ಹಣಕಾಸು ಸಚಿವಾಲಯ
ಕೇಂದ್ರ ಬಜೆಟ್ 2024-25ರಲ್ಲಿ ಪ್ರಸ್ತಾಪಿಸಿರುವ ಹೊಸ ಬಂಡವಾಳ ಗಳಿಕೆ ತೆರಿಗೆ ಆಡಳಿತ ಕುರಿತು ಎಫ್ಎಕ್ಯು(ಪದೇಪದೆ ಕೇಳಲಾದ ಪ್ರಶ್ನೆ)ಗಳಿಗೆ ಉತ್ತರ ಒದಗಿಸಿದ ಸಿಬಿಡಿಟಿ
Posted On:
24 JUL 2024 9:58PM by PIB Bengaluru
ಪದೇಪದೆ ಕೇಳಲಾದ ಪ್ರಶ್ನೆಗಳು(ಎಫ್ಎಕ್ಯುಗಳು)
ಪ್ರಶ್ನೆ 1: ಹಣಕಾಸು (ಸಂ.2) ವಿಧೇಯಕ-2024ರಲ್ಲಿ ಬಂಡವಾಳ ಗಳಿಕೆ ತೆರಿಗೆಯಲ್ಲಿ ಯಾವ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ?
ಉತ್ತರ: ಬಂಡವಾಳ ಗಳಿಕೆ ತೆರಿಗೆಯನ್ನು ತರ್ಕಬದ್ಧಗೊಳಿಸಲಾಗಿದೆ ಮತ್ತು ಸರಳೀಕರಿಸಲಾಗಿದೆ. ಈ ತರ್ಕಬದ್ಧತೆ ಮತ್ತು ಸರಳೀಕರಣಕ್ಕೆ 5 ವಿಶಾಲ ನಿಯತಾಂಕಗಳಿವೆ, ಅವುಗಳೆಂದರೆ:
- ಧಾರಣ(ಹಿಡಿತ ಅಥವಾ ಹಿಡುವಳಿ) ಅವಧಿ ಸರಳೀಕರಿಸಲಾಗಿದೆ. ಈಗ ಕೇವಲ 2 ಧಾರಣ ಅವಧಿಗಳಿವೆ, ಅಂದರೆ. 1 ವರ್ಷ ಮತ್ತು 2 ವರ್ಷ.
- ಬಹುತೇಕ ಅಥವಾ ಹೆಚ್ಚಿನ ಸ್ವತ್ತುಗಳಿಗೆ ತೆರಿಗೆ ದರಗಳನ್ನು ತರ್ಕಬದ್ಧಗೊಳಿಸಲಾಗಿದೆ, ಏಕರೂಪ ಮಾಡಲಾಗಿದೆ.
- 20%ನಿಂದ 12.5%ಗೆ ತೆರಿಗೆ ದರ ಏಕಕಾಲದಲ್ಲಿ ಕಡಿತಗೊಳಿಸುವುದರೊಂದಿಗೆ ಲೆಕ್ಕಾಚಾರ ಸುಲಭತೆಗಾಗಿ ಸೂಚ್ಯಂಕ ತೆಗೆದುಹಾಕಲಾಗಿದೆ.
- ನಿವಾಸಿ ಮತ್ತು ಅನಿವಾಸಿಗಳ ನಡುವೆ ಸಮಾನತೆ ಕಾಪಾಡಲಾಗಿದೆ.
- ವಿಸ್ತರಣೆ(ರೋಲ್ ಓವರ್) ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
ಪ್ರಶ್ನೆ 2: ಹೊಸ ತೆರಿಗೆ ನಿಬಂಧನೆಗಳು ಜಾರಿಗೆ ಬಂದ ದಿನಾಂಕ ಯಾವುದು?
ಉತ್ತರ: ಬಂಡವಾಳ ಗಳಿಕೆಗಳ ತೆರಿಗೆಯ ಹೊಸ ನಿಬಂಧನೆಗಳು 23.7.2024ರಿಂದ ಜಾರಿಗೆ ಬಂದಿವೆ, 23.7.2024ರಂದು ಅಥವಾ ನಂತರ ಮಾಡಿದ ಯಾವುದೇ ವರ್ಗಾವಣೆಗೆ ಇದು ಅನ್ವಯವಾಗುತ್ತದೆ.
ಪ್ರಶ್ನೆ 3: ಹಿಡಿತದ ಅವಧಿಯನ್ನು ಹೇಗೆ ಸರಳೀಕರಿಸಲಾಗಿದೆ?
ಉತ್ತರ: ಈ ಮೊದಲು ಸ್ವತ್ತನ್ನು ದೀರ್ಘಾವಧಿಯ ಬಂಡವಾಳ ಗಳಿಕೆಯ ಸ್ವತ್ತು ಎಂದು ಪರಿಗಣಿಸಲು 3 ಧಾರಣ ಅವಧಿಗಳಿದ್ದವು. ಈಗ ಹಿಡಿತದ ಅವಧಿಯನ್ನು ಸರಳೀಕರಿಸಲಾಗಿದೆ. ಇದೀಗ ಕೇವಲ 2 ಹಿಡಿತದ ಅವಧಿಗಳಿವೆ - ನೋಂದಾಯಿತ ಭದ್ರತಾ ಠೇವಣಿಗಳಿಗೆ(ಸೆಕ್ಯುರಿಟಿಗಳಿಗೆ) 1 ವರ್ಷ, ಎಲ್ಲಾ ಇತರೆ ಸ್ವತ್ತುಗಳಿಗೆ 2 ವರ್ಷಗಳು.
ಪ್ರಶ್ನೆ 4: ಹಿಡಿತದ ಅವಧಿಯ ಬದಲಾವಣೆಯಿಂದ ಯಾರಿಗೆಲ್ಲಾ ಪ್ರಯೋಜನ ಸಿಗುತ್ತದೆ?
ಉತ್ತರ: ನೋಂದಾಯಿತ ಎಲ್ಲಾ ಸ್ವತ್ತುಗಳ ಹಿಡಿತದ ಅವಧಿ ಈಗ 1 ವರ್ಷ. ಆದ್ದರಿಂದ, ವ್ಯಾಪಾರ ಟ್ರಸ್ಟ್‌ಗಳ ನೋಂದಾಯಿತ ಘಟಕಗಳಿಗೆ (ರಿಯಲ್ ಎಸ್ಟೇಟ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ ಗಳು(ಆರ್ ಇಐಟಿಗಳು), ಇನ್ ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ ಗಳು(ಐಎನ್ ವಿಐಟಿಗಳು) ಹಿಡಿತದ ಅವಧಿಯನ್ನು 36 ತಿಂಗಳಿಂದ 12 ತಿಂಗಳಿಗೆ ಕಡಿಮೆ ಮಾಡಲಾಗಿದೆ. ಚಿನ್ನ, ನೋಂದಣಿ ಆಗದ ಭದ್ರತಾ ಠೇವಣಿಗಳ (ನೋಂದಣಿ ಆಗದ ಷೇರುಗಳನ್ನು ಹೊರತುಪಡಿಸಿ) ಹಿಡಿತದ ಅವಧಿಯನ್ನು ಸಹ 36 ತಿಂಗಳಿಂದ 24 ತಿಂಗಳಿಗೆ ಇಳಿಸಲಾಗಿದೆ.
ಪ್ರಶ್ನೆ 5: ಸ್ಥಿರಾಸ್ತಿ ಮತ್ತು ನೋಂದಣಿ ಆಗದ ಷೇರುಗಳ ಹಿಡಿತದ ಅವಧಿ ಬಗ್ಗೆ ಏನು?
ಉತ್ತರ: ಸ್ಥಿರಾಸ್ತಿ ಮತ್ತು ನೋಂದಣಿ ಆಗದ ಮಾಡದ ಷೇರುಗಳ ಹಿಡಿತ ಅಥವಾ ಹಿಡುವಳಿ ಅವಧಿಯು ಹಿಂದಿನಂತೆಯೇ ಇದೆ, ಅಂದರೆ 24 ತಿಂಗಳು.
ಪ್ರಶ್ನೆ 6: ಭದ್ರತಾ ಠೇವಣಿಗಳ ನಿರ್ವಹಣೆ ತೆರಿಗೆ(ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್-ಎಸ್|ಟಿಟಿ) ಪಾವತಿಸಿದ ಬಂಡವಾಳ ಸ್ವತ್ತುಗಳ ದರ ರಚನೆಯ ಬದಲಾವಣೆಯನ್ನು ದಯವಿಟ್ಟು ವಿವರಿಸಬಹುದೆ?
ಉತ್ತರ: ಅಲ್ಪಾವಧಿಯ ಎಸ್|ಟಿಟಿ ಪಾವತಿಸಿದ ಈಕ್ವಿಟಿ, ಈಕ್ವಿಟಿ ಆಧಾರಿತ ಮ್ಯೂಚುಯಲ್ ಫಂಡ್ ಮತ್ತು ವ್ಯಾಪಾರ ಟ್ರಸ್ಟ್‌ನ ಘಟಕಗಳ ದರ (ಸೆಕ್ಷನ್ 111ಎ) 15ರಿಂದ 20%ಗೆ ಹೆಚ್ಚಾಗಿದೆ. ಅದೇ ರೀತಿ ದೀರ್ಘಾವಧಿಯ(ಸೆಕ್ಷನ್ 112ಎ) ಈ ಸ್ವತ್ತುಗಳ ದರ 10ರಿಂದ 12.5%ಗೆ ಹೆಚ್ಚಾಗಿದೆ.
ಪ್ರಶ್ನೆ 7: ಸೆಕ್ಷನ್ 112ಎ ಅಡಿ, ದೀರ್ಘಾವಧಿಯ ಬಂಡವಾಳ ಗಳಿಕೆಗಳಿಗೆ ವಿನಾಯಿತಿ ಮಿತಿಯಲ್ಲಿ ಯಾವುದೇ ಬದಲಾವಣೆ ಇದೆಯೇ? ಅದು ಮೊದಲು 1 ಲಕ್ಷ ರೂ. ಇತ್ತು.
ಉತ್ತರ: ಹೌದು. ಈ ಸ್ವತ್ತುಗಳ ಮೇಲಿನ ದೀರ್ಘಾವಧಿಯ ಬಂಡವಾಳ ಗಳಿಕೆ ತೆರಿಗೆ(ಎಲ್|ಟಿಸಿಜಿ)ಗೆ ಇದ್ದ 1 ಲಕ್ಷ ರೂ.ವಿನಾಯಿತಿ ಮಿತಿಯನ್ನು 1.25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಈ ಹೆಚ್ಚಿದ ವಿನಾಯಿತಿ ಮಿತಿಯು ಆರ್ಥಿಕ ವರ್ಷ 2024-25 ಮತ್ತು ನಂತರದ ವರ್ಷಗಳಿಗೆ ಅನ್ವಯಿಸುತ್ತದೆ.
ಪ್ರಶ್ನೆ 8: ಇತರೆ ದೀರ್ಘಾವಧಿಯ ಬಂಡವಾಳ ಗಳಿಕೆಗಳ ತೆರಿಗೆ ದರ ರಚನೆಯಲ್ಲಿನ ಬದಲಾವಣೆಯನ್ನು ದಯವಿಟ್ಟು ವಿವರಿಸಿ?
ಉತ್ತರ: ಎಲ್ಲಾ ಸ್ವತ್ತುಗಳ ಮೇಲಿನ ಇತರ ದೀರ್ಘಾವಧಿಯ ಬಂಡವಾಳ ಗಳಿಕೆಗಳ ತೆರಿಗೆ ದರವನ್ನು ಸೂಚ್ಯಂಕ ಮುಕ್ತವಾಗಿ 12.5%ಗೆ ತರ್ಕಬದ್ಧಗೊಳಿಸಲಾಗಿದೆ(ಸೆಕ್ಷನ್ 112). ಈ ದರವು ಮೊದಲು ಸೂಚ್ಯಂಕದೊಂದಿಗೆ 20% ಇತ್ತು. ಇದು ಬಂಡವಾಳ ಗಳಿಕೆಗಳ ತೆರಿಗೆಯನ್ನು ಸರಳೀಕರಿಸುವ ಜತೆಗೆ, ಸುಲಭ ಲೆಕ್ಕಾಚಾರಕ್ಕೆ ಅನುವು ಮಾಡಿಕೊಡುತ್ತದೆ.
ಪ್ರಶ್ನೆ 9: ಸೂಚ್ಯಂಕದೊಂದಿಗೆ 20% ಇದ್ದ ತೆರಿಗೆ ದರವನ್ನು ಸೂಚ್ಯಂಕವಿಲ್ಲದೆ 12.5%ಗೆ ಇಳಿಸಿರುವುದರಿಂದ ಯಾರಿಗೆಲ್ಲಾ ಪ್ರಯೋಜನ ಸಿಗುತ್ತದೆ?
ಉತ್ತರ: ದರ ಕಡಿತವು ಎಲ್ಲಾ ವರ್ಗದ ಸ್ವತ್ತುಗಳಿಗೆ ಪ್ರಯೋಜನ ನೀಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ತೆರಿಗೆದಾರರು ಗಣನೀಯ ಪ್ರಯೋಜನ ಪಡೆಯುತ್ತಾರೆ. ಆದರೆ ಹಣದುಬ್ಬರಕ್ಕೆ ಹೋಲಿಸಿದರೆ ಲಾಭ ಸೀಮಿತವಾಗಿದ್ದರೆ, ಕೆಲವು ಸಂದರ್ಭಗಳಲ್ಲಿ ಲಾಭವೂ ಸೀಮಿತವಾಗಿರುತ್ತದೆ ಅಥವಾ ಕೆಲವು ಸಂದರ್ಭಗಳಲ್ಲಿ ಲಾಭ ಇರುವುದಿಲ್ಲ.
ಪ್ರಶ್ನೆ 10: ತೆರಿಗೆದಾರರು ಬಂಡವಾಳ ಗಳಿಕೆಗಳ ಮೇಲೆ ವಿಸ್ತರಣೆ(ರೋಲ್ ಓವರ್)ಯ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸಬಹುದೇ?
ಉತ್ತರ: ಹೌದು. ರೋಲ್ ಓವರ್ ಪ್ರಯೋಜನಗಳು ಮೊದಲಿನಂತೆಯೇ ಇರುತ್ತವೆ. ಐಟಿ ಕಾಯ್ದೆಯಡಿ ಈಗಾಗಲೇ ಲಭ್ಯವಿರುವ ರೋಲ್ ಓವರ್ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದ್ದರಿಂದ, ಕಡಿಮೆ ದರಗಳೊಂದಿಗೆ ಸಹ ಎಲ್|ಟಿಸಿಜಿ ತೆರಿಗೆ ಉಳಿಸಲು ಬಯಸುವ ತೆರಿಗೆದಾರರು, ಅನ್ವಯವಾಗುವ ಷರತ್ತುಗಳ ನೆರವೇರಿಕೆಯ ಮೇಲೆ ರೋಲ್ ಓವರ್ ಪ್ರಯೋಜನ ಪಡೆದುಕೊಳ್ಳುವುದನ್ನು ಮುಂದುವರಿಸಬಹುದು.
ಪ್ರಶ್ನೆ 11: ಯಾವ ಸ್ವತ್ತುಗಳಲ್ಲಿ, ದೀರ್ಘಾವಧಿಯ ಬಂಡವಾಳ ಗಳಿಕೆಗಳನ್ನು ರೋಲ್ ಓವರ್ ಪ್ರಯೋಜನಗಳಿಗಾಗಿ ಹೂಡಿಕೆ ಮಾಡಬಹುದು?
ಉತ್ತರ: ರೋಲ್ ಓವರ್ ಪ್ರಯೋಜನಗಳಿಗಾಗಿ, ತೆರಿಗೆದಾರರು ತಮ್ಮ ಗಳಿಕೆಗಳನ್ನು ಸೆಕ್ಷನ್ 54 ಅಥವಾ ಸೆಕ್ಷನ್ 54ಎಫ್ ಅಡಿ ಅಥವಾ ಸೆಕ್ಷನ್ 54ಇಸಿ ಅಡಿ ಕೆಲವು ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಎಲ್ಲಾ ರೋಲ್ ಓವರ್ ಪ್ರಯೋಜನಗಳ ಸಂಪೂರ್ಣ ವಿವರಗಳಿಗಾಗಿ, ದಯವಿಟ್ಟು ಐಟಿ ಕಾಯಿದೆಯ ವಿಭಾಗ 54, 54ಬಿ, 54ಡಿ, 54ಇಸಿ, 54ಎಫ್, 54ಜಿ ಇವುಗಳನ್ನು ಉಲ್ಲೇಖಿಸಿ.
ಪ್ರಶ್ನೆ 12: ರೋಲ್ ಓವರ್ ಪ್ರಯೋಜನಗಳಲ್ಲಿ ಸಿಗುವ ಮೊತ್ತ ಎಷ್ಟು?
ಉತ್ತರ: 54ಇಸಿ ಬಾಂಡ್‌ಗಳಲ್ಲಿ (50 ಲಕ್ಷ ರೂ.ವರೆಗೆ) ಬಂಡವಾಳದ ಗಳಿಕೆಯ ಹೂಡಿಕೆ ಮತ್ತು ಇತರ ಸಂದರ್ಭಗಳಲ್ಲಿ, ಕೆಲವು ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ಬಂಡವಾಳದ ಗಳಿಕೆಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.
ಪ್ರಶ್ನೆ 13: ಈ ಎಲ್ಲಾ ಬದಲಾವಣೆಗಳಿಗೆ ಒಟ್ಟಾರೆ ತಾರ್ಕಿಕತೆ ಏನು?
ಉತ್ತರ: ಯಾವುದೇ ತೆರಿಗೆ ಸ್ವರೂಪದ ಸರಳೀಕರಣವು ಅನುಸರಣೆಯ ಸುಲಭ ಪ್ರಯೋಜನಗಳನ್ನು ಹೊಂದಿದೆ. ಅಂದರೆ ಲೆಕ್ಕಾಚಾರ, ಫೈಲಿಂಗ್, ದಾಖಲೆಗಳ ನಿರ್ವಹಣೆ ಸೇರಿರುತ್ತದೆ. ಇದು ವಿವಿಧ ವರ್ಗಗಳ ಸ್ವತ್ತುಗಳಿಗೆ ವಿಭಿನ್ನ ತೆರಿಗೆ ದರಗಳನ್ನು ತೆಗೆದುಹಾಕುತ್ತದೆ.
*****
(Release ID: 2036691)
Visitor Counter : 177