ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಕಲ್ಲಿದ್ದಲು ಆಮದನ್ನು ಕಡಿಮೆ ಮಾಡಲು ಕಲ್ಲಿದ್ದಲು ತೊಳೆಯುವ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ: ಕಲ್ಲಿದ್ದಲು ಕಾರ್ಯದರ್ಶಿ ಅಮೃತ್ ಲಾಲ್ ಮೀನಾ



"ಕಲ್ಲಿದ್ದಲು ತೊಳೆಯುವುದು - ಅವಕಾಶಗಳು ಮತ್ತು ಸವಾಲುಗಳು" ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ದಿಲ್ಲಿಯಲ್ಲಿ ನಡೆಯಿತು

Posted On: 31 JUL 2023 2:18PM by PIB Bengaluru

ಕಲ್ಲಿದ್ದಲು ಸಚಿವಾಲಯದ ಆಶ್ರಯದಲ್ಲಿ ವಿಶ್ವ ಗಣಿಗಾರಿಕೆ ಕಾಂಗ್ರೆಸ್ ನ  ಭಾರತೀಯ ರಾಷ್ಟ್ರೀಯ ಸಮಿತಿ ಭಾರತದಲ್ಲಿ ಕಲ್ಲಿದ್ದಲು ಪ್ರಯೋಜನಗಳ  ಭವಿಷ್ಯದ ಬಗ್ಗೆ ಚರ್ಚಿಸಲು ಉದ್ಯಮ ತಜ್ಞರು, ಸಂಶೋಧಕರು ಮತ್ತು ಭಾಗೀದಾರರನ್ನು ಒಟ್ಟುಗೂಡಿಸಿ "ಕಲ್ಲಿದ್ದಲು ತೊಳೆಯುವುದು - ಅವಕಾಶಗಳು ಮತ್ತು ಸವಾಲುಗಳು" ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ಈ ವಿಚಾರ ಸಂಕಿರಣವು ಜ್ಞಾನ ವಿನಿಮಯಕ್ಕೆ, ಸಹಯೋಗವನ್ನು ಉತ್ತೇಜಿಸಲು ಮತ್ತು ಕಲ್ಲಿದ್ದಲು ವಲಯದಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು ಒಂದು ಅನನ್ಯ ವೇದಿಕೆಯನ್ನು ಒದಗಿಸಿತು.

ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ, ಕೋಕಿಂಗ್ (ಕಾರ್ಬನ್ ಅಂಶ ಹೆಚ್ಚು ಇರುವ ಮತ್ತು ಬೂದಿಯ ಅಂಶ ಕಡಿಮೆ ಇರುವ ಕಲ್ಲಿದ್ದಲು) ಮತ್ತು ಕೋಕಿಂಗ್ ಅಲ್ಲದ ಕಲ್ಲಿದ್ದಲು ತೊಳೆಯುವ ಯಂತ್ರಗಳ ಸಾಮರ್ಥ್ಯವನ್ನು ಹೆಚ್ಚಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು. ಹಾಗೆ ಮಾಡುವುದರಿಂದ, ಭಾರತವು ಕಲ್ಲಿದ್ದಲು ಆಮದಿನ ಮೇಲಿನ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಮತ್ತು ದೇಶೀಯ ಕಲ್ಲಿದ್ದಲು ಪ್ರಯೋಜನಗಳನ್ನು/ಉಪಯೋಗವನ್ನು  ಉತ್ತೇಜಿಸಬಹುದು ಎಂಬುದನ್ನೂ  ಅವರು ಉಲ್ಲೇಖಿಸಿದರು. ಕಲ್ಲಿದ್ದಲು ಉತ್ಪಾದನೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಇತ್ತೀಚಿನ ತಂತ್ರಜ್ಞಾನಗಳ ಸಂಯೋಜನೆ ಮತ್ತು ಹೊಸ ಗಣಿಗಳನ್ನು ತೆರೆಯಲು ಆದ್ಯತೆ ನೀಡಬೇಕು ಎಂದೂ ಕಾರ್ಯದರ್ಶಿ ಹೇಳಿದರು. ಇದಲ್ಲದೆ, ಸಾರಿಗೆ ನಿರ್ಬಂಧಗಳನ್ನು ನಿವಾರಿಸಲು ಹಲವಾರು ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ ಮತ್ತು ಕಲ್ಲಿದ್ದಲು ಉದ್ಯಮದ ಬೆಳವಣಿಗೆಯನ್ನು ಬೆಂಬಲಿಸಲು ಮೂಲಸೌಕರ್ಯ ಅಭಿವೃದ್ಧಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದವರು ವಿವರಿಸಿದರು. 

IMG_3950.JPG

ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಅಧ್ಯಕ್ಷ ಶ್ರೀ ಪಿ.ಎಂ.ಪ್ರಸಾದ್ ಅವರು ತಮ್ಮ ಭಾಷಣದಲ್ಲಿ, ಕೋಕಿಂಗ್ ಮತ್ತು ಕೋಕಿಂಗ್ ಅಲ್ಲದ ಕಲ್ಲಿದ್ದಲಿನ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಕಲ್ಲಿದ್ದಲು ತೊಳೆಯುವ ಯಂತ್ರಗಳ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು ಮತ್ತು ವಿವಿಧ ಕ್ಷೇತ್ರಗಳಿಗೆ ಉತ್ತಮ ಗುಣಮಟ್ಟದ ಕಲ್ಲಿದ್ದಲನ್ನು ತಡೆರಹಿತವಾಗಿ/ ನಿರಂತರವಾಗಿ  ಪೂರೈಸುವಲ್ಲಿ ಕಲ್ಲಿದ್ದಲು ತೊಳೆಯುವ ಯಂತ್ರಗಳ ಮಹತ್ವದತ್ತಲೂ ಬೆಟ್ಟು ಮಾಡಿದರು. ಶುದ್ಧ ಮತ್ತು ಹೆಚ್ಚು ದಕ್ಷತೆಯ ಪರಿಣಾಮಕಾರಿ ಕಲ್ಲಿದ್ದಲಿನ ಬೇಡಿಕೆ ಹೆಚ್ಚುತ್ತಿರುವುದನ್ನು ಪ್ರಸ್ತಾಪಿಸಿದ  ಅವರು, ಮುಂಬರುವ ವರ್ಷಗಳಲ್ಲಿ ಹೆಚ್ಚುವರಿ ವಾಷರಿ (ಕಲ್ಲಿದ್ದಲು ತೊಳೆಯುವ ಕೇಂದ್ರ) ಗಳನ್ನು ಸ್ಥಾಪಿಸುವ ಅವಶ್ಯಕತೆಯನ್ನು ಪ್ರತಿಪಾದಿಸಿದರು. ಈ ಕಾರ್ಯತಂತ್ರದ ಕ್ರಮವು ಬಿಗು ಗುಣಮಟ್ಟದ ಮಾನದಂಡಗಳನ್ನು ಅನುಸರಿಸಿ ರಾಷ್ಟ್ರದ ಕಲ್ಲಿದ್ದಲು ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ ಎಂದರು. 

ಕಲ್ಲಿದ್ದಲು ಸಚಿವಾಲಯದ ಸಿಐಎಲ್ ನಿರ್ದೇಶಕ (ಟಿ) ಮತ್ತು ಸಿಸಿಎಲ್ ಸಿಎಂಡಿ (ಅಧ್ಯಕ್ಷ  ಮತ್ತು ಆಡಳಿತ ನಿರ್ದೇಶಕ) ಡಾ.ಬಿ.ವೀರಾರೆಡ್ಡಿ ಅವರು ಕಲ್ಲಿದ್ದಲನ್ನು ಸ್ವಚ್ಛವಾಗಿಸುವುದು ಮತ್ತು ಅದರ ಗುಣಮಟ್ಟ ಹಾಗು  ದಕ್ಷತೆಯನ್ನು ಸುಧಾರಿಸುವುದು ವಿಚಾರ ಸಂಕಿರಣದ ಉದ್ದೇಶ ಎಂದರು. ಮುಂದಿನ ವರ್ಷದಿಂದ ನೆರೆಯ ರಾಷ್ಟ್ರಗಳಿಗೆ ಕಲ್ಲಿದ್ದಲು ರಫ್ತು ಮಾಡುವ ಸಚಿವಾಲಯದ ಚಿಂತನೆಯನ್ನು  ಅವರು ಹೊರಗೆಡವಿದರು. ಇದು ಈ ಪ್ರದೇಶದಲ್ಲಿ ಪ್ರಮುಖ ಕಲ್ಲಿದ್ದಲು ಪೂರೈಕೆದಾರನಾಗಿ ಭಾರತದ ಸ್ಥಾನವನ್ನು ಎತ್ತರಿಸುತ್ತದೆ ಎಂದೂ ಅವರು ಹೇಳಿದರು. 

ತಾಂತ್ರಿಕ ಅಧಿವೇಶನದಲ್ಲಿ, ಎಂಡಿಸಿಡಬ್ಲ್ಯೂಎಲ್ ಲಿಮಿಟೆಡ್ ನ ಸಿಇಒ ಶ್ರೀ ಎಚ್ ಎಲ್ ಸಪ್ರು, ಕಲ್ಲಿದ್ದಲು ತೊಳೆಯುವುದರಿಂದ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲಿನ ಲ್ಯಾಂಡಿಂಗ್ ವೆಚ್ಚದಲ್ಲಿ ಪ್ರತಿ ಕಿಲೋವ್ಯಾಟ್ ಗೆ 1 ರೂಪಾಯಿವರೆಗೆ ಉಳಿಸುವ ಸಾಮರ್ಥ್ಯವಿದೆ ಎಂದು ಒತ್ತಿ ಹೇಳಿದರು. ದೇಶವು ಪ್ರಸ್ತುತ ವರ್ಷಕ್ಕೆ ಒಟ್ಟು 113.6 ಮಿಲಿಯನ್ ಟನ್ (ಎಂಟಿಪಿಎ) ಸಾಮರ್ಥ್ಯದ 20 ವಾಷರಿಗಳನ್ನು ನಿರ್ವಹಿಸುತ್ತಿದೆ, ಇದು ಶುದ್ಧ ಮತ್ತು ಹೆಚ್ಚು ದಕ್ಷತೆಯ  ಕಲ್ಲಿದ್ದಲು ಉತ್ಪಾದನೆಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು. 

IMG_3953.JPG

ಟಾಟಾ ಸ್ಟೀಲ್ ನ ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಠ ಶ್ರೀ ಮನೀಶ್ ಮಿಶ್ರಾ ಅವರು ದೇಶೀಯ ಉಕ್ಕು ಉದ್ಯಮಕ್ಕೆ ಕೋಕಿಂಗ್ ಕಲ್ಲಿದ್ದಲು ಬಗ್ಗೆ ವಿವರವಾದ ಮಾಹಿತಿಯನ್ನು ಪ್ರಸ್ತುತಪಡಿಸಿದರು. ಅವರು ಭಾರತೀಯ ಕಲ್ಲಿದ್ದಲು  ತೊಳೆಯುವ ಸಾಮರ್ಥ್ಯದ ಗುಣಲಕ್ಷಣಗಳ ಸಮಗ್ರ ಅವಲೋಕನವನ್ನು ನಡೆಸಿದರು, ಉಕ್ಕು ತಯಾರಿಕೆಗಾಗಿ ಉತ್ತಮ ಗುಣಮಟ್ಟದ ಕೋಕಿಂಗ್ ಕಲ್ಲಿದ್ದಲನ್ನು ಉತ್ಪಾದಿಸುವಲ್ಲಿ ಕಲ್ಲಿದ್ದಲು ತೊಳೆಯುವ ನಿರ್ಣಾಯಕ ಪಾತ್ರವನ್ನು ಅವರು ಪ್ರದರ್ಶಿಸಿದರು.

ಸಿಐಎಂಎಫ್ಆರ್ ಧನಬಾದಿನ ಡಾ.ಯು.ಎಸ್.ಚಟ್ಟೋಪಾಧ್ಯಾಯ ಅವರು ಭಾರತದಲ್ಲಿ ಕಡಿಮೆ ಬಾಷ್ಪೀಕರಣದ ಕೋಕಿಂಗ್ ಕಲ್ಲಿದ್ದಲು (ಎಲ್ವಿಸಿ) ಉಪಯೋಗದಲ್ಲಿರುವ  ಸವಾಲುಗಳಿಗೆ ಪರಿಹಾರಗಳನ್ನು ಪ್ರಸ್ತಾಪಿಸಿದರು.  ಝರಿಯಾ ಕೋಲ್ ಫೀಲ್ಡ್ಸ್ ನಲ್ಲಿ 7953 ಮೆಟ್ರಿಕ್ ಟನ್ ಮತ್ತು ಪೂರ್ವ ಬೊಕಾರೊದಲ್ಲಿ 496 ಮೆಟ್ರಿಕ್ ಟನ್ ಎಲ್ ವಿಸಿಯ ಗಮನಾರ್ಹ ನಿಕ್ಷೇಪದ ಬಗ್ಗೆ  ಅವರು ಗಮನ ಸೆಳೆದರು. ಡಾ. ಚಟ್ಟೋಪಾಧ್ಯಾಯ ಅವರು ಕಲ್ಲಿದ್ದಲು ಗುಣಮಟ್ಟ ಕುಸಿಯುವುದು ಮತ್ತು ಅಸಮರ್ಪಕ ಪೂರೈಕೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದರು. ವಿದ್ಯುತ್ ಸ್ಥಾವರಗಳಿಗೆ ಎಲ್ ವಿಸಿ ಪೂರೈಕೆಯನ್ನು ನಿಲ್ಲಿಸಲು ಭಾರತ ಸರ್ಕಾರ ಕಾರ್ಯತಂತ್ರದ ಯೋಜನೆಯನ್ನು ರೂಪಿಸಬೇಕು ಎಂದು ಅವರು ಸಲಹೆ ಮಾಡಿದರು. ಸಾಂಪ್ರದಾಯಿಕ ವಾಷರಿಗಳ ಬದಲಿಗೆ ಹೊಸ ವಾಷರಿಗಳ ನಿರ್ಮಾಣವನ್ನು ಅವರು ಪ್ರಸ್ತಾಪಿಸಿದರು ಮತ್ತು ಶೇಕಡಾ 40 ಕ್ಕಿಂತ ಹೆಚ್ಚಿನ ಬೂದಿ ಅಂಶವನ್ನು ಹೊಂದಿರುವ ಎಲ್ವಿಸಿ ಕಲ್ಲಿದ್ದಲಿಗೆ ಅದರಿಂದ ಕಲ್ಲುಗಳನ್ನು ತೆಗೆಯುವ ಸ್ಥಾವರಗಳನ್ನು (ಡಿಶಾಲಿಂಗ್) ಸ್ಥಾಪಿಸಲು ಸಲಹೆ ನೀಡಿದರು.

ಜೆಪಿಎಲ್ ನ ಇವಿಪಿ ಶ್ರೀ ಕಪಿಲ್ ಧಾಗತ್ ಅವರು ಕಬ್ಬಿಣದ ಅಂಶವನ್ನು ನೇರ ಕಡಿಮೆ ಮಾಡುವ (ಡಿಆರ್ ಐ) ತಯಾರಿಕೆ ಪ್ರಕ್ರಿಯೆ, ಉಕ್ಕು ತಯಾರಿಕೆ ಮತ್ತು ಅನಿಲೀಕರಣಕ್ಕೆ ಸಂಬಂಧಿಸಿದಂತೆ ಕಲ್ಲಿದ್ದಲು ಪ್ರಯೋಜನದ ವಿವರಗಳನ್ನು ಮಂಡಿಸಿದರು. ಯಶಸ್ವಿ ಉಕ್ಕು ತಯಾರಿಕೆ ಪ್ರಕ್ರಿಯೆಗಳಿಗೆ ಅಗತ್ಯವಾದ ಕಲ್ಲಿದ್ದಲಿನ ಗುಣಲಕ್ಷಣಗಳನ್ನು ಅವರು ವಿವರಿಸಿದರು ಮತ್ತು ಕಲ್ಲಿದ್ದಲು ಗಣಿಗಾರಿಕೆಯ ಸಮಯದಲ್ಲಿ ಗುಣಮಟ್ಟದ ಪ್ರಜ್ಞೆಯ ಅಗತ್ಯವನ್ನು ಒತ್ತಿ ಹೇಳಿದರು. ಗಣಿಗಳ ಬಳಿ ಹೊಸ ವಾಷರಿಗಳನ್ನು ಸ್ಥಾಪಿಸಲು, ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಹೆಚ್ಚಿಸಲು, ಅಸ್ತಿತ್ವದಲ್ಲಿರುವ ತೊಳೆಯುವ ಯಂತ್ರಗಳನ್ನು ಆಧುನೀಕರಿಸಲು ಮತ್ತು ವಿವಿಧ ಕ್ಷೇತ್ರಗಳಿಗೆ ತೊಳೆದ ಕಲ್ಲಿದ್ದಲನ್ನು ಮಾತ್ರ ಪೂರೈಸಲು ಒತ್ತು ನೀಡುವಂತೆ ಶ್ರೀ ಧಗತ್ ಶಿಫಾರಸು ಮಾಡಿದರು.

ಶ್ರೀ ಗೌತಮ್ ಸೇನಾಪತಿ ಅವರು ಬ್ಲಾಸ್ಟ್ ಕುಲುಮೆ ವಿಧಾನದಲ್ಲಿ  ಉಕ್ಕು ತಯಾರಿಕೆಯಲ್ಲಿ ಬಳಸಲು ಉನ್ನತ ದರ್ಜೆಯ ಕೋಕಿಂಗ್ ಅಲ್ಲದ ಕಲ್ಲಿದ್ದಲನ್ನು ತೊಳೆಯುವ ಬಗ್ಗೆ ಚರ್ಚಿಸಿದರು. ಈ ವಲಯದಲ್ಲಿ ಕಲ್ಲಿದ್ದಲಿನ ಗುಣಮಟ್ಟವನ್ನು ಹೆಚ್ಚಿಸುವ ಗುರಿಯೊಂದಿಗೆ ಪ್ರಾಯೋಗಿಕ ಮಟ್ಟದಲ್ಲಿ 2-3 ರೀತಿಯ ಕಲ್ಲಿದ್ದಲಿನ ಹೆಚ್ಚಿನ ಮಾದರಿಗಳನ್ನು ರೂಪಿಸಲು  ಅವರು ಕಲ್ಲಿದ್ದಲು ಸಚಿವಾಲಯ (ಎಂಒಸಿ) ಮತ್ತು ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ನಿಂದ ಬೆಂಬಲವನ್ನು ಕೋರಿದರು.

ಹೆಚ್ಚುವರಿ ಕಾರ್ಯದರ್ಶಿ ಎಂ.ನಾಗರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಚರ್ಚೆಯಲ್ಲಿ ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಅಲೋಕ್ ಪೆರ್ತಿ, ಕಲ್ಲಿದ್ದಲು ಇಲಾಖೆಯ ಮಾಜಿ ಹೆಚ್ಚುವರಿ ಕಾರ್ಯದರ್ಶಿ ವಿ.ಕೆ.ತಿವಾರಿ, ಕಲ್ಲಿದ್ದಲು ಸಚಿವಾಲಯದ ಡಿಡಿಜಿ/ಸಿ.ಸಿ.ಒ. ಸಂತೋಷ್, ಜೆ.ಎಸ್.ಸ್ಟೀಲ್ ನ ಅಭಿಜಿತ್ ನರೇಂದ್ರ, ಎಸ್ ಎಐಎಲ್ ನ ಕಾರ್ಯನಿರ್ವಾಹಕ ನಿರ್ದೇಶಕ ವರಿಂದರ್ ಧವನ್, ಎಸಿಬಿ ಕಾರ್ಯನಿರ್ವಾಹಕ ಅಧ್ಯಕ್ಷ ಕ್ಯಾಪ್ಟನ್ ಆರ್.ಎಸ್.ಸಂಧು ಸೇರಿದಂತೆ ಉದ್ಯಮದ ಮುಖಂಡರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು. ಕಲ್ಲಿದ್ದಲು ಆಮದನ್ನು ಕಡಿಮೆ ಮಾಡುವುದನ್ನು ಖಚಿತಪಡಿಸಿಕೊಳ್ಳುವ ಕಲ್ಲಿದ್ದಲು ತೊಳೆಯುವ ಸಮಗ್ರ ವಿಧಾನವನ್ನು ಒತ್ತಿಹೇಳುವ ಮತ್ತು ಕಲ್ಲಿದ್ದಲು ಕ್ಷೇತ್ರದಲ್ಲಿ ಸ್ವಾವಲಂಬನೆ ಗುರಿಯನ್ನು ರಾಷ್ಟ್ರವು ಸಾಧಿಸುವ , ಹಾಗು ಇದರಿಂದಾಗಿ ರಾಷ್ಟ್ರದ ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆಗೆ ಕೊಡುಗೆ ನೀಡುವ ಕುರಿತು ಚರ್ಚೆಗಳು ನಡೆದವು. 

ಕಲ್ಲಿದ್ದಲು ಸಚಿವಾಲಯದ ಒ.ಎಸ್.ಡಿ. ಡಾ. ಪೀಯುಷ್ ಕುಮಾರ್ ಅವರು, ವಿಚಾರ ಸಂಕಿರಣವನ್ನು ಯಶಸ್ವಿಗೊಳಿಸಲು ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವಿಚಾರ ಸಂಕಿರಣದ ಎಲ್ಲಾ ಪ್ರಸ್ತುತಿಗಳನ್ನು http://www.wmc-inc.org ರಲ್ಲಿ ವೀಕ್ಷಿಸಬಹುದು ಎಂದು ಅವರು ಮಾಹಿತಿ ನೀಡಿದರು. 20 ಕಂಪನಿಗಳ 130 ಕ್ಕೂ ಹೆಚ್ಚು ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

 "ಕಲ್ಲಿದ್ದಲು ತೊಳೆಯುವುದು- ಅವಕಾಶಗಳು ಮತ್ತು ಸವಾಲುಗಳು" ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವು ಈ ವಲಯದಲ್ಲಿ ತಾಂತ್ರಿಕ ಪ್ರಗತಿಯನ್ನು ಉತ್ತೇಜಿಸುವಾಗ ಶುದ್ಧ ಮತ್ತು ಉತ್ತಮ ಗುಣಮಟ್ಟದ ಕಲ್ಲಿದ್ದಲನ್ನು ಉತ್ಪಾದಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳಿತು. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವ ಮೂಲಕ, ತಾಂತ್ರಿಕ ಪ್ರಾವೀಣ್ಯತೆಯ ಬಳಕೆಯನ್ನು ಸುಧಾರಿಸುವ ಮೂಲಕ ಮತ್ತು ಸಾರಿಗೆ ನಿರ್ಬಂಧಗಳನ್ನು ಪರಿಹರಿಸುವ ಮೂಲಕ, ಕಲ್ಲಿದ್ದಲು ತೊಳೆಯುವ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣ ಮಾಡುವ ಮತ್ತು ಜಾಗತಿಕ ಕಲ್ಲಿದ್ದಲು ಉದ್ಯಮದಲ್ಲಿ ಪ್ರಮುಖ ಆಟಗಾರನಾಗಿ ತನ್ನ ಸ್ಥಾನವನ್ನು ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿದೆ.

****


(Release ID: 1944349) Visitor Counter : 103