ಸಹಕಾರ ಸಚಿವಾಲಯ
ಹೊಸದಿಲ್ಲಿಯಲ್ಲಿ 'ಸಹಕಾರಿ ವಲಯದ ಅಭಿವೃದ್ಧಿ - ಸ್ವಾವಲಂಬನೆಗಾಗಿ ಪಿಎಸಿಎಸ್ ಸಬಲೀಕರಣ' ಕುರಿತು ಸಹಕಾರ ಸಚಿವಾಲಯದ ಭಾಗೀದಾರರ ಸಮಾಲೋಚನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಸಹಯೋಗ್ ಸೆ ಸಮೃದ್ಧಿ' ಚಿಂತನೆಗೆ ಅನುಗುಣವಾಗಿ, ಸಚಿವಾಲಯವು 2025ರ ಜನವರಿಯೊಳಗೆ ದೇಶದ ಎಲ್ಲಾ ಪಿಎಸಿಎಸ್ ಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ
ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಸಹಕಾರ ಸಚಿವಾಲಯವು ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ಹೊಸ ಪಿಎಸಿಎಸ್ ಗಳನ್ನು ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಕಾರಿಗಳಾಗಿ ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಪ್ರತಿ ಪಂಚಾಯಿತಿಯಲ್ಲಿ ಕಾರ್ಯಸಾಧ್ಯವಾದ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಲು ಉದ್ದೇಶಿಸಿದೆ
ಎಥೆನಾಲ್ ಮಿಶ್ರಣ ಕಾರ್ಯಕ್ರಮದಡಿ ಎನ್ಸಿಸಿಎಫ್ ಮತ್ತು ನಾಫೆಡ್ ಖರೀದಿಗಾಗಿ ರೈತರ ಪೋರ್ಟಲ್ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ಎಲ್ಲಾ ಮೆಕ್ಕೆಜೋಳ ರೈತರಿಗೆ ಕೇಂದ್ರ ಸಹಕಾರ ಕಾರ್ಯದರ್ಶಿ ಡಾ.ಆಶಿಶ್ ಕುಮಾರ್ ಭೂತಾನಿ ಮನವಿ. ಇದು ರೈತರಿಗೆ ಮತ್ತು ಎಥೆನಾಲ್ ಮಿಶ್ರಣ ಕಾರ್ಯಾಚರಣೆಗೆ ಅನುಕೂಲಕರ ಎಂದು ಅವರ ಹೇಳಿಕೆ
ದೇಶಾದ್ಯಂತ 31 ಸಾವಿರಕ್ಕೂ ಹೆಚ್ಚು ಪಿಎಸಿಎಸ್ ಗಳು ಇಆರ್ಪಿ ಸಾಫ್ಟ್ವೇರ್ನಲ್ಲಿ ನೊಂದಾವಣೆ ಆಗಿವೆ ಮತ್ತು 21 ಸಾವಿರಕ್ಕೂ ಹೆಚ್ಚು ಪಿಎಸಿಎಸ್ ಲೈವ್ ಆಗಿವೆ
ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ, ಮೆಕ್ಕೆಜೋಳ ಮತ್ತು ಬೇಳೆಕಾಳುಗಳನ್ನು ಉತ್ಪಾದಿಸುವ ಈಗಾಗಲೇ/ಮೊದಲೇ ನೋಂದಾಯಿಸ
Posted On:
03 SEP 2024 9:49PM by PIB Bengaluru
"ಸಹಕಾರಿ ಕ್ಷೇತ್ರದ ಅಭಿವೃದ್ಧಿ: ಸ್ವಾವಲಂಬನೆಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು (ಪಿಎಸಿಎಸ್) ಸಬಲೀಕರಣಗೊಳಿಸುವುದು" ಎಂಬ ವಿಷಯದ ಕುರಿತು ಸಮಗ್ರ ಭಾಗೀದಾರರ ಸಮಾಲೋಚನೆ ಇಂದು ಹೊಸದಿಲ್ಲಿಯಲ್ಲಿ ನಡೆಯಿತು. ದೇಶದಲ್ಲಿ ಸಹಕಾರಿ ಸಂಘಗಳನ್ನು/ಸೊಸೈಟಿಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಲು ವಿವಿಧ ಕ್ಷೇತ್ರಗಳ ಪ್ರಮುಖರನ್ನು ಒಟ್ಟು ಸೇರಿಸಲಾಯಿತು. ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭೂತಾನಿ ಅವರು ದಿನವಿಡೀ ಭಾಗೀದಾರರ ಸಮಾಲೋಚನಾ ಅಧಿವೇಶನಗಳ ಅಧ್ಯಕ್ಷರಾಗಿ ಹಾಜರಿದ್ದರು. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸಹಿತ ವಿವಿಧ ರಾಷ್ಟ್ರೀಯ ಒಕ್ಕೂಟಗಳ ಅಧ್ಯಕ್ಷರು ಮತ್ತು ಎಂಡಿಗಳು ಸೇರಿದಂತೆ ದೇಶಾದ್ಯಂತದ ಭಾಗೀದಾರರು ಹಾಜರಿದ್ದರು ಮತ್ತು ದೇಶಾದ್ಯಂತದ 200 ಕ್ಕೂ ಹೆಚ್ಚು ಇತರ ಭಾಗೀದಾರರು ವರ್ಚುವಲ್ ಮೂಲಕ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ.ಆಶಿಶ್ ಕುಮಾರ್ ಭೂತಾನಿ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 'ಸಹಕಾರ್ ಸೆ ಸಮೃದ್ಧಿ' ಚಿಂತನೆಗೆ ಅನುಗುಣವಾಗಿ, ಸಚಿವಾಲಯವು ಈ ವರ್ಷದ ಅಂತ್ಯದ ವೇಳೆಗೆ ಅಥವಾ 2025 ರ ಜನವರಿಯೊಳಗೆ ದೇಶದ ಎಲ್ಲಾ ಪಿಎಸಿಎಸ್ ಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ ಎಂದು ಹೇಳಿದರು. 2 ಲಕ್ಷ ಹೊಸ ವಿವಿಧೋದ್ದೇಶ ಪಿಎಸಿಎಸ್ ಗಳನ್ನು ರಚಿಸುವತ್ತ ಗಮನ ಹರಿಸಲಾಗಿದ್ದು, ದೇಶದಲ್ಲಿ ಹೆಚ್ಚು ವ್ಯಾಪ್ತಿಗೆ ಒಳಪಡದ ಪ್ರದೇಶಗಳನ್ನು ವ್ಯಾಪ್ತಿಗೆ ತರುವ ದೃಷ್ಟಿಕೋನದೊಂದಿಗೆ ಈ ನಿಟ್ಟಿನಲ್ಲಿ ಕಾರ್ಯಾಚರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಸಹಕಾರ ಸಚಿವಾಲಯವು ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ಹೊಸ ಪಿಎಸಿಎಸ್ ಗಳನ್ನು ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಕಾರಿಗಳಾಗಿ ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಪ್ರತಿ ಪಂಚಾಯಿತಿಯಲ್ಲಿ ಕಾರ್ಯಸಾಧ್ಯವಾದ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.
ಕೇಂದ್ರ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಭರವಸೆ ನೀಡಿದಂತೆ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್ಪಿ) ಮೆಕ್ಕೆಜೋಳವನ್ನು ಖರೀದಿಸಲು ಸಚಿವಾಲಯ ಸಜ್ಜಾಗಿದೆ ಎಂದು ಕೇಂದ್ರ ಸಹಕಾರ ಕಾರ್ಯದರ್ಶಿ ಡಾ. ಭೂತಾನಿ ಹೇಳಿದರು. ಎಥೆನಾಲ್ ಮಿಶ್ರಣ ಕಾರ್ಯಕ್ರಮದಡಿ ರಾಷ್ಟ್ರೀಯ ಸಹಕಾರಿ ಗ್ರಾಹಕ ಒಕ್ಕೂಟ (ಎನ್ಸಿಸಿಎಫ್) ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಖರೀದಿಗಾಗಿ ಎಲ್ಲಾ ಮೆಕ್ಕೆಜೋಳ ರೈತರು ರೈತರ ಪೋರ್ಟಲ್ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಇದರಿಂದ ರೈತರಿಗೆ ಮತ್ತು ಎಥೆನಾಲ್ ಮಿಶ್ರಣ ಕಾರ್ಯಕ್ರಮಕ್ಕೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು. ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇತ್ತೀಚೆಗೆ ಪೆಟ್ರೋಲಿಯಂ ಮತ್ತು ಡೀಸೆಲ್ ನಲ್ಲಿ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣದ ಪರಿಷ್ಕೃತ ಗುರಿಗಳನ್ನು ಘೋಷಿಸಿದ್ದರು ಮತ್ತು ಇದನ್ನು ಸಾಧಿಸಲು ಈ ಹಿಂದಿನ ಗಡುವಾಗಿದ್ದ 2030 ನ್ನು ಮೊಟಕುಗೊಳಿಸಿ, ಕಾಲಾವಧಿಯನ್ನು ಪರಿಷ್ಕರಿಸಿ 2025-26 ರ ವೇಳೆಗೆ ಸಾಧಿಸುವ ಗುರಿಯನ್ನು ನಿಗದಿ ಮಾಡಿದ್ದರು.
ಪಿಎಸಿಎಸ್ ಗಳ ಡಿಜಿಟಲೀಕರಣ ಕುರಿತ ಸಮಾಲೋಚನೆಯು ಎಲ್ಲಾ ಕ್ರಿಯಾತ್ಮಕ ಪಿಎಸಿಎಸ್ ಗಳನ್ನು ಎಂಟರ್ ಪ್ರೈಸ್ ಸಂಪನ್ಮೂಲ ಯೋಜನೆ (ಇಆರ್ ಪಿ) ಆಧಾರಿತ ಸಾಮಾನ್ಯ ರಾಷ್ಟ್ರೀಯ ಸಾಫ್ಟ್ ವೇರ್ ಗೆ ತರುವತ್ತ ಗಮನ ಹರಿಸಿದೆ ಮತ್ತು ಅವುಗಳನ್ನು ರಾಜ್ಯ ಸಹಕಾರಿ ಬ್ಯಾಂಕುಗಳು ಹಾಗು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳ ಮೂಲಕ ನಬಾರ್ಡ್ ನೊಂದಿಗೆ ಜೋಡಿಸಿದೆ. ಇಲ್ಲಿಯವರೆಗೆ, 30 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ 67,930 ಪಿಎಸಿಎಸ್ಗಳನ್ನು ಗಣಕೀಕರಣಗೊಳಿಸುವ ಪ್ರಸ್ತಾಪಗಳನ್ನು ಈ ಯೋಜನೆಯಡಿ ಮಂಜೂರು ಮಾಡಲಾಗಿದೆ ಮತ್ತು ಹಾರ್ಡ್ವೇರ್ ಖರೀದಿ, ದತ್ತಾಂಶಗಳ ಡಿಜಿಟಲೀಕರಣ ಹಾಗು ಬೆಂಬಲ ವ್ಯವಸ್ಥೆಯನ್ನು ಸ್ಥಾಪಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ 654.23 ಕೋಟಿ ರೂ.ಗಳ ಕೇಂದ್ರ ಪಾಲನ್ನು ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಡಿ ನಬಾರ್ಡ್ ಗೆ 141 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 2024 ರ ಆಗಸ್ಟ್ 30ರ ಹೊತ್ತಿಗೆ, 29 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 31,301 ಪಿಎಸಿಎಸ್ಗಳನ್ನು ಇಆರ್ಪಿ ಸಾಫ್ಟ್ವೇರ್ನಲ್ಲಿ ದಾಖಲಿಸಲಾಗಿದೆ ಮತ್ತು 21,477 ಪಿಎಸಿಎಸ್ ಗಳು ಲೈವ್ ಆಗಿವೆ. 54,654 ಪಿಎಸಿಎಸ್ ಗಳ ಡಿಜಿಟಲೀಕರಣಕ್ಕಾಗಿ ಹಾರ್ಡ್ ವೇರ್ ಅನ್ನು ಸ್ವೀಕರಿಸಿವೆ.
ಪಿಎಸಿಎಸ್ ಗಳನ್ನು ಕಾರ್ಯಸಾಧ್ಯವಾದ ವ್ಯಾಪಾರೋದ್ಯಮ ಘಟಕಗಳನ್ನಾಗಿ ಮಾಡುವ ಸಲುವಾಗಿ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಂದ ಹಿಡಿದು ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರಗಳು ಮತ್ತು ಬೀಜಗಳ ವಿತರಣೆಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುವ ವಿವಿಧೋದ್ದೇಶ ಘಟಕಗಳಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡಲು ಮಾದರಿ ಬೈಲಾ (ಉಪ ಕಾನೂನುಗಳನ್ನು) ರೂಪಿಸಲಾಗಿದೆ. ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನಾಯಕತ್ವದಲ್ಲಿ, ಮೆಕ್ಕೆಜೋಳ ಮತ್ತು ಬೇಳೆಕಾಳುಗಳನ್ನು ಉತ್ಪಾದಿಸಲು ರೈತರನ್ನು ಪ್ರೋತ್ಸಾಹಿಸುವ ಮೂಲಕ ಪಿಎಸಿಎಸ್ ಗಳನ್ನು ಮತ್ತಷ್ಟು ಬಲಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೆಕ್ಕೆಜೋಳ ಮತ್ತು ಬೇಳೆಕಾಳುಗಳನ್ನು ಉತ್ಪಾದಿಸುವ ಮೊದಲೇ ನೋಂದಾಯಿಸಿಕೊಡಿರುವ ರೈತರ ಸಂಪೂರ್ಣ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲು ನಿರ್ಧರಿಸಲಾಗಿದೆ.
ಚರ್ಚಿಸಲಾದ ಕಾರ್ಯತಂತ್ರಗಳ ಯಶಸ್ವಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಭಾಗೀದಾರರ ನಡುವೆ ನಿರಂತರ ಸಹಯೋಗದ ಅಗತ್ಯದ ಬಗ್ಗೆ ಒಮ್ಮತ ವ್ಯಕ್ತಪಡಿಸುವುದರೊಂದಿಗೆ ಸಮಾಲೋಚನೆ ಮುಕ್ತಾಯಗೊಂಡಿತು. ಪಿಎಸಿಎಸ್ ಗಳನ್ನು ಸಬಲೀಕರಣಗೊಳಿಸಲು, ಅವುಗಳ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ರಾಷ್ಟ್ರದ ಕೃಷಿ ಹಾಗು ಆರ್ಥಿಕ ಅಭಿವೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡಬಲ್ಲ ಸ್ವಾವಲಂಬಿಗಳನ್ನಾಗಿ ಮಾಡಲು ಅವುಗಳನ್ನು ಬೆಂಬಲಿಸಲು ಬಲವಾದ ಬದ್ಧತೆಯನ್ನು ಇದು ಹೊಂದಿದೆ.
*****
(Release ID: 2051652)
Visitor Counter : 43