ಕಲ್ಲಿದ್ದಲು ಸಚಿವಾಲಯ
azadi ka amrit mahotsav

​​​​​​​ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿನ ಸಾರ್ವಜನಿಕ ವಲಯದ ಘಟಕಗಳು ಮಿಷನ್ ಮೋಡ್ ನಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಕೈಗೊಂಡಿವೆ


ಕೋಲ್ ಇಂಡಿಯಾ ಲಿಮಿಟೆಡ್ ನೇಮಕಾತಿಯಲ್ಲಿ ಶೇಕಡಾ 83ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ

Posted On: 21 SEP 2023 3:31PM by PIB Bengaluru

ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಮತ್ತು ನಾಗರಿಕರ ಕಲ್ಯಾಣಕ್ಕಾಗಿ ದುಡಿಯುವ ಪ್ರಧಾನ ಮಂತ್ರಿಯವರ ನಿರಂತರ ಬದ್ಧತೆಯನ್ನು ಪೂರೈಸುವ ಮಹತ್ವದ ಹಂತವಾಗಿ, ಕಲ್ಲಿದ್ದಲು ಸಚಿವಾಲಯದ ಆಶ್ರಯದಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಎನ್ಎಲ್ ಸಿ ಇಂಡಿಯಾ ಲಿಮಿಟೆಡ್, ಜುಲೈ 2022ರಿಂದ ಮಿಷನ್ ಮೋಡ್ ನಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಅನುಸರಿಸುತ್ತಿವೆ. ಆಗಸ್ಟ್ 21, 2023ರವರೆಗೆ ಮಿಷನ್ ಮೋಡ್ ನೇಮಕಾತಿಯ ಅಡಿಯಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಎನ್ಎಲ್ ಸಿ ಇಂಡಿಯಾ ಲಿಮಿಟೆಡ್ ನ ಗುರಿಗಳ ಸ್ಥಿತಿ ಮತ್ತು ನೇಮಕಾತಿ ಪತ್ರಗಳು ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತವೆ.

ಕೋಲ್ ಇಂಡಿಯಾ ಲಿಮಿಟೆಡ್, ತನ್ನ ಮಿಷನ್ ನ ಅಡಿಯಲ್ಲಿ, ಏಳು ಕಂತುಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದೆ. ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಒಟ್ಟು 7,268 ನೇಮಕಾತಿ ಪತ್ರಗಳನ್ನು ನೀಡಿದ್ದು, ಅದು ತನ್ನ 3,969 ನೇಮಕಾತಿ ಪತ್ರಗಳ ಗುರಿಯನ್ನು ದಾಟಿದೆ. ಇದು 83.11%ರಷ್ಟು ಪ್ರಭಾವಶಾಲಿ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಆಗಸ್ಟ್ 2023ರಲ್ಲಿ, ಅದರ ಗುರಿಯು 465 ಆಗಿತ್ತು, ಆದರೆ ಒಟ್ಟು 574 ನೇಮಕಾತಿ ಪತ್ರಗಳನ್ನು ಕೋಲ್ ಇಂಡಿಯಾ ಲಿಮಿಟೆಡ್ ವಿತರಿಸಿದೆ.

ಎನ್ಎಲ್ ಸಿ ಇಂಡಿಯಾ ಲಿಮಿಟೆಡ್ ಕೂಡಾ 528 ನೇಮಕಾತಿ ಪತ್ರಗಳನ್ನು ನೀಡುವ ಮೂಲಕ ಅಸಾಧಾರಣ ಬದ್ಧತೆಯನ್ನು ಪ್ರದರ್ಶಿಸಿದೆ. ಇದು ಸೆಪ್ಟೆಂಬರ್ 19, 2023ರ ವೇಳೆಗೆ ನಿಗದಿಪಡಿಸಿದ 480ರ ಗುರಿಯನ್ನು ದಾಟಿ ಈ ಸಾಧನೆಯನ್ನು ಸಾಧಿಸಿದೆ.  ಈ ನೇಮಕಾತಿಯು 10% ಗಮನಾರ್ಹ ಬೆಳವಣಿಗೆಯನ್ನು ಸೂಚಿಸುತ್ತದೆ. ಜುಲೈ 2023ರಲ್ಲಿ, ಎನ್ಎಲ್ ಸಿ ಇಂಡಿಯಾ ಲಿಮಿಟೆಡ್ 75 ನೇಮಕಾತಿಯ ಗುರಿಯನ್ನು ಹೊಂದಿದ್ದು, 149 ನೇಮಕಾತಿ ಪತ್ರಗಳನ್ನು ನೀಡುವ ಮೂಲಕ ಅದು ಉತ್ತಮ ಸಾಧನೆಯನ್ನು ಪ್ರದರ್ಶಿಸಿದೆ.

ಈ ಸಾಧನೆಯು ಯುವಕರನ್ನು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುವುದಲ್ಲದೆ, ರಾಷ್ಟ್ರ ನಿರ್ಮಾಣದಲ್ಲಿ ಕಲ್ಲಿದ್ದಲು ಸಾರ್ವಜನಿಕ ವಲಯದ ಘಟಕಗಳ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಈ ರೀತಿಯ ನೇಮಕಾತಿ ಪ್ರಕ್ರಿಯೆಯು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುದಷ್ಟೇ ಅಲ್ಲದೆ ಯುವಕರಿಗೆ ಅವರ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಅವಕಾಶಗಳನ್ನು ಒದಗಿಸುತ್ತದೆ.

****
 


(Release ID: 1959421) Visitor Counter : 98


Read this release in: English , Urdu , Hindi , Tamil , Telugu