ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಬಾದಂಪಹಾರ್ ರೈಲ್ವೆ ನಿಲ್ದಾಣದಿಂದ ಮೂರು ಹೊಸ ರೈಲುಗಳಿಗೆ ರಾಷ್ಟ್ರಪತಿ ಅವರು ಹಸಿರು ನಿಶಾನೆ ತೋರಿದರು. ಹೊಸ ರಾಯರಂಗಪುರ ಅಂಚೆ ವಿಭಾಗವನ್ನು ಉದ್ಘಾಟಿಸಲಾಯಿತು; ರಾಯರಂಗಪುರ ಅಂಚೆ ವಿಭಾಗದ ಸ್ಮರಣಾರ್ಥ ವಿಶೇಷ ಲಕೋಟೆ ಬಿಡುಗಡೆ; ಮತ್ತು ಬಾದಂಪಹಾರ್ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು

Posted On: 21 NOV 2023 1:21PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಬಾದಂಪಹಾರ್ - ಟಾಟಾನಗರ ಮೆಮು; ಬಾದಂಪಹಾರ್ - ರೂರ್ಕೆಲಾ ಸಾಪ್ತಾಹಿಕ ಎಕ್ಸ್ ಪ್ರೆಸ್; ಮತ್ತು ಬಾದಂಪಹಾರ್ - ಶಾಲಿಮಾರ್ ಸಾಪ್ತಾಹಿಕ ಎಕ್ಸ್ ಪ್ರೆಸ್  ಎಂಬ ಮೂರು ಹೊಸ ರೈಲುಗಳಿಗೆ ಒಡಿಶಾದ ಬಾದಂಪಹಾರ್ ರೈಲ್ವೆ ನಿಲ್ದಾಣದಿಂದ ಇಂದು (ನವೆಂಬರ್ 21, 2023) ಹಸಿರು ನಿಶಾನೆ ತೋರಿದರು.

ಅವರು ಹೊಸ ರಾಯರಂಗಪುರ ಅಂಚೆ ವಿಭಾಗವನ್ನು ಕೂಡ ವರ್ಚುವಲ್ ಆಗಿ ಉದ್ಘಾಟಿಸಿದರು; ರಾಯರಂಗಪುರ ಅಂಚೆ ವಿಭಾಗದ ಸ್ಮರಣಾರ್ಥ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಿದರು; ಮತ್ತು ಈ ಸಂದರ್ಭದಲ್ಲಿ ಬಾದಂಪಹಾರ್ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಅವರು, ಯಾವುದೇ ಪ್ರದೇಶದ ಅಭಿವೃದ್ಧಿಯು ಆ ಪ್ರದೇಶದ ಸಂಪರ್ಕವನ್ನು ಅವಲಂಭಿಸಿರುತ್ತದೆ. ಅದು ರೈಲು, ರಸ್ತೆ ಅಥವಾ ಅಂಚೆ ಸೇವೆಗಳಾಗಿರಬಹುದು - ಈ ಎಲ್ಲಾ ಸೇವೆಗಳು ಜನರ ಜೀವನವನ್ನು ಸುಲಭಗೊಳಿಸುತ್ತವೆ. ಇಂದು ಪ್ರಾರಂಭಿಸಲಾದ ಮೂರು ರೈಲುಗಳು ಸ್ಥಳೀಯರಿಗೆ ನೆರೆಯ ರಾಜ್ಯಗಳಾದ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳಕ್ಕೆ ಪ್ರಯಾಣಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. 

ಒಡಿಶಾದ ಕೈಗಾರಿಕಾ ಪಟ್ಟಣ ರೂರ್ಕೆಲಾಗೆ ಭೇಟಿ ನೀಡುವುದರಿಂದ ಜನರಿಗೆ ಯಾವುದೇ ಅನಾನುಕೂಲತೆ ಉಂಟಾಗುವುದಿಲ್ಲ ಎಂದು ಅವರು ಹೇಳಿದರು.

ಸೆಲ್ ಫೋನ್ ಗಳು ಮತ್ತು ಕೊರಿಯರ್ ಸೇವೆಗಳ ಹೆಚ್ಚುತ್ತಿರುವ ಪ್ರವೃತ್ತಿಯ ಹೊರತಾಗಿಯೂ, ಭಾರತೀಯ ಅಂಚೆ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ ಎಂದು ರಾಷ್ಟ್ರಪತಿ ಹೇಳಿದರು. ರಾಯರಂಗಪುರದಲ್ಲಿ ಹೊಸ ಅಂಚೆ ವಿಭಾಗದ ಉದ್ಘಾಟನೆಯು ಈ ಪ್ರದೇಶದ ಪ್ರಮುಖ ಘಟನೆಯಾಗಿದೆ. ಈ ಪ್ರದೇಶದ ಜನರು ಈಗ ಅಂಚೆ ಸೇವೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ರಾಷ್ಟ್ರಪತಿ ಹೇಳಿದರು. 2013-14ರ ಹಣಕಾಸು ವರ್ಷದ ಬಜೆಟ್ ಗೆ ಹೋಲಿಸಿದರೆ ಪ್ರಸಕ್ತ ಬಜೆಟ್ ನಲ್ಲಿ ಸುಮಾರು ಮೂರು ಪಟ್ಟು ಹೆಚ್ಚಳವಾಗಿದೆ ಎಂದು ಗಮನಿಸಿದ ಅವರು, ಬುಡಕಟ್ಟು ಜನರ ಅಭಿವೃದ್ಧಿಯಿಲ್ಲದೆ ಅಂತರ್ಗತ ಅಭಿವೃದ್ಧಿ ಅಪೂರ್ಣ ಎಂದು ಹೇಳಿದರು. ಅದಕ್ಕಾಗಿಯೇ ಸರ್ಕಾರ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಬುಡಕಟ್ಟು ಯುವಕರು ಸರ್ಕಾರದ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದು ರಾಷ್ಟ್ರಪತಿ ಒತ್ತಾಯಿಸಿದರು. ಸ್ವಯಂ ಅಭಿವೃದ್ಧಿಗೆ ಒಬ್ಬರ ಪ್ರಯತ್ನವೂ ಅಗತ್ಯ. ಆದ್ದರಿಂದ, ಯುವಕರು ತಮ್ಮ ಜೀವನದಲ್ಲಿ ಮುಂದೆ ಸಾಗಲು ಪ್ರಯತ್ನಿಸುತ್ತಲೇ ಇರಬೇಕು ಎಂದು ಅವರು ಒತ್ತಿ ಹೇಳಿದರು.

ಪಿವಿಟಿಜಿಗಳ ಅಭಿವೃದ್ಧಿಗಾಗಿ ಈ ವರ್ಷ ಜನಜತೀಯ ಗೌರವ್ ದಿವಸ್ ಸಂದರ್ಭದಲ್ಲಿ ಸರ್ಕಾರ ಪಿಎಂ ಜನಮಾನ್ (ಪಿಎಂ- ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ) ಪ್ರಾರಂಭಿಸಿದೆ ಎಂದು ರಾಷ್ಟ್ರಪತಿ ಹೇಳಿದರು. ಬುಡಕಟ್ಟು ಸಹೋದರ ಸಹೋದರಿಯರ ಪ್ರಗತಿಗೆ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದರು. ಈ ಉಪಕ್ರಮವು ಈ ಅಮೃತ ಕಾಲದಲ್ಲಿ ಜನರನ್ನು ಅಭಿವೃದ್ಧಿಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ರಾಷ್ಟ್ರಪತಿ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ನಂತರ ರಾಷ್ಟ್ರಪತಿ ಅವರು ಬಾದಂಪಹಾರ್ - ಶಾಲಿಮಾರ್ ಎಕ್ಸ್ ಪ್ರೆಸ್ ನಲ್ಲಿ ಬಾದಂಪಹಾರ್ ನಿಂದ  ರಾಯರಂಗಪುರಕ್ಕೆ ಪ್ರಯಾಣಿಸಿದರು.

*****
 


(Release ID: 1978505)