ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ರಾಷ್ಟ್ರೀಯ ಯುವ ಸಂಸತ್ ಉತ್ಸವ (ಎನ್.ವೈ.ಪಿ.ಎಫ್) 2023 ರ 4 ನೇ ಆವೃತ್ತಿಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದರು.
ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳು ಪ್ರತಿಯೊಬ್ಬ ಭಾರತೀಯನ ಜೀವನದ ಅವಿಭಾಜ್ಯ ಅಂಗ: ಲೋಕಸಭಾ ಸ್ಪೀಕರ್
ಅಮೃತ್ ಕಾಲದಿಂದ ಸ್ವರ್ಣಿಮ್ ಕಾಲಕ್ಕೆ ದೇಶವನ್ನು ಕೊಂಡೊಯ್ಯುವುದಕ್ಕಾಗಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರು ಮುಂಚೂಣಿಯಲ್ಲಿರುತ್ತಾರೆ: ಶ್ರೀ ಅನುರಾಗ್ ಠಾಕೂರ್
Posted On:
02 MAR 2023 6:52PM by PIB Bengaluru
ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಇಂದು ಹೊಸದಿಲ್ಲಿಯ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರೀಯ ಯುವ ಸಂಸತ್ ಉತ್ಸವದ (ಎನ್ ವೈಪಿಎಫ್) 4 ನೇ ಆವೃತ್ತಿಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್; ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಸಿತ್ ಪ್ರಮಾಣಿಕ್; ಯುವಜನ ವ್ಯವಹಾರಗಳ ಕಾರ್ಯದರ್ಶಿ ಶ್ರೀಮತಿ ಮೀಟಾ ರಾಜೀವಲೋಚನ್; ಕ್ರೀಡಾ ಕಾರ್ಯದರ್ಶಿ ಶ್ರೀಮತಿ ಸುಜಾತಾ ಚತುರ್ವೇದಿ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಮಾತನಾಡಿದ ಶ್ರೀ ಬಿರ್ಲಾ ಅವರು, ಸಂಸತ್ ಭವನದ ಐತಿಹಾಸಿಕ ಸೆಂಟ್ರಲ್ ಹಾಲ್ ಗೆ ಎಲ್ಲ ಯುವ ಸ್ಪರ್ಧಿಗಳನ್ನು ಸ್ವಾಗತಿಸಿದರಲ್ಲದೆ. ಬ್ರಿಟನ್ ನಿಂದ ಭಾರತಕ್ಕೆ ಅಧಿಕಾರ ಹಸ್ತಾಂತರ ಮತ್ತು ಸಂವಿಧಾನ ರಚನೆ ಸೇರಿದಂತೆ ಅನೇಕ ಐತಿಹಾಸಿಕ ಮತ್ತು ಅದ್ಭುತ ಸಂದರ್ಭಗಳಿಗೆ ಸೆಂಟ್ರಲ್ ಹಾಲ್ ಸಾಕ್ಷಿಯಾಗಿದೆ ಎಂದು ಮಾಹಿತಿ ನೀಡಿದರು. ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ರಚನಾಕಾರರು ದೇಶದ ಸರ್ವೋಚ್ಚ ಕಾನೂನನ್ನು ಅಂದರೆ ಭಾರತದ ಸಂವಿಧಾನವನ್ನು ಇಲ್ಲಿ ಸೆಂಟ್ರಲ್ ಹಾಲ್ ನಲ್ಲಿ ಸಿದ್ಧಪಡಿಸಿದ್ದಾರೆ ಎಂಬುದನ್ನೂ ಅವರು ಉಲ್ಲೇಖಿಸಿದರು.
ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವದ ಮಾತೆಯಾದ ಭಾರತದ ಕೊಡುಗೆಯನ್ನು ಉಲ್ಲೇಖಿಸಿದ ಶ್ರೀ ಬಿರ್ಲಾ, ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ತತ್ವಗಳು ಮತ್ತು ಸಂಸ್ಥೆಗಳು ಅಸ್ತಿತ್ವದಲ್ಲಿವೆ, ಅವು ಆಯಾ ಕಾಲದ ಅಗತ್ಯಗಳಿಗೆ ಅನುಗುಣವಾಗಿ ವಿಕಸನಗೊಂಡಿವೆ ಎಂಬುದನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಪ್ರಾಚೀನ ವೇದ ಕಾಲದಿಂದ ಮಹಾಭಾರತ ಮತ್ತು ಬೌದ್ಧರ ಅವಧಿಯವರೆಗೆ ಭಾರತದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಉಲ್ಲೇಖಗಳಿವೆ ಎಂದೂ ಅವರು ಹೇಳಿದರು. ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು ಭಾರತದ ಮತ್ತು ಅದರ ನಾಗರಿಕರ ಬದುಕಿನ ಅವಿಭಾಜ್ಯ ಅಂಗವಾಗಿವೆ ಎಂದು ಅಭಿಪ್ರಾಯಪಟ್ಟ ಶ್ರೀ ಬಿರ್ಲಾ ಅವರು ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಯುವಜನರನ್ನುದ್ದೇಶಿಸಿ ಮಾತನಾಡಿದ ಶ್ರೀ ಅನುರಾಗ್ ಠಾಕೂರ್, 'ನೀವು ಎಂದರೆ ವರ್ತಮಾನ ಮತ್ತು ನೀವು ಈ ದೇಶದ ಭವಿಷ್ಯವನ್ನು ಸಹ ನಿರ್ಮಿಸುತ್ತೀರಿ” ಎಂದರು. ಅಮೃತ್ ಕಾಲದಿಂದ ಸ್ವರ್ಣಿಮ್ ಕಾಲ್ ಗೆ ದೇಶವನ್ನು ಕೊಂಡೊಯ್ಯಲು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಕರು ಮುಂಚೂಣಿಯಲ್ಲಿರುತ್ತಾರೆ ಎಂದು ಅವರು ಹೇಳಿದರು. ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಪಾದಿಸಿರುವ ಪಂಚ ಪ್ರಾಣಗಳನ್ನು ಎತ್ತಿಹಿಡಿಯಲು ಯುವಕರು ಬದ್ಧರಾಗಿರಬೇಕು ಮತ್ತು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದೂ ಅವರು ಸಲಹೆ ಮಾಡಿದರು.
ಯುವಕರು ಅತಿ ದೊಡ್ಡ ಭಾಗೀದಾರರು, ಪಾಲುದಾರರು ಆಗಿರುವುದರಿಂದ ರಾಷ್ಟ್ರ ನಿರ್ಮಾಣದಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕು ಎಂದವರು ಹೇಳಿದರು. ಡಿಜಿಟಲೀಕರಣ ಮತ್ತು ದತ್ತಾಂಶ ಕ್ರಾಂತಿಯು ಸಾರ್ವಜನಿಕ ಸೇವೆಗಳ ಸಮರ್ಥ ವಿತರಣೆ, ಪಾರದರ್ಶಕತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಾಗರಿಕರ ನಂಬಿಕೆಗೆ ಮುನ್ನುಡಿಯಾಗಿದೆ ಎಂದು ಅವರು ಮಾಹಿತಿ ನೀಡಿದರು. ದುರ್ಬಲ ಐದು ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತ ಈಗ ವಿಶ್ವದ ಅಗ್ರ ಐದು ಆರ್ಥಿಕತೆಗಳಿಗೆ ಪರಿವರ್ತನೆಯಾಗಿದೆ ಎಂದೂ ಅವರು ಹೇಳಿದರು. ನಾವು ನೀತಿ ನಿಷ್ಕ್ರಿಯತೆಯಿಂದ ನೀತಿ ಸುಧಾರಣೆಗಳ ಕಡೆಗೆ ಸಾಗಿದ್ದೇವೆ, ಆತ್ಮನಿರ್ಭರ ಭಾರತದತ್ತ ಸಾಗಿದ್ದೇವೆ ಎಂದು ಅವರು ವಿವರಿಸಿದರು.
ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಬಾಲಕಿಯರು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದ ಕೇಂದ್ರ ಸಚಿವರು, ರಾಷ್ಟ್ರೀಯ ಯುವ ಸಂಸತ್ ಉತ್ಸವದ 85 ರಾಷ್ಟ್ರೀಯ ವಿಜೇತರಲ್ಲಿ 61 ಮಂದಿ ಬಾಲಕಿಯರು ಎಂಬುದರತ್ತಲೂ ಬೆಟ್ಟು ಮಾಡಿದರು.. ಕಳೆದ ವರ್ಷ ಹರಿಯಾಣದಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ 12 ರಾಷ್ಟ್ರೀಯ ದಾಖಲೆಗಳನ್ನು ಮುರಿಯಲಾಗಿದ್ದು, ಅದರಲ್ಲಿ 11 ದಾಖಲೆಗಳನ್ನು ಮುರಿದವರು ಬಾಲಕಿಯರು ಎಂದವರು ಮಾಹಿತಿ ನೀಡಿದರು. ಅದೇ ರೀತಿ, ಮಧ್ಯಪ್ರದೇಶದಲ್ಲಿ, ಮುರಿದ 25 ರಾಷ್ಟ್ರೀಯ ದಾಖಲೆಗಳಲ್ಲಿ, 19 ದಾಖಲೆಗಳನ್ನು ಮುರಿದವರು ಬಾಲಕಿಯರು. ನವೋದ್ಯಮಗಳಲ್ಲಿ ಯುವಜನರ ಕೊಡುಗೆಯೂ ಅಪಾರವಾಗಿದೆ. ಭಾರತದಲ್ಲಿ 90,000 ಕ್ಕೂ ಹೆಚ್ಚು ನವೋದ್ಯಮಗಳಿವೆ. ಅವುಗಳಲ್ಲಿ 107 ಯುನಿಕಾರ್ನ್ ಗಳಾಗಿವೆ. ಭಾರತವು ವಿಶ್ವದ ಅಗ್ರ 3 ನವೋದ್ಯಮ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದೂ ಶ್ರೀ ಅನುರಾಗ್ ಠಾಕೂರ್ ವಿವರಿಸಿದರು.
ಸ್ಪರ್ಧೆಯ ಮೊದಲ ಮೂವರು ವಿಜೇತರಿಗೆ ಲೋಕಸಭೆಯ ಸ್ಪೀಕರ್ ಮುಂದೆ ಮಾತನಾಡುವ ಅವಕಾಶ ದೊರೆಯಿತು, ಅವರು ಈ ಸಂದರ್ಭದಲ್ಲಿ ಯುವಜನರೊಂದಿಗೆ ಸಂವಹನ ನಡೆಸಿದರು. ಉತ್ಸವದ ಮೂವರು ರಾಷ್ಟ್ರೀಯ ವಿಜೇತರು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ರಾಷ್ಟ್ರೀಯ ಯುವ ಸಂಸತ್ ಉತ್ಸವ, 2023 ರ 4 ನೇ ಆವೃತ್ತಿಯನ್ನು "ಉತ್ತಮ ನಾಳೆಗಾಗಿ ಆಲೋಚನೆಗಳು: ವಿಶ್ವಕ್ಕಾಗಿ ಭಾರತ" ಎಂಬ ಶೀರ್ಷಿಕೆಯಡಿ ಪ್ರಾರಂಭಿಸಲಾಯಿತು. 2023 ರ ಜನವರಿ 25 ರಿಂದ 29 ರವರೆಗೆ ಜಿಲ್ಲಾ ಯುವ ಸಂಸತ್ತುಗಳನ್ನು ನಡೆಸಲಾಯಿತು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 748 ಜಿಲ್ಲೆಗಳಿಂದ 2.01 ಲಕ್ಷಕ್ಕೂ ಹೆಚ್ಚು ಯುವಜನರು ದೇಶಾದ್ಯಂತ 150 ಕೇಂದ್ರಗಳಿಗೆ ಬಂದು ಭಾಗವಹಿಸಿದ್ದರು. 2023 ರ ಫೆಬ್ರವರಿ 3 ರಿಂದ 7 ರವರೆಗೆ ನಡೆದ ರಾಜ್ಯ ಯುವ ಸಂಸತ್ ಉತ್ಸವದಲ್ಲಿ ಜಿಲ್ಲಾ ಯುವ ಸಂಸತ್ತಿನಲ್ಲಿ (ಡಿವೈಪಿ) 1 ಮತ್ತು 2 ನೇ ಸ್ಥಾನ ಪಡೆದವರು ಭಾಗವಹಿಸಿದ್ದರು.
ಮುಂಬರುವ ವರ್ಷಗಳಲ್ಲಿ ಸಾರ್ವಜನಿಕ ಸೇವೆಗಳು ಸೇರಿದಂತೆ ವಿವಿಧ ವೃತ್ತಿಜೀವನಕ್ಕೆ ಸೇರುವ ಯುವಜನರ ಧ್ವನಿಯನ್ನು, ಅಭಿಪ್ರಾಯವನ್ನು ಕೇಳುವುದು ರಾಷ್ಟ್ರೀಯ ಯುವ ಸಂಸತ್ ಉತ್ಸವದ (ಎನ್.ವೈ,ಪಿ.ಎಫ್) ಉದ್ದೇಶವಾಗಿದೆ. 2017 ರ ಡಿಸೆಂಬರ್ 31 ರಂದು ಪ್ರಧಾನಿಯವರು ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ನೀಡಿದ ಕಲ್ಪನೆಯನ್ನು ಎನ್.ವೈ,ಪಿ.ಎಫ್ ಆಧರಿಸಿದೆ. ಈ ಕಲ್ಪನೆಯಿಂದ ಸ್ಫೂರ್ತಿ ಪಡೆದು, ಎನ್.ವೈ,ಪಿ.ಎಫ್ 2019 ರ ಮೊದಲ ಆವೃತ್ತಿಯನ್ನು "ನವ ಭಾರತದ ಧ್ವನಿಯಾಗಿರಿ ಮತ್ತು ಪರಿಹಾರಗಳನ್ನು ಹುಡುಕಿ ಹಾಗು ನೀತಿಗೆ ಕೊಡುಗೆ ನೀಡಿ" ಎಂಬ ಶೀರ್ಷಿಕೆಯೊಂದಿಗೆ ಆಯೋಜಿಸಲಾಯಿತು. 88,000 ಯುವಜನರು ಭೌತಿಕವಾಗಿ ಇದರಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಯುವ ಸಂಸತ್ ಉತ್ಸವ 2021 ರ 2 ನೇ ಆವೃತ್ತಿಯನ್ನು "ಯುವಾಹ್- ಉತ್ಸಾ ನಯೇ ಭಾರತ್ ಕಾ" ಎಂಬ ಶೀರ್ಷಿಕೆಯಡಿ ಆಯೋಜಿಸಲಾಗಿತ್ತು, ಇದಕ್ಕೆ ದೇಶಾದ್ಯಂತ 23 ಲಕ್ಷಕ್ಕೂ ಹೆಚ್ಚು ಯುವಜನರು ಮತ್ತು ಪಾಲುದಾರರು ವರ್ಚುವಲ್ ಮಾದರಿಯಲ್ಲಿ ಸಾಕ್ಷಿಯಾದರು. ರಾಷ್ಟ್ರೀಯ ಯುವ ಸಂಸತ್ ಉತ್ಸವ, 2022 ರ 3 ನೇ ಆವೃತ್ತಿಯನ್ನು 2.44 ಲಕ್ಷಕ್ಕೂ ಹೆಚ್ಚು ಯುವಜನರ ಭಾಗವಹಿಸುವಿಕೆಯೊಂದಿಗೆ "ನವ ಭಾರತದ ಧ್ವನಿಯಾಗಿರಿ ಮತ್ತು ಪರಿಹಾರಗಳನ್ನು ಹುಡುಕಿ ಹಾಗು ನೀತಿಗೆ ಕೊಡುಗೆ ನೀಡಿ" ಎಂಬ ಶೀರ್ಷಿಕೆಯಡಿ ಆಯೋಜಿಸಲಾಗಿತ್ತು
****
(Release ID: 1903824)
Visitor Counter : 1793