ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಭುವನೇಶ್ವರದ ಜನತಾ ಮೈದಾನದಲ್ಲಿ ನಡೆಯುತ್ತಿರುವ 18ನೇ ಪ್ರವಾಸಿ ಭಾರತೀಯ ದಿನ ಸಮಾವೇಶದಲ್ಲಿ 09.01.2025ರಂದು ಕೇಂದ್ರ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್ ಎಂಇ) ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಭಾಗಿ

Posted On: 10 JAN 2025 12:14PM by PIB Bengaluru

ಒಡಿಶಾದ ಭುವನೇಶ್ವರದ ಜನತಾ ಮೈದಾನದಲ್ಲಿ ನಡೆಯುತ್ತಿರುವ 18ನೇ ಪ್ರವಾಸಿ ಭಾರತೀಯ ದಿನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025 ಜನವರಿ 9ರಂದು ಉದ್ಘಾಟಿಸಿದರು. “ವಿಕಸಿತ ಭಾರತಕ್ಕೆ ಅನಿವಾಸಿ ಭಾರತೀಯರ ಕೊಡುಗೆ" ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿರುವ ಕಾರ್ಯಕ್ರಮವು ರಾಷ್ಟ್ರ ನಿರ್ಮಾಣದಲ್ಲಿ ಭಾರತದ ವಲಸಿಗರ ಪ್ರಮುಖ ಪಾತ್ರವನ್ನು ಪ್ರಮುಖವಾಗಿ ಎತ್ತಿ ತೋರಿಸುತ್ತಿದೆ. ಕಾರ್ಯಕ್ರಮದಲ್ಲಿ ನಾನಾ ಸಚಿವರು, ಅಧಿಕಾರಿಗಳು ಮತ್ತು ಗಮನಾರ್ಹ ಸಂಖ್ಯೆಯ ಪ್ರವಾಸಿ ಭಾರತೀಯರು ಭಾಗವಹಿಸಿದ್ದಾರೆ.

ಕೇಂದ್ರ ಎಂಎಸ್ಎಂಇ ಮತ್ತು ಕಾರ್ಮಿಕ ಹಾಗೂ ಉದ್ಯೋಗ ಖಾತೆ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ, ಎಂಎಸ್ ಎಂಇ ಮತ್ತು ಅದರ ಸಂಸ್ಥೆಗಳು ತೆರೆದಿರುವ ಥೀಮ್ ಪೆವಿಲಿಯನ್ ಗೆ ಭೇಟಿ ನೀಡಿದ್ದರು. ಭುವನೇಶ್ವರದ ಕೇಂದ್ರೀಯ ಯಂತ್ರಾಗಾರ ಮತ್ತು ತರಬೇತಿ ಕೇಂದ್ರ (ಸಿಟಿಟಿಸಿ) ಅಭಿವೃದ್ಧಿಪಡಿಸಿರುವ ಚಂದ್ರಯಾನ-3 ಮಾದರಿಯನ್ನು ಪ್ರದರ್ಶಿಸಲಾಯಿತು. ಕೇಂದ್ರವು ಉತ್ತಮ ಗುಣಮಟ್ಟದ ನಿರ್ಣಾಯಕ ಘಟಕಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದು ಚಂದ್ರಯಾನ -3 ಮಿಷನ್ ಮತ್ತು "ಮೇಕ್ ಇನ್ ಇಂಡಿಯಾ" ಉಪಕ್ರಮದ ಯಶಸ್ಸಿಗೆ ಗಮನಾರ್ಹ ಕೊಡುಗೆ ನೀಡಿದೆ.

ಅಲ್ಲದೆ, ಸಚಿವರು ಎಆರ್-ವಿಆರ್ ಅನುಭವ ಕೇಂದ್ರಗಳು, ಡ್ರೋಣ್ತಂತ್ರಜ್ಞಾನಗಳು ಮತ್ತು ಸೌರ ಫಲಕ ಉತ್ಪಾದನಾ ಘಟಕಗಳು ಸೇರಿದಂತೆ ಹೊಸ ತಂತ್ರಜ್ಞಾನ ಪ್ರದರ್ಶನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅವರು ಖಾದಿ ಚರಕಗಳು, ಕೈ ಮಗ್ಗಗಳು ಮತ್ತು ಪೇಪರ್ ಮ್ಯಾಚೆಯಂತಹ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಪ್ರದರ್ಶಿಸುವ ಖಾದಿ ಮತ್ತು ಗ್ರಾಮೋದ್ಯೋಗ ಕುಶಲಕರ್ಮಿಗಳೊಂದಿಗೆ ಸಮಾಲೋಚಿಸಿದರು. ಅವರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ಸೆಪ್ಟೆಂಬರ್ 17ರಂದು ಉದ್ಘಾಟಿಸಿದ ಯೋಜನೆಯು, 18 ವ್ಯಾಪಾರಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಮತ್ತು ಕಸುಬುದಾರರಿಗೆ ಸಂಪೂರ್ಣ ಆರ್ಥಿಕ ನೆರವನ್ನು ಒದಗಿಸುವ ಎಂಎಸ್ ಎಂಇ ಸಚಿವಾಲಯದ ಪ್ರಮುಖ ಯೋಜನೆಯಾಗಿದೆ.

ವೈದ್ಯಕೀಯ ಸಾಧನಗಳು, ಏರೋ ಎಂಜಿನಿಯರಿಂಗ್, ನೀರು ಶುದ್ಧೀಕರಣ ತಂತ್ರಜ್ಞಾನಗಳು ಮತ್ತು ರೇಷ್ಮೆ ಮತ್ತು ತೆಂಗಿನ ನಾರಿನ ಉತ್ಪನ್ನಗಳಂತಹ ಸ್ಥಳೀಯ ಕರಕುಶಲ ವಸ್ತುಗಳಲ್ಲಿ ಭಾರತದ ಪ್ರಗತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಸುಶ್ರೀ ಶೋಭಾ ಕರಂದ್ಲಾಜೆ ಅವರು "ಚರಕದಿಂದ ಚಂದ್ರಯಾನಕ್ಕೆ" ಎಂಬ ಸೂಕ್ತ ಶೀರ್ಷಿಕೆಯ ಎಂಎಸ್ಎಂಇ ವಲಯದ ಥೀಮ್ ಮಳಿಗೆಯನ್ನು ಶ್ಲಾಘಿಸಿದರು.

ಅವರು ದುಬೈನ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದರು. ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಮತ್ತು ಕರಕುಶಲತೆಯನ್ನು ಉತ್ತೇಜಿಸುವಲ್ಲಿ ಅವರ ಪಾತ್ರವನ್ನು ಒತ್ತಿ ಹೇಳಿದರು. 2047 ವೇಳೆಗೆ "ವಿಕಸಿತ ಭಾರತ" ಗುರಿ ಸಾಧಿಸುವ ಗೌರವಾನ್ವಿತ ಪ್ರಧಾನ ಮಂತ್ರಿಯವರ ದೂರದೃಷ್ಟಿಯ ಸಾಕಾರದಲ್ಲಿ ಅನಿವಾಸಿ ಭಾರತೀಯರ ಪಾತ್ರ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ಪ್ರವಾಸಿ ಭಾರತೀಯರು ತಮ್ಮ ಬೇರುಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸುವಂತೆ ಮತ್ತು ಭಾರತದ ಪ್ರಗತಿಗಾಥೆಗೆ ಸಕ್ರಿಯ ಕೊಡುಗೆ ನೀಡುವಂತೆ ಸಚಿವರು  ಪ್ರೋತ್ಸಾಹಿಸಿದರು.

 

*****


(Release ID: 2091793) Visitor Counter : 23