ಕಲ್ಲಿದ್ದಲು ಸಚಿವಾಲಯ
ಸುಸ್ಥಿರ ಕಲ್ಲಿದ್ದಲು ಗಣಿಗಾರಿಕೆ ಮತ್ತು ಹಸಿರು ಕಲ್ಲಿದ್ದಲು ತಂತ್ರಜ್ಞಾನದ ಬಲವರ್ಧನೆಗಾಗಿ ಶೀಘ್ರವೇ ಹಣಕಾಸು ವೆಚ್ಚ ಘೋಷಣೆಯಾಗುವ ಸಾಧ್ಯತೆ ಇದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಗಣಿಗಾರಿಕೆ ನಿಲ್ಲಿಸಲಾದ ಗಣಿಗಳನ್ನು ಜನರ ಆಕಾಂಕ್ಷೆಗಳಿಗೆ ಪೂರಕವಾಗಿ ವೈಜ್ಞಾನಿಕವಾಗಿ ಮುಚ್ಚುವುದನ್ನು ಖಾತರಿಪಡಿಸಿಕೊಳ್ಳುವತ್ತ ಕಲ್ಲಿದ್ದಲು ವಲಯ ಗಮನ ಹರಿಸುವಂತೆ ಆಗ್ರಹ
ʼಸ್ಥಿತ್ಯಂತರ ಕುರಿತಂತೆ ಜಾಗತಿಕ ಅನುಭವಗಳ ವಿನಿಮಯʼ ವಿಚಾರವಾಗಿ ಕಲ್ಲಿದ್ದಲು ಸಚಿವಾಲಯದಿಂದ ರಾಷ್ಟ್ರೀಯ ಕಾರ್ಯಾಗಾರ ಆಯೋಜನೆ
Posted On:
11 OCT 2023 6:52PM by PIB Bengaluru
ಭಾರತದಲ್ಲಿ ಸುಸ್ಥಿರ ಕಲ್ಲಿದ್ದಲು ಗಣಿಗಾರಿಕೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಹಸಿರು ಕಲ್ಲಿದ್ದಲು ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಶೀಘ್ರದಲ್ಲೇ ಹಣಕಾಸಿನ ವೆಚ್ಚವನ್ನು ಘೋಷಿಸಲಾಗುವುದು ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಕಲ್ಲಿದ್ದಲು ಸಚಿವಾಲಯವು ಇಂದು ಇಲ್ಲಿ ಆಯೋಜಿಸಿದ್ದ “ಕೇವಲ ಸ್ಥಿತ್ಯಂತರ ಕುರಿತಂತೆ ಜಾಗತಿಕ ಅನುಭವಗಳ ವಿನಿಯಮʼ ವಿಚಾರ ಕುರಿತ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗಣಿಗಾರಿಕೆ ಚಟುವಟಿಕೆ ಕೈಬಿಡಲಾದ ಕಲ್ಲಿದ್ದಲು ಗಣಿಗಳನ್ನು ವೈಜ್ಞಾನಿಕವಾಗಿ ಮುಚ್ಚುವ ಮಹತ್ವವನ್ನು ಒತ್ತಿ ಹೇಳಿದ ಕೇಂದ್ರ ಸಚಿವರು, ಭಾರತದ ವಿದ್ಯುತ್ ಬಳಕೆ ಪ್ರಮಾಣವು ಜಾಗತಿಕ ಬಳಕೆ ಸರಾಸರಿಯ ಕೇವಲ ಮೂರನೇ ಒಂದು ಭಾಗದಷ್ಟಿದೆ. ಇದೇ ವೇಳೆ, ಜಗತ್ತಿನಲ್ಲಿ ಅತಿ ಹೆಚ್ಚು ಸೌರಶಕ್ತಿ ವಿದ್ಯುತ್ ಉತ್ಪಾದಿಸುವ ಮುಂಚೂಣಿ 5 ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ. ಕಲ್ಲಿದ್ದಲು ಕ್ಷೇತ್ರದಲ್ಲಿ ಕೇವಲ ಸ್ಥಿತ್ಯಂತರಗಳನ್ನು ಖಾತರಿಪಡಿಸಿಕೊಳ್ಳುವಾಗ ತಳಮಟ್ಟದ ಜನರ ಆಕಾಂಕ್ಷೆಗಳನ್ನು ಸಮರ್ಪಕವಾಗಿ ತಲುಪಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಲಿದೆ ಎಂದು ಅವರು ಹೇಳಿದರು. ಆ ನಿಟ್ಟಿನಲ್ಲಿ ಭಾರತೀಯ ಕಲ್ಲಿದ್ದಲು ಸಂಸ್ಥೆ (ಕೋಲ್ ಇಂಡಿಯಾ ಲಿಮಿಟೆಡ್) ಹಾಗೂ ಅದರ ಅಂಗಸಂಸ್ಥೆಗಳ ಘಟಕಗಳು ಪರಿಸರಸ್ನೇಹಿ ಶುದ್ಧ ಕಲ್ಲಿದ್ದಲು ತಂತ್ರಜ್ಞಾನ ಬಳಕೆಯತ್ತ ವಿಶೇಷ ಒತ್ತು ನೀಡಿವೆ ಎಂದು ಶ್ರೀ ಜೋಶಿ ಹೆಮ್ಮೆಯಿಂದ ತಿಳಿಸಿದ್ದಾರೆ.
ಮುಖ್ಯ ಭಾಷಣ ಮಾಡಿದ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ, "ದೇಶೀಯ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸುವ ಮೂಲಕ ಭಾರತದ ಕಲ್ಲಿದ್ದಲು ವಲಯವು ಆರ್ಥಿಕ ಬೆಳವಣಿಗೆಗೆ ಪೂರಕವಾದ ಉತ್ತೇಜನ ನೀಡುತ್ತಿದೆ. ಗಣಿಗಾರಿಕೆ ಚಟುವಟಿಕೆ ಕೈಬಿಡಲಾದ ಕಲ್ಲಿದ್ದಲು ಗಣಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಮುಚ್ಚುವ ಉದ್ದೇಶಕ್ಕೆಂದೇ ಸದೃಢವಾದ ಸಾಂಸ್ಥಿಕ ಚೌಕಟ್ಟನ್ನು ರೂಪಿಸುವ ಅಗತ್ಯವಿದೆ,ʼʼ ಎಂದು ಒತ್ತಿ ಹೇಳಿದರು.
ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಎಂ. ನಾಗರಾಜು ಮಾತನಾಡಿ, "ಗಣಿಗಾರಿಕೆ ಚಟುವಟಿಕೆ ಕೈಬಿಡಲಾದ 300ಕ್ಕೂ ಹೆಚ್ಚು ಕಲ್ಲಿದ್ದಲು ಗಣಿಗಳನ್ನು ಪರಿಸರ ಸಂರಕ್ಷಣೆ ಪೂರಕವಾಗಿ ಹಾಗೂ ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ವೈಜ್ಞಾನಿಕ ರೀತಿಯಲ್ಲಿ ಮುಚ್ಚಲು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯಾಗಾರವು ಹೊಸ, ವಿನೂತನ ಜ್ಞಾನದ ಸರಿಯಾದ ಹಾದಿ ಅನುಸರಿಸಲು ಪೂರಕವಾದ ಹೆಜ್ಜೆಯನ್ನಿಟ್ಟಿದೆ. ಅದರಂತೆ ಆರಂಭಿಕ ಹಂತದಲ್ಲಿ ಪ್ರಾಯೋಗಿಕ ಯೋಜನೆಯಡಿ 3-4 ಕಲ್ಲಿದ್ದಲು ಗಣಿಗಳನ್ನು ವೈಜ್ಞಾನಿಕವಾಗಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು,ʼʼ ಎಂದು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿಎನ್‌ಜಿಆರ್‌ಬಿ) ಅಧ್ಯಕ್ಷರೂ ಆದ ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಡಾ. ಅನಿಲ್ ಕುಮಾರ್ ಜೈನ್, "ಜಾಗತಿಕ ಮಟ್ಟದಲ್ಲಿ ಇಂಧನ ಪರಿವರ್ತನೆಯು ಅತ್ಯಂತ ವೇಗವಾಗಿ ಸಾಗಿದೆ. ಹಾಗೆಯೇ ಅರ್ಥಪೂರ್ಣವಾಗಿ ಗಣಿ ಮುಚ್ಚುವಿಕೆ ಮತ್ತು ಪುನರ್ವಸತಿ ಕಾರ್ಯಕ್ಕಾಗಿ ಪರಿಣಾಮಕಾರಿ ತಂತ್ರಜ್ಞಾನದ ಚೌಕಟ್ಟನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಾಗಾರದ ಭಾಗವಾಗಿ ಐದು ಸಂವಾದಗಳು ಹಾಗೂ ಮಹತ್ವಪೂರ್ಣ ಸಮಾಲೋಚನಾ ಚರ್ಚೆಗಳು ನಡೆದವು. ದೇಶ ಮತ್ತು ವಿದೇಶಗಳ ಕಲ್ಲಿದ್ದಲು ವಲಯದ ತಜ್ಞರು ಮಾತ್ರವಲ್ಲದೆ, ವಿಶ್ವಬ್ಯಾಂಕ್ ತಜ್ಞರು ಸಹ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
*****
(Release ID: 1967023)
Visitor Counter : 108