ಗೃಹ ವ್ಯವಹಾರಗಳ ಸಚಿವಾಲಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆ ಪ್ರಸ್ತಾಪಗಳು

Posted On: 23 MAR 2023 6:09PM by PIB Bengaluru

ಜಮ್ಮು ಮತ್ತು ಕಾಶ್ಮೀರ ಸರಕಾರ ಒದಗಿಸಿದ ಮಾಹಿತಿಯ ಪ್ರಕಾರ, ʻಹೊಸ ಕೈಗಾರಿಕಾ ನೀತಿ-2021ʼ ಘೋಷಣೆಯ ನಂತರ, ಇಲ್ಲಿಯವರೆಗೆ ಒಟ್ಟು 5327 ಅರ್ಜಿಗಳು / ಹೂಡಿಕೆ ಪ್ರಸ್ತಾಪಗಳನ್ನು ಸ್ವೀಕರಿಸಲಾಗಿದೆ. 2022ರ ಡಿಸೆಂಬರ್‌ನಲ್ಲಿ 64,058 ಕೋಟಿ ರೂ.ಗಳಷ್ಟಿದ್ದ ನಿರೀಕ್ಷಿತ ಹೂಡಿಕೆ ಈಗ 66,000 ಕೋಟಿ ರೂ.ಗೆ ತಲುಪಿದೆ.

ಸ್ವೀಕರಿಸಲಾದ 5327 ಪ್ರಸ್ತಾವನೆಗಳಲ್ಲಿ 1854 ಘಟಕಗಳಿಗೆ ಸಂಬಂಧಿಸಿದಂತೆ ಭೂಮಿಯನ್ನು ಮಂಜೂರು ಮಾಡಲಾಗಿದ್ದು, ಈ ಪೈಕಿ ಘಟಕಗಳಿಗೆ 854 ಪ್ರೀಮಿಯಂ ಪಾವತಿಸಲಾಗಿದೆ. 560 ಘಟಕಗಳು ಗುತ್ತಿಗೆ ಪತ್ರಕ್ಕೆ ಸಹಿ ಹಾಕಿವೆ ಮತ್ತು ಹಂಚಿಕೆಯಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿವೆ. 129 ಘಟಕಗಳು ಕೆಲಸವನ್ನು ಪ್ರಾರಂಭಿಸಿವೆ. ಇದಲ್ಲದೆ, `ಹೊಸ ಕೈಗಾರಿಕಾ ನೀತಿ-2021’ರ ಘೋಷಣೆಯ ನಂತರ ಅಸ್ತಿತ್ವದಲ್ಲಿರುವ 350 ಘಟಕಗಳು ಸಹ ಉತ್ಪಾದನೆ ಹಂತಕ್ಕೆ ತಲುಪಿವೆ.

ʻಜಮ್ಮು ಮತ್ತು ಕಾಶ್ಮೀರ ಕೈಗಾರಿಕಾ ನೀತಿ-2021ʼ ಅನ್ನು ಪರಿಚಯಿಸಿದ ನಂತರ, ಒಟ್ಟು 1924.64 ಕೋಟಿ ರೂ.ಗಳ ಹೂಡಿಕೆ ಹರಿದುಬಂದಿದೆ (2021-22 ರಲ್ಲಿ 376.76 ಕೋಟಿ ರೂ. ಮತ್ತು 2022-23ರಲ್ಲಿ ಜನವರಿ 2023ರವರೆಗೆ 1547.88 ಕೋಟಿ ರೂ.) ಹಿಂದಿನ ಹಣಕಾಸು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿನ ಹೂಡಿಕೆಯು ಅತ್ಯಧಿಕವಾಗಿದೆ.

ಜಮ್ಮು ಮತ್ತು ಕಾಶ್ಮೀರ ಸರಕಾರವು ಹೂಡಿಕೆದಾರರನ್ನು ಉತ್ತೇಜಿಸಲು ಮತ್ತು ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ಆದಾಯ ಸೃಷ್ಟಿಗೆ ದಾರಿ ಮಾಡಲು - ಸುಗಮ ವ್ಯಾಪಾರ, ಹೊಸ ಕೈಗಾರಿಕಾ ಎಸ್ಟೇಸ್‌ಗಳ ಅಭಿವೃದ್ಧಿ, ರಸ್ತೆಗಳು, ವಿದ್ಯುತ್, ನೀರು, ಒಳಚರಂಡಿ, ಒಳಚರಂಡಿ ಸಂಸ್ಕರಣೆ ಮತ್ತು ಹೂಡಿಕೆದಾರರಿಗೆ ಸಹಾಯಹಸ್ತ, ಮೂಲಭೂತ ಮೂಲಸೌಕರ್ಯಗಳ ಅಭಿವೃದ್ಧಿಯಂತಹ ʻವ್ಯಾಪಾರ ಸುಧಾರಣಾ ಕ್ರಿಯಾ ಯೋಜನೆʼ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅಂತಹ ಕೆಲವು ಕ್ರಮಗಳ ಪಟ್ಟಿ ಹೀಗಿದೆ:

 

  1. ವ್ಯಾಪಾರ ಸುಧಾರಣಾ ಕ್ರಿಯಾ ಯೋಜನೆ- ಸುಗಮ ವ್ಯಾಪಾರ (ಬಿಆರ್‌ಎಪಿ-ಇಒಡಿಬಿ): ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ʻಬಿಆರ್‌ಎಪಿʼ ಅನುಷ್ಠಾನಕ್ಕೆ ಸರಕಾರವು ವ್ಯೂಹಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ. ʻಬಿಆರ್‌ಎಪಿʼ ಅಡಿಯಲ್ಲಿ 352 ʻಬಿಆರ್‌ಎಪಿʼ ಅಂಶಗಳನ್ನು ಅನುಸರಿಸಲಾಗಿದೆ ಮತ್ತು 3188 ಅನುಸರಣಾ ಹೊರೆಗಳನ್ನು ಕಡಿಮೆ ಮಾಡಲಾಗಿದೆ. 18 ಇಲಾಖೆಗಳ 167 ಸೇವೆಗಳನ್ನು ಏಕ ಗವಾಕ್ಷಿ ಪೋರ್ಟಲ್‌ನಲ್ಲಿ ಒದಗಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ʻಬಿಆರ್‌ಎಪಿʼ ಸ್ಕೋರ್ 0.30% ರಿಂದ 79.67% ಕ್ಕೆ ಸುಧಾರಿಸಿದೆ.
  1. ಏಕಗವಾಕ್ಷಿ ಅನುಮೋದನೆ ವ್ಯವಸ್ಥೆ: ನಿರೀಕ್ಷಿತ ಹೂಡಿಕೆದಾರರಿಗೆ ತಡೆರಹಿತ ಸೇವೆಗಳನ್ನು ಒದಗಿಸಲು, ಸರಕಾರಿ ಇಲಾಖೆಗಳು ಮತ್ತು ಹೂಡಿಕೆದಾರರ ಅನುಕೂಲಕ್ಕಾಗಿ ಎಲ್ಲಾ ಸರಕಾರಿ ವ್ಯವಹಾರ ಸೇವೆಗಳನ್ನು ಏಕ ಗವಾಕ್ಷಿ ವ್ಯವಸ್ಥೆ ಅಡಿಯಲ್ಲಿ ತರಲಾಗಿದೆ.
  2. ಹೊಸ ಕೈಗಾರಿಕಾ ಎಸ್ಟೇಟ್‌ಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಸುಧಾರಣೆ.
  3. ಕೈಗಾರಿಕೆಗಳನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವ ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ಆದರ್ಶ ಹೂಡಿಕೆ ತಾಣವಾಗಿ ಉತ್ತೇಜಿಸಲು ಮತ್ತಷ್ಟು ಹೂಡಿಕೆದಾರರನ್ನು ಆಹ್ವಾನಿಸುವ ಉದ್ದೇಶದಿಂದ ಅಗತ್ಯ ಸೌಲಭ್ಯ / ಜಾಗೃತಿಗಾಗಿ ʻಹೂಡಿಕೆದಾರರ ಸೌಲಭ್ಯ ಘಟಕʼವನ್ನು ತೆರೆಯಲಾಗಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಗೃಹ ವ್ಯವಹಾರಗಳ ಸಹಾಯಕ ಸಚಿವ ಶ್ರೀ ನಿತ್ಯಾನಂದ ರೈ ಅವರು ಈ ವಿಷಯ ತಿಳಿಸಿದರು.

*****



(Release ID: 1910523) Visitor Counter : 80


Read this release in: English , Urdu