ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಮೊದಲ ʻಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ʼಗೆ ಸಂಭ್ರಮದ ವಾತಾವರಣ ಸೃಷ್ಟಿಸಿದ ಲಾಂಛನ - 'ಉಜ್ವಲಾ'


ʻಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ʼನ ಆರಂಭವು ಪ್ರತಿಭಾವಂತ ಪ್ಯಾರಾ-ಅಥ್ಲೀಟ್ ಗಳನ್ನು ಗುರುತಿಸುವ ಮತ್ತು ಬೆಂಬಲಿಸುವ ಮೂಲಕ ತನ್ನ ಪ್ರಭಾವವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ: ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 07 DEC 2023 6:32PM by PIB Bengaluru

2023ರ ಡಿಸೆಂಬರ್ 10 ರಿಂದ 17 ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಮೊದಲ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್’ಬಗ್ಗೆ ಪ್ರಚಾರ ಮಾಡಲು `ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್’ನ ಲಾಂಛನವಾದ 'ಉಜ್ವಲಾ' ನವದೆಹಲಿಯ ಪ್ರಮುಖ ಹೆಗ್ಗುರುತುಗಳಾದ ಖಾನ್ ಮಾರುಕಟ್ಟೆ, ಸರೋಜಿನಿ ನಗರ, ಕೊನಾಟ್ ಪ್ಲೇಸ್‌ಗಳಲ್ಲಿ ಸುತ್ತುತ್ತಿದೆ.

ದೆಹಲಿಯ ಬೀದಿಗಳಲ್ಲಿ ಈ ಕ್ರೀಡಾಕೂಟವನ್ನು ಆಚರಿಸುವ ವರ್ಣರಂಜಿತ ಭಿತ್ತಿಚಿತ್ರಗಳು ರಾರಾಜಿಸುತ್ತಿದ್ದು, ಇದು ನಿಜವಾಗಿಯೂ ಹಬ್ಬದ ಮತ್ತು ಸಂಭ್ರಮದ ವಾತಾವರಣವನ್ನು ಸೃಷ್ಟಿಸುತ್ತದೆ. ಅಭಿಮಾನಿಗಳಿಗೆ ಅದ್ಭುತ ಅನುಭವವನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಕ್ರೀಡಾಕೂಟಕ್ಕಾಗಿ ನಗರವು ಸೌಂದರ್ಯವರ್ಧನೆಗೊಂಡಿದೆ. ನಗರದ ವಿವಿಧ ಭಾಗಗಳಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಅಭಿಮಾನಿಗಳು ಹೋಗಿ ʻಉಜ್ವಲಾʼ ಲಾಂಛನದೊಂದಿಗೆ ಸೆಲ್ಫಿ ಕ್ಲಿಕ್ಕಿಸಬಹುದು. ಈ ಎಲ್ಲಾ ಸ್ಥಳಗಳನ್ನು ʻಜಿಯೋ-ಟ್ಯಾಗ್ʼ ಮಾಡಲಾಗಿದೆ.

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು, "ಒಳಗೊಳ್ಳುವಿಕೆ ಕೇವಲ ಗುರಿಯಲ್ಲ, ಅದು ಆಟವನ್ನು ಮುನ್ನಡೆಸುವ ಸ್ಫೂರ್ತಿಯಾಗಿದೆ. ʻಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ʼ ಪ್ರಾರಂಭದೊಂದಿಗೆ, ಮುಂಬರುವ ವರ್ಷಗಳಲ್ಲಿ ಬಹು-ವಿಭಾಗಗಳ ಸ್ಪರ್ಧೆಗಳಲ್ಲಿ ಭಾರತದ ಯಶಸ್ಸಿಗೆ ಕೊಡುಗೆ ನೀಡುವ ಪ್ರತಿಭಾವಂತ ಪ್ಯಾರಾ-ಅಥ್ಲೀಟ್‌ಗಳನ್ನು ಗುರುತಿಸುವ ಮತ್ತು ಬೆಂಬಲಿಸುವ ಮೂಲಕ ಕ್ರೀಡೆಯ ಪ್ರಭಾವವನ್ನು ವಿಸ್ತರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಾನು ಈ ನಿಟ್ಟಿನಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ನಮ್ಮ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದಾಗಿ ʻಖೇಲೋ ಇಂಡಿಯಾʼ ಮನೆಮಾತಾಗಿದೆ. ಈ ಕ್ರೀಡಾಕೂಟದ ಯೋಜನೆಯೊಂದಿಗೆ ಅದೊಂದು ಆಂದೋಲನವಾಗಿ ಮಾರ್ಪಟ್ಟಿದೆ. 2018ರಿಂದ ಇಲ್ಲಿಯವರೆಗೆ, ನಾವು 11 ʻಖೇಲೋ ಇಂಡಿಯಾʼ ಕ್ರೀಡಾಕೂಟಗಳನ್ನು ನಡೆಸಿದ್ದೇವೆ, ಆದರೆ ಈ ವರ್ಷ ʻಪ್ಯಾರಾ ಗೇಮ್ಸ್ʼ ಇದಕ್ಕೆ ಸೇರ್ಪಡೆಗೊಳಿಸುತ್ತಿರುವುದು ನಮಗೆ ಸಂತಸ ತಂದಿದೆ.

ʻಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ʼ, ಭಾರತೀಯ ಕ್ರೀಡೆಗಳಲ್ಲಿ ಒಳಗೊಳ್ಳುವಿಕೆಯತ್ತ ಒಂದು ಮಹತ್ವದ ಹೆಜ್ಜೆಯಾಗಿದ್ದು, ದೇಶದ ಮೂಲೆ ಮೂಲೆಯಲ್ಲಿರುವ ಪ್ಯಾರಾ-ಅಥ್ಲೀಟ್‌ಗಳ ಅಸಾಧಾರಣ ಪ್ರತಿಭೆ ಮತ್ತು ಧೈರ್ಯವನ್ನು ಅನಾವರಣಗೊಳಿಸಲಿದೆ. ಈ ಪ್ರತಿಭಾವಂತ ಕ್ರೀಡಾಪಟುಗಳು ಪ್ರದರ್ಶಿಸುವ ಕೌಶಲ್ಯ, ಸಮರ್ಪಣಾ ಭಾವ ಮತ್ತು ಉತ್ಸಾಹದ ಭವ್ಯ ಪ್ರದರ್ಶನಗಳಿಗೆ ಸಾಕ್ಷಿಯಾಗಲು ರಾಜಧಾನಿ ಕಾತುರದಿಂದಿದೆ.

2018 ರಿಂದ ಒಟ್ಟು 11 ʻಖೇಲೋ ಇಂಡಿಯಾʼ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದರಲ್ಲಿ 5 ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼ, 3 ʻಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ʼ ಮತ್ತು 3 ʻಖೇಲೋ ಇಂಡಿಯಾ ವಿಂಟರ್ ಗೇಮ್ಸ್ʼ ಸೇರಿವೆ.

ಮೊದಲ ʻಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ʼ 2023ರ ಡಿಸೆಂಬರ್ 10 ರಿಂದ 17ರವರೆಗೆ ನಡೆಯಲಿದೆ. ʻಸರ್ವೀಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ʼ ಸೇರಿದಂತೆ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 1,400ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದರಲ್ಲಿ ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಶೂಟಿಂಗ್, ಪ್ಯಾರಾ ಬಿಲ್ಲುಗಾರಿಕೆ, ಪ್ಯಾರಾ ಫುಟ್ಬಾಲ್, ಪ್ಯಾರಾ ಬ್ಯಾಡ್ಮಿಂಟನ್, ಪ್ಯಾರಾ ಟೇಬಲ್ ಟೆನಿಸ್ ಮತ್ತು ಪ್ಯಾರಾ ವೇಟ್ ಲಿಫ್ಟಿಂಗ್ ಸೇರಿದಂತೆ 7 ವಿಭಾಗಗಳಲ್ಲಿ ಪ್ಯಾರಾ ಅಥ್ಲೀಟ್‌ಗಳು ಗೆಲುವಿಗಾಗಿ ಸ್ಪರ್ಧಿಸಲಿದ್ದಾರೆ. ಐಜಿ ಕ್ರೀಡಾಂಗಣ, ತುಘಲಕಾಬಾದ್‌ ಶೂಟಿಂಗ್ ರೇಂಜ್ ಮತ್ತು ಜೆಎಲ್ಎನ್ ಕ್ರೀಡಾಂಗಣ ಸೇರಿದಂತೆ ಮೂರು ʻಸಾಯ್ʼ ಕ್ರೀಡಾಂಗಣಗಳಲ್ಲಿ ಈ ಕ್ರೀಡಾಕೂಟಗಳು ನಡೆಯಲಿವೆ.

********



(Release ID: 1983910) Visitor Counter : 58


Read this release in: English , Urdu , Hindi