ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
"ಭಾರತದ ನವೀಕರಿಸಬಹುದಾದ ಇಂಧನ ಕ್ರಾಂತಿಯಲ್ಲಿ ರಾಜಸ್ಥಾನವು ಮುಂಚೂಣಿಯಲ್ಲಿದೆ" :ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ
ಜೈಪುರದಲ್ಲಿ 'ರೈಸಿಂಗ್ ರಾಜಸ್ಥಾನ: ಸುಸ್ಥಿರ ಇಂಧನ ಆರ್ಥಿಕತೆಯತ್ತ ಪರಿವರ್ತನೆ' ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು
Posted On:
09 DEC 2024 6:57PM by PIB Bengaluru
ಭಾರತದ ನವೀಕರಿಸಬಹುದಾದ ಇಂಧನ ಗುರಿಗಳಿಗೆ ರಾಜಸ್ಥಾನದ ಪ್ರಮುಖ ಕೊಡುಗೆಯನ್ನು ಒತ್ತಿಹೇಳಿರುವ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, "ಭಾರತದ ನವೀಕರಿಸಬಹುದಾದ ಇಂಧನ ಕ್ರಾಂತಿಯಲ್ಲಿ ರಾಜಸ್ಥಾನವು ಮುಂಚೂಣಿಯಲ್ಲಿದೆ" ಎಂದು ತಿಳಿಸಿದ್ದಾರೆ. ಜೈಪುರದಲ್ಲಿ ನಡೆಯುತ್ತಿರುವ ‘ರೈಸಿಂಗ್ ರಾಜಸ್ಥಾನ ಶೃಂಗಸಭೆ’ಯಲ್ಲಿ ‘ಸುಸ್ಥಿರ ಇಂಧನ ಆರ್ಥಿಕತೆಯ ಕಡೆಗೆ ಪರಿವರ್ತನೆ’ಕುರಿತ ಅಧಿವೇಶನವನ್ನು ಉದ್ದೇಶಿಸಿ ಸಚಿವರು ಮಾತನಾಡುತ್ತಿದ್ದರು. ದಿಟ್ಟ ಗುರಿಗಳು, ದೂರದೃಷ್ಟಿಯ ನೀತಿಗಳು ಮತ್ತು ಇತ್ತೀಚಿನ ಹೂಡಿಕೆಗಳೊಂದಿಗೆ ರಾಜಸ್ಥಾನವು ಖಂಡಿತವಾಗಿಯೂ ನವೀಕರಿಸಬಹುದಾದ ಶಕ್ತಿಯ ಸೂಪರ್ ಪವರ್ ಆಗುವ ಹಾದಿಯಲ್ಲಿದೆ ಎಂದು ಸಚಿವರು ಹೇಳಿದರು.
ಇತ್ತೀಚೆಗೆ ಆರಂಭಿಸಲಾಗಿರುವ ರಾಜಸ್ಥಾನದ ಸಮಗ್ರ ಶುದ್ಧ ಇಂಧನ ನೀತಿ (ಇಂಟಿಗ್ರೇಟೆಡ್ ಕ್ಲೀನ್ ಎನರ್ಜಿ ಪಾಲಿಸಿ) 2024 ಅನ್ನು ಕೇಂದ್ರ ಸಚಿವರು ಶ್ಲಾಘಿಸಿದರು, ಇದು 2030ರ ವೇಳೆಗೆ 125 ಗಿ.ವ್ಯಾ. ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಈ ಮಹತ್ವಾಕಾಂಕ್ಷೆಯ ನೀತಿಯು 2030ರ ವೇಳೆಗೆ 500 ಗಿ.ವ್ಯಾ. ನವೀಕರಿಸಬಹುದಾದ ಇಂಧನದ ರಾಷ್ಟ್ರೀಯ ಗುರಿಗೆ ಗಣನೀಯವಾದ ಕೊಡುಗೆಯನ್ನು ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಶಯದಂತೆ. "ಈ ಪ್ರೋತ್ಸಾಹಕಗಳು ನವೀಕರಿಸಬಹುದಾದ ಇಂಧನ ಹೂಡಿಕೆಗಳಿಗಾಗಿ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ರಾಜಸ್ಥಾನದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ" ಎಂದು ಶ್ರೀ ಜೋಶಿ ಹೇಳಿದರು.
ರಾಜಸ್ಥಾನವು 30.31 ಗಿ.ವ್ಯಾ. ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಿದೆ, ಇದರಲ್ಲಿ ಸೌರ ಶಕ್ತಿಯ ಕೊಡುಗೆಯು 24.55 ಗಿ.ವ್ಯಾ. ಆಗಿದೆ, ಇದು ಈ ವಲಯದಲ್ಲಿ ರಾಜ್ಯವನ್ನು ರಾಷ್ಟ್ರೀಯ ನಾಯಕನಾಗಿ ಮಾಡಿದೆ ಎಂದು ರಾಜ್ಯದ ಸಾಧನೆಗಳನ್ನು ವಿವರಿಸಿದರು. ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆದಾರರಿಗೆ ಉದಾರ ಪ್ರೋತ್ಸಾಹವನ್ನು ನೀಡುವ ರಾಜಸ್ಥಾನ ಹೂಡಿಕೆ ಪ್ರೋತ್ಸಾಹ ಯೋಜನೆ 2024 ಅನ್ನು ಸಹ ಸಚಿವರು ಶ್ಲಾಘಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಳೆದ 10 ವರ್ಷಗಳಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರವು ಅಗಾಧವಾಗಿ ಬೆಳೆದಿದೆ. ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯಂತಹ ಪ್ರಮುಖ ಉಪಕ್ರಮಗಳ ಅನುಷ್ಠಾನವನ್ನು ತ್ವರಿತಗೊಳಿಸುವಂತೆ ಕೇಂದ್ರ ಸಚಿವರು ರಾಜ್ಯವನ್ನು ಒತ್ತಾಯಿಸಿದರು. ರಾಜಸ್ಥಾನವನ್ನು ಉದಯೋನ್ಮುಖ ಹಸಿರು ತಂತ್ರಜ್ಞಾನಗಳ ಕೇಂದ್ರವಾಗಿಸಲು ರಾಜ್ಯದ ಹಸಿರು ಜಲಜನಕ ನೀತಿಯ ತ್ವರಿತ ಅನುಷ್ಠಾನಕ್ಕೆ ಅವರು ಕರೆ ನೀಡಿದರು.
ಶೃಂಗಸಭೆಯಲ್ಲಿ ನಡೆದ ಸೌರ, ಪವನ ಮತ್ತು ಜಲಜನಕದಂತಹ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳು ಮತ್ತು ನವೀನ ಹಣಕಾಸು ಕಾರ್ಯವಿಧಾನಗಳು ಮತ್ತು ಹೂಡಿಕೆ ಅವಕಾಶಗಳಲ್ಲಿನ ಚರ್ಚೆಗಳು ಮತ್ತು ಪ್ರಗತಿಗಳನ್ನು ಸಚಿವರು ಎತ್ತಿ ತೋರಿಸಿದರು. "ರಾಜಸ್ಥಾನವು ನವೀಕರಿಸಬಹುದಾದ ಇಂಧನ ನಾವೀನ್ಯತೆಯಲ್ಲಿ ಜಾಗತಿಕ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಶ್ರೀ ಜೋಶಿ ಹೇಳಿದರು.
ಈ ಸಂದರ್ಭದಲ್ಲಿ ಸಚಿವರು ರಾಜಸ್ಥಾನ ಸೌರ ಅಭಿವೃದ್ಧಿ ನಿಗಮದ 2000 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಯೋಜನೆಗೆ ಅನುಮೋದನೆಯನ್ನು ಘೋಷಿಸಿದರು, ಇದಕ್ಕೆ ಶೇ.30 ರಷ್ಟು ಕೇಂದ್ರ ಹಣಕಾಸು ನೆರವು ಸಹ ಲಭ್ಯವಿರುತ್ತದೆ. ನವೀಕರಿಸಬಹುದಾದ ಇಂಧನ ಕ್ಷೇತ್ರವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಎಲ್ಲಾ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ, ರಾಜಸ್ಥಾನದ ಇಂಧನ ಸಚಿವರಾದ ಶ್ರೀ ಹೀರಾ ಲಾಲ್ ನಗರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
*****
(Release ID: 2082524)
Visitor Counter : 28