ಶಿಕ್ಷಣ ಸಚಿವಾಲಯ
azadi ka amrit mahotsav

ಮಹಾರಾಷ್ಟ್ರ ಇಬಿಎಸ್ಬಿ ತಂಡಕ್ಕೆ ಮಣಿಪುರದಲ್ಲಿ ತನ್ನ ಪ್ರವಾಸದ  3 ನೇ ದಿನದಂದು ಲೋಕ್ಟಕ್ ನ ಲೋಕೋತ್ತರ ಸೌಂದರ್ಯದ ಸಂಗೈ ಜಿಂಕೆಯನ್ನು ಅದರ ಮೂಲ ನೈಸರ್ಗಿಕ ಆವಾಸಸ್ಥಾನದಲ್ಲಿ, ಶಾಶ್ವತ ಸೌಂದರ್ಯದಲ್ಲಿ ನೋಡುವ ಅವಕಾಶ ದೊರಕಿದೆ. 

ಪ್ರಕಟಣಾ ದಿನಾಂಕ: 01 MAR 2023 5:49PM by PIB Bengaluru

ಮಣಿಪುರದ ಬಿಷ್ಣುಪುರ ಜಿಲ್ಲೆಯ ವಿಶ್ವದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವನವಾದ ಕೀಬುಲ್ ಲಾಮ್ಜಾವೊ ರಾಷ್ಟ್ರೀಯ ಉದ್ಯಾನವನದಲ್ಲಿ ಮಹಾರಾಷ್ಟ್ರ ಇಬಿಎಸ್ಬಿ ತಂಡಕ್ಕೆ ಬುಧವಾರ ಹುಬ್ಬು ಕೊಂಬಿನ  ಜಿಂಕೆ ಸಂಗೈ ಯನ್ನು ನೋಡುವ ಅಪೂರ್ವ  ಅವಕಾಶ ಸಿಕ್ಕಿತು.

ದಕ್ಷಿಣ ಏಷ್ಯಾದ ಅತಿದೊಡ್ಡ ಸಿಹಿನೀರಿನ ಸರೋವರಗಳಲ್ಲಿ ಒಂದಾದ ಲೋಕ್ಟಕ್ ಸರೋವರದ ಸೌಂದರ್ಯದಿಂದ ತಂಡದ ಸದಸ್ಯರು  ಮಂತ್ರಮುಗ್ಧರಾದರು, ಇದರ ದಕ್ಷಿಣ ಭಾಗದಲ್ಲಿ  ಕೀಬುಲ್ ಲಾಮ್ಜಾವೊ ರಾಷ್ಟ್ರೀಯ ಉದ್ಯಾನವಿದೆ.

ಮಹಾರಾಷ್ಟ್ರದ ನಾಗ್ಪುರದ 50 ಮಂದಿ ವಿದ್ಯಾರ್ಥಿಗಳು ಮೂವರು ಅಧ್ಯಾಪಕರು ಮತ್ತು ನಾಲ್ಕು ಮಂದಿ ವಿದ್ಯಾರ್ಥಿ ಸ್ವಯಂಸೇವಕರೊಂದಿಗೆ ಲೋಕ್ಟಕ್  ಸರೋವರ ಮತ್ತು ತೇಲುವ ಕೀಬುಲ್ ಲಾಮ್ಜಾವೊ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ.ವಾರಾವಧಿಯ ಪ್ರವಾಸದ ಮೂರನೇ ದಿನದಂದು ಅವರಿಗೆ ಈ ಸೌಂದರ್ಯದ ದರ್ಶನವಾಗಿದೆ. 

ಲೋಕ್ಟಕ್ ಅಭಿವೃದ್ಧಿ ಪ್ರಾಧಿಕಾರದ (ಎಲ್ಡಿಎ) ಅಧ್ಯಕ್ಷ ಎಂ.ಅಸ್ನಿಕುಮಾರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ, ತಂಡವು ಸಂಗೈ ಜಿಂಕೆಯನ್ನು ಅದರ ಮೂಲ ನೈಸರ್ಗಿಕ ಆವಾಸಸ್ಥಾನದಲ್ಲಿ ನೋಡಲು ಮುಂಜಾನೆ ರಾಷ್ಟ್ರೀಯ ಉದ್ಯಾನವನವನ್ನು ತಲುಪಿತ್ತು.

Image

ಅಸ್ನಿಕುಮಾರ್ ಸ್ವತಃ ಮಹಾರಾಷ್ಟ್ರ ಇಬಿಎಸ್ಬಿ ತಂಡವನ್ನು ದೋಣಿ ಮೂಲಕ ಸರೋವರದಲ್ಲಿ ಸುತ್ತಾಡಿಸಿದರು  ಹಾಗು  ಲೋಕ್ಟಕ್, ಕೀಬುಲ್ ಲಮ್ಜಾವೊ ರಾಷ್ಟ್ರೀಯ ಉದ್ಯಾನ ಮತ್ತು ಸುತ್ತಮುತ್ತಲಿನ ಸ್ಥಳಗಳನ್ನು ತೋರಿಸಿದರು. ಅವರು ಸ್ಥಳೀಯ ಪಾಕ ಪದ್ಧತಿಗಳ ಆಹಾರ, ದೋಣಿ ವಿಹಾರ ಮತ್ತು ಆ ಪ್ರದೇಶದ ಸಾರಿಗೆ ಸೌಲಭ್ಯ ಸಹಿತ  ಎಲ್ಲಾ ವ್ಯವಸ್ಥೆಗಳನ್ನೂ  ಒದಗಿಸಿದರು. 

ಲೋಕ್ಟಕ್,  ಸರೋವರದ ಸೌಂದರ್ಯದಿಂದ ಮಂತ್ರಮುಗ್ಧರಾದ ಮತ್ತು ಸಂಗೈ ಜಿಂಕೆಯನ್ನು ಅದರ ನೈಸರ್ಗಿಕ ಆವಾಸಸ್ಥಾನದಲ್ಲಿ ನೋಡಿ ರೋಮಾಂಚನಗೊಂಡ  ವಿದ್ಯಾರ್ಥಿಗಳು ಅಧ್ಯಕ್ಷರಿಗೆ ತಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಅವರು ಭಾರತದ ಅತಿದೊಡ್ಡ ಸಿಹಿನೀರಿನ ಸರೋವರದ ಪ್ರಶಾಂತ ಸೌಂದರ್ಯಕ್ಕೆ ಮಾರುಹೋದರು..

Image

ಒಬ್ಬ ವಿದ್ಯಾರ್ಥಿಯು ತಾನು ಮಣಿಪುರದ ಬಗ್ಗೆ ಕೇಳಿದ್ದೇನೆ, ಆದರೆ ಲೋಕ್ಟಕ್ ಸರೋವರ ಮತ್ತು ಕೀಬುಲ್ ಲಾಮ್ಜಾವೊ ರಾಷ್ಟ್ರೀಯ ಉದ್ಯಾನದ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದರು. 

ಸುಂದರವಾದ ಮತ್ತು ಅದ್ಭುತವಾದ ಲೋಕ್ಟಕ್ ಸರೋವರ ಮತ್ತು ತೇಲುವ ರಾಷ್ಟ್ರೀಯ ಉದ್ಯಾನವನ್ನು ವೀಕ್ಷಿಸಲು ಮತ್ತು ಸ್ಥಳೀಯ ಪಾಕಪದ್ಧತಿಗಳನ್ನು ಸವಿಯಲು ಅವಕಾಶ ನೀಡಿದ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಎಲ್ಡಿಎ ಅಧ್ಯಕ್ಷ ಎಂ ಅಸ್ನಿಕುಮಾರ್ ಸಿಂಗ್ ಅವರನ್ನು  ಆ ವಿದ್ಯಾರ್ಥಿಗಳು ಶ್ಲಾಘಿಸಿದರು.

" ಇಂತಹ ಅದ್ಭುತ ಕಾರ್ಯಕ್ರಮವನ್ನು ಸಂಯೋಜಿಸಿದ್ದಕ್ಕಾಗಿ ನಾನು ಐಐಐಟಿ ಮಣಿಪುರಕ್ಕೆ ಧನ್ಯವಾದ ಅರ್ಪಿಸುತ್ತೇನೆ" ಎಂದು ಅವರು ಹೇಳಿದರು.

ಭಾರತ ಸರ್ಕಾರದ ಪ್ರಾಯೋಗಿಕ ಚಾಲನಾ (ಪೈಲೆಟ್) ಉಪಕ್ರಮವಾದ ಏಕ್ ಭಾರತ್ ಶ್ರೇಷ್ಠ ಭಾರತ್ (ಇಬಿಎಸ್ಬಿ) ಅಡಿಯಲ್ಲಿ ಮಹಾರಾಷ್ಟ್ರದ ನಾಗ್ಪುರದಿಂದ ಮೂರು ಅಧ್ಯಾಪಕರು ಮತ್ತು ನಾಲ್ಕು ವಿದ್ಯಾರ್ಥಿ ಸ್ವಯಂಸೇವಕರೊಂದಿಗೆ 50 ವಿದ್ಯಾರ್ಥಿಗಳ ತಂಡವು ಸೋಮವಾರ (ಫೆಬ್ರವರಿ 27) ಮಣಿಪುರಕ್ಕೆ ಒಂದು ವಾರದ ಪ್ರವಾಸಕ್ಕಾಗಿ ಇಂಫಾಲಾಕ್ಕೆ  ಆಗಮಿಸಿದೆ.

ಕಾರ್ಯಕ್ರಮದ ಎರಡನೇ ದಿನದಂದು, ತಂಡವು ಇಂಫಾಲ ಮತ್ತು ಅದರ ಹೊರವಲಯದಲ್ಲಿರುವ ವಿವಿಧ ಐತಿಹಾಸಿಕ ಮಹತ್ವದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿತು.

ಇಂದು, ಪ್ರವಾಸದ ಮೂರನೇ ದಿನ, ಲೋಕ್ಟಕ್ ಸರೋವರದ ಸೌಂದರ್ಯವನ್ನು ಸವಿದ ನಂತರ, ತಂಡವು ಮೊಯಿರಾಂಗ್ನಲ್ಲಿರುವ ಐಎನ್ಎ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿತು, ಅಲ್ಲಿಂದ ಮೊಯಿರಾಂಗ್ ಖುನೌನಲ್ಲಿರುವ ಸಂಗೈ ಎಥ್ನಿಕ್ ಪಾರ್ಕಿಗೆ  ತೆರಳುವ ಮೊದಲು ಐಎನ್ಎ ಪ್ರಧಾನ ಕಚೇರಿಗೆ ತೆರಳಿತು.

ಇಂಫಾಲಾಕ್ಕೆ  ಹಿಂದಿರುಗುವಾಗ, ತಂಡವು ಮೈಬಾಮ್ ಲೋಕ್ಪಾ ಚಿಂಗ್ನಲ್ಲಿರುವ ಇಂಫಾಲಾ ಶಾಂತಿ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿತು ಮತ್ತು ನಂತರ ಇಂಫಾಲದ  ಸಂಗೈಪ್ರೌನಲ್ಲಿರುವ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿತು.  ಇಂಫಾಲದ ಅರಮನೆ ಆವರಣದಲ್ಲಿರುವ  ಗೋವಿಂದ ಜೀ  ದೇವಸ್ಥಾನದಲ್ಲಿ ದಿನದ ದೃಶ್ಯವೀಕ್ಷಣೆ ಮೂಲಕ ಅವರ ಪ್ರವಾಸ ಕೊನೆಗೊಂಡಿತು, ಅಲ್ಲಿ ತಂಡದ ಸದಸ್ಯರು ಆರತಿಯನ್ನು ಸ್ವೀಕರಿಸಿದರು.  

ಮಣಿಪುರಿ ವಿದ್ಯಾರ್ಥಿಗಳು ತಮ್ಮ ರಾಜ್ಯಕ್ಕೆ (ಮಹಾರಾಷ್ಟ್ರ) ಇತ್ತೀಚೆಗೆ ನೀಡಿದ ಭೇಟಿಗೆ ಪ್ರತಿಯಾಗಿ ಮಹಾರಾಷ್ಟ್ರ ತಂಡವು ಇಲ್ಲಿಗೆ ಆಗಮಿಸಿದೆ ಮತ್ತು ಮಾರ್ಚ್ 3 ರಂದು ಇಂಫಾಲ್ ನಿಂದ ಮಹಾರಾಷ್ಟ್ರಕ್ಕೆ ಮರಳಲಿದೆ.

***


(ಪ್ರಕಟಣೆ ಐ.ಡಿ.: 1903501) ವಿಸಿಟರ್ ಕೌಂಟರ್ : 138
ಪ್ರಕಟಣೆಯನ್ನು ಇದರಲ್ಲಿ ಓದಿ: English , Manipuri