ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav g20-india-2023

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಅವರ ಉಪಸ್ಥಿತಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಹಾಗು ರಸಗೊಬ್ಬರ ಸಚಿವ ಡಾ. ಮನ್ಸುಖ್ ಮಾಂಡವೀಯ ಅವರು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ) ಕುರಿತು ಆಳವಾದ ಸಹಯೋಗಕ್ಕಾಗಿ ಭಾರತದಲ್ಲಿಯ ಮಿಷನ್ ಗಳ ಮುಖ್ಯಸ್ಥರೊಂದಿಗೆ ಚರ್ಚಿಸಿದರು.


ವಿಶ್ವಾದ್ಯಂತ ಉತ್ಪಾದನೆಯಾಗುತ್ತಿರುವ ಪ್ರತಿ ಐದು ಜೆನೆರಿಕ್ ಮಾತ್ರೆಗಳಲ್ಲಿ ಒಂದನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ: ಡಾ.ಮನ್ಸುಖ್ ಮಾಂಡವೀಯಾ

"ಜನೌಷಧಿ ಕೇಂದ್ರಗಳು ಜನಸಮೂಹಕ್ಕೆ  ಜೆನೆರಿಕ್ ಔಷಧಿಗಳನ್ನು ಮಾರುಕಟ್ಟೆ ಬೆಲೆಗಿಂತ 50% - 80% ಕಡಿಮೆ ದರದಲ್ಲಿ ಒದಗಿಸುತ್ತವೆ"

ಕಳೆದ 8 ವರ್ಷಗಳಲ್ಲಿ ಮಳಿಗೆಗಳ ಸಂಖ್ಯೆ ಮತ್ತು ಮಾರಾಟದ ಪ್ರಮಾಣವು 100ಕ್ಕೂ ಅಧಿಕ ಪಟ್ಟು ಹೆಚ್ಚಾಗಿದೆ

ಪ್ರತಿದಿನ ಸರಾಸರಿ 1.2 ಮಿಲಿಯನ್ ಜನರು ಜನೌಷಧಿ ಮಳಿಗೆಗಳಿಗೆ ಭೇಟಿ ನೀಡುತ್ತಾರೆ.

ಆರೋಗ್ಯ ವೆಚ್ಚವು ಆಡಳಿತ ಮತ್ತು ಸಮೃದ್ಧಿಯ ಕೇಂದ್ರಬಿಂದುವಾಗಿದೆ; ಕೈಗೆಟುಕುವ ದರ, ಸುಲಭ ಲಭ್ಯತೆ ಮತ್ತು ಔಷಧಿಗಳ ಲಭ್ಯತೆಯ ಟ್ರಿಪಲ್ ಎ ಸಂಪರ್ಕದ ಬಗ್ಗೆ ದೇಶಗಳು ಗಮನ ಹರಿಸಬೇಕಾಗಿದೆ: ಡಾ.ಎಸ್.ಜೈಶಂಕರ್

Posted On: 24 FEB 2023 7:28PM by PIB Bengaluru

"ಭಾರತದ 'ವಸುದೈವ ಕುಟುಂಬಕಂ' ನೀತಿಗೆ ಅನುಗುಣವಾಗಿ, ಭಾರತೀಯ ಔಷಧೀಯ ಉದ್ಯಮವು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಸಮಂಜಸವಾದ ಕಡಿಮೆ ಬೆಲೆಯಲ್ಲಿ ಸಾಮೂಹಿಕ ಬಳಕೆಯ ಉತ್ತಮ ಗುಣಮಟ್ಟದ ಔಷಧಿಗಳ ಹೇರಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು  ಹಾಗು ಮಾನವಕುಲದ ಹೆಚ್ಚಿನ ಒಳಿತಿಗಾಗಿ ಕೊಡುಗೆ ನೀಡಲು ದಣಿವರಿಯದೆ ನಿರಂತರವಾಗಿ ಶ್ರಮಿಸುತ್ತಿದೆ. ಪಾಲುದಾರ ರಾಷ್ಟ್ರಗಳೊಂದಿಗೆ ಕೆಲಸ ಮಾಡುವ ಭಾರತದ ದೃಢವಾದ ಬದ್ಧತೆಯು ರೋಮಾಂಚಕ ಸಂಬಂಧಗಳನ್ನು ಸೃಷ್ಟಿಸುವಲ್ಲಿ ಮತ್ತು ಈ ಸಹಯೋಗವನ್ನು ಕೇವಲ ವ್ಯಾಪಾರದಿಂದ ಜನ ಕಲ್ಯಾಣಕ್ಕೆ ಪರಿವರ್ತಿಸಿ ಅದನ್ನು ಮತ್ತಷ್ಟು ನಿಕಟಗೊಳಿಸುವಲ್ಲಿ ನಮ್ಮ ಸಮರ್ಪಣ ಭಾವವನ್ನು ತೋರಿಸುತ್ತದೆ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು  ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಾ.ಮನ್ಸುಖ್ ಮಾಂಡವೀಯ ಹೇಳಿದ್ದಾರೆ. ಅವರು ಇಂದು ಇಲ್ಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರ ಉಪಸ್ಥಿತಿಯಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಕುರಿತು ಸುಮಾರು 100 ಪಾಲುದಾರ ದೇಶಗಳ ವಿದೇಶಿ ನಿಯೋಗಗಳ ಮುಖ್ಯಸ್ಥರೊಂದಿಗೆ ಸಂವಾದ ನಡೆಸುವಾಗ ಈ ವಿಷಯ ತಿಳಿಸಿದರು.

ತಮ್ಮ ಮಾತುಗಳನ್ನು ಮುಂದುವರೆಸಿದ  ಡಾ. ಮಾಂಡವೀಯಾ, ವಿಶೇಷವಾಗಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದ ನಂತರ ವಿಶ್ವದಾದ್ಯಂತ ಆರೋಗ್ಯ ಮತ್ತು ಫಾರ್ಮಾದಂತಹ (ಔಷಧಿ ತಯಾರಿಕೆಯ ) ಕ್ಷೇತ್ರಗಳನ್ನು ಸುಧಾರಿಸುವ ಅಗತ್ಯ ಹೆಚ್ಚಾಗಿದೆ ಎಂಬುದನ್ನು  ಪುನರುಚ್ಚರಿಸಿದರು. ಜೆನೆರಿಕ್ ಗಳಲ್ಲಿ ವಿಶ್ವದಾದ್ಯಂತ ಭಾರತದ ಬಲಿಷ್ಟ ಉಪಸ್ಥಿತಿಯನ್ನು ಒತ್ತಿಹೇಳಿದ ಡಾ.ಮಾಂಡವೀಯಾ, "ಭಾರತವನ್ನು ವಿಶ್ವದ ಫಾರ್ಮಸಿ ಎಂದು ಸರಿಯಾಗಿ ಕರೆಯಲಾಗುತ್ತದೆ. 50% ರಫ್ತು ಜೊತೆ ವಿಶ್ವಾದ್ಯಂತ ಪ್ರತಿ ಐದು ಜೆನೆರಿಕ್ ಮಾತ್ರೆಗಳಲ್ಲಿ ಒಂದನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದ್ದು, ಪ್ರಪಂಚದಾದ್ಯಂತದ ಅನೇಕ ದೇಶಗಳ ಜನರಿಗೆ ಔಷಧಿಗಳನ್ನು ಕೈಗೆಟುಕುವಂತೆ ಮಾಡಲು ನಾವು ದೊಡ್ಡ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದೇವೆ ಎಂದರು.  ಭಾರತದ ಅತ್ಯುತ್ತಮ ಪದ್ಧತಿಗಳನ್ನು ವೀಕ್ಷಿಸುವಂತೆ  ಮತ್ತು ಅವರ  ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅವುಗಳನ್ನು ತಮ್ಮ ದೇಶಗಳಲ್ಲಿ ಸ್ವಯಂಪ್ರೇರಣೆಯಿಂದ ಜಾರಿಗೆ ತರುವಂತೆ ಅವರು ದೇಶಗಳಿಗೆ ಆಹ್ವಾನ ನೀಡಿದರು. "ನಮ್ಮ ನಾಗರಿಕರಿಗೆ ಮತ್ತು ಜಗತ್ತಿಗೆ ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳ ಲಭ್ಯತೆ ಮತ್ತು ಕೈಗೆಟುಕುವ ದರದಲ್ಲಿ ಲಭ್ಯತೆ,  ಸಮಾನ ಲಭ್ಯತೆ, ಒಳಗೊಳ್ಳುವಿಕೆಯನ್ನು ಸುಧಾರಿಸುವತ್ತ ಗಮನ ಹರಿಸುವುದು" ಭಾರತದ ಗುರಿಯಾಗಿದೆ ಎಂದೂ  ಅವರು ಒತ್ತಿ ಹೇಳಿದರು.

ಪ್ರಧಾನಮಂತ್ರಿಯವರ ದೂರಗಾಮಿ ಚಿಂತನೆಯ ದೃಷ್ಟಿಕೋನಕ್ಕೆ ಅನುಗುಣವಾಗಿ, 2014 ರಿಂದ ವಿವಿಧ ಆರೋಗ್ಯ ಕಾರ್ಯಕ್ರಮಗಳು ಮತ್ತು ಉಪಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಗದುರಹಿತ ಚಿಕಿತ್ಸೆ, ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ (ಎಬಿ-ಎಚ್ಡಬ್ಲ್ಯೂಸಿ) ಸ್ಥಾಪನೆ ಮತ್ತು ಜನೌಷಧಿ ಪರಿಯೋಜನೆ ಮೂಲಕ ಜೆನೆರಿಕ್ ಔಷಧಿಗಳನ್ನು ಜನಪ್ರಿಯಗೊಳಿಸುವಂತಹ ಮಧ್ಯಪ್ರವೇಶಗಳ  ಮೂಲಕ ಕೈಗೆಟುಕುವ ದರದಲ್ಲಿ  ಆರೋಗ್ಯ ರಕ್ಷಣೆಯನ್ನು ಒದಗಿಸಲು ಸರ್ಕಾರ ಶ್ರಮಿಸಿದೆ ಎಂದೂ  ಅವರು ಹೇಳಿದರು.

ಜನೌಷಧಿ ಪರಿಯೋಜನೆಯ ಪ್ರಯೋಜನಗಳನ್ನು ಪುನರುಚ್ಚರಿಸಿದ ಕೇಂದ್ರ ಆರೋಗ್ಯ ಸಚಿವರು, "ಈ ಪ್ರಮುಖ ಕಾರ್ಯಕ್ರಮವು ಸಾಮಾನ್ಯ ಜನರಿಗೆ,  ವಿಶೇಷವಾಗಿ ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸಲು ಶ್ರಮಿಸುತ್ತದೆ, ಅದೂ ವಾಣಿಜ್ಯ ಮಾರುಕಟ್ಟೆಗಿಂತ 50% -80% ಕಡಿಮೆ ಬೆಲೆಗೆ ಔಷಧಿಗಳನ್ನು ಲಭ್ಯವಾಗಿಸುತ್ತದೆ" ಎಂದು ಹೇಳಿದರು. ಈ ಪ್ರಯೋಜನಗಳ ಜೊತೆಗೆ, "ಜನೌಷಧಿ ಪರಿಯೋಜನೆಯು ಉದ್ಯಮಿಗಳಿಗೆ ಚಿಲ್ಲರೆ ವ್ಯವಹಾರಗಳನ್ನು ಪ್ರಾರಂಭಿಸಲು ಒಂದು ಮೂಲವಾಗಿದೆ, ನಾಗರಿಕರಿಗೆ ವ್ಯಾಪಕ ಪ್ರಯೋಜನವನ್ನು ಒದಗಿಸುತ್ತದೆ ಮತ್ತು ಸರ್ಕಾರಗಳಿಗೆ ಬಜೆಟ್ ಬೆಂಬಲ ಅವಶ್ಯಕತೆಯನ್ನು ಕಡಿಮೆ ಮಾಡುತ್ತದೆ " ಎಂದು ಡಾ.ಮಾಂಡವೀಯಾ ಹೇಳಿದರು.

ಈ ಕಾರ್ಯಕ್ರಮದಿಂದ ಆಗುವ  ಪ್ರಯೋಜನಗಳ ಬಗ್ಗೆ ಪ್ರಸ್ತಾಪಿಸಿದ  ಡಾ. ಮಾಂಡವೀಯಾ, ಈ ಮಾದರಿಯನ್ನು ಇತರ ದೇಶಗಳಲ್ಲಿ ಪುನರಾವರ್ತಿಸುವ ಸಾಧ್ಯತೆಯ ಬಗ್ಗೆಯೂ  ವಿವರಿಸಿದರು. ಪ್ರಾಯೋಗಿಕವಾಗಿ, ಭಾರತೀಯ ಔಷಧ ರಫ್ತುದಾರರೊಂದಿಗೆ ಸಂಪರ್ಕವನ್ನು ಸ್ಥಾಪಿಸುವ ಮೂಲಕ ತ್ವರಿತವಾಗಿ ಬಿಕರಿಯಾಗುವ 50  ಔಷಧಿಗಳ ಖರೀದಿಯನ್ನು ಒಂದು ಮಾದರಿ ಯೋಜನೆಯ ರೀತಿಯಲ್ಲಿ ಮಾಡಬಹುದು. ಇದೇ ರೀತಿಯ ಐಟಿ ಮತ್ತು ಪೂರೈಕೆ ಸರಪಳಿ ವ್ಯವಸ್ಥೆಗಳು, ಪ್ರಚಾರ ತಂತ್ರಗಳನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಬಹುದು. ಇದೇ ರೀತಿಯ ಮಧ್ಯಪ್ರವೇಶದ ಮೂಲಕ ದೇಶಗಳು ತಮ್ಮ ನಾಗರಿಕರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಜೆನೆರಿಕ್ ಔಷಧಿಗಳ ಲಭ್ಯತೆಯನ್ನು  ಒದಗಿಸಬಹುದು, ಇದು ಹೆಚ್ಚಿನ ವೆಚ್ಚದ ಪೇಟೆಂಟ್ ಪಡೆದ ಔಷಧಿಗಳ ಆಮದು ಅವಲಂಬನೆಯಿಂದ ಅವರನ್ನು ಪಾರು ಮಾಡುತ್ತದೆ, ಅವರ ಜನರ ಕಲ್ಯಾಣವನ್ನು ಗರಿಷ್ಠಗೊಳಿಸುತ್ತದೆ, ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಕುಟುಂಬಗಳಿಗೆ ಆರ್ಥಿಕ ಲಾಭವನ್ನು ತರುತ್ತದೆ ಎಂಬುದರತ್ತಲೂ  ಅವರು ಗಮನಸೆಳೆದರು.

ಜಾಗತೀಕರಣದಲ್ಲಿ ಆರೋಗ್ಯದ ಅಂಶದ ಬಗ್ಗೆ ಬೆಳಕು ಚೆಲ್ಲಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್, "ಆರೋಗ್ಯ ವೆಚ್ಚವು ಆಡಳಿತ ಮತ್ತು ಸಮೃದ್ಧಿಯ ಕೇಂದ್ರಬಿಂದುವಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಸಹ, ಆದಾಯದ ಅಸಮಾನತೆಯನ್ನು ಗಮನಿಸಿದರೆ, ಆರೋಗ್ಯವನ್ನು ಹೇಗೆ ಸರ್ವ ಲಭ್ಯ ಮಾಡಬಹುದು  ಎಂಬುದರ ಕುರಿತು ಇಡೀ ಜಾಗತಿಕ ಚರ್ಚೆಯು ನಮ್ಮನ್ನು ಒಟ್ಟುಗೂಡಿಸಿದೆ”  ಎಂದರು. " ಈ ಜಾಗತೀಕರಣದ ಜಗತ್ತಿನಲ್ಲಿ, ಕೈಗೆಟಕುವ ದರ, ಸಮಾನ ಲಭ್ಯತೆ,  ಮತ್ತು ಸರ್ವ ವ್ಯಾಪ್ತಿಯ ಲಭ್ಯತೆಯ "ಟ್ರಿಪಲ್ ಎ ಲಿಂಕ್" ಕುರಿತಂತೆ  ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂಬುದರತ್ತ ಅವರು ಬೆಟ್ಟು ಮಾಡಿದರು. ಜಾಗತಿಕ ಸಾಂಕ್ರಾಮಿಕ ಅವಧಿಯಲ್ಲಿ ಕಂಡುಬಂದ ಜಾಗತಿಕ ಪರಸ್ಪರ ಅವಲಂಬನೆ, ಅಂತರ-ಸಂಪರ್ಕಗಳು ಎಲ್ಲರಿಗೂ ಪರಿಹಾರಗಳನ್ನು ಒದಗಿಸಬಲ್ಲವು  ಎಂಬ ಭರವಸೆಯನ್ನು ಅವರು  ವ್ಯಕ್ತಪಡಿಸಿದರು. ಸಹಭಾಗೀ  ದೇಶಗಳಲ್ಲಿ ಜನೌಷಧಿ ಪರಿಯೋಜನೆಗೆ ಹೋಲುವಂತಹ  ಸಾರ್ವಜನಿಕ ಕೇಂದ್ರಿತ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಪಾಲುದಾರ ರಾಷ್ಟ್ರಗಳಿಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿಯೂ ಡಾ.ಎಸ್.ಜೈಶಂಕರ್ ಹೇಳಿದರು. 

ವಿವರವಾದ ಪ್ರಸ್ತುತಿಯ ಮೂಲಕ, ಯೋಜನೆಯ ಸಣ್ಣ ಸಣ್ಣ  ವಿವರಗಳನ್ನು ಪ್ರದರ್ಶಿಕೆಯ ಮೂಲಕ ವಿವರಿಸಲಾಯಿತು. . ಜನೌಷಧಿ ಕೇಂದ್ರಗಳಲ್ಲಿ 1759ಕ್ಕೂ ಅಧಿಕ  ಔಷಧಿಗಳು (40+ ಪ್ರಮುಖ ಚಿಕಿತ್ಸಕ ಗುಂಪುಗಳು) ಮತ್ತು 280 ಶಸ್ತ್ರಚಿಕಿತ್ಸಾ ಉಪಕರಣಗಳು ಮತ್ತು ಬಳಕೆ ವಸ್ತುಗಳು ಲಭ್ಯವಿವೆ.

ಕಳೆದ 8 ವರ್ಷಗಳಲ್ಲಿ ಮಳಿಗೆಗಳ ಸಂಖ್ಯೆ ಮತ್ತು ಮಾರಾಟದ ಪ್ರಮಾಣವು 100 ಪಟ್ಟು ಹೆಚ್ಚಾಗಿದೆ. ಪ್ರತಿದಿನ ಸರಾಸರಿ 1.2 ಮಿಲಿಯನ್ ಜನರು ಜನೌಷಧಿ ಮಳಿಗೆಗಳಿಗೆ ಭೇಟಿ ನೀಡುತ್ತಾರೆ. ಪಿಎಂಬಿಜೆಪಿಯ ಪ್ರಮುಖ ಯಶಸ್ಸಿನ ಅಂಶಗಳಲ್ಲಿ ಉತ್ಪನ್ನಗಳಲ್ಲಿ ಗುಣಮಟ್ಟದ ಭರವಸೆ, ಪರಿಣಾಮಕಾರಿ ದಕ್ಷತೆಯ ಲಾಜಿಸ್ಟಿಕ್ಸ್, ಉದ್ಯಮಿಗಳಿಗೆ ಪ್ರೋತ್ಸಾಹಧನ, ವ್ಯಾಪಕ ಉತ್ಪನ್ನ ಶ್ರೇಣಿ, ನಿರಂತರ ಸಂವಹನ ಮತ್ತು ಜಾಗೃತಿ, ಹಾಗು ನಾಗರಿಕರಿಗೆ ಉಳಿತಾಯಗಳು  ಒಳಗೊಂಡಿವೆ. 

Image

ಜನೌಷಧಿ ಕೇಂದ್ರಗಳು ಕಳೆದ 8 ವರ್ಷಗಳಲ್ಲಿ ಸುಮಾರು 20,000 ಕೋಟಿ ರೂ.ಗಳ (2 ಬಿಲಿಯನ್ ಅಮೆರಿಕನ್ ಡಾಲರ್ ಗಿಂತಲೂ ಹೆಚ್ಚು) ಮೊತ್ತವನ್ನು ಫಲಾನುಭವಿಗಳ ಜೇಬಿನಿಂದ ಹೊರಗೆ ಹೋಗುವುದನ್ನು ತಡೆದು ಖರ್ಚುವೆಚ್ಚಗಳಲ್ಲಿ ಭಾರಿ ಉಳಿತಾಯ ಮಾಡಿವೆ.

ಮಿಷನ್ ಮುಖ್ಯಸ್ಥರು ತಮ್ಮ ದೇಶಗಳಲ್ಲಿ ಖರೀದಿ, ಸಂಶೋಧನೆ, ಕೌಶಲ್ಯ ಅಭಿವೃದ್ಧಿ, ಔಷಧೀಯ ಉತ್ಪಾದನೆಗಾಗಿ ಸಕ್ರಿಯ ಸಹಯೋಗದ ಮಾರ್ಗಗಳು ಮತ್ತು ವಿಧಾನಗಳ ಬಗ್ಗೆ ಚರ್ಚಿಸಿದರು. 7 ಪ್ರಮುಖ ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಿರುವುದರ ಬಗ್ಗೆಯೂ  ಗಮನ ಸೆಳೆಯಲಾಯಿತು. ಆಸಕ್ತ ದೇಶಗಳು ಎನ್ಐಪಿಇಆರ್ ಗಳೊಂದಿಗೆ ಸಾಂಸ್ಥಿಕ ಸಹಯೋಗದ ಅವಕಾಶಗಳನ್ನು ಅನ್ವೇಷಿಸಬಹುದು.

ಈ ಸಂವಾದದಲ್ಲಿ ಫಾರ್ಮಾಸ್ಯುಟಿಕಲ್ಸ್ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಎಸ್.ಅಪರ್ಣಾ, ಎಂಇಎ ವಿಶೇಷ ಕಾರ್ಯದರ್ಶಿ ಶ್ರೀ ಪ್ರಭಾತ್ ಕುಮಾರ್ ಮತ್ತು ಎಂಒಎಚ್ಎಫ್ ಡಬ್ಲ್ಯು ಹಾಗು ಎಂಇಎ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

****



(Release ID: 1902299) Visitor Counter : 143


Read this release in: English , Hindi