ಕಲ್ಲಿದ್ದಲು ಸಚಿವಾಲಯ
ಜಾರ್ಖಂಡ್ ನ ಕಲ್ಲಿದ್ದಲು ಗಣಿಗಾರಿಕಾ ಜಿಲ್ಲೆಗಳಲ್ಲಿ ಶೈಕ್ಷಣಿಕ ಪರಿವರ್ತನೆ ತರಲು ಎಜುಕೇಷನಲ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ನೊಂದಿಗೆ ಪಾಲುದಾರಿಕೆಗೆ ಸಹಿ ಹಾಕಿರುವ ಕೋಲ್ ಇಂಡಿಯಾ ಲಿಮಿಟೆಡ್
27.08 ಕೋಟಿ ರೂ.ಗಳ ವೆಚ್ಚದ ಈ ಯೋಜನೆಯಿಂದ ಹನ್ನೊಂದು ಜಿಲ್ಲೆಗಳು ಪ್ರಯೋಜನ ಹೊಂದಲಿವೆ
Posted On:
05 JAN 2024 3:13PM by PIB Bengaluru
ಮಹಾರಾಷ್ಟ್ರ ಸರ್ಕಾರದ ಸಾರ್ವಜನಿಕ ವಲಯದ ಘಟಕವಾದ ಕೋಲ್ ಇಂಡಿಯಾ ಲಿಮಿಟೆಡ್ ಸುಸ್ಥಿರ ಮತ್ತು ಸಾಮಾಜಿಕ ಜವಾಬ್ದಾರಿಯುತ ಅಭ್ಯಾಸಗಳಿಗೆ ಬದ್ಧವಾಗಿದ್ದು, ಅದು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ, ಕೋಲ್ ಇಂಡಿಯಾ ಲಿಮಿಟೆಡ್, ಶಿಕ್ಷಣ ಕ್ಷೇತ್ರವನ್ನು ಉನ್ನತೀಕರಿಸುವ ಮತ್ತು ಅದರ ಮೂಲಕ ತನ್ನ ಗಣಿಗಾರಿಕಾ ಪ್ರದೇಶಗಳ ನಿವಾಸಿಗಳನ್ನು ಸಬಲೀಕರಣಗೊಳಿಸುವ ಉಪಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಆಧಾರಿತ ಕಲಿಕೆಯ ಸಂಯೋಜನೆಯನ್ನು ಇಂದು ಆಧುನಿಕ ಬೋಧನಾ ಸಾಧನವಾಗಿ ಅಳವಡಿಸಿಕೊಳ್ಳುತ್ತಿರುವುದರಿಂದ, ಕೋಲ್ ಇಂಡಿಯಾ ಲಿಮಿಟೆಡ್ ನವದೆಹಲಿಯಲ್ಲಿ 03.01.2024ರಂದು "ಜಾರ್ಖಂಡ್ ನ ಹನ್ನೊಂದು ಜಿಲ್ಲೆಗಳಲ್ಲಿ ಶಿಕ್ಷಣವನ್ನು ಡಿಜಿಟಲೀಕರಣಗೊಳಿಸಲು" ಎಜುಕೇಷನಲ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ನೊಂದಿಗೆ ತಿಳುವಳಿಕಾ ಒಡಂಬಡಿಕೆಯನ್ನು ಮಾಡಿಕೊಂಡಿದೆ.
ಈ ತಿಳುವಳಿಕಾ ಒಡಂಬಡಿಕೆಗೆ ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ರೂಪಿಂದರ್ ಬ್ರಾರ್, ವಿನಯ್ ರಂಜನ್, ನಿರ್ದೇಶಕ (ಸಿಬ್ಬಂದಿ ಮತ್ತು ಕೈಗಾರಿಕಾ ಸಂಬಂಧಗಳು), ಕೋಲ್ ಇಂಡಿಯಾ ಲಿಮಿಟೆಡ್, ಮತ್ತು ಎಜುಕೇಷನಲ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮನೋಜ್ ಕುಮಾರ್, ಕೋಲ್ ಇಂಡಿಯಾ ಲಿಮಿಟೆಡ್ ನ ಅಂಗಸಂಸ್ಥೆಗಳ ನಿರ್ದೇಶಕರು (ಸಿಬ್ಬಂದಿ) ಮತ್ತು ಕಲ್ಲಿದ್ದಲು ಸಚಿವಾಲಯ ಮತ್ತು ಇತರ ಕಲ್ಲಿದ್ದಲು ಕಂಪನಿಗಳ ಗಣ್ಯರ ಉಪಸ್ಥಿತಿಯಲ್ಲಿ ಅಂಕಿತ ಹಾಕಲಾಯಿತು.

ಮೂರು ವರ್ಷಗಳ ಅವಧಿಯಲ್ಲಿ ಜಾರ್ಖಂಡ್ ನ 11 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಜಿಲ್ಲೆಗಳು ಕೋಲ್ ಇಂಡಿಯಾ ಲಿಮಿಟೆಡ್ ನ ಮೂರು ಅಂಗಸಂಸ್ಥೆಗಳಾದ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್, ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ಮತ್ತು ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ನ ಗಣಿಗಾರಿಕಾ ಪ್ರದೇಶಗಳನ್ನು ಒಳಗೊಂಡಿವೆ. ಈ ಯೋಜನೆಯ ಅಂದಾಜು ವೆಚ್ಚ ಸುಮಾರು 27.08 ಕೋಟಿ ರೂ. ಪ್ರತಿ ಶಾಲೆಯಲ್ಲಿ ಒಂದು ಸ್ಮಾರ್ಟ್ ತರಗತಿ ಮತ್ತು ಒಂದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು. ಈ ಯೋಜನೆಯು ಶಿಕ್ಷಕರ ತರಬೇತಿ ಮತ್ತು ಸ್ಥಾಪಿತ ಉಪಕರಣಗಳ ಮೂರು ವರ್ಷಗಳ ನಿರ್ವಹಣೆಯನ್ನು ಸಹ ಒಳಗೊಂಡಿದೆ.
ಹೊಸ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ ಈ ಉಪಕ್ರಮವು ಕಲ್ಲಿದ್ದಲು ಜಿಲ್ಲೆಗಳಲ್ಲಿ ಶಿಕ್ಷಣವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಮಹತ್ವದ ಹೆಜ್ಜೆಯನ್ನು ನಿರ್ವಹಿಸಲಿದೆ. ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತ, ಸರ್ಕಾರದ ಈ ಎರಡೂ ದೃಷ್ಟಿಕೋನಗಳನ್ನು ಈಡೇರಿಸುವಲ್ಲಿ ಇದು ಒಂದು ಹೆಜ್ಜೆಯಾಗಿದೆ. ಈ ಯೋಜನೆಯು ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಉನ್ನತ ಶೈಕ್ಷಣಿಕ ವಿಷಯದೊಂದಿಗೆ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ. ಕೋಲ್ ಇಂಡಿಯಾ ಲಿಮಿಟೆಡ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯುತ ಚಟುವಟಿಕೆಗಳ ಮೂಲಕ ಸಕಾರಾತ್ಮಕ ಬದಲಾವಣೆ ತರಲು ಮತ್ತು ಸಮುದಾಯಗಳಿಗೆ ಉಜ್ವಲ ಭವಿಷ್ಯವನ್ನು ನೀಡಲು ಬದ್ಧವಾಗಿದೆ.
***
(Release ID: 1993515)
Visitor Counter : 102