ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಫಿಟ್ ಇಂಡಿಯಾ ರಸಪ್ರಶ್ನೆ(ಕ್ವಿಜ್) 2022 ರಾಜ್ಯ ಸುತ್ತಿನ ಸ್ಪರ್ಧಾ ವಿಜೇತರನ್ನು ಸನ್ಮಾನಿಸಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್; ವಿಜೇತರಿಗೆ 2 ಕೋಟಿ ರೂ.ಗಿಂತ ಹೆಚ್ಚಿನ ನಗದು ಬಹುಮಾನ ವಿತರಿಸಿದ ಸಚಿವರು
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಕಳೆದ 9 ವರ್ಷಗಳಲ್ಲಿ ಭಾರತದ ಕ್ರೀಡಾ ಪರಿಸರ ಹಲವು ಪಟ್ಟು ಬದಲಾವಣೆ ಕಂಡಿದೆ: ಶ್ರೀ ಅನುರಾಗ್ ಸಿಂಗ್ ಠಾಕೂರ್
ರಸಪ್ರಶ್ನೆ ಸ್ಪರ್ಧೆಯ ಮೂಲಕ ಎಲ್ಲ ವಿಧದಲ್ಲೂ ಏಕ್ ಭಾರತ್ ಶ್ರೇಷ್ಠ್ ಭಾರತ್ ದೃಷ್ಟಿಕೋನವನ್ನು ಎತ್ತಿ ಹಿಡಿಯಲಾಗುತ್ತಿದೆ: ಶ್ರೀ ಅನುರಾಗ್ ಸಿಂಗ್ ಠಾಕೂರ್
Posted On:
23 JUL 2023 8:54PM by PIB Bengaluru
ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡೆ, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಭಾನುವಾರ ಫಿಟ್ ಇಂಡಿಯಾ ರಸಪ್ರಶ್ನೆ ರಾಜ್ಯ ಸುತ್ತಿನ 2ನೇ ಆವೃತ್ತಿಯ ಸ್ಪರ್ಧೆಯಲ್ಲಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 72 ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಗೌರವ ಸನ್ಮಾನ ನಡೆಯಿತು. 72 ವಿದ್ಯಾರ್ಥಿಗಳು ತಮ್ಮ ರಾಜ್ಯಗಳಿಂದ ಈ ಉನ್ನತ ಗೌರವ ಪಡೆದರು. ಈಗ ಸ್ಪರ್ಧಾ ವಿಜೇತರು ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗುವ ಫಿಟ್ ಇಂಡಿಯಾ ರಸಪ್ರಶ್ನೆ ರಾಷ್ಟ್ರೀಯ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.
ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ವಿಜೇತವಾಗಿರುವ ಶಾಲೆಯು ಒಟ್ಟು 2.5 ಲಕ್ಷ ರೂ. ಬಹುಮಾನ ಪಡೆದರೆ, ಶಾಲೆಯ ಇಬ್ಬರು ವಿದ್ಯಾರ್ಥಿಗಳ ತಂಡಕ್ಕೆ ಒಟ್ಟು ರೂ 25,000 ಬಹುಮಾನ ನೀಡಲಾಯಿತು. ಪ್ರಥಮ ರನ್ನರ್ ಅಪ್ ರಾಜ್ಯ ಶಾಲೆಗೆ 1 ಲಕ್ಷ ರೂ. ಹಾಗೂ ವಿದ್ಯಾರ್ಥಿಗಳು ಒಟ್ಟು 10,000 ರೂ. ಬಹುಮಾನ ಪಡೆದರು. ಅದೇ ರೀತಿ ರಾಜ್ಯ 2ನೇ ರನ್ನರ್ ಅಪ್ ಶಾಲೆಗೆ 50 ಸಾವಿರ ನಗದು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳು ಒಟ್ಟು 5 ಸಾವಿರ ರೂ. ಪಡೆದರು.
“ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಕ್ರೀಡಾ ಪರಿಸರ ಹಲವು ಪಟ್ಟು ಬದಲಾವಣೆ ಕಂಡಿದೆ. ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ ಅಥವಾ ಸಿಡಬ್ಲ್ಯುಜಿಯಲ್ಲಿ ಇದು ನಮ್ಮ ದಾಖಲೆಯ ಪದಕಗಳನ್ನು ತೋರಿಸುತ್ತಿದೆ. ಈ ಸೆಪ್ಟೆಂಬರ್ನಲ್ಲಿ ನಾವು ಏಷ್ಯನ್ ಗೇಮ್ಸ್ನಲ್ಲಿ ಅತ್ಯಧಿಕ ಪದಕ ಪಡೆಯಲಿದ್ದೇವೆ ಎಂದು ನಾನು ನಂಬುತ್ತೇನೆ ಎಂದು ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.
ದೈಹಿಕ ಸಾಮರ್ಥ್ಯದ ಅಗತ್ಯತೆ ಪ್ರಸ್ತಾಪಿಸಿದ ಅವರು, “ಭಾರತದಲ್ಲಿ ಪ್ರತಿ ದಿನವೂ ಬೊಜ್ಜು ಪ್ರಕರಣಗಳು, ಹೃದಯ ಸಂಬಂಧಿ ಕಾಯಿಲೆಗಳು ಗಣನೀಯವಾಗಿ ಏರುತ್ತಿವೆ. ಯುವಕರಲ್ಲಿ ಸ್ಕ್ರೀನ್ ಟೈಮ್ ಕೂಡ ಹೆಚ್ಚುತ್ತಿದೆ. ಇದಕ್ಕೆ ಏಕೈಕ ಪರಿಹಾರವೆಂದರೆ ಆಟದ ಮೈದಾನದಲ್ಲಿ ಕಸರತ್ತು ನಡೆಸುವುದಾಗಿದೆ. ಈಗ ಫಿಟ್ ಇಂಡಿಯಾ ರಸಪ್ರಶ್ನೆ ಉದ್ದೇಶವು ಫಿಟ್ನೆಸ್ ಸಂದೇಶ ನೀಡುವುದು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಭಾರತದ ಕ್ರೀಡಾ ಇತಿಹಾಸದ ಬಗ್ಗೆ ಅರಿವು ಮೂಡಿಸುವುದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಗಮನದಲ್ಲಿಟ್ಟುಕೊಂಡು, ಶಾಲೆಯಲ್ಲಿ ಕ್ರೀಡೆಯನ್ನು ಮುಖ್ಯ ಪಠ್ಯಕ್ರಮದ ಭಾಗವಾಗಿಸಲು ನಾವು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಇದು ಇನ್ನು ಮುಂದೆ ಕೇವಲ ಸಹಪಠ್ಯ ಚಟುವಟಿಕೆಯಲ್ಲ. ಶೈಕ್ಷಣಿಕ ಮತ್ತು ಕ್ರೀಡೆಗಳು ವಿವಿಧ ವೇದಿಕೆಗಳಲ್ಲಿ ಒಟ್ಟಿಗೆ ಹೆಣೆದುಕೊಳ್ಳಲಿವೆ ಎಂದರು.
ಒಟ್ಟು 348 ಶಾಲೆಗಳು ಮತ್ತು 418 ವಿದ್ಯಾರ್ಥಿಗಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುತ್ತಿಗೆ ಆಯ್ಕೆಯಾದರು. ಈ ವಿದ್ಯಾರ್ಥಿಗಳಲ್ಲಿ, 39% ವಿದ್ಯಾರ್ಥಿನಿಯರಾಗಿದ್ದಾರೆ. ಆಯ್ದ ಶಾಲೆಗಳು ಇಬ್ಬರು ವಿದ್ಯಾರ್ಥಿಗಳ ತಂಡವನ್ನು ರಚಿಸಿದ್ದವು, ಅವರು ವೆಬ್ ಸುತ್ತುಗಳ ಸರಣಿಯ ಮೂಲಕ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಚಾಂಪಿಯನ್ಶಿಪ್ಗಾಗಿ ಸ್ಪರ್ಧಿಸಿದ್ದರು. 36 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಚಾಂಪಿಯನ್ಗಳನ್ನು ಗುರುತಿಸಲು ಒಟ್ಟು 120 ಸುತ್ತುಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಚಾಂಪಿಯನ್ ಎಂದು ಗುರುತಿಸಲಾಗಿರುವ 36 ಶಾಲೆಗಳ ಪೈಕಿ 12 ಸರ್ಕಾರಿ ಶಾಲೆಗಳಾಗಿವೆ.
ಶಾಲೆಗಳಿಗಾಗಿ ಫಿಟ್ ಇಂಡಿಯಾ ರಾಷ್ಟ್ರೀಯ ಫಿಟ್ನೆಸ್ ಮತ್ತು ಕ್ರೀಡಾ ರಸಪ್ರಶ್ನೆ 2ನೇ ಆವೃತ್ತಿಯ ಸ್ಪರ್ಧೆಗಳನ್ನು ಕಳೆದ ವರ್ಷ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನದ ಮುನ್ನಾ ದಿನ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಯುವಜನ ವ್ಯವಹಾರಗಳು ಮತ್ತು ಕ್ರೀಡೆ, ಗೃಹ ಸಚಿವಾಲಯದ ರಾಜ್ಯ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಮತ್ತು ಕೇಂದ್ರ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.
ಫಿಟ್ ಇಂಡಿಯಾ ಕ್ವಿಜ್ನ 1ನೇ ಆವೃತ್ತಿಯ ಯಶಸ್ಸಿನ ನಂತರ, 2ನೇ ಆವೃತ್ತಿಗೆ ಭಾರಿ ಸ್ಪಂದನೆ ವ್ಯಕ್ತವಾಯಿತು. 2ನೇ ಆವೃತ್ತಿಯ ರಸಪ್ರಶ್ನೆಯಲ್ಲಿ ಭಾರತದ 702 ಜಿಲ್ಲೆಗಳಾದ್ಯಂತ 16,702 ಶಾಲೆಗಳಿಂದ 61,981 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಫಿಟ್ ಇಂಡಿಯಾ ಕ್ವಿಜ್ನ ಮೊದಲ ಆವೃತ್ತಿಯಲ್ಲಿ 13,502 ಶಾಲೆಗಳಿಂದ ಒಟ್ಟು 36,299 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದು ಮೊದಲ ಆವೃತ್ತಿಗೆ ಹೋಲಿಸಿದರೆ ಎರಡನೇ ಆವೃತ್ತಿಯ ರಸಪ್ರಶ್ನೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 70% ಹೆಚ್ಚಳವಾಗಿದೆ.
ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡ ಕುರಿತು ಮಾತನಾಡಿದ ಶ್ರೀ ಠಾಕೂರ್, “ಏಕ್ ಭಾರತ್ ಶ್ರೇಷ್ಠ್ ಭಾರತ್ನ ದೃಷ್ಟೋನವನ್ನು ರಸಪ್ರಶ್ನೆ ಸ್ಪರ್ಧೆಯ ಎಲ್ಲಾ ವಿಧಗಳಲ್ಲೂ ಎತ್ತಿಹಿಡಿಯಲಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಹಲವಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. - ಅದು ಅಂಡಮಾನ್ ಮತ್ತು ನಿಕೋಬಾರ್, ಕಾರ್ಗಿಲ್, ಲಕ್ಷದ್ವೀಪ್ ಸೇರಿದಂತೆ ದೇಶ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಇದು ಎಲ್ಲಾ ವಿದ್ಯಾರ್ಥಿಗಳಿಗೆ ಸಂಪರ್ಕ ಕಲ್ಪಿಸಲು ಉತ್ತಮ ಅವಕಾಶ ನೀಡಿದೆ, ಅವರ ನಡುವೆ ಸಾಕಷ್ಟು ಸಾಂಸ್ಕೃತಿಕ ವಿನಿಮಯ ನಡೆಯುತ್ತಿದೆ ಎಂಬುದು ಖಚಿತಪಟ್ಟಿದೆ ಎಂದರು.
ಫಿಟ್ ಇಂಡಿಯಾ ರಸಪ್ರಶ್ನೆಯು ಶಾಲೆಗೆ ಹೋಗುವ ಮಕ್ಕಳಿಗೆ ಕ್ರೀಡೆ ಮತ್ತು ಫಿಟ್ನೆಸ್ ಕುರಿತು ನಡೆಯುತ್ತಿರುವ ಭಾರತದ ಅತಿದೊಡ್ಡ ರಸಪ್ರಶ್ನೆ ಸ್ಪರ್ಧೆಯಾಗಿದೆ. ಶಾಲಾ ಮಕ್ಕಳಲ್ಲಿ ಫಿಟ್ ಇಂಡಿಯಾದ ಸಂದೇಶ ಪ್ರಚಾರ ಮಾಡುವ ಮತ್ತು ಶಾಲೆಗಳಲ್ಲಿ ಅದರ ಉಪಸ್ಥಿತಿ ಬಲಪಡಿಸುವ ಉದ್ದೇಶದಿಂದ 2020ರಲ್ಲಿ ರಸಪ್ರಶ್ನೆ ಸ್ಪರ್ಧೆ ಪ್ರಾರಂಭಿಸಲಾಯಿತು. ಈ ಸ್ಪರ್ಧೆಯು ಒಟ್ಟು ₹ 3.25 ಕೋಟಿ ನಗದು ಬಹುಮಾನ ಹೊಂದಿದ್ದು ಅದು ಶಾಲೆ ಮತ್ತು ವಿದ್ಯಾರ್ಥಿಗಳಿಗೆ ಹೋಗುತ್ತದೆ. ಇದು ದೇಶದ ಪ್ರತಿಯೊಂದು ಮೂಲೆಯ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಫಿಟ್ನೆಸ್ನಲ್ಲಿ ತಮ್ಮ ಜ್ಞಾನ ಪ್ರದರ್ಶಿಸಲು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಒದಗಿಸಲು ಅನನ್ಯ ವೇದಿಕೆ ರೂಪಿಸುತ್ತದೆ.
ರಾಷ್ಟ್ರೀಯ ಸುತ್ತಿನ ನಂತರ ವಿಜೇತ ಶಾಲೆಯು ಒಟ್ಟು 25 ಲಕ್ಷ ರೂ. ಬಹುಮಾನ ಪಡೆಯುತ್ತದೆ. 1ನೇ ರನ್ನರ್ಸ್ ಅಪ್ ಮತ್ತು 2ನೇ ರನ್ನರ್ಸ್ ಅಪ್ ಶಾಲೆಗಳು ಕ್ರಮವಾಗಿ 15 ಲಕ್ಷ ರೂ. ಮತ್ತು 10 ಲಕ್ಷ ರೂ. ಪಡೆಯುತ್ತವೆ.
http://ಪದಕಗಳ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
****
(Release ID: 1942010)