ವಾರ್ತಾ ಮತ್ತು ಪ್ರಸಾರ ಸಚಿವಾಲಯ
ನಾಳೆಯ ಸಿನಿಮಾವನ್ನು ರೂಪಿಸುವುದು: ಐ.ಎಫ್.ಎಫ್.ಐ 2024 ಉದಯೋನ್ಮುಖ ಚಲನಚಿತ್ರ ನಿರ್ಮಾಪಕರನ್ನು ಸಶಕ್ತಗೊಳಿಸುವುದು
ಸೃಜನಾತ್ಮಕ ಮನಸ್ಸುಗಳನ್ನು ಒಗ್ಗೂಡಿಸುವ ಮತ್ತು ಸಾಂಸ್ಕೃತಿಕ ಎಲ್ಲೆಗಳನ್ನು ಮೀರುವ ಸಾಮರ್ಥ್ಯಕ್ಕೆ ಹೆಸರಾದ ಸಿನಿಮಾದ ಸಮ್ಮೋಹಕ ಜಗತ್ತು, ನವೆಂಬರ್ 20, 2024 ರಂದು ಗೋವಾಕ್ಕೆ ಹಿಂದಿರುಗುತ್ತಿದ್ದು ಮತ್ತೊಮ್ಮೆ ಸಿನಿಪ್ರಿಯರನ್ನು ಮೋಡಿಮಾಡಲು ಸಿದ್ಧವಾಗಿದೆ. ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐ.ಎಫ್.ಎಫ್.ಐ) 55ನೇ ಆವೃತ್ತಿ 'ಯುವ ಚಲನಚಿತ್ರ ನಿರ್ಮಾಪಕರು: ಭವಿಷ್ಯವೇ ಈಗ' ಎನ್ನುವ ವಿಷಯದ ಮೂಲಕ ಯುವ ಚಲನಚಿತ್ರ ನಿರ್ಮಾಪಕರ ಸಾಮರ್ಥ್ಯವನ್ನು ಬರಮಾಡಿಕೊಂಡಿದೆ. ಉದಯೋನ್ಮುಖ ಧ್ವನಿಗಳ ಮೇಲಿನ ಗಮನವು ಭಾರತೀಯ ಚಲನಚಿತ್ರದ ದೀರ್ಘಾಯುಷ್ಯ ಮತ್ತು ಬೆಳವಣಿಗೆಯು ಅದರ ಹೊಸ ಕಥೆಗಾರರ ಮೇಲೆ ಅವಲಂಬಿತವಾಗಿದೆ ಎಂದು ಗುರುತಿಸುತ್ತದೆ. ಈ ಯುವ, ನವೀನ ಚಲನಚಿತ್ರ ನಿರ್ಮಾಪಕರು ವಿಶಿಷ್ಟವಾದ ಸಿನಿಮೀಯ ಅನುಭವಗಳನ್ನು ರಚಿಸಲು ಆಧುನಿಕ ತಂತ್ರಗಳೊಂದಿಗೆ ಸಾಂಪ್ರದಾಯಿಕ ನಿರೂಪಣೆಗಳನ್ನು ಒಂದಾಗಿಸುತ್ತಾರೆ. ಚೊಚ್ಚಲ ಚಲನಚಿತ್ರ ನಿರ್ಮಾಪಕರಿಗೆ ಹೊಸದಾಗಿ ಪರಿಚಯಿಸಲಾದ ಪ್ರಶಸ್ತಿ ಮತ್ತು ಯುವ ಪ್ರತಿಭೆಗಳಿಗಾಗಿ ಇರುವ ಉಪಕ್ರಮಗಳ ಮೂಲಕ ಐ.ಎಫ್.ಎಫ್.ಐನ ವಿಷಯವು ಎದ್ದು ಕಾಣುತ್ತದೆ, ಇವೆಲ್ಲವೂ ಸಿನಿಮಾದ ಪ್ರವರ್ತಕರ ಪೀಳಿಗೆಯನ್ನು ಬೆಳೆಸುವ ಉತ್ಸವದ ಗುರಿಗೆ ಅನುಗುಣವಾಗಿದೆ.
ಈ ವರ್ಷದ ಐ.ಎಫ್.ಎಫ್.ಐ. 101 ದೇಶಗಳಿಂದ 1,676 ಅರ್ಜಿಗಳನ್ನು ಸ್ವೀಕರಿಸಿದೆ, ಇದು ಉತ್ಸವದ ಬೆಳೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದಲ್ಲಿರುವ ಸ್ಥಾನಕ್ಕೆ ಸಾಕ್ಷಿಯಾಗಿದೆ. ಐ.ಎಫ್.ಎಫ್.ಐ..2024 15 ವಿಶ್ವ ಪ್ರೀಮಿಯರ್ ಗಳು, 3 ಅಂತರರಾಷ್ಟ್ರೀಯ ಪ್ರೀಮಿಯರ್ ಗಳು, 40 ಏಷ್ಯನ್ ಪ್ರೀಮಿಯರ್ ಗಳು ಮತ್ತು 106 ಭಾರತೀಯ ಪ್ರೀಮಿಯರ್ ಗಳು ಸೇರಿದಂತೆ 81 ದೇಶಗಳಿಂದ 180ಕ್ಕೂ ಅಧಿಕ ಅಂತರರಾಷ್ಟ್ರೀಯ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ಇವು ಜಾಗತಿಕಮಟ್ಟದಲ್ಲಿ ಪ್ರಸಿದ್ಧ ಮತ್ತು ಪ್ರಶಸ್ತಿ ವಿಜೇತ ಚಲನಚಿತ್ರಗಳ ಆಯ್ಕೆಯಾಗಿರುವುದರಿಂದ, ಈ ವರ್ಷದ ಉತ್ಸವವು ಪ್ರೇಕ್ಷಕರ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರಲು ಸಿದ್ಧವಾಗಿದೆ. ಆಸ್ಟ್ರೇಲಿಯಾದ ಚಲನಚಿತ್ರಗಳ ಪ್ಯಾಕೇಜ್ ಮತ್ತು ಉತ್ಸವದಲ್ಲಿ ಅವುಗಳ ಬಲವಾದ ಉಪಸ್ಥಿತಿಯೊಂದಿಗೆ ಐ.ಎಫ್.ಎಫ್.ಐ. 2024ರಲ್ಲಿ ಆಸ್ಟ್ರೇಲಿಯಾವು ಕೇಂದ್ರೀಕೃತ ರಾಷ್ಟ್ರವಾಗಿದೆ.
ಹೊಸ ಪ್ರತಿಭೆಯನ್ನು ಪ್ರೋತ್ಸಾಹಿಸುವುದು: ಅತ್ಯುತ್ತಮ ಚೊಚ್ಚಲ ಭಾರತೀಯ ಚಲನಚಿತ್ರ ವಿಭಾಗ 2024
ಐ.ಎಫ್.ಎಫ್.ಐ. 2024 ರ ಮುಖ್ಯಾಂಶಗಳಲ್ಲಿ ಭಾರತೀಯ ಫೀಚರ್ ಫಿಲ್ಮ್ ಪ್ರಶಸ್ತಿಯ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯು ಒಂದಾಗಿದೆ. ಇದು ಅತ್ಯುತ್ತಮ ಚೊಚ್ಚಲ ನಿರ್ದೇಶಕರನ್ನು ಗೌರವಿಸುತ್ತದೆ. ಪ್ರಶಸ್ತಿಗಳ ಪಟ್ಟಿಗೆ ಈ ಸೇರ್ಪಡೆಯು ಭಾರತೀಯ ಚಿತ್ರರಂಗದಲ್ಲಿನ ಹೊಸ ದೃಷ್ಟಿಕೋನಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ ಜೊತೆಗೆ ಭಾರತದ ಪ್ರಾದೇಶಿಕ ಸಂಸ್ಕೃತಿಗಳಲ್ಲಿ ಬೇರೂರಿರುವ ನಿರೂಪಣೆಗಳ ವೈವಿಧ್ಯತೆಯನ್ನು ಒತ್ತಿಹೇಳುತ್ತದೆ. ಈ ವರ್ಷ, ಭಾರತದಾದ್ಯಂತದ ಐದು ಚೊಚ್ಚಲ ನಿರ್ದೇಶಕರು, ವಿವಿಧ ಭಾಷೆಗಳು ಮತ್ತು ಪ್ರದೇಶಗಳಲ್ಲಿ ವ್ಯಾಪಿಸಿದ್ದು, ತಮ್ಮ ಚಲನಚಿತ್ರಗಳನ್ನು ಪ್ರದರ್ಶಿಸುತ್ತಾರೆ.
ಆಯ್ದ ಚಲನಚಿತ್ರಗಳಲ್ಲಿ ಲಕ್ಷ್ಮಿಪ್ರಿಯಾ ದೇವಿಯವರ ಬೂಂಗ್ (ಮಣಿಪುರಿ), ನವಜ್ಯೋತ್ ಬಂಡಿವಾಡೇಕರ್ ಅವರ ಘರಾತ್ ಗಣಪತಿ (ಮರಾಠಿ), ಮನೋಹರ ಕೆ ಅವರ ಮಿಕ್ಕ ಬಣ್ಣದ ಹಕ್ಕಿ (ಕನ್ನಡ), ಯಾತ ಸತ್ಯನಾರಾಯಣ ಅವರ ರಜಾಕರ್ (ತೆಲುಗು), ಮತ್ತು ರಾಗೇಶ್ ನಾರಾಯಣನ್ ಅವರ ತನುಪ್ (ಮಲಯಾಳಂ) ಸೇರಿವೆ.
ಈ ಚೊಚ್ಚಲ ಚಲನಚಿತ್ರಗಳನ್ನು, 102 ಚಲನಚಿತ್ರಗಳಿಂದ ಆಯ್ಕೆ ಮಾಡಲ್ಪಟ್ಟಿವೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರೇಕ್ಷಕರೊಂದಿಗೆ ಸ್ಥಳೀಯ ಕಥೆಗಳನ್ನು ಸೇತುವೆಯಾಗಿ, ರಾಷ್ಟ್ರೀಯ ವೇದಿಕೆಗೆ ಸಾಂಸ್ಕೃತಿಕ ಒಳನೋಟಗಳನ್ನು ತರುತ್ತವೆ. ಪ್ರಮಾಣಪತ್ರ ಮತ್ತು ರೂ. 5 ಲಕ್ಷ ಬಹುಮಾನ ಹೊಂದಿರುವ ಪ್ರಶಸ್ತಿಯನ್ನು ಸಮಾರೋಪ ಸಮಾರಂಭದಲ್ಲಿ ಘೋಷಿಸಲಾಗುವುದು. ಈ ಹೊಸ ಪ್ರಶಸ್ತಿಯನ್ನು ದೇಶದಾದ್ಯಂತ ಯುವ ಚಲನಚಿತ್ರ ನಿರ್ಮಾಣದ ಪ್ರತಿಭೆಗಳನ್ನು ಗುರುತಿಸಲು ಸ್ಥಾಪಿಸಲಾಗಿದೆ, 'ಯುವ ಚಲನಚಿತ್ರ ನಿರ್ಮಾಪಕರು' ವಿಷಯದ ಮೇಲೆ ಕೇಂದ್ರೀಕರಿಸಿದ ಐ.ಎಫ್.ಎಫ್.ಐ.ನ ವಿಷಯದೊಂದಿಗೆ ಸಂಯೋಜಿಸಲಾಗಿದೆ. ಈ ಮೀಸಲಾದ ವೇದಿಕೆಯ ಮೂಲಕ ಐ.ಎಫ್.ಎಫ್.ಐ. ಹೊಸ ಧ್ವನಿಗಳನ್ನು ಪ್ರೋತ್ಸಾಹಿಸುತ್ತದೆ, ಇದು ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಿಗೆ ವಿಶಾಲವಾದ ಪ್ರೇಕ್ಷಕರನ್ನು ತಲುಪಲು, ಮನ್ನಣೆ ಗಳಿಸಲು ಮತ್ತು ಚಲನಚಿತ್ರೋದ್ಯಮದಲ್ಲಿ ತಮ್ಮ ಸ್ಥಾನವನ್ನು ಸ್ಥಾಪಿಸಲು ಅವಕಾಶ ಕಲ್ಪಿಸುತ್ತದೆ.
ಸೃಜನಶೀಲ ಪ್ರತಿಭೆಯನ್ನು ಪೋಷಿಸುವುದು: ನಾಳಿನ ಸೃಜನಶೀಲ ಮನಸ್ಸುಗಳು
ನಾಳಿನ ಸೃಜನಶೀಲ ಮನಸ್ಸುಗಳು (The Creative Minds of Tomorrow - ಸಿ.ಎಂ.ಒ.ಟಿ) ಉಪಕ್ರಮವು ಭಾರತದಾದ್ಯಂತ ಯುವ ಸಿನಿಮಾ ಪ್ರತಿಭೆಗಳನ್ನು ಪೋಷಿಸುತ್ತದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ 2021 ರಲ್ಲಿ 52 ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ದ (ಐ.ಎಫ್.ಎಫ್.ಐ) ಸಂದರ್ಭದಲ್ಲಿ ಪ್ರಾರಂಭಿಸಲಾಯಿತು, ಈ ಉಪಕ್ರಮವು ಮೂರು ಯಶಸ್ವಿ ಆವೃತ್ತಿಗಳಲ್ಲಿ 225 ಹಳೆಯ ವಿದ್ಯಾರ್ಥಿಗಳ ಸಂಗ್ರಹವನ್ನು ಅಭಿವೃದ್ಧಿಪಡಿಸಿದೆ. ಅದರ ನಾಲ್ಕನೇ ಆವೃತ್ತಿಯಲ್ಲಿ, ಸಿ.ಎಂ.ಒ.ಟಿ 13 ವಿಭಿನ್ನ ಚಲನಚಿತ್ರ ತಯಾರಿಕೆಯ ಕುಶಲತೆಗಳಲ್ಲಿ 100 ಪ್ರತಿಭಾವಂತ ಯುವ ಚಲನಚಿತ್ರ ನಿರ್ಮಾಪಕರನ್ನು ಬೆಂಬಲಿಸುತ್ತದೆ, ಹಿಂದಿನ ವರ್ಷದಲ್ಲಿ 10 ಜನರಿದ್ದು ಈಗ 75ಕ್ಕೆ ಏರಿದೆ. ಇವರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡುತ್ತದೆ. ಸಿ.ಎಂ.ಒ.ಟಿ ಉಪಕ್ರಮವು ಈ ವರ್ಷ 1,032 ಜನರ ನೋಂದಣಿಯಿಂದಾಗಿ ದಾಖಲೆ ಮುರಿಯುವ ಭಾಗವಹಿಸುವಿಕೆಯನ್ನು ಕಂಡಿತು, ಈ ಸಂಖ್ಯೆಯು 2023 ರ ಎರಡು ಪಟ್ಟಾಗಿದೆ.
ಉಪಕ್ರಮದ ಪ್ರಾಥಮಿಕ ಗುರಿಗಳು ಯುವ ಭಾರತೀಯ ಪ್ರತಿಭೆಗಳನ್ನು ಗುರುತಿಸುವುದು, ಅವರ ಅನನ್ಯ ಸೃಜನಶೀಲ ಧ್ವನಿಗಳನ್ನು ಹಂಚಿಕೊಳ್ಳಲು ಅವರಿಗೆ ಅಂತರರಾಷ್ಟ್ರೀಯ ವೇದಿಕೆಯನ್ನು ನೀಡುವುದು ಮತ್ತು ವೈವಿಧ್ಯಮಯ ಚಲನಚಿತ್ರ ನಿರ್ಮಾಣ ವಿಭಾಗಗಳಲ್ಲಿ ಶ್ರೇಷ್ಠತೆಯನ್ನು ಗುರುತಿಸುವುದಾಗಿದೆ. 54ನೇ ಐ.ಎಫ್.ಎಫ್.ಐ, ಸಿ.ಎಂ.ಒ.ಟಿ ಪ್ರತಿಭಾ ಶಿಭಿರವನ್ನು ಆಯೋಜಿಸಿತು, ಅಲ್ಲಿ ಭಾಗವಹಿಸುವವರು ಉನ್ನತ ಮಾಧ್ಯಮ ಮತ್ತು ಮನರಂಜನಾ ಕಂಪನಿಗಳೊಂದಿಗೆ ಸಂಪರ್ಕ ಹೊಂದಿದ್ದರು, ತಮ್ಮ ಕೆಲಸವನ್ನು ಪ್ರಸ್ತುತಪಡಿಸಿದರು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಮಾಸ್ಟರ್ ಕ್ಲಾಸ್ಗಳು ಮತ್ತು ಚರ್ಚೆಗಳಲ್ಲಿ ಭಾಗವಹಿಸಿದರು. ಇದು ಯುವ ಚಲನಚಿತ್ರ ನಿರ್ಮಾಪಕರಿಗೆ ಗಮನಾರ್ಹ ವೃತ್ತಿಪರ ಬೆಳವಣಿಗೆ ಮತ್ತು ಉದ್ಯಮದವರ ಸಂಪರ್ಕದ ಅವಕಾಶಗಳನ್ನು ಉತ್ತೇಜಿಸಿತು.
ಉದ್ಯಮದ ಸಹಯೋಗಕ್ಕಾಗಿ ಅದ್ಭುತ ವೇದಿಕೆ: ಫಿಲ್ಮ್ ಬಜಾರ್ 2024
ನವೆಂಬರ್ 20 ರಿಂದ 24 ರವರೆಗೆ ನಿಗದಿಪಡಿಸಲಾದ ಫಿಲ್ಮ್ ಬಜಾರ್ ನ 18 ನೇ ಆವೃತ್ತಿಯು ಬಹಳ ಹಿರಿದಾಗಿದ್ದು, 350ಕ್ಕಿಂತಲೂ ಹೆಚ್ಚು ಚಲನಚಿತ್ರ ಯೋಜನೆಗಳು ಚಲನಚಿತ್ರ ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ ಕಾಣಿಸಿಕೊಳ್ಳಲಿವೆ. ಈ ವರ್ಷದ ಫಿಲ್ಮ್ ಬಜಾರ್ ಭಾರತ, ಬಾಂಗ್ಲಾದೇಶ, ನೇಪಾಳ, ಆಸ್ಟ್ರೇಲಿಯಾ, ಯುಕೆ, ಜರ್ಮನಿ ಮತ್ತು ಹಾಂಗ್ ಕಾಂಗ್ನ ಚಲನಚಿತ್ರ ನಿರ್ಮಾಪಕರು ಮತ್ತು ಉದ್ಯಮ ವೃತ್ತಿಪರರಿಗೆ ಸಹಯೋಗದ ವೇದಿಕೆಯನ್ನು ಒದಗಿಸುತ್ತದೆ. ಈ ವರ್ಷದ ಶ್ರೇಣಿಯು ಹಿಂದಿ, ಇಂಗ್ಲಿಷ್, ಅಸ್ಸಾಮಿ, ತಮಿಳು ಮತ್ತು ಹೆಚ್ಚಿನ ಭಾಷೆಗಳಲ್ಲಿ ಚಲನಚಿತ್ರಗಳನ್ನು ಒಳಗೊಂಡಿದೆ, ನಿರ್ಮಾಪಕರು, ವಿತರಕರು, ಹಣಕಾಸುದಾರರು ಮತ್ತು ಉತ್ಸವದ ಪ್ರೋಗ್ರಾಮರ್ ಗಳಿಗೆ ಯೋಜನೆಗಳನ್ನು ಪ್ರಸ್ತುತ ಪಡಿಸಲು ಅವಕಾಶಗಳನ್ನು ನೀಡುತ್ತದೆ. ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ಜೊತೆಗೆ ಆಯೋಜಿಸಲಾದ ಕಾರ್ಯಕ್ರಮಗಳು, ವೀಕ್ಷಣಾ ಕೊಠಡಿ, ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್, ಸಹ ನಿರ್ಮಾಣದ ಮಾರುಕಟ್ಟೆ, ಜ್ಞಾನದ ಸರಣಿ ಮುಂತಾದ ಪ್ರಾಥಮಿಕ ವಿಭಾಗಗಳನ್ನು ಒಳಗೊಂಡಿದೆ.
ಫಿಲ್ಮ್ ಬಜಾರ್ ನ ವೀಕ್ಷಣಾ ಕೊಠಡಿಯು ಭಾರತ ಮತ್ತು ದಕ್ಷಿಣ ಏಷ್ಯಾದ ವೈಶಿಷ್ಟ್ಯ, ಮಧ್ಯಮಗಾತ್ರ ಮತ್ತು ಕಿರುಚಿತ್ರಗಳನ್ನು ಒಳಗೊಂಡಂತೆ 208 ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ಜಾಗತಿಕ ವಿತರಕರು ಮತ್ತು ಮಾರಾಟದ ಏಜೆಂಟ್ ಗಳೊಂದಿಗೆ ಚಲನಚಿತ್ರ ನಿರ್ಮಾಪಕರನ್ನು ಸಂಪರ್ಕಿಸಲು ವಿನ್ಯಾಸಗೊಳಿಸಲಾದ ವೀಕ್ಷಣಾ ಕೊಠಡಿಯು ವೃತ್ತಿಪರರು ಪೂರ್ಣಗೊಂಡ ಅಥವಾ ನಿರ್ಮಾಣದ ನಂತರದ ಕಾರ್ಯಗಳಲ್ಲಿರುವ ಚಲನಚಿತ್ರಗಳನ್ನು ವೀಕ್ಷಿಸಲು ಅವಕಾಶ ನೀಡುತ್ತದೆ. ಇದು ನವೆಂಬರ್ 21 ರಿಂದ 24 ರವರೆಗೆ ತೆರೆದಿರುತ್ತದೆ, ಇದರಲ್ಲಿ 145 ಚಲನಚಿತ್ರಗಳು, 23 ಮಧ್ಯಮ ಗಾತ್ರದ ಚಲನಚಿತ್ರಗಳು, 30 ಕಿರುಚಿತ್ರಗಳು ಮತ್ತು ಎನ್.ಎಫ್.ಡಿ.ಸಿ-ಎನ್.ಎಫ್.ಎ.ಐ ಸಂಗ್ರಹದಿಂದ ಸಂಗ್ರಹಿಸಲಾದ 10 ಮರುಸ್ಥಾಪಿತ ಹಳೆಯ ಚಲನಚಿತ್ರಗಳನ್ನು ಒಳಗೊಂಡಿದೆ.
ಸಹ-ನಿರ್ಮಾಣ ಮಾರುಕಟ್ಟೆಯಲ್ಲಿನ ಪ್ರಮುಖ ಮೂರು ಸಹ-ನಿರ್ಮಾಣ ಯೋಜನೆಗಳಿಗೆ $20,000 ನಗದು ಅನುದಾನವು ಫಿಲ್ಮ್ ಬಜಾರ್ 2024 ಗೆ ಹೊಸ ಸೇರ್ಪಡೆಯಾಗಿದ್ದು ಇದು ಸಹಯೋಗವನ್ನು ಉತ್ತೇಜಿಸುತ್ತದೆ ಮತ್ತು ಉದಯೋನ್ಮುಖ ಚಲನಚಿತ್ರ ನಿರ್ಮಾಪಕರನ್ನು ಬೆಂಬಲಿಸುತ್ತದೆ. ಸಹ-ನಿರ್ಮಾಣ ಮಾರುಕಟ್ಟೆಯು ಏಳು ದೇಶಗಳಿಂದ 21 ಚಲನಚಿತ್ರಗಳು ಮತ್ತು 8 ವೆಬ್ ಸರಣಿಗಳನ್ನು ಹೊಂದಿರುತ್ತದೆ. ಜ್ಞಾನ ಸರಣಿಯು ಚಲನಚಿತ್ರ ನಿರ್ಮಾಣ, ವಿತರಣೆ ಮತ್ತು ಅಂತರರಾಷ್ಟ್ರೀಯ ಸಹಯೋಗದ ಕುರಿತು ಪ್ರಸ್ತುತ ಪಡಿಸುವ ಕಾರ್ಯಕ್ರಮ (ಪಿಚಿಂಗ್ ಸೆಷನ್)ಗಳು ಮತ್ತು ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ.
ಈ ವರ್ಷ, ಪೆವಿಲಿಯನ್ಗಳು ಮತ್ತು ಪ್ರದರ್ಶನಗಳು ವಿವಿಧ ದೇಶಗಳು ಮತ್ತು ರಾಜ್ಯಗಳು, ಚಲನಚಿತ್ರೋದ್ಯಮ, ಟೆಕ್ ಮತ್ತು ವಿ ಎಫ್ ಎಕ್ಸ್ ಉದ್ಯಮ, ಇತ್ಯಾದಿಗಳಿಂದ ಅಗಾಧ ಭಾಗವಹಿಸುವಿಕೆಗೆ ಸಾಕ್ಷಿಯಾಗುತ್ತವೆ. ಪೆವಿಲಿಯನ್ ಗಳಲ್ಲಿ ಉತ್ತಮ ಉದ್ಯಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಎಫ್.ಐ.ಸಿ.ಸಿ.ಐ ಪಾಲುದಾರಿಕೆಯ ಮೂಲಕ ಹಲವಾರು ಉದಯೋನ್ಮುಖ ಉದ್ಯಮಗಳನ್ನು ಮಾಡಲಾಗುತ್ತಿದೆ. ಈ ವರ್ಷದ ಫಿಲ್ಮ್ ಬಜಾರ್ನಲ್ಲಿ ಮುಕ್ತ 'ಖರೀದಿದಾರರು-ಮಾರಾಟಗಾರರ' ಸಭೆಯನ್ನು ಸಹ ಆಯೋಜಿಸಲಾಗುವುದು, ಅಲ್ಲಿ ಚಲನಚಿತ್ರ ನಿರ್ಮಾಪಕರು ಸಹಯೋಗಿಗಳನ್ನು ಭೇಟಿ ಮಾಡಬಹುದು.
ಫಿಲ್ಮ್ ಬಜಾರ್ ಈ ವರ್ಷ ಐ.ಎಫ್.ಎಫ್.ಐ.ನಲ್ಲಿ ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್ ಗೆ ಅಧಿಕೃತವಾಗಿ ಆಯ್ಕೆಯಾಗದ ಆರು ಅಸಾಧಾರಣ ಕಾಲ್ಪನಿಕ ಚಲನಚಿತ್ರಗಳನ್ನು ಘೋಷಿಸಿದೆ. ಆಯ್ಕೆಯಾದ ಚಲನಚಿತ್ರಗಳು: ಟ್ರಿಬೆನಿ ರೈ ಅವರ ಶೇಪ್ ಆಫ್ ಮೊಮೊಸ್ (ನೇಪಾಳಿ), ಶಕ್ತಿಧರ್ ಬಿರ್ ಅವರ ಗಾಂಗ್ಶಾಲಿಕ್ [ರಿವರ್ ಬರ್ಡ್] (ಬಂಗಾಳಿ), ಮೋಹನ್ ಕುಮಾರ್ ವಲಸಾಲ ಅವರ ಯೆರ್ರಾ ಮಂದಾರಂ [ದಿ ರೆಡ್ ಹೈಬಿಸ್ಕಸ್] (ತೆಲುಗು), ರಿದಮ್ ಜಾನ್ವೆ ಅವರ ಕಟ್ಟಿ ರಿ ರಾಟ್ಟಿ [ಹಂಟರ್ಸ್ ಮೂನ್] (ಗಡ್ಡಿ, ನೇಪಾಳಿ), ಸಿದ್ಧಾರ್ಥ್ ಬಡಿ ಅವರ ಉಮಲ್ (ಮರಾಠಿ), ವಿವೇಕ್ ಕುಮಾರ್ ಅವರ ದಿ ಗುಡ್, ದಿ ಬ್ಯಾಡ್, ದಿ ಹಂಗ್ರಿ (ಹಿಂದಿ). ಹಿಂದಿನ ಖಚಿತ ಮಾದರಿಯನ್ನು ಅನುಸರಿಸಿ, ಲ್ಯಾಬ್ ಈ ವರ್ಷವೂ ಆನ್ಲೈನ್ ಮತ್ತು ಆಫ್ಲೈನ್ ಸೆಷನ್ಗಳನ್ನು ರೂಪಿಸುತ್ತದೆ. ವಿಭಿನ್ನ ವಿಧಾನಗಳ ಈ ಮಿಶ್ರಣವು ಚಲನಚಿತ್ರ ನಿರ್ಮಾಪಕರು ಮತ್ತು ಮಾರ್ಗದರ್ಶಕರಿಗೆ ನೈಜ ಸಮಯದಲ್ಲಿ ಸ್ಪೂರ್ತಿದಾಯಕವಾಗಲು ಮತ್ತು ಪೋಸ್ಟ್-ಪ್ರೊಡಕ್ಷನ್ ಬೆಂಬಲವನ್ನು ಸಾಧಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಅವಕಾಶ ಒದಗಿಸುತ್ತದೆ. ಈ ಆರು ಚಲನಚಿತ್ರಗಳಲ್ಲಿ ಐದು ಯುವ ಮತ್ತು ಉದಯೋನ್ಮುಖ ಚಲನಚಿತ್ರ ನಿರ್ಮಾಪಕರ ಚೊಚ್ಚಲ ಚಲನಚಿತ್ರಗಳಾಗಿವೆ . ವರ್ಕ್ಸ್ ಇನ್ ಪ್ರೋಗ್ರೆಸ್ (WIP) ವಿಭಾಗವು ಸೃಜನಶೀಲತೆಯನ್ನು ಬೆಳೆಸಲು ಐ.ಎಫ್.ಎಫ್.ಐನ ಬದ್ಧತೆಯನ್ನು ತೋರಿಸುತ್ತದೆ ಮತ್ತು ಹೊಸ ಪೀಳಿಗೆಯ ಕಲಾವಿದರ ದೃಷ್ಟಿಯಲ್ಲಿ ಸಮಕಾಲೀನ ಜೀವನದ ಸಂಕೀರ್ಣತೆಯನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಪ್ರೇಕ್ಷಕರಿಗೆ ಸಂಬಂಧಿಸುವ ಕಥೆಗಳನ್ನು ಎತ್ತಿ ತೋರಿಸುತ್ತವೆ.
ನ್ಯಾಷನಲ್ ಫಿಲ್ಮ್ ಡೆವಲಪ್ ಮೆಂಟ್ ಕಾರ್ಪೊರೇಶನ್ (ಎನ್.ಎಫ್.ಡಿ.ಸಿ) ವತಿಯಿಂದ 2007ರಲ್ಲಿ ಪ್ರಾರಂಭವಾದ ಫಿಲ್ಮ್ ಬಜಾರ್, ನಂತರ ದಕ್ಷಿಣ ಏಷ್ಯಾದ ಅತಿದೊಡ್ಡ ಸಹ-ನಿರ್ಮಾಣ ಮಾರುಕಟ್ಟೆಯಾಗಿ ಮತ್ತು ಅಂತರರಾಷ್ಟ್ರೀಯ ಪ್ರೇಕ್ಷಕರಿಗೆ ಪ್ರಾದೇಶಿಕ ಸಿನಿಮಾವನ್ನು ಪ್ರಚಾರ ಮಾಡಲು B2B ವೇದಿಕೆಯಾಗಿ ಬೆಳೆದಿದೆ. ಲಂಚ್ ಬಾಕ್ಸ್, ಮಾರ್ಗರಿಟಾ ವಿತ್ ಎ ಸ್ಟ್ರಾ, ಚೌತಿ ಕೂಟ್, ಕಿಸ್ಸಾ, ಶಿಪ್ ಆಫ್ ಥೀಸಸ್, ತಿತ್ಲಿ, ಕೋರ್ಟ್, ಅನ್ಹೆ ಘೋಡೆ ದಾ ಡಾನ್, ಮಿಸ್ ಲವ್ಲಿ, ದಮ್ ಲಗಾಕೆ ಹೈಸಾ, ಲಯರ್ಸ್ ಡೈಸ್ ಮತ್ತು ತಿಥಿಯಂತಹ ಯಶಸ್ವಿ ಚಲನಚಿತ್ರಗಳು ಈ ಹಿಂದೆ ವೇದಿಕೆಯಿಂದ ಪ್ರಯೋಜನ ಪಡೆದಿವೆ.
ಐ.ಎಫ್.ಎಫ್.ಐ. 2024 ತನ್ನ ಸಿನಿಮಾದ ವ್ಯಾಪ್ತಿಯನ್ನು ವಿಸ್ತರಿಸಲು ನಾಲ್ಕು ಅತ್ಯಾಕರ್ಷಕ ಅಂತಾರಾಷ್ಟ್ರೀಯ ಪ್ರೋಗ್ರಾಮಿಂಗ್ ವಿಭಾಗಗಳನ್ನು ಪರಿಚಯಿಸುತ್ತದೆ: ಉದಯೋನ್ಮುಖ ನಿರ್ದೇಶಕರ ಕೃತಿಗಳನ್ನು ಆಚರಿಸುವ ರೈಸಿಂಗ್ ಸ್ಟಾರ್ಸ್; ಮಿಷನ್ ಲೈಫ್, ಪರಿಸರ ಪ್ರಜ್ಞೆಯ ಚಲನಚಿತ್ರಗಳನ್ನು ಗುರುತಿಸುವುದು; ಆಸ್ಟ್ರೇಲಿಯಾ: ಕಂಟ್ರಿ ಆಫ್ ಫೋಕಸ್ – ಇದು ಆಸ್ಟ್ರೇಲಿಯನ್ ಕಥೆ ಹೇಳುವಿಕೆಯ ಒಳನೋಟಗಳನ್ನು ನೀಡುತ್ತದೆ; ಮತ್ತು ಟ್ರೀಟಿ ಕಂಟ್ರಿ ಪ್ಯಾಕೇಜ್, ಬ್ರಿಟಿಷ್ ಫಿಲ್ಮ್ ಇನ್ಸ್ಟಿಟ್ಯೂಟ್ನಿಂದ ಸಂಗ್ರಹಿಸಲಾದ ಆಯ್ಕೆಯಾಗಿದೆ. ಇವುಗಳು ಉತ್ಸವದ ವೈವಿಧ್ಯತೆಯನ್ನು ಹೆಚ್ಚಿಸುತ್ತವೆ, ಜಾಗತಿಕ ಕಥೆಗಳನ್ನು ತರುತ್ತವೆ, ಅದು ಚೇತರಿಕೆ, ನಾವೀನ್ಯತೆ ಮತ್ತು ಸಿನಿಮೀಯ ಕಲೆಗಳ ವಿಕಾಸದ ಸ್ವರೂಪವನ್ನು ಎತ್ತಿ ತೋರಿಸುತ್ತದೆ. ಸೇರ್ಪಡೆ ಮಾಡುವ ಅದರ ಬದ್ಧತೆಗೆ ಅನುಗುಣವಾಗಿ, ಐ.ಎಫ್.ಎಫ್.ಐ. 2024 ಮಹಿಳೆಯರಿಂದ ನಿರ್ದೇಶಿಸಲ್ಪಟ್ಟ 47 ಚಲನಚಿತ್ರಗಳನ್ನು ಮತ್ತು ಯುವ ಮತ್ತು ಚೊಚ್ಚಲ ಚಲನಚಿತ್ರ ನಿರ್ಮಾಪಕರಿಂದ 66 ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ, ಹೆಚ್ಚು ಪ್ರಾತಿನಿಧ್ಯವಿಲ್ಲದ ಧ್ವನಿಗಳಿಗೆ ತನ್ನ ಬೆಂಬಲವನ್ನು ಒತ್ತಿಹೇಳುತ್ತದೆ. ʼವುಮೆನ್ ಇನ್ ಸಿನಿಮಾʼ ವಿಭಾಗವು ವಿಶೇಷವಾಗಿ ಉದಯೋನ್ಮುಖ ಪ್ರತಿಭೆಗಳನ್ನು ಮತ್ತು ಮಹಿಳಾ ನಿರ್ದೇಶಕರ ಪ್ರಭಾವಶಾಲಿ ಕೊಡುಗೆಗಳನ್ನು ಗೌರವಿಸುತ್ತದೆ, ಹೆಚ್ಚು ಒಳಗೊಳ್ಳುವ ಚಲನಚಿತ್ರ ಉದ್ಯಮಕ್ಕಾಗಿ ಉತ್ಸವದ ಸಮರ್ಥನೆಯನ್ನು ಹೆಚ್ಚಿಸುತ್ತದೆ.
ಒಂದು ಸಮೃದ್ಧ ಶೈಕ್ಷಣಿಕ ಅನುಭವ
ಚಲನಚಿತ್ರ ಪ್ರದರ್ಶನಗಳ ಜೊತೆಗೆ, ಐ.ಎಫ್.ಎಫ್.ಐ. ತನ್ನ ಮಾಸ್ಟರ್ ಕ್ಲಾಸ್ಗಳ ಶ್ರೇಣಿ ಮತ್ತು ಪ್ಯಾನಲ್ ಚರ್ಚೆಗಳ ಮೂಲಕ ಆಳವಾದ ಶೈಕ್ಷಣಿಕ ಅನುಭವವನ್ನು ಒದಗಿಸುತ್ತದೆ. ಎಆರ್ ರಹಮಾನ್, ಶಬಾನಾ ಅಜ್ಮಿ, ಮಣಿರತ್ನಂ, ವಿಧು ವಿನೋದ್ ಚೋಪ್ರಾ ಹಾಗು ಅಂತರಾಷ್ಟ್ರೀಯ ಪ್ರಸಿದ್ಧ ವ್ಯಕ್ತಿಗಳಾದ ಫಿಲಿಪ್ ನೋಯ್ಸ್ ಮತ್ತು ಜಾನ್ ಸೀಲ್ ಅವರಂತಹ ಸಿನಿಮಾದ ದಂತಕಥೆಗಳಿಂದ ಪಾಲ್ಗೊಳ್ಳುವವರು ಕಲಿಯಬಹುದು. ಕಾರ್ಯಾಗಾರಗಳು ಧ್ವನಿ ವಿನ್ಯಾಸ ಮತ್ತು ನಿರ್ದೇಶನದಿಂದ ನಟನಾ ತಂತ್ರಗಳವರೆಗೆ ವಿವಿಧ ಚಲನಚಿತ್ರ ನಿರ್ಮಾಣ ಅಂಶಗಳನ್ನು ಒಳಗೊಂಡಿವೆ, ಯುವ ಚಲನಚಿತ್ರ ನಿರ್ಮಾಪಕರಿಗೆ ಕರಕುಶಲತೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀಡುತ್ತದೆ.
ಇಂತಹ ವೈವಿಧ್ಯಮಯ ಕಲಿಕೆಯ ಸ್ಥಳಗಳನ್ನು ರಚಿಸುವ ಐ.ಎಫ್.ಎಫ್.ಐ.ನ ಪ್ರಯತ್ನಗಳು ಯುವ ಚಲನಚಿತ್ರ ನಿರ್ಮಾಪಕರನ್ನು ರಾಷ್ಟ್ರೀಯ ಮತ್ತು ಜಾಗತಿಕ ಹಂತಗಳಲ್ಲಿ ಪ್ರಭಾವ ಬೀರಲು ಅಗತ್ಯವಿರುವ ಜ್ಞಾನ, ಉಪಕರಣಗಳು ಮತ್ತು ಜಾಲ ಸಂಪರ್ಕದೊಂದಿಗೆ ಸಜ್ಜುಗೊಳಿಸುವ ಉದ್ದೇಶವನ್ನು ತೋರಿಸುತ್ತದೆ.
ಮುಕ್ತಾಯ
ಐ.ಎಫ್.ಎಫ್.ಐ. ತನ್ನ 55ನೇ ಆವೃತ್ತಿಗೆ ಕಾಲಿಡುತ್ತಿದ್ದಂತೆ, ಹೊಸ ಪೀಳಿಗೆಯ ಕಥೆಗಾರರನ್ನು ಪೋಷಿಸುವ ಮೂಲಕ ಸಿನಿಮಾದ ಕಲಾತ್ಮಕತೆಯನ್ನು ಆಚರಿಸಲು ಉತ್ಸವವು ಮುಂದುವರಿಸುತ್ತದೆ. ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ, ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ, ಮತ್ತು ಫಿಲ್ಮ್ ಬಜಾರ್ನಲ್ಲಿನ ವ್ಯಾಪಕ ಕಾರ್ಯಕ್ರಮಗಳಂತಹ ಉಪಕ್ರಮಗಳ ಮೂಲಕ, ಉದಯೋನ್ಮುಖ ಧ್ವನಿಗಳಿಗೆ ಐ.ಎಫ್.ಎಫ್.ಐ. ತನ್ನ ಪಾತ್ರವನ್ನು ಮೂಲಾಧಾರವಾಗಿ ಬಲಪಡಿಸುತ್ತದೆ. ಬೆಂಬಲಿತ, ಅಂತರ್ಗತ ಮತ್ತು ಸಹಯೋಗದ ವೇದಿಕೆಯನ್ನು ನೀಡುವ ಮೂಲಕ, ಯುವ ಚಲನಚಿತ್ರ ನಿರ್ಮಾಪಕರು ಪ್ರಪಂಚದೊಂದಿಗೆ ತಮ್ಮ ವಿಶಿಷ್ಟ ಚಿಂತನೆಗಳನ್ನು ಹಂಚಿಕೊಳ್ಳಬಹುದು ಎನ್ನುವುದನ್ನು ಐ.ಎಫ್.ಎಫ್.ಐ. ಖಚಿತಪಡಿಸುತ್ತದೆ. ಭಾರತೀಯ ಚಿತ್ರರಂಗದ ಭವಿಷ್ಯವು ನಿಜವಾಗಿಯೂ ಸಮರ್ಥರ ಕೈಯಲ್ಲಿದೆ ಮತ್ತು ಐ.ಎಫ್.ಎಫ್.ಐ. 2024, ಉದಯೋನ್ಮುಖ ಪ್ರತಿಭೆಗಳಿಗೆ ಅದರ ಬದ್ಧತೆಯೊಂದಿಗೆ, ವೈವಿಧ್ಯಮಯ ಧ್ವನಿಗಳು ಪ್ರವರ್ಧಮಾನಕ್ಕೆ ಬರುವ ಸಿನಿಮಾದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಡುತ್ತಿದೆ.
ಉಲ್ಲೇಖಗಳು
https://pib.gov.in/PressNoteDetails.aspx?NoteId=153393&ModuleId=3®=3&lang=1
https://iffigoa.org/cmot/about-cmot
https://filmbazaarindia.com/the-bazaar/about-film-bazaar/
https://pib.gov.in/PressReleaseIframePage.aspx?PRID=2052589#:~:text=Best%20Debut%20Director%20Award%3A%20A,talent%20in%20the%20film%20industry
https://pib.gov.in/PressReleasePage.aspx?PRID=2054935
https://pib.gov.in/PressReleaseIframePage.aspx?PRID=2026078#:~:text=The%20%E2%80%9C75%20Creative%20Minds%20of%20Tomorrow%E2%80%9D%20is%20a%20novel%20initiative,talents%20from%20across%20the%20country
https://drive.google.com/file/d/1wWu6MScYSHWT0x8M5_D97iEp9W4UzKBr/view
https://pib.gov.in/PressReleasePage.aspx?PRID=2068120
https://pib.gov.in/PressReleseDetail.aspx?PRID=2071460®=3&lang=1
https://pib.gov.in/PressReleaseIframePage.aspx?PRID=2072447
ಪಿ ಡಿ ಎಫ್ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
*****
(Release ID: 2073079)
Visitor Counter : 11