ಹಣಕಾಸು ಸಚಿವಾಲಯ
azadi ka amrit mahotsav

ಪತ್ರಿಕಾ ಪ್ರಕಟಣೆ

Posted On: 24 JUL 2023 9:23PM by PIB Bengaluru

ಆದಾಯ ತೆರಿಗೆ ಇಲಾಖೆ, ಕರ್ನಾಟಕ ಮತ್ತು ಗೋವಾ ವಲಯವು ಜುಲೈ 24, 2023 ರಂದು 164 ನೇ ‘ಆದಾಯ ತೆರಿಗೆ ದಿನ’ವನ್ನು ಆಚರಿಸಿತು.  ಪ್ರಧಾನ ಕಾರ್ಯಕ್ರಮವು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಸಿ.ಆರ್. ಕಟ್ಟಡದಲ್ಲಿ ನಡೆಯಿತು. 

ಆದಾಯ ತೆರಿಗೆ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಪ್ರಸನ್ನ ಬಿ ವರಾಳೆ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು. ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗಳನ್ನು ಸಾಧಿಸುವಲ್ಲಿ ತೆರಿಗೆಯ ಪಾತ್ರವನ್ನು ಸ್ಮರಿಸಿದರು.

ಆದಾಯ ತೆರಿಗೆ ಇಲಾಖೆಯಲ್ಲಿನ ಇತ್ತೀಚಿನ ಬದಲಾವಣೆಗಳು ಆದಾಯ ಸಂಗ್ರಹಣೆಯನ್ನು ಹೆಚ್ಚಿಸಲು ಮತ್ತು ತೆರಿಗೆ ಮೂಲವನ್ನು ವಿಸ್ತರಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು. ಈ  ಪರಿಸ್ಥಿತಿಯಲ್ಲಿ, ತೆರಿಗೆ ವಿಷಯಗಳಲ್ಲಿ ವ್ಯವಹರಿಸುವಾಗ ನೌಕರರು ಹೆಚ್ಚು ಸಮತೋಲಿತ ಮತ್ತು ಸೂಕ್ಷ್ಮವಾದ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ತೆರಿಗೆದಾರ ಕೇಂದ್ರಿತ ಸುಧಾರಣೆಗಳ ಕಡೆಗೆ ತನ್ನ ಪ್ರಯತ್ನಗಳನ್ನು ಮುಂದುವರಿಸಲು ಅವರು ಇಲಾಖೆಯನ್ನು ಪ್ರೋತ್ಸಾಹಿಸಿದರು.

ತೆರಿಗೆ ಅನುಸರಣೆಯನ್ನು ಹೆಚ್ಚಿಸಲು ಇಲಾಖೆಯೊಂದಿಗೆ ಕೆಲಸ ಮಾಡಲು ತೆರಿಗೆ ವೃತ್ತಿಪರರು ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನೂ ಪ್ರೋತ್ಸಾಹಿಸಬೇಕು ಎಂದು ಅವರು ಸಲಹೆ ನೀಡಿದರು. ಆದಾಯ ತೆರಿಗೆ, ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರು ಸಹ ಈ ಸಂದರ್ಭದಲ್ಲಿ ಮಾತನಾಡಿದರು ಮತ್ತು ಕರ್ನಾಟಕ ಮತ್ತು ಗೋವಾ ವಲಯವು  ದೇಶದ ನೇರ ತೆರಿಗೆ ಸಂಗ್ರಹಣೆಯ ಪ್ರಮುಖ ಮೂರು ಪ್ರದೇಶಗಳಲ್ಲಿ ಒಂದಾಗಿ ಹೊರಹೊಮ್ಮಿರುವುದನ್ನು ಎತ್ತಿ ತೋರಿಸಿದರು. ಬೆಂಗಳೂರು ವಲಯದ ಕೇಂದ್ರ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರು ಗೌರವ ಅತಿಥಿಗಳಾಗಿದ್ದರು.

ತರಬೇತಿ ಪಡೆದ ಕಲಾವಿದರಿಂದ ಯಕ್ಷಗಾನ ಪ್ರದರ್ಶನವನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು. ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರು ಸಿಬ್ಬಂದಿ, ಅಧಿಕಾರಿಗಳು ಮತ್ತು ಕಲಾವಿದರೊಂದಿಗೆ ಸಂವಾದ ನಡೆಸಿ ಶುಭ ಹಾರೈಸಿದರು.

***


(Release ID: 1942274) Visitor Counter : 51
Read this release in: English