ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಸೌರ ಉತ್ಪಾದನೆಯನ್ನು ಉತ್ತೇಜಿಸಲು ಎ ಎಲ್ ಎಂ ಎಂ ಆದೇಶ 2019ಕ್ಕೆ ಗಮನಾರ್ಹ ತಿದ್ದುಪಡಿಯನ್ನು ಪ್ರಕಟಿಸಿದೆ
1 ಜೂನ್ 2026 ರಿಂದ ಯೋಜನೆಗಳಲ್ಲಿ ಬಳಸಲಾಗುವ ಎಲ್ಲಾ ಸೌರ ಪಿವಿ ಮಾಡ್ಯೂಲ್ ಗಳು ತಮ್ಮ ಸೌರ ಕೋಶಗಳನ್ನು ಎ ಎಲ್ ಎಂ ಎಂ ಪಟ್ಟಿ-II ರಿಂದಲೇ ಪಡೆಯಬೇಕು
Posted On:
10 DEC 2024 7:05PM by PIB Bengaluru
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ ಎನ್ ಆರ್ ಇ) ಅನುಮೋದಿತ ಮಾಡ್ಯೂಲ್ ಗಳು ಮತ್ತು ಸೌರ ದ್ಯುತಿವಿದ್ಯುಜ್ಜನಕ ಮಾಡ್ಯೂಲ್ ಗಳ ತಯಾರಕರು (ಎ ಎಲ್ ಎಂ ಎಂ) ಆದೇಶ, 2019 ಕ್ಕೆ ಮಹತ್ವದ ತಿದ್ದುಪಡಿಯನ್ನು ಘೋಷಿಸಿದೆ, ಇದು ಭಾರತದ ಸೌರ ಶಕ್ತಿ ಕ್ಷೇತ್ರ ಮತ್ತು ಅದರ ಶುದ್ಧ ಇಂಧನ ಪರಿವರ್ತನೆಯ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ. ಈ ತಿದ್ದುಪಡಿಯು 1ನೇ ಜೂನ್ 2026 ರಿಂದ ಜಾರಿಗೆ ಬರಲಿದ್ದು, ಎ ಎಲ್ ಎಂ ಎಂ ಚೌಕಟ್ಟಿನ ಅಡಿಯಲ್ಲಿ ಸೌರ ಪಿವಿ ಕೋಶಗಳಿಗಾಗಿ ಬಹುನಿರೀಕ್ಷಿತ ಪಟ್ಟಿ-II ಅನ್ನು ಪರಿಚಯಿಸುತ್ತದೆ, ಇದು ಭಾರತದ ನವೀಕರಿಸಬಹುದಾದ ಇಂಧನ ಉದ್ಯಮದಲ್ಲಿ ದೇಶೀಯ ತಯಾರಿಕೆ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ.
ಸೌರ ಪಿವಿ ಕೋಶಗಳಿಗಾಗಿ ಎ ಎಲ್ ಎಂ ಎಂ ಪಟ್ಟಿ-II ಪರಿಚಯ
ಪಟ್ಟಿ-II ರ ಪರಿಚಯವು, ದೇಶದ ವೇಗವಾಗಿ ಬೆಳೆಯುತ್ತಿರುವ ಸೌರ ಉತ್ಪಾದನಾ ಸಾಮರ್ಥ್ಯಗಳಿಗೆ ಪ್ರತಿಕ್ರಿಯೆಯಾಗಿದೆ. ಇಲ್ಲಿಯವರೆಗೆ, ಪಟ್ಟಿ-II ರ ಅನುಪಸ್ಥಿತಿಯು ಸೌರ ಕೋಶಗಳ ಸೀಮಿತ ದೇಶೀಯ ಪೂರೈಕೆಯ ಕಾರಣದಿಂದಾಗಿತ್ತು. ಆದಾಗ್ಯೂ, ಮುಂದಿನ ವರ್ಷದಲ್ಲಿ ಭಾರತದ ಸೌರ ಕೋಶ ತಯಾರಿಕೆ ಸಾಮರ್ಥ್ಯದಲ್ಲಿ ಗಣನೀಯ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ, ಈ ತಿದ್ದುಪಡಿಯು ಉದ್ಯಮದ ಪರಿಸ್ಥಿತಿಯನ್ನು ಬದಲಾಯಿಸಲು ಸಿದ್ಧವಾಗಿದೆ. 1ನೇ ಜೂನ್ 2026 ರಿಂದ, ಯೋಜನೆಗಳಲ್ಲಿ ಬಳಸಲಾಗುವ ಎಲ್ಲಾ ಸೌರ ಪಿವಿ ಮಾಡ್ಯೂಲ್ ಗಳು - ಸರ್ಕಾರ ಬೆಂಬಲಿತ ಯೋಜನೆಗಳು, ನೆಟ್-ಮೀಟರಿಂಗ್ ಯೋಜನೆಗಳು ಮತ್ತು ಮುಕ್ತ ಪ್ರವೇಶದ ನವೀಕರಿಸಬಹುದಾದ ಇಂಧನ ಉಪಕ್ರಮಗಳು ಸೇರಿದಂತೆ - ತಮ್ಮ ಸೌರ ಕೋಶಗಳನ್ನು ಎ ಎಲ್ ಎಂ ಎಂ ಪಟ್ಟಿ-II ರಿಂದಲೇ ಮೂಲವಾಗಿ ಪಡೆಯಬೇಕಾಗುತ್ತದೆ, ಇದು ಭಾರತದ ಇಂಧನ ಮೂಲಸೌಕರ್ಯದಲ್ಲಿ ಬಳಸಲಾಗುವ ಸೌರ ಪಿವಿ ಕೋಶಗಳಲ್ಲಿ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸುತ್ತದೆ.
ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ವಿನಾಯಿತಿ
ಈಗಾಗಲೇ ಬಿಡ್ ಮಾಡಲಾದ ಆದರೆ ಈ ಆದೇಶ ಹೊರಡಿಸುವುದಕ್ಕೆ ಮೊದಲು ಬಿಡ್ ಸಲ್ಲಿಸುವ ಕೊನೆಯ ದಿನಾಂಕದ ಯೋಜನೆಗಳಿಗೆ, ಪಟ್ಟಿ-II ರಿಂದ ಸೋಲಾರ್ ಪಿವಿ ಕೋಶಗಳನ್ನು ಬಳಸುವ ಅಗತ್ಯದಿಂದ ವಿನಾಯಿತಿ ಅನ್ವಯಿಸುತ್ತದೆ, ಅವುಗಳ ಕಾರ್ಯಾರಂಭ ದಿನಾಂಕ 1ನೇ ಜೂನ್ 2026 ನಂತರ ಆಗಿದ್ದರೂ ಸಹ, ಪಟ್ಟಿ-II ರಿಂದ ಸೌರ ಪಿವಿ ಕೋಶಗಳನ್ನು ಬಳಸುವ ಅಗತ್ಯವಿಲ್ಲದೇ ಮುಂದುವರೆಯಲು ಅವರಿಗೆ ಅವಕಾಶ ನೀಡಲಾಗುತ್ತದೆ. ಆದಾಗ್ಯೂ, ಭವಿಷ್ಯದ ಎಲ್ಲಾ ಬಿಡ್ ಗಳಿಗೆ, ಆಯಾ ಎ ಎಲ್ ಎಂ ಎಂ ಪಟ್ಟಿಗಳಿಂದ ಸೌರ ಪಿವಿ ಮಾಡ್ಯೂಲ್ ಗಳು ಮತ್ತು ಕೋಶಗಳೆರಡನ್ನೂ ಮೂಲವಾಗಿ ಪಡೆಯುವುದು ಕಡ್ಡಾಯವಾಗಿರುತ್ತದೆ, ಇದು ಭಾರತದ ಸೌರಶಕ್ತಿ ಕ್ಷೇತ್ರದಲ್ಲಿ ಗುಣಮಟ್ಟದ ಭರವಸೆ ಮತ್ತು ಸುಸ್ಥಿರತೆಯಲ್ಲಿ ನಿರ್ಣಾಯಕ ಬದಲಾವಣೆಯನ್ನು ಸೂಚಿಸುತ್ತದೆ.
ಆರ್ಥಿಕ ಮತ್ತು ಪರಿಸರ ಪ್ರಯೋಜನಗಳು
ಈ ನೀತಿಯ ವರ್ಧನೆಯು ಆಳವಾದ ಆರ್ಥಿಕ ಮತ್ತು ಪರಿಸರ ಪ್ರಯೋಜನಗಳನ್ನು ಹೊಂದಿದೆ ಎಂದು ನಿರೀಕ್ಷಿಸಲಾಗಿದೆ. ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಕಠಿಣ ಪ್ರಕ್ರಿಯೆಯ ನಂತರ ಎ ಎಲ್ ಎಂ ಎಂ ಪಟ್ಟಿ-II ಕ್ಕೆ ಸೋಲಾರ್ ಪಿವಿ ಕೋಶಗಳ ಬಳಕೆಯನ್ನು ಕಡ್ಡಾಯಗೊಳಿಸುವ ಮೂಲಕ, ಸರ್ಕಾರವು ದೃಢವಾದ ದೇಶೀಯ ಸೌರ ಪಿವಿ ಪೂರೈಕೆ ಸರಪಳಿಯನ್ನು ಉತ್ತೇಜಿಸುವ, ಸೌರ ಮಾಡ್ಯೂಲ್ ಆಮದುಗಳಿಗೆ ಸಂಬಂಧಿಸಿದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಕ್ರಮವು 2030 ರ ವೇಳೆಗೆ 500 ಗಿ.ವ್ಯಾ. ಪಳೆಯುಳಿಕೆಯೇತರ ಇಂಧನ ಆಧಾರಿತ ವಿದ್ಯುತ್ ಸಾಮರ್ಥ್ಯವನ್ನು ಸಾಧಿಸುವ ಮತ್ತು ಶುದ್ಧ ಇಂಧನ ಬದ್ಧತೆಯಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸುವ ಭಾರತದ ವಿಶಾಲ ಗುರಿಗೆ ಅನುಗುಣವಾಗಿದೆ.
ದೇಶೀಯ ತಯಾರಿಕೆಯನ್ನು ಉತ್ತೇಜಿಸುವುದು
ಈ ತಿದ್ದುಪಡಿಯು ನವೀಕರಿಸಬಹುದಾದ ಇಂಧನದಲ್ಲಿ ಜಾಗತಿಕ ನಾಯಕನಾಗಿ ಭಾರತದ ಸ್ಥಾನವನ್ನು ಬಲಪಡಿಸುವುದಲ್ಲದೆ, ಭಾರತದ ಸೌರ ಉತ್ಪಾದನಾ ಕ್ಷೇತ್ರದ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಭಾರತದಲ್ಲಿ ಸೌರ ಪಿವಿ ಕೋಶಗಳಿಗೆ ಹೆಚ್ಚಿದ ಬೇಡಿಕೆಯು ನಾವೀನ್ಯತೆಯನ್ನು ಉತ್ತೇಜಿಸುತ್ತದೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಹೈಟೆಕ್ ತಯಾರಿಕೆ ವಲಯಯಲ್ಲಿ ಹೂಡಿಕೆಗಳನ್ನು ಆಕರ್ಷಿಸುತ್ತದೆ. ಇದು ಭಾರತದಲ್ಲಿ ಬಳಸಲಾಗುವ ಸೌರ ಉತ್ಪನ್ನಗಳ ಒಟ್ಟಾರೆ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ, ಯೋಜನೆಗಳು ಅತ್ಯುನ್ನತ ಗುಣಮಟ್ಟ ಹೊಂದಿರುವುದನ್ನು ಎಂದು ಖಚಿತಪಡಿಸುತ್ತದೆ.
ತೆಳುವಾದ ಫಿಲ್ಮ್ ಸೌರ ತಂತ್ರಜ್ಞಾನದ ಆವಿಷ್ಕಾರವನ್ನು ಉತ್ತೇಜಿಸುವುದು
ಭಾರತದ ನವೀಕರಿಸಬಹುದಾದ ಇಂಧನ ಭವಿಷ್ಯದಲ್ಲಿ ತೆಳುವಾದ ಫಿಲ್ಮ್ ಸೌರ ತಂತ್ರಜ್ಞಾನದ ಪಾತ್ರವನ್ನು ಸರ್ಕಾರ ಗುರುತಿಸಿದೆ. ಹೊಸ ತಿದ್ದುಪಡಿಗಳ ಅಡಿಯಲ್ಲಿ, ಇಂಟಿಗ್ರೇಟೆಡ್ ಸೌರ ಪಿವಿ ಮಾಡ್ಯೂಲ್ ತಯಾರಿಕಾ ಘಟಕಗಳಲ್ಲಿ ತಯಾರಿಸಲಾದ ತೆಳುವಾದ ಫಿಲ್ಮ್ ಸೌರ ಮಾಡ್ಯೂಲ್‌ಗಳನ್ನು ಪಟ್ಟಿ-II ರಿಂದ ಸೌರ ಪಿವಿ ಕೋಶಗಳನ್ನು ಬಳಸುವ ಅವಶ್ಯಕತೆಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ, ಇದು ವಲಯದೊಳಗೆ ತಾಂತ್ರಿಕ ನಾವೀನ್ಯತೆ ಮತ್ತು ವೈವಿಧ್ಯತೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ.
ಮುಂಬರುವ ತಿಂಗಳುಗಳಲ್ಲಿ, ಎ ಎಲ್ ಎಂ ಎಂ ಪಟ್ಟಿ-II ಅಡಿಯಲ್ಲಿ ಸೌರ ಪಿವಿ ಕೋಶಗಳ ಸೇರ್ಪಡೆಗಾಗಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ವಿವರವಾದ ಕಾರ್ಯವಿಧಾನದ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ, ನವೀಕರಿಸಿದ ಅವಶ್ಯಕತೆಗಳನ್ನು ಹೇಗೆ ಅನುಸರಿಸಬೇಕು ಎಂಬುದರ ಕುರಿತು ತಯಾರಕರು ಮತ್ತು ಪ್ರಾಜೆಕ್ಟ್ ಡೆವಲಪರ್ ಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡುತ್ತದೆ. ಇದು ನಿಯಂತ್ರಕ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಜಾಗತಿಕ ಶುದ್ಧ ಇಂಧನ ಅಭಿವೃದ್ಧಿಯಲ್ಲಿ ಭಾರತವು ಮುಂಚೂಣಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ನಿರಂತರ ಪ್ರಯತ್ನಗಳ ಭಾಗವಾಗಿದೆ.
ಸೌರ ಪಿವಿ ಕೋಶಗಳ ತಯಾರಿಕೆಗೆ ಆದ್ಯತೆ ನೀಡುವ ಮೂಲಕ ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ, ಈ ತಿದ್ದುಪಡಿಯು ಭಾರತದ ಶುದ್ಧ ಇಂಧನ ಭವಿಷ್ಯಕ್ಕೆ ಬಲವಾದ ಅಡಿಪಾಯವನ್ನು ಹಾಕುತ್ತದೆ. ಇದು ಸೌರ ಶಕ್ತಿ ಉದ್ಯಮದ ಬೆಳವಣಿಗೆಯನ್ನು ಬೆಂಬಲಿಸುತ್ತದೆ, ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ದೇಶದ ಹವಾಮಾನ ಗುರಿಗಳಿಗೆ ಅರ್ಥಪೂರ್ಣ ಕೊಡುಗೆ ನೀಡುತ್ತದೆ. ಈ ಕ್ರಮದೊಂದಿಗೆ, ಭಾರತವು ತನ್ನ ಇಂಧನ ಸ್ವಾತಂತ್ರ್ಯವನ್ನು ಬಲಪಡಿಸಲು, ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸಲು ಮತ್ತು ಸೌರಶಕ್ತಿಯ ನಾವೀನ್ಯತೆಗೆ ಜಾಗತಿಕ ಕೇಂದ್ರವಾಗಲು ಸಜ್ಜಾಗಿದೆ.
ಈ ತಿದ್ದುಪಡಿಯು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರಿಂದ ಅನುಮೋದನೆ ಪಡೆದಿದೆ ಮತ್ತು ಭಾರತದ ನವೀಕರಿಸಬಹುದಾದ ಇಂಧನ ಕಾರ್ಯಸೂಚಿಯನ್ನು ಮುನ್ನಡೆಸಲು ಮತ್ತು ಎಲ್ಲರಿಗೂ ಹಸಿರು, ಹೆಚ್ಚು ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಒತ್ತಿಹೇಳಿದೆ.
*****
(Release ID: 2082970)
Visitor Counter : 28