ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

35-ಎ ಮತ್ತು 370 ವಿಧಿಗಳ ರದ್ದತಿ ನಂತರ ಜಮ್ಮು ಮತ್ತು ಕಾಶ್ಮೀರವು ಗಮನಾರ್ಹ ಬೆಳವಣಿಗೆಯ ಹೊಸ ಮಾರ್ಗವನ್ನು ತುಳಿದಿದೆ – ಉಪ ರಾಷ್ಟ್ರಪತಿ


370 ನೇ ವಿಧಿಯು ತಾತ್ಕಾಲಿಕ ನಿಬಂಧನೆಯಾಗಿತ್ತು, ಆದರೆ 70 ವರ್ಷಗಳವರೆಗೆ ಇತ್ತು; ಈಗ ಅದು ಇಲ್ಲದಿರುವುದು ಸಂತೋಷ ತಂದಿದೆ - ಉಪ ರಾಷ್ಟ್ರಪತಿ

370 ನೇ ವಿಧಿಯನ್ನು ರೂಪಿಸಲು ಡಾ. ಬಿ.ಆರ್. ಅಂಬೇಡ್ಕರ್ ನಿರಾಕರಿಸಿದ್ದರು - ಉಪ ರಾಷ್ಟ್ರಪತಿ

370 ನೇ ವಿಧಿಯ ರದ್ದತಿಯು ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಜೀವನ ಮತ್ತು ಧ್ಯೇಯಕ್ಕೆ ಸಲ್ಲಿಸಿದ ಅತ್ಯಂತ ದೊಡ್ಡ ಗೌರವ  - ಉಪ ರಾಷ್ಟ್ರಪತಿ

ನಮ್ಮ ಮಹಾನ್ ದೇಶವನ್ನು ಕೀಲಾಗಿ ಕಾಣುವಂತೆ ತೇಲಿ ಬಿಡಲಾಗುತ್ತಿರುವ ಸುಳ್ಳು ನಿರೂಪಣೆಗಳಿಗೆ ಪ್ರತಿಯೊಬ್ಬರೂ ಎದಿರೇಟು ನೀಡಬೇಕು - ಉಪ ರಾಷ್ಟ್ರಪತಿ

ಜಮ್ಮು ವಿಶ್ವವಿದ್ಯಾಲಯದ ವಿಶೇಷ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿಯವರು

Posted On: 22 JUN 2023 5:11PM by PIB Bengaluru

35-ಎ ಮತ್ತು 370 ನೇ ವಿಧಿಗಳನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರವು ಗಮನಾರ್ಹ ಬೆಳವಣಿಗೆ ಮತ್ತು ಅಭಿವೃದ್ಧಿಯ ಹೊಸ ಮಾರ್ಗವನ್ನು ತುಳಿಯುತ್ತಿದೆ ಎಂದು ಉಪ ರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಇಂದು ಹೇಳಿದ್ದಾರೆ. ರಾಷ್ಟ್ರೀಯ ಮುಖ್ಯವಾಹಿನಿಯೊಂದಿಗೆ ಈ ಪ್ರದೇಶದ ಏಕೀಕರಣವು ಹೂಡಿಕೆಗಳು, ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆಗೆ ದಾರಿ ಮಾಡಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ.

ಇಂದು ಜಮ್ಮು ವಿಶ್ವವಿದ್ಯಾನಿಲಯದ ವಿಶೇಷ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿಯವರು, ಸಂವಿಧಾನದಲ್ಲಿ 35-ಎ ಮತ್ತು 370 ನೇ ವಿಧಿಗಳನ್ನು ತಾತ್ಕಾಲಿಕ ನಿಬಂಧನೆಗಳಾಗಿ ಇಡಲಾಗಿತ್ತು, ಆದರೆ 70 ವರ್ಷಗಳವರೆಗೆ ಅವು ಉಳಿದವು ಎಂದು ಅವರು ಒತ್ತಿ ಹೇಳಿದರು. ಭಾರತ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು 370 ನೇ ವಿಧಿಯ ಕರಡು ರೂಪಿಸಲು ನಿರಾಕರಿಸಿದ್ದರು ಎಂದು ಅವರು ಹೇಳಿದರು. “ವೈಯಕ್ತಿಕವಾಗಿ ಇಪ್ಪತ್ತು ವರ್ಷಗಳಿಂದ, ನಾನು 35 ಎ ಮತ್ತು 370 ನೇ ವಿಧಿಯನ್ನು ರದ್ದುಗೊಳಿಸಬೇಕೆಂದು ಪ್ರತಿಪಾದಿಸುತ್ತಿದ್ದೆ. ಅದೊಂದು ಅಸಹಜತೆಯಾಗಿತ್ತು…ಈಗ ಅದು ಇಲ್ಲದಿರುವುದು ನಮಗೆ ಸಂತೋಷ ತಂದಿದೆ"  ಎಂದು ಅವರು ಹೇಳಿದರು.

ಈ ಪ್ರದೇಶವು ಮೊದಲಿಗಿಂತ ಭಿನ್ನವಾಗಿ ಈಗ ಸಾಮರಸ್ಯದ ವಾತಾವರಣವನ್ನು ಹೊಂದಿದೆ ಮತ್ತು ಇದು ಬಲವಾದ ಮತ್ತು ಅಖಂಡ ಭಾರತವನ್ನು ನಿರ್ಮಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಜೀವನ ಮತ್ತು ಧ್ಯೇಯಕ್ಕೆ ಸಂದ ಅತ್ಯಂತ ದೊಡ್ಡ ಗೌರವವಾಗಿದೆ ಎಂದು ಶ್ರೀ ಧನಕರ್ ಅವರು ಹೇಳಿದರು. ಶ್ರೀನಗರ ಜೈಲಿನಲ್ಲಿ ಸಂಭವಿಸಿದ ಡಾ. ಮುಖರ್ಜಿ ಅವರ ಸಾವು ಮಹತ್ವದ ದುರಂತ ಎಂದು ಬಣ್ಣಿಸಿದ ಉಪರಾಷ್ಟ್ರಪತಿಯವರು, ತಡವಾಗಿಯಾದರೂ ನಾವು ಅವರ ಕನಸನ್ನು ನನಸಾಗಿದ್ದೇವೆ ಮತ್ತು ಭಾರತೀಯರು ಈಗ ತಮ್ಮ ದೇಶದ ಈ ಭಾಗದಲ್ಲಿ ಯಾವುದೇ ನಿರ್ಬಂಧಗಳನ್ನು ಎದುರಿಸುತ್ತಿಲ್ಲ ಎಂದು ಹೇಳಿದರು.

370 ನೇ ವಿಧಿಯ ರದ್ದತಿಯಿಂದ ಅಗಿರುವ ಬದಲಾವಣೆಗಳನ್ನು ಉಲ್ಲೇಖಿಸಿದ ಅವರು, 890 ಕೇಂದ್ರೀಯ ಕಾನೂನುಗಳನ್ನು ಅನ್ವಯಿಸಲಾಗಿದೆ, 200 ಕ್ಕೂ ಹೆಚ್ಚು ರಾಜ್ಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ ಮತ್ತು ನೂರಾರು ಕಾನೂನುಗಳನ್ನು ಜಮ್ಮು & ಕಾಶ್ಮೀರ ಜನರ ಅನುಕೂಲಕ್ಕಾಗಿ ಮಾರ್ಪಡಿಸಲಾಗಿದೆ ಎಂದು ಹೇಳಿದರು. ಕೇಂದ್ರಾಡಳಿತ ಪ್ರದೇಶದಲ್ಲಿ ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಆಗಿರುವ ಸುಧಾರಣೆಯನ್ನು ಅವರು ಶ್ಲಾಘಿಸಿದರು.

ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಮತ್ತು ವಿಶ್ವದ ಅತ್ಯಂತ ಕ್ರಿಯಾಶೀಲ ಪ್ರಜಾಪ್ರಭುತ್ವ ಎಂದು ವಿವರಿಸಿದ ಶ್ರೀ ಧನಕರ್, ಭಾರತದ ಸಾಧನೆಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕು ಎಂದು ಕರೆ ನೀಡಿದರು. "ಪ್ರಪಂಚದ ಪ್ರತಿಯೊಂದು ಭಾಗದಲ್ಲೂ, ಕಾರ್ಪೊರೇಟ್ ಮತ್ತು ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಭಾರತೀಯ ಪ್ರತಿಭೆಯನ್ನು ನೀವು ಕಾಣಬಹುದು, ಇದು ಭಾರತವು ಹೆಮ್ಮೆಪಡುವಂತೆ ಮಾಡಿದೆದೆ ಮತ್ತು ಇತರ ದೇಶಗಳು ನಮ್ಮ ಪ್ರತಿಭೆಯನ್ನು ಗೌರವಿಸುತ್ತಿವೆ" ಎಂದು ಅವರು ಒತ್ತಿ ಹೇಳಿದರು.

ಈ ದೇಶವನ್ನು ಕೀಳಾಗಿ ಕಾಣಲು ವ್ಯವಸ್ಥಿತ ರೀತಿಯಲ್ಲಿ ಸುಳ್ಳು ನಿರೂಪಣೆಗಳು ನಡೆಯುತ್ತಿರುವುದು ವಿಪರ್ಯಾಸ. ನಮ್ಮಲ್ಲಿ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ” ಎಂದು ಅವರು ಹೇಳಿದರು. “ಬಹುಸಂಖ್ಯೆಯ ಜನರು ಇದರ ಬಗ್ಗೆ ಮೌನವಾಗಿಯೇ ಇರಲು ನಿರ್ಧರಿಸಿದರೆ, ಆ  ಮೌನವೇ ಶಾಶ್ವತವಾಗುತ್ತದೆ" ಎಂದು ಒತ್ತಿ ಹೇಳಿದ ಉಪ ರಾಷ್ಟ್ರಪತಿಯವರು, ನಮ್ಮ ಬೆಳವಣಿಗೆಯ ಪಯಣವನ್ನು ಹಾಳುಮಾಡುವ ಕೇಡಿನ ವಿನ್ಯಾಸಗಳನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ಎಲ್ಲರಿಗೂ ಮನವಿ ಮಾಡಿದರು.

ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ಕಾನೂನಿನ ಕೈಗಳು ಎಲ್ಲರ ಬಳಿಗೂ ತಲುಪುತ್ತವೆ ಎಂದು ಒತ್ತಿ ಹೇಳಿದ ಶ್ರೀ ಧನಕರ್, ಭ್ರಷ್ಟರು ತಪ್ಪಿಸಿಕೊಳ್ಳುವ ಎಲ್ಲಾ ಮಾರ್ಗಗಳನ್ನು ನಿಲ್ಲಿಸಲಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. “ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇದೆ. ಸಂದೇಶವು ಈಗ ಜೋರಾಗಿದೆ ಮತ್ತು ಸ್ಪಷ್ಟವಾಗಿದೆ; ನೀವು ಯಾವುದೇ ಗುರುತಿನವಾಗಿರಬಹುದು ಅಥವಾ ಯಾವುದೇ ವಂಶದವರಾಗಿರಬಹುದು, ನೀವು ಕಾನೂನಿಗೆ ಬದ್ಧರಾಗಿರುತ್ತೀರಿ,” ಎಂದು ಅವರು ಹೇಳಿದರು.

ಘಟಿಕೋತ್ಸವ ಸಮಾರಂಭವು ಜೀವನದಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುತ್ತದೆ ಎಂದು ಹೇಳಿದ ಉಪ ರಾಷ್ಟ್ರಪತಿಯವರು, ವಿದ್ಯಾರ್ಥಿಗಳು ಎಂದಿಗೂ ಉದ್ವೇಗ ಅಥವಾ ಒತ್ತಡಕ್ಕೆ ಒಳಗಾಗಬಾರದು ಮತ್ತು ವೈಫಲ್ಯದ ಬಗ್ಗೆ ಭಯಪಡಬಾರದು ಎಂದು ಸಲಹೆ ನೀಡಿದರು. ಕೇಂದ್ರಾಡಳಿತ ಪ್ರದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರನ್ನು ಶ್ಲಾಘಿಸಿದರು.

ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಯವರ ಧರ್ಮಪತ್ನಿ  ಡಾ. (ಶ್ರೀಮತಿ.) ಸುದೇಶ್ ಧನಕರ್, ಜಮ್ಮು & ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮತ್ತು ಜಮ್ಮು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಶ್ರೀ ಮನೋಜ್ ಸಿನ್ಹಾ, ಜಮ್ಮು & ಕಾಶ್ಮೀರ ಸರ್ಕಾರದ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರ ಮತ್ತು ಜಮ್ಮು ವಿಶ್ವವಿದ್ಯಾಲಯದ ಪ್ರೊ-ಚಾನ್ಸೆಲರ್ ಶ್ರೀ ರಾಜೀವ್ ರೈ ಭಟ್ನಾಗರ್, ಜಮ್ಮು & ಕಾಶ್ಮೀರ ಸರ್ಕಾರದ ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್, ಜಮ್ಮು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಉಮೇಶ್ ರೈ, ಜೆ & ಕೆ ಸರ್ಕಾರದ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ದಿನೇಶ್ ಸಿಂಗ್, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

****

 


(Release ID: 1934710) Visitor Counter : 114