುತ್ ಮತ್ತು ಪವನ ಶಕ್ತಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಮರ್ಥ್ಯವನ್ನು ಒತ್ತಿಹೇಳಿದರು, ಇಂಧನ ಅಭಿವೃದ್ಧಿಯಲ್ಲಿ ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿರುವ ರಾಜ್ಯದಲ್ಲಿ ಪ್ರಾದೇಶಿಕ ಕಾರ್ಯಾಗಾರವನ್ನು ಆಯೋಜಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.
ಹಿಮಾಚಲ ಪ್ರದೇಶದ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಸಚಿವರಾದ ಶ್ರೀ ರಾಜೇಶ್ ಧರ್ಮಾನಿ ಅವರು 1 ಮೆಗಾವ್ಯಾಟ್ ಹಸಿರು ಹೈಡ್ರೋಜನ್ ಸ್ಥಾವರ ಸ್ಥಾಪನೆ, ಅದರ ಇಂಧನ ಖಾತೆಯಲ್ಲಿ ಶೇ.75 ಕ್ಕಿಂತ ಹೆಚ್ಚು ಹಸಿರು ಇಂಧನ ಮತ್ತು ಶೇ.100 ರಷ್ಟು ಪಳೆಯುಳಿಕೆಯೇತರ ಗುರಿ ಸೇರಿದಂತೆ ರಾಜ್ಯದ ಹಸಿರು ಶಕ್ತಿ ಉಪಕ್ರಮಗಳನ್ನು ವಿವರಿಸಿದರು. ರಾಜ್ಯಗಳಾದ್ಯಂತ ಹಸಿರು ಇಂಧನ ಅಳವಡಿಕೆಯನ್ನು ವೇಗಗೊಳಿಸಲು ಸಹಯೋಗ ಮತ್ತು ಜ್ಞಾನ ಹಂಚಿಕೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು.
ನವೀಕರಿಸಬಹುದಾದ ಇಂಧನದಲ್ಲಿ ನಾಯಕತ್ವ: ರಾಜಸ್ಥಾನ ಮತ್ತು ಹರಿಯಾಣ
ರಾಜಸ್ಥಾನದ ಇಂಧನ ಸಚಿವರಾದ ಶ್ರೀ ಹೀರಾಲಾಲ್ ನಗರ್ ಅವರು, 2000 ಮೆಗಾವ್ಯಾಟ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (BESS) ಸ್ಥಾಪನೆ ಮತ್ತು ಪಿಎಂ ಕುಸುಮ್ ಯೋಜನೆಯಡಿಯಲ್ಲಿ 5000 ಮೆಗಾವ್ಯಾಟ್ ಗಿಂತ ಹೆಚ್ಚಿನ ಅನುಷ್ಠಾನ ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ರಾಜ್ಯದ ಗಮನಾರ್ಹ ಪ್ರಗತಿಯನ್ನು ಚರ್ಚಿಸಿದರು. ರಾಜಸ್ಥಾನವು ಸೌರ, ಪವನ ಮತ್ತು BESS ನಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು 2030 ರ ವೇಳೆಗೆ 125 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಗುರಿಯನ್ನು ಪೂರೈಸಲು ರಾಜ್ಯವು ಬದ್ಧವಾಗಿದೆ ಎಂದು ಅವರು ಹೇಳಿದರು.
ಹರಿಯಾಣದ ಇಂಧನ, ಸಾರಿಗೆ ಮತ್ತು ಕಾರ್ಮಿಕ ಖಾತೆಯ ಸಚಿವರಾದ ಶ್ರೀ ಅನಿಲ್ ವಿಜ್ ಅವರು ನವೀಕರಿಸಬಹುದಾದ ಇಂಧನ ಮೂಲಸೌಕರ್ಯದಲ್ಲಿ ರಾಜ್ಯದ ಹೆಚ್ಚುತ್ತಿರುವ ಹೂಡಿಕೆ ಮತ್ತು ಹಸಿರು ಇಂಧನ ಗುರಿಗಳನ್ನು ಸಾಧಿಸಲು ಅದರ ಬದ್ಧತೆಯನ್ನು ಕುರಿತು ಮಾತನಾಡಿದರು.
ರಾಷ್ಟ್ರೀಯ ಇಂಧನ ಪರಿವರ್ತನೆ: ಸಹಯೋಗ ಮತ್ತು ನೀತಿ ಉಪಕ್ರಮಗಳು
ಕಾರ್ಯಾಗಾರವು ಜಾಗತಿಕ ಪಾಲುದಾರರೊಂದಿಗೆ ಸಹಯೋಗವನ್ನು ಬೆಳೆಸುವಲ್ಲಿ ಮತ್ತು ಹಸಿರು ಹೈಡ್ರೋಜನ್, ಬ್ಯಾಟರಿ ಶೇಖರಣೆ ಮತ್ತು ವಿತರಣಾ ಇಂಧನ ತಂತ್ರಜ್ಞಾನಗಳಂತಹ ಸುಸ್ಥಿರ ಪರಿಹಾರಗಳನ್ನು ಹೆಚ್ಚಿಸುವಲ್ಲಿ ಭಾರತದಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಎತ್ತಿ ತೋರಿಸಿತು.
ಪ್ರಾದೇಶಿಕ ಕಾರ್ಯಾಗಾರವು ಸಹಯೋಗವನ್ನು ಉತ್ತೇಜಿಸಲು, ನವೀನ ಪರಿಹಾರಗಳನ್ನು ಹಂಚಿಕೊಳ್ಳಲು ಮತ್ತು ಭಾರತದಾದ್ಯಂತ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ ಅಳವಡಿಕೆಯನ್ನು ವೇಗಗೊಳಿಸಲು ಪ್ರಮುಖ ಹೆಜ್ಜೆಯಾಗಿದೆ. ನಿರಂತರ ಪ್ರಯತ್ನಗಳೊಂದಿಗೆ, ಎಲ್ಲರಿಗೂ ಸುಸ್ಥಿರ ಮತ್ತು ಇಂಧನ-ಸುರಕ್ಷಿತ ಭವಿಷ್ಯವನ್ನು ಖಾತ್ರಿಪಡಿಸುವ ಮೂಲಕ ಭಾರತವು ಹಸಿರು ಇಂಧನದಲ್ಲಿ ನಾಯಕನಾಗಲು ಸಿದ್ಧವಾಗಿದೆ.
*****
(Release ID: 2094947)
Visitor Counter : 30