ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

ಸಾಗರ ಪರಿಕ್ರಮ 4ನೇ ಹಂತ ಇಂದಿನಿಂದ ಆರಂಭ


ಎಫ್ ಎಎಚ್ ಡಿ ಸಚಿವ ಶ್ರೀ ಪುರುಷೋತ್ತಮ ರೂಪಾಲಾ ಅವರು ವಿವಿಧ ಭಾಗೀದಾರರೊಂದಿಗೆ ಅವರ ಸಮಸ್ಯೆಗಳು ಮತ್ತು ಆಕಾಂಕ್ಷೆಗಳನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಲು ಸಂವಾದ ನಡೆಸಿದರು; ಕರಾವಳಿ ಪ್ರದೇಶಗಳಲ್ಲಿ  ಪಿ.ಎಂ.ಎಂ.ಎಸ್.ವೈ. ಮುಂತಾದ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಕೆಸಿಸಿ ಉತ್ತೇಜನಕ್ಕಾಗಿ  ಮೀನು ಕೃಷಿಕರಲ್ಲಿ ಜಾಗೃತಿ ಮೂಡಿಸಲು ವಿಶೇಷ ಒತ್ತು

ಮೀನುಗಾರಿಕಾ ಅಭಿವೃದ್ಧಿ ಮೂಲಸೌಕರ್ಯಗಳನ್ನು ಸುಧಾರಿಸಲು ಕರ್ನಾಟಕ ರಾಜ್ಯದ ಮಾಜಾಳಿ ಮತ್ತು ಬೆಳಂಬರ ಹಾಗು ಇತರ ಪ್ರದೇಶಗಳಲ್ಲಿ ಮೀನುಗಾರಿಕಾ ಬಂದರು, ಫಿಶ್ ಲ್ಯಾಂಡಿಂಗ್ ಕೇಂದ್ರಗಳು,  ಐಸ್ ಪ್ಲಾಂಟ್ ಗಳು, ಕೋಲ್ಡ್ ಸ್ಟೋರೇಜ್ ಗಳು ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲಾಗುವುದು

Posted On: 18 MAR 2023 7:09PM by PIB Bengaluru

ಸಾಗರ ಪರಿಕ್ರಮ ನಾಲ್ಕನೇ ಹಂತದ ಕಾರ್ಯಕ್ರಮ ಇಂದು ಕಾರವಾರದಲ್ಲಿ ಪ್ರಾರಂಭವಾಯಿತು. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪುರುಷೋತ್ತಮ ರೂಪಾಲಾ ಅವರು ತಮ್ಮ ಭಾಷಣದಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್.ವೈ) ಮತ್ತು ನೀಲಿ ಕ್ರಾಂತಿಯ ಇತರ ಬಹು ಆಯಾಮದ ಚಟುವಟಿಕೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಮೀನುಗಾರಿಕೆ ಉತ್ಪಾದನೆ ಮತ್ತು ಉತ್ಪಾದಕತೆಯನ್ನು (ಒಳನಾಡು ಮತ್ತು ಸಮುದ್ರ ಎರಡಕ್ಕೂ) ಹೆಚ್ಚಿಸಲು ಮತ್ತು ಮೂಲಸೌಕರ್ಯ ಅಭಿವೃದ್ಧಿ, ಮಾರುಕಟ್ಟೆ, ರಫ್ತು ಮತ್ತು ಸಾಂಸ್ಥಿಕ ವ್ಯವಸ್ಥೆಗಳು ಸೇರಿದಂತೆ ಅದರ ಸಂಬಂಧಿತ ಚಟುವಟಿಕೆಗಳ ಬಗ್ಗೆಯೂ ಅವರು  ಹೆಚ್ಚಿನ ಆದ್ಯತೆ ನೀಡಿ ಮಾತನಾಡಿದರು. ಕರ್ನಾಟಕ ರಾಜ್ಯದ ಮಾಜಾಳಿ ಮತ್ತು ಬೆಳಂಬರ ಹಾಗು ಇತರ ಪ್ರದೇಶಗಳಲ್ಲಿ ಮೀನುಗಾರಿಕೆ ಅಭಿವೃದ್ಧಿ ಮೂಲಸೌಕರ್ಯಗಳನ್ನು ಸುಧಾರಿಸಲು ಮೀನುಗಾರಿಕಾ ಬಂದರು, ಫಿಶ್ ಲ್ಯಾಂಡಿಂಗ್ ಕೇಂದ್ರಗಳು,  ಐಸ್ ಪ್ಲಾಂಟ್ ಗಳು, ಕೋಲ್ಡ್ ಸ್ಟೋರೇಜ್ ಗಳು ಇತ್ಯಾದಿಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದವರು ಘೋಷಿಸಿದರು. ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಸ್ವಯಂಸೇವಕರು ಸಹಾಯ ಮಾಡಬೇಕೆಂದು ಅವರು ವಿನಂತಿಸಿದರು, ಇದರಿಂದ ಫಲಾನುಭವಿಗಳು ಅದರ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು. ಮೀನು ಕೃಷಿಕರಿಗೆ ಸಹಾಯ ಮಾಡಲು ಕರ್ನಾಟಕ ಸರ್ಕಾರವು 75 ಸಂಚಾರಿ ಪಶುವೈದ್ಯಕೀಯ ಘಟಕಗಳನ್ನು ಸ್ಥಾಪಿಸಿರುವುದನ್ನು ಶ್ರೀ ಪುರುಷೋತ್ತಮ ರೂಪಾಲಾ ಶ್ಲಾಘಿಸಿದರು.

ಇದಲ್ಲದೆ, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪುರುಷೋತ್ತಮ ರೂಪಾಲಾ ಅವರು ಸಾಗರ ಪರಿಕ್ರಮದ ಪರಿಕಲ್ಪನೆಯನ್ನು ಹಂಚಿಕೊಂಡರು ಮತ್ತು ಜನ ಕೇಂದ್ರಿತ ಆಡಳಿತ ಮಾದರಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. 

1950 ರಿಂದ 2014 ರವರೆಗೆ ಮೀನುಗಾರಿಕೆ ಕ್ಷೇತ್ರದಲ್ಲಿ ಸುಮಾರು 3,681 ಕೋಟಿ ರೂ.ಗಳ ಹೂಡಿಕೆ ಇತ್ತು. 2014 ರಿಂದ ಸರ್ಕಾರವು 20,500 ಕೋಟಿ ರೂ.ಗಳ ಬಜೆಟ್ ನೊಂದಿಗೆ ಪಿಎಂಎಂಎಸ್ ವೈ, ಸುಮಾರು 8,000 ಕೋಟಿ ರೂ.ಗಳ ಬಜೆಟ್ ನೊಂದಿಗೆ ಎಫ್ ಐಡಿಎಫ್, 3,000 ಕೋಟಿ ರೂ.ಗಳ ಬಜೆಟ್ ನೊಂದಿಗೆ ನೀಲಿ ಕ್ರಾಂತಿಯಂತಹ ಯೋಜನೆಗಳನ್ನು ಪರಿಚಯಿಸಿತು. ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಂಡು ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಒಟ್ಟು 32,000 ಕೋಟಿ ರೂ. ಹೂಡಿಕೆ ಮಾಡಲಾಗಿದೆ.

ಇಂದು, ವಿಶ್ವದ ಎಲ್ಲಾ ದೇಶಗಳು ಪರಿಹಾರಗಳಿಗಾಗಿ ಭಾರತದತ್ತ ನೋಡುತ್ತಿವೆ ಮತ್ತು ನಮ್ಮ ಸರ್ಕಾರವು ಜನರ ಸಾಮಾನ್ಯ ಜ್ಞಾನವನ್ನು ನಂಬಿದ್ದರಿಂದ ಮತ್ತು ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ದೇಶದ ಪ್ರಗತಿಯಲ್ಲಿ ಬುದ್ಧಿವಂತಿಕೆಯಿಂದ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸಿದ್ದರಿಂದ ಇದು ಸಾಧ್ಯವಾಗಿದೆ ಎಂದವರು ಹೇಳಿದರು. 

ಸಮಸ್ಯೆಗಳು ಮತ್ತು ಆಕಾಂಕ್ಷೆಗಳನ್ನು, ಆಶೋತ್ತರಗಳನ್ನು  ವಸ್ತುನಿಷ್ಠವಾಗಿ ಅರಿತುಕೊಳ್ಳಲು ಸಚಿವರು ವಿವಿಧ ಭಾಗೀದಾರರೊಂದಿಗೆ ಸಂವಾದ ನಡೆಸಿದರು. ಅಲ್ಲದೆ, ಇಲಾಖೆಯಿಂದ ಕರಾವಳಿ ಪ್ರದೇಶಗಳಲ್ಲಿ ಪಿಎಂಎಂಎಸ್ ವೈ ಮುಂತಾದ ಯೋಜನೆಗಳ ಪ್ರಗತಿಯನ್ನು ಅವರು ಪರಿಶೀಲಿಸಿದರು. ಕೆಸಿಸಿ ಉತ್ತೇಜನಕ್ಕಾಗಿ  ಮೀನು ಕೃಷಿಕರಲ್ಲಿ ಜಾಗೃತಿ ಮೂಡಿಸಲು ಅವರು ವಿಶೇಷ ಒತ್ತು ನೀಡಿದರು.

ಸಾಗರ ಸಂಪತ್ತಿನ ವಸ್ತುನಿಷ್ಠ ಮೌಲ್ಯಮಾಪನದ ಬಗ್ಗೆ  ಮತ್ತು ದೇಶದ ಆರ್ಥಿಕತೆಗೆ ಕೊಡುಗೆ ನೀಡುವ ಮೀನುಗಾರಿಕೆ ಕ್ಷೇತ್ರದ  ಸಾಮರ್ಥ್ಯದ ಬಗ್ಗೆ ಸಚಿವರು ಚರ್ಚಿಸಿದರು.

ಅನೇಕ ಫಲಾನುಭವಿಗಳು ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪುರುಷೋತ್ತಮ್ ರೂಪಾಲಾ ಅವರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು ಮತ್ತು ಕಾರ್ಖಾನೆಗಳ ಕಾರ್ಯಾಚರಣೆ, ಮೂಲಸೌಕರ್ಯಗಳ ನಿರ್ವಹಣೆ ಹಾಗು ಮೀನುಗಾರರು ಮತ್ತು ಮೀನುಗಾರ ಸಮುದಾಯದ ಜೀವನದಲ್ಲಿ ಪಿಎಂಎಂಎಸ್ ವೈ ಯೋಜನೆ ನೀಡಿದ ಅದ್ಭುತ ಕೊಡುಗೆಗೆ ಸಂಬಂಧಿಸಿದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಹಾಗು  ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.  
ಕೆಸಿಸಿಗೆ ಉತ್ತೇಜನ ನೀಡುವ ಬಗ್ಗೆ ಅವರು ಚರ್ಚಿಸಿದರು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಶಿಬಿರಗಳನ್ನು ಆಯೋಜಿಸಲಾಗಿದೆ, ಅಲ್ಲಿ ಮೀನುಗಾರರು ಮತ್ತು ಮೀನು ಕೃಷಿಕರಿಗೆ ಕೆಸಿಸಿ ನೋಂದಣಿ ಮತ್ತು ಅದರ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಹೇಳಿದರು. ಪ್ರತಿ ಶಿಬಿರದಲ್ಲಿ 100 ಕ್ಕೂ ಹೆಚ್ಚು ಮೀನುಗಾರರು ಮತ್ತು ಮೀನು ಕೃಷಿಕರು ಭಾಗವಹಿಸಿದ್ದರು, ಮತ್ತು ಅವರು ಪ್ರಯೋಜನಗಳನ್ನು ತಿಳಿದುಕೊಂಡು  ಸಂತೋಷಪಟ್ಟರು. ಅಂತಹ ಹೆಚ್ಚಿನ ಸಂವಾದಗಳಿಗೆ ಅವರು  ಕೋರಿಕೆ ಮಂಡಿಸಿದ್ದಾರೆ. ಇದರ ಫಲವಾಗಿ ಈವರೆಗೆ 6,050 ಕೆಸಿಸಿ ಕಾರ್ಡ್ ಗಳನ್ನು ವಿತರಿಸಲಾಗಿದೆ ಎಂದೂ ಅವರು ತಿಳಿಸಿದರು. 

ಗೌರವಾನ್ವಿತ ಮೀನುಗಾರರ ವೃತ್ತಿ, ಜೀವನ, ಸಂಸ್ಕೃತಿ, ಪ್ರಸ್ತುತ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಗರ ಪರಿಕ್ರಮಕ್ಕೆ ಸೇರಿದ್ದೇನೆ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪುರುಷೋತ್ತಮ ರೂಪಾಲಾ ಅವರು ಹೇಳಿದರು, ಇದು ನೀತಿಯನ್ನು ತಯಾರಿಸಲು ತಮಗೆ ಸಹಾಯ ಮಾಡುತ್ತದೆ ಎಂದರಲ್ಲದೆ ಅಮೂಲ್ಯ ಸಮಯವನ್ನು ಇದಕ್ಕಾಗಿ ವಿನಿಯೋಗಿಸಿರುವುದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ  ಸಚಿವ ಡಾ.ಎಲ್.ಮುರುಗನ್ ಅವರು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್.ಡಿ.ಜಿ.) ಸಾಧಿಸಲು ಗ್ರಾಮೀಣ ಪ್ರದೇಶದ ಜನರ ಜೀವನ ಗುಣಮಟ್ಟ ಮತ್ತು ಆರ್ಥಿಕ ಯೋಗಕ್ಷೇಮವನ್ನು ಸುಧಾರಿಸುವ ನಿಟ್ಟಿನಲ್ಲಿ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುವ ಬಗ್ಗೆ,  ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಮತ್ತು ಮೀನುಗಾರರು, ಮೀನು ಕೃಷಿಕರು ಇತ್ಯಾದಿ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿದ್ದಕ್ಕಾಗಿ ಶ್ರೀ ಪುರುಷೋತ್ತಮ ರೂಪಾಲಾ ಅವರಿಗೆ ಧನ್ಯವಾದ ಅರ್ಪಿಸಿದರು.  ಪ್ರತ್ಯೇಕ ಮೀನುಗಾರಿಕಾ ಇಲಾಖೆಯನ್ನು ಸ್ಥಾಪಿಸುವ ಬಗ್ಗೆ 2019 ರಲ್ಲಿ ಸರ್ಕಾರ ಮಾಡಿದ ಘೋಷಣೆಯನ್ನು ಪ್ರಸ್ತಾಪಿಸಿದ ಅವರು , ಇದನ್ನು ತಕ್ಷಣವೇ ಪ್ರಧಾನ ಮಂತ್ರಿಯವರು ಅನುಮೋದಿಸಿದ್ದನ್ನೂ ಪ್ರಮುಖವಾಗಿ ಉಲ್ಲೇಖಿಸಿದರು. .

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪುರುಷೋತ್ತಮ ರೂಪಾಲಾ ಅವರು "ಸಾಗರ್ ಪರಿಕ್ರಮ" ಕನ್ನಡ ಗೀತೆಯನ್ನು ಉದ್ಘಾಟಿಸಿದರು. ಅವರನ್ನು ಮೀನುಗಾರರು ಮತ್ತು ಮಹಿಳೆಯರು ನಾಡಗೀತೆಯೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮೀನುಗಾರಿಕೆ ಜಂಟಿ ಕಾರ್ಯದರ್ಶಿ ಡಾ.ಜೆ.ಬಾಲಾಜಿ ಸ್ವಾಗತ ಭಾಷಣ ಮಾಡಿದರು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ ವೈ), ಮೀನುಗಾರಿಕೆ ಮತ್ತು ಜಲಚರ ಸಾಕಣೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್ಐಡಿಎಫ್), ಕೆಸಿಸಿ ಮುಂತಾದ ವಿವಿಧ ಯೋಜನೆಗಳ ಮೂಲಕ ಆರ್ಥಿಕ ಉನ್ನತಿಗೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಮೀನುಗಾರಿಕೆ ಕಾರ್ಯದರ್ಶಿ ಶ್ರೀ ಜತೀಂದ್ರ ನಾಥ್ ಸ್ವೈನ್ ಪ್ರಸ್ತಾಪಿಸಿ ಪರಿಚಯಾತ್ಮಕ ಭಾಷಣ ಮಾಡಿದರು. ಗೌರವಾನ್ವಿತ ಪ್ರಧಾನ ಮಂತ್ರಿಗಳು ಮೀನುಗಾರಿಕೆ ಕ್ಷೇತ್ರಕ್ಕೆ ನೀಡಿದ ಪ್ರಾಮುಖ್ಯತೆ ಮತ್ತು ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ನಿಧಿಯನ್ನು ಹಂಚಿಕೆ ಮಾಡಿರುವುದರತ್ತ  ಅವರು ಬೆಟ್ಟು ಮಾಡಿದರು. ಇದಲ್ಲದೆ, ನೀಲಿ ಕ್ರಾಂತಿ ಮತ್ತು ಪಿ.ಎಂ.ಎಂ.ಎಸ್.ವೈ.ಯಂತಹ ಯೋಜನೆಗಳ ಅಡಿಯಲ್ಲಿ ಕರ್ನಾಟಕದಲ್ಲಿ ಮಂಜೂರಾದ ಯೋಜನೆಗಳ ಬಗ್ಗೆ ಅವರು ಚರ್ಚಿಸಿದರು (ಅಂದರೆ, ಕರ್ನಾಟಕ ರಾಜ್ಯದಲ್ಲಿ ಒಟ್ಟು ಹೂಡಿಕೆಯು 779 ಕೋಟಿ ರೂ.ಗಳಾಗಿದ್ದು, ಇದರಲ್ಲಿ 252 ಕೋಟಿ ರೂ.ಗಳು ಕೇಂದ್ರ ನಿಧಿಯಿಂದ ಲಭಿಸಿವೆ). ನಮ್ಮ ಕರಾವಳಿ ಮೀನುಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ವಿಧಾನಗಳು, ಅವರ ಜೀವನೋಪಾಯವನ್ನು ಬಲಪಡಿಸುವುದು ಮತ್ತು ಚಂಡಮಾರುತದ ಸಮಯದಲ್ಲಿ ನಮ್ಮ ಮೀನುಗಾರರ ಜೀವವನ್ನು ಉಳಿಸಲು ಮುಂಬರುವ ವರ್ಷದಲ್ಲಿ ಸಾಧನಗಳ ಮೇಲೆ ನಿಗಾ ಇಟ್ಟು ಮೇಲ್ವಿಚಾರಣೆ ಮಾಡುವುದು  ಮತ್ತು ನಿಯಂತ್ರಿಸುವುದು ಸೇರಿದಂತೆ ತಂತ್ರಜ್ಞಾನ ಚಾಲಿತ ಪದ್ಧತಿಗಳ  ಬಗ್ಗೆಯೂ  ಮೀನುಗಾರಿಕಾ ಕಾರ್ಯದರ್ಶಿ ಶ್ರೀ ಜತೀಂದ್ರನಾಥ್ ಸ್ವೈನ್ ಅವರು ಚರ್ಚಿಸಿದರು.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ ರೂಪಾಲಾ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಮತ್ತು ಸಾಗರ ಪರಿಕ್ರಮ 4 ನೇ ಹಂತವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಕೆಳಗಿನ ಗಣ್ಯರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು:

i. ಶ್ರೀ ಪುರುಷೋತ್ತಮ ರೂಪಾಲಾ, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರು,
ii. ಡಾ. ಎಲ್. ಮುರುಗನ್, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಮಾಹಿತಿ ಹಾಗು ಪ್ರಸಾರ ಖಾತೆ ಸಹಾಯಕ  ಸಚಿವರು
iii. ಶ್ರೀ ಎಸ್.ಅಂಗಾರ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು, ಕರ್ನಾಟಕ ಸರ್ಕಾರ,
iv. ಶ್ರೀ ಅರಬೈಲು ಶಿವರಾಮ್ ಹೆಬ್ಬಾರ್, ಕಾರ್ಮಿಕ ಸಚಿವರು, ಕರ್ನಾಟಕ ಸರ್ಕಾರ
v. ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ
vi. ಶ್ರೀಮತಿ ರೂಪಾಲಿ ನಾಯ್ಕ್, ವಿಧಾನ ಸಭಾ  ಸದಸ್ಯರು, ಕಾರವಾರ
vii. ಅಧ್ಯಕ್ಷರು ನಗರಸಭೆ, ಕಾರವಾರ
viii. ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಒಕ್ಕೂಟ, ಕಾರವಾರ
ix. ಅಧ್ಯಕ್ಷರು, ಕರ್ನಾಟಕ, ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ
x. ವಿಧಾನ ಪರಿಷತ್ ಸದಸ್ಯರು ಮತ್ತು ಸಂಸತ್ ಸದಸ್ಯರು
xi. ಜಿಲ್ಲಾ ಉಸ್ತುವಾರಿ ಸಚಿವರು, ಉತ್ತರ ಕನ್ನಡ
xii. ಶ್ರೀ ಜತೀಂದ್ರ ನಾಥ್ ಸ್ವೈನ್, ಐಎಎಸ್, ಕಾರ್ಯದರ್ಶಿ (ಮೀನುಗಾರಿಕೆ), ಭಾರತ ಸರ್ಕಾರ
xiii. ಡಾ. ಜೆ. ಬಾಲಾಜಿ, ಐಎಎಸ್, ಜಂಟಿ ಕಾರ್ಯದರ್ಶಿ (ಮೀನುಗಾರಿಕೆ), ಭಾರತ ಸರ್ಕಾರ
xiv. ಶ್ರೀಮತಿ ಸಲ್ಮಾ ಕೆ.ಫಹ್ಲ್ಮ್, ಐಎಎಸ್,  ಕಾರ್ಯದರ್ಶಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ
 xv. ಡಾ.ಎಲ್.ಎನ್.ಮೂರ್ತಿ, ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ
xvi. ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು
xvii. ಮೀನುಗಾರಿಕೆ ನಿರ್ದೇಶಕರು, ಕರ್ನಾಟಕ ಸರ್ಕಾರ
xviii. ಭಾರತೀಯ ಕೋಸ್ಟ್ ಗಾರ್ಡ್ ಹಿರಿಯ ಅಧಿಕಾರಿಗಳು, ಭಾರತೀಯ ಮೀನುಗಾರಿಕಾ ಸರ್ವೇಕ್ಷಣಾ ಇಲಾಖೆ, ಕರ್ನಾಟಕ ನಾವಿಕ (ಸಾಗರ ವ್ಯಾಪಾರ)  ಮಂಡಳಿ ಅಧಿಕಾರಿಗಳು ಮತ್ತು ಮೀನುಗಾರರ ಪ್ರತಿನಿಧಿಗಳು. 

ಕಾರವಾರ ಬಂದರಿನ ಮಾಜಾಳಿಯಲ್ಲಿ ನಡೆದ ಸಭೆಯಲ್ಲಿ ಸುಮಾರು 1000 ಮೀನುಗಾರರು, ಮೀನು ಕೃಷಿಕರು ಮತ್ತು ಇತರ ಗಣ್ಯರು ಭಾಗವಹಿಸಿದ್ದರು. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪುರುಷೋತ್ತಮ ರೂಪಾಲ ಮತ್ತು ಇತರ ಗಣ್ಯರು,  ಫಲಾನುಭವಿಗಳು, ಮೀನು ಕೃಷಿಕರು, ಮೀನುಗಾರರೊಂದಿಗೆ ಸಂವಾದ ನಡೆಸಿದರು. ಪಾಲ್ಗೊಂಡ ವಿವಿಧ ಫಲಾನುಭವಿಗಳೆಂದರೆ:

ಕ್ರಮ   
 ಸಂಖ್ಯೆ

ಫಲಾನುಭವಿಯ ಹೆಸರು

ಪ್ರಯೋಜನ

ಯಾವ ಘಟಕಕ್ಕಾಗಿ

  1.  

ಶ್ರೀ ಮಂಜುನಾಥ ನಾರಾಯಣ ದೇವಾಡಿಗ

ಮಂಜೂರಾತಿ ಆದೇಶ

ಎಫ್ ಆರ್ ಪಿ ದೋಣಿಗಳ ಖರೀದಿಗೆ ನೆರವು

(ಬದಲಿ)

  1.  

ಶ್ರೀ ನಿತಿನ್ ಗಾಂವ್ಕರ್

ಮಂಜೂರಾತಿ ಆದೇಶ

ಐಸ್ ಪ್ಲಾಂಟ್ ನವೀಕರಣಕ್ಕೆ

ನವೀಕರಣಕ್ಕೆ ನೆರವು

  1.  

ಶ್ರೀಮತಿ ಕುಸುಮಾ ಗಣಪತಿ ನಾಯಕ್

ಮಂಜೂರಾತಿ ಆದೇಶ

ದೊಡ್ಡ ಜೈವಿಕ ಜಲಚರ ಸಾಕಣೆ ವ್ಯವಸ್ಥೆ

ಸ್ಥಾಪನೆಗೆ ನೆರವು

  1.  

ಶ್ರೀ ಪ್ರಸಾದ್ ಸತ್ಯನಾರಾಯಣನ್ ಶರ್ಮಾ

ಮಂಜೂರಾತಿ ಆದೇಶ

ಸಣ್ಣ ಆರ್.ಎ.ಎಸ್.

ಸ್ಥಾಪನೆಗೆ ನೆರವು

  1.  

ಶ್ರೀಮತಿ ಸಂಜು ಫೆರ್ನಾಂಡಿಸ್

ಮಂಜೂರಾತಿ ಆದೇಶ

ಉಪ್ಪುನೀರಿನಲ್ಲಿ

ಪಂಜರ ಮತ್ಸ್ಯ ಕೃಷಿಗೆ ನೆರವು

  1.  

ಶ್ರೀಮತಿ ಜಾನ್ಬಾಯಿ ಕೃಷ್ಣ ತಾಂಡೇಲ

ಕಾರ್ಯಾದೇಶ

ಆಳ ಸಮುದ್ರ ಮೀನುಗಾರಿಕಾ ದೋಣಿ

ಖರೀದಿಗೆ ನೆರವು.l

  1.  

ಶ್ರೀ ರಾಜೇಶ್ ಗಣಪತಿ ಅಂಬಿಗ

ಕಾರ್ಯಾದೇಶ

ಉಪ್ಪುನೀರಿನ ಪಂಜರ ಕೃಷಿಗೆ ನೆರವು

  1.  

ಶ್ರೀಮತಿ ಶಿಲ್ಪಾ ಹರೀಶ್ ತಾಂಡೇಲ್

ಕಾರ್ಯಾದೇಶ

ಇನ್ಸುಲೇಟೆಡ್ ಟ್ರಕ್ ಗಳ

ಖರೀದಿಗೆ ನೆರವು

  1.  

ಶ್ರೀ ಅಜಯ್ ವಿಟ್ಟಲ್ ಬನಾವಳಿ

ಕಿಸಾನ್ ಕ್ರೆಡಿಟ್ ಕಾರ್ಡ್

ಕಿಸಾನ್ ಕ್ರೆಡಿಟ್ ಕಾರ್ಡ್

  1.  

ಶ್ರೀಮತಿ ಸುನೀತಾ ದೀಪಕ್ ಮಜಲೀಕರ್

ಕಿಸಾನ್ ಕ್ರೆಡಿಟ್ ಕಾರ್ಡ್

ಕಿಸಾನ್ ಕ್ರೆಡಿಟ್ ಕಾರ್ಡ್

 

ಈ ಸಂವಾದಾತ್ಮಕ ಅಧಿವೇಶನವು ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೊರತರಲು ಸಹಾಯ ಮಾಡಿತು ಮತ್ತು ಮೀನುಗಾರಿಕೆ ಅಭಿವೃದ್ಧಿಯನ್ನು ಸುಧಾರಿಸಲು ಇದು ಸಹಾಯ ಮಾಡಲಿದೆ. ಮಾತ್ರವಲ್ಲದೆ ಫಲಾನುಭವಿಗಳು ಮುಂಬರುವ ದಿನಗಳಲ್ಲಿ ಸಾಗರ್ ಪರಿಕ್ರಮದಂತಹ ಕಾರ್ಯಕ್ರಮಗಳಿಗೆ ವಿನಂತಿ ಮಂಡಿಸಿದರು. ಶ್ರೀ ಪುರುಷೋತ್ತಮ ರೂಪಾಲಾ ಅವರು ಮಾಜಾಳಿ ಗ್ರಾಮದ ಶ್ರೀಮತಿ ದೇವಕಿ ಮೆಹ್ತಾ ಅವರೊಂದಿಗೆ ಜೀವನೋಪಾಯ, ಮೀನುಗಾರಿಕೆಯಿಂದ ಆಹಾರ ಭದ್ರತೆ ಇತ್ಯಾದಿ ವಿಷಯಗಳ ಬಗ್ಗೆ ಸಂವಾದ ನಡೆಸಿದರು.

ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಎಸ್.ಅಂಗಾರ ಅವರು ಮೀನಿನ ಆಹಾರ ಮೌಲ್ಯದ ಮಹತ್ವವನ್ನು ಒತ್ತಿ ಹೇಳಿದರು.

ಸಾಗರ ಪರಿಕ್ರಮದ ನಾಲ್ಕನೇ ಹಂತದ ಕಾರ್ಯಕ್ರಮದಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಮೀನುಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಮೀನುಗಾರರು, ಮೀನು ಕೃಷಿಕರನ್ನು ಬೆಂಬಲಿಸಲು ನಶಾ ಮುಕ್ತಿ ಭಾರತ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿತು.

ಕರ್ನಾಟಕ ಸರ್ಕಾರದ ಮೀನುಗಾರಿಕಾ ನಿರ್ದೇಶಕರಾದ ಶ್ರೀ ರಾಮಾಚಾರ್ಯ ಅವರು ಈ ಕಾರ್ಯಕ್ರಮದಲ್ಲಿ  ಉಪಸ್ಥಿತಿ ಮತ್ತು ಕೊಡುಗೆಗಾಗಿ ಎಲ್ಲಾ ಗಣ್ಯರು ಮತ್ತು ಭಾಗವಹಿಸಿದ ಇತರರಿಗೆ  ಧನ್ಯವಾದ ಅರ್ಪಿಸಿದರು.  ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪುರುಷೋತ್ತಮ ರೂಪಾಲಾ ಅವರು ಬೆಳಂಬರದಲ್ಲಿ ಫಲಾನುಭವಿಗಳು, ಮೀನುಗಾರರು ಮತ್ತು ಮೀನು ಕೃಷಿಕರೊಂದಿಗೆ ಸಂವಾದ ನಡೆಸಿದರು, ಅಲ್ಲಿ ಬಂದರಿನ ಅಭಿವೃದ್ಧಿಯ ಕೊರತೆಯಿಂದಾಗಿ ತಾವು  ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮೀನುಗಾರರು ಅವರಿಗೆ ಮಾಹಿತಿ ನೀಡಿದರು.

ನಂತರ, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪುರುಷೋತ್ತಮ ರೂಪಾಲ ಅವರು ಇತರ ಗಣ್ಯರೊಂದಿಗೆ ಉತ್ತರ ಕನ್ನಡದ ಕರಾವಳಿ ಪ್ರದೇಶದ ಇತರ ಸ್ಥಳಗಳಿಗೆ ಭೇಟಿ ನೀಡಿ ಫಲಾನುಭವಿಗಳು, ಮೀನು ಕೃಷಿಕರು ಮತ್ತು ಮೀನುಗಾರರೊಂದಿಗೆ ಸಂವಾದ ನಡೆಸುವ ಮೂಲಕ ಕಾರ್ಯಕ್ರಮವನ್ನು ಮುಂದುವರೆಸಿದರು. 

ಸುಮಾರು 5,000 ಮೀನುಗಾರರು, ವಿವಿಧ ಮೀನುಗಾರಿಕಾ ಪಾಲುದಾರರು, ವಿದ್ವಾಂಸರು ಸಾಗರ ಪರಿಕ್ರಮ IV ರಲ್ಲಿ ಭಾಗವಹಿಸಿದ್ದರು; ಈ ಸಾಗರ ಪರಿಕ್ರಮವು ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ಮೀನುಗಾರರು ಮತ್ತು ಮೀನುಗಾರರ ಸಮುದಾಯದ  ಜೀವನೋಪಾಯ ಹಾಗು  ಸಮಗ್ರ ಅಭಿವೃದ್ಧಿಯ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ.

'ಸಾಗರ್ ಪರಿಕ್ರಮ'ದ ಮುಖ್ಯ ಉದ್ದೇಶಗಳೆಂದರೆ (i) ಮೀನುಗಾರರು, ಕರಾವಳಿ ಸಮುದಾಯಗಳು ಮತ್ತು ಭಾಗೀದಾರೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುವುದು, ಇದರಿಂದ ಸರ್ಕಾರವು ಜಾರಿಗೆ ತರುತ್ತಿರುವ ವಿವಿಧ ಮೀನುಗಾರಿಕೆ ಸಂಬಂಧಿತ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮಾಹಿತಿಯನ್ನು ಪ್ರಸಾರ ಮಾಡುವುದು; (ii) ಆತ್ಮನಿರ್ಭರ ಭಾರತದ ಸ್ಫೂರ್ತಿಯಾಗಿ ಎಲ್ಲಾ ಮೀನುಗಾರರು, ಮೀನು ಕೃಷಿಕರು ಮತ್ತು ಸಂಬಂಧಪಟ್ಟ ಭಾಗೀದಾರರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವುದು; (iii) ರಾಷ್ಟ್ರದ ಆಹಾರ ಭದ್ರತೆ ಮತ್ತು ಕರಾವಳಿ ಮೀನುಗಾರ ಸಮುದಾಯಗಳ ಜೀವನೋಪಾಯಕ್ಕಾಗಿ ಸಾಗರ ಮೀನುಗಾರಿಕಾ ಸಂಪನ್ಮೂಲಗಳ ಬಳಕೆ ನಡುವೆ ಸುಸ್ಥಿರ ಸಮತೋಲನದ ಮೇಲೆ ಗಮನ ಕೇಂದ್ರೀಕರಿಸಿ ಜವಾಬ್ದಾರಿಯುತ ಮೀನುಗಾರಿಕೆಯನ್ನು ಉತ್ತೇಜಿಸುವುದು ಮತ್ತು (iv) ಸಾಗರ ಪರಿಸರ ವ್ಯವಸ್ಥೆಯ ರಕ್ಷಣೆ. 

ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ, ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಗಳು ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆ, ಗೋವಾ ಸರ್ಕಾರ, ಭಾರತೀಯ ಕೋಸ್ಟ್ ಗಾರ್ಡ್, ಭಾರತೀಯ ಮೀನುಗಾರಿಕಾ ಸರ್ವೇಕ್ಷಣಾ ಇಲಾಖೆ ಮತ್ತು ಮೀನುಗಾರರ ಪ್ರತಿನಿಧಿಗಳು 2023ರ ಮಾರ್ಚ್ 17ರಂದು ಗೋವಾದಲ್ಲಿರುವ ಮೊರ್ಮುಗೋವಾ ಬಂದರಿನಿಂದ ಪ್ರಾರಂಭವಾದ ಸಾಗರ ಪರಿಕ್ರಮ 4 ನೇ ಹಂತದಲ್ಲಿ ಪಾಲ್ಗೊಂಡು ವೀಕ್ಷಿಸುತ್ತಿದ್ದಾರೆ. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪುರುಷೋತ್ತಮ ರೂಪಾಲಾ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಹಾಯಕ ಸಚಿವ ಡಾ.ಎಲ್.ಮುರುಗನ್ ಅವರು ಕಾರ್ಯದರ್ಶಿ (ಮೀನುಗಾರಿಕೆ) ಶ್ರೀ ಜತೀಂದ್ರ ನಾಥ್ ಸ್ವೈನ್ ಐ.ಎ.ಎಸ್.ಅವರ ಉಪಸ್ಥಿತಿಯಲ್ಲಿ ಗೋವಾದ ಮೊರ್ಮುಗೋವಾ ಬಂದರಿನಲ್ಲಿ ಸಾಗರ ಪರಿಕ್ರಮ ಹಂತ -4 ಯಾತ್ರೆಗೆ ಚಾಲನೆ ನೀಡಿದರು. ಉತ್ತರ ಕನ್ನಡ ಕರಾವಳಿಯ ಮೂಲಕ ಸಾಗಿ, 2023 ರ ಮಾರ್ಚ್ 18 ರಂದು ಕಾರವಾರ ಬಂದರಿನ ಹಾದಿಯಾಗಿ  ಮಾಜಾಳಿಯನ್ನು ಅದು ತಲುಪಿತು, ಕರ್ನಾಟಕ ರಾಜ್ಯದ ಉತ್ತರ ಕನ್ನಡದ ಕರಾವಳಿ ಪ್ರದೇಶದಲ್ಲಿ ಪ್ರಯಾಣ ಮುಂದುವರೆಸಿದ ಸಾಗರ ಪರಿಕ್ರಮ ನಾಲ್ಕನೇ ಹಂತವು ಮೂರು ಪ್ರಮುಖ ಕರಾವಳಿ ಜಿಲ್ಲೆಗಳ ಮಾಜಾಲಿ, ಕಾರವಾರ, ಬೆಳಂಬರ, ಮಂಕಿ ಪ್ರದೇಶಗಳನ್ನು ಹಾದು ಮುರುಡೇಶ್ವರ, ಅಳ್ವೆಕೋಡಿಯಂತಹ ಇತರ ಪ್ರದೇಶಗಳ ಮೂಲಕ  ಮುಂದುವರೆಯುತ್ತದೆ.

'ಸಾಗರ್ ಪರಿಕ್ರಮ'ದ ಮೊದಲ ಹಂತದ ಕಾರ್ಯಕ್ರಮವನ್ನು ಗುಜರಾತ್ ನಲ್ಲಿ ಆಯೋಜಿಸಲಾಗಿತ್ತು, ಇದು 2022ರ ಮಾರ್ಚ್ 5 ರಂದು ಮಾಂಡ್ವಿಯಿಂದ ಪ್ರಾರಂಭವಾಯಿತು ಮತ್ತು 2022ರ  ಮಾರ್ಚ್  6 ರಂದು ಗುಜರಾತ್ ನ ಪೋರ್ ಬಂದರ್ ನಲ್ಲಿ ಕೊನೆಗೊಂಡಿತು. ಸಾಗರ ಪರಿಕ್ರಮದ ಎರಡನೇ ಹಂತದ ಕಾರ್ಯಕ್ರಮವು 2022 ರ ಸೆಪ್ಟೆಂಬರ್ 22 ರಂದು ಮಂಗ್ರೋಲ್ ನಿಂದ ವೆರಾವಲ್ ವರೆಗೆ ಸಾಗಿ ಮುಲ್ ದ್ವಾರಕಾದಲ್ಲಿ ಕೊನೆಗೊಂಡಿತು, 2022 ರ ಸೆಪ್ಟೆಂಬರ್ 23 ರಂದು ಮುಲ್ ದ್ವಾರಕಾದಿಂದ ಮಧ್ವಡ್ ವರೆಗೆ ಸಾಗಿತು. 'ಸಾಗರ್ ಪರಿಕ್ರಮ'ದ ಮೂರನೇ ಹಂತದ ಕಾರ್ಯಕ್ರಮವು 2023 ರ ಫೆಬ್ರವರಿ 19 ರಂದು ಗುಜರಾತ್ ನ ಸೂರತ್ ನಿಂದ ಪ್ರಾರಂಭವಾಯಿತು ಮತ್ತು 2023ರ ಫೆಬ್ರವರಿ 21ರಂದು ಮುಂಬೈನ ಸಾಸನ್ ಡಾಕ್ ನಲ್ಲಿ ಕೊನೆಗೊಂಡಿತು. ನಾಲ್ಕನೇ ಹಂತದ ಕಾರ್ಯಕ್ರಮವು 2023 ರ ಮಾರ್ಚ್ 17 ರಂದು ಗೋವಾದ ಮೊರ್ಮುಗಾವೊ ಬಂದರಿನಿಂದ ಪ್ರಾರಂಭವಾಯಿತು ಮತ್ತು 2023ರ ಮಾರ್ಚ್ 19ರಂದು  ಮಂಗಳೂರಿನಲ್ಲಿ ಕೊನೆಗೊಳ್ಳುತ್ತದೆ.

ಸಾಗರ ಪರಿಕ್ರಮವು ಸರ್ಕಾರದ ದೂರಗಾಮಿ ನೀತಿ ಕಾರ್ಯತಂತ್ರವನ್ನು ಪ್ರತಿಬಿಂಬಿಸುವ ಕಾರ್ಯಕ್ರಮವಾಗಿದ್ದು, ಇದು ಕರಾವಳಿ ಪ್ರದೇಶಗಳು ಮತ್ತು ಮೀನುಗಾರರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮೀನುಗಾರರು ಮತ್ತು ಮೀನು ಕೃಷಿಕರೊಂದಿಗೆ ನೇರ ಸಂವಾದಕ್ಕೆ ಅವಕಾಶ ಮಾಡಿಕೊಡುತ್ತದೆ. ಹಂತ 1, 2 ಮತ್ತು 3 ಮೀನುಗಾರರ ಅಭಿವೃದ್ಧಿ ಕಾರ್ಯತಂತ್ರದಲ್ಲಿ ಭಾರಿ ಬದಲಾವಣೆಗಳನ್ನು ತಂದಿವೆ ಮತ್ತು ಮೀನುಗಾರರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಬಗ್ಗೆ ಆಳವಾದ ಒಳನೋಟವನ್ನು ನೀಡಿವೆ. ಸಾಗರ ಪರಿಕ್ರಮ ಹಂತ 4 ಕಾರ್ಯಕ್ರಮವನ್ನು ಮೀನುಗಾರರು ಮತ್ತು ಮೀನು ಕೃಷಿಕರು ಮತ್ತು ಇತರ ಮಧ್ಯಸ್ಥಗಾರರು, ಭಾಗೀದಾರರು ಮುಕ್ತ ಹೃದಯದಿಂದ ಸ್ವಾಗತಿಸುತ್ತಿದ್ದಾರೆ ಮತ್ತು ಅವರು ಇದನ್ನು ಮೀನುಗಾರಿಕೆ ಕ್ಷೇತ್ರದಲ್ಲಿ ತಮ್ಮ ಅಭಿವೃದ್ಧಿಯ ಸಾಧನವಾಗಿ ನೋಡುತ್ತಿದ್ದಾರೆ.

*****



(Release ID: 1908488) Visitor Counter : 112


Read this release in: English , Urdu , Hindi , Marathi