ಕಲ್ಲಿದ್ದಲು ಸಚಿವಾಲಯ

ಸುಸ್ಥಿರ ಕಲ್ಲಿದ್ದಲು ಗಣಿಗಾರಿಕೆಯನ್ನು ಖಾತರಿಪಡಿಸಲು ವೈವಿಧ್ಯಮಯ ಕ್ರಮಗಳು 

Posted On: 13 FEB 2023 3:37PM by PIB Bengaluru

ಸುಸ್ಥಿರ ಕಲ್ಲಿದ್ದಲು ಗಣಿಗಾರಿಕೆಗಾಗಿ ಸಾರ್ವಜನಿಕ ವಲಯದ ಕಲ್ಲಿದ್ದಲು ಸಂಸ್ಥೆಗಳು (ʻಪಿಎಸ್‌ಯುʼಗಳು) ಅಳವಡಿಸಿಕೊಂಡ ಅತ್ಯುತ್ತಮ ಕಾರ್ಯವಿಧಾನಗಳು ಈ ಕೆಳಗಿನಂತಿವೆ: 

1.       ಜೈವಿಕ ಪುನಶ್ಚೇತನ / ನೆಡುತೋಪು: ಕಲ್ಲಿದ್ದಲು ಗಣಿಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸುಸ್ಥಿರತೆ ಪುನಃಸ್ಥಾಪನೆ ಮತ್ತು ಅರಣ್ಯೀಕರಣದ ಮೂಲಕ ಕಲ್ಲಿದ್ದಲು ಗಣಿಗಾರಿಕೆಯ ಹೆಜ್ಜೆಗುರುತುಗಳನ್ನು ಕಡಿಮೆ ಮಾಡಲು ಸಾರ್ವಜನಿಕ ವಲಯದ ಕಲ್ಲಿದ್ದಲು ಸಂಸ್ಥೆಗಳು ನಿರಂತರ ಮತ್ತು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿವೆ. ಕಲ್ಲಿದ್ದಲು ʻಪಿಎಸ್‌ಯುʼಗಳು 2019-20ರ ಹಣಕಾಸು ವರ್ಷದಿಂದ 2022-23ನೇ ಸಾಲಿನ ಹಣಕಾಸು ವರ್ಷದವರೆಗೆ (ಜನವರಿ 2023 ರವರೆಗೆ) ಸುಮಾರು 180.30 ಲಕ್ಷ ಸಸಿಗಳನ್ನು ನೆಡುವ ಮೂಲಕ ಸುಮಾರು 8,090 ಹೆಕ್ಟೇರ್ ಭೂಮಿಯನ್ನು ಹಸಿರುಗೊಳಿಸಿವೆ. 
 
2.       ಪರಿಸರ ಉದ್ಯಾನಗಳ ಅಭಿವೃದ್ಧಿ: ಕಲ್ಲಿದ್ದಲು ನಿಕ್ಷೇಪಗಳು ಖಾಲಿಯಾದ ಬಳಿಕ ಪರಿಸರ ಗಣಿಗಾರಿಕೆ ಪ್ರದೇಶದಲ್ಲಿ ಉದ್ಯಾನವನಗಳು, ಜಲ ಕ್ರೀಡೆಗಳ ತಾಣಗಳು, ಗಾಲ್ಫ್ ಮೈದಾನಗಳು, ಮನರಂಜನೆ, ಸಾಹಸ, ಪಕ್ಷಿ ವೀಕ್ಷಣೆ ಇತ್ಯಾದಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಅತ್ಯುತ್ತಮ ಅವಕಾಶವಿದೆ. ಹಲವು ವರ್ಷಗಳಲ್ಲಿ, ಕಲ್ಲಿದ್ದಲು ʻಪಿಎಸ್‌ಯುʼಗಳು ಸುಸ್ಥಿರ ಕಲ್ಲಿದ್ದಲು ಗಣಿಗಾರಿಕೆ ಕಾರ್ಯವಿಧಾನಗಳನ್ನು ಅನುಸರಿಸುವ ಮೂಲಕ 30 ಪರಿಸರ ಉದ್ಯಾನಗಳನ್ನು ಅಭಿವೃದ್ಧಿಪಡಿಸಿವೆ. 
 
3.       ಸಮುದಾಯ ಬಳಕೆಗಾಗಿ ಗಣಿ ನೀರಿನ ಉಪಯೋಗ: ಕಲ್ಲಿದ್ದಲು ಗಣಿಗಾರಿಕೆಯ ಪ್ರಕ್ರಿಯೆಯಲ್ಲಿ, ಗಣಿ ಸಂಪ್‌ಗಳಲ್ಲಿ ದೊಡ್ಡ ಪ್ರಮಾಣದ ಗಣಿ ನೀರನ್ನು ಸಂಗ್ರಹಿಸಲಾಗುತ್ತದೆ ಮತ್ತು ನಂತರ ಆ ನೀರನ್ನು ಭೂಮಿಯ ಮೇಲ್ಮೈಗೆ ಪಂಪ್ ಮಾಡಲಾಗುತ್ತದೆ. ಸೂಕ್ತ ಸಂಸ್ಕರಣಾ ವಿಧಾನಗಳನ್ನು ಅನ್ವಯಿಸುವ ಮೂಲಕ, ಕಲ್ಲಿದ್ದಲು ʻಪಿಎಸ್‌ಯುʼಗಳು ಗಣಿ ನೀರನ್ನು ಕುಡಿಯಲು / ನೀರಾವರಿ ಉದ್ದೇಶಗಳಿಗಾಗಿ ಸಮುದಾಯ ಉಪಯೋಗಕ್ಕಾಗಿ ಬಳಸುತ್ತಿವೆ. 2021-22ರ ಹಣಕಾಸು ವರ್ಷದಲ್ಲಿ, ಕಲ್ಲಿದ್ದಲು ʻಪಿಎಸ್‌ಯುʼಗಳು ಸಮುದಾಯ ಬಳಕೆಗಾಗಿ 3703 ಲಕ್ಷ ಕಿಲೋ ಲೀಟರ್ ಗಣಿ ನೀರನ್ನು ಸರಬರಾಜು ಮಾಡಿವೆ, ಅದರಲ್ಲಿ 2712 ಲಕ್ಷ ಕಿಲೋ ಲೀಟರ್‌ ಗಣಿ ನೀರನ್ನು ನೀರಾವರಿ ಉದ್ದೇಶಗಳಿಗಾಗಿ ಮತ್ತು 991 ಲಕ್ಷ ಕಿಲೋ ಲೀಟರ್‌ ಗಣಿ ನೀರನ್ನು ಗೃಹ ಉದ್ದೇಶಗಳಿಗಾಗಿ ಸರಬರಾಜು ಮಾಡಲಾಗಿದೆ. 
 
4.       ತ್ಯಾಜ್ಯದ (ಓವರ್‌ಬರ್ಡನ್‌) ಲಾಭದಾಯಕ ಬಳಕೆ: ಕಲ್ಲಿದ್ದಲು ʻಪಿಎಸ್‌ಯುʼಗಳ ಉದ್ದೇಶವು ಕಲ್ಲಿದ್ದಲು ಉತ್ಪಾದಿಸುವುದು ಮತ್ತು ಅದನ್ನು ಗ್ರಾಹಕರಿಗೆ ಒದಗಿಸುವುದೇ ಆಗಿದ್ದರೂ ಕಲ್ಲಿದ್ದಲು ಗಣಿಗಾರಿಕೆಯಿಂದ ಹೊರತೆಗೆಯಲಾಗುವ ತ್ಯಾಜ್ಯದಿಂದ ಅಗ್ಗದ ಬೆಲೆಗೆ ಮರಳನ್ನು ಉತ್ಪಾದಿಸುವ ಕೆಲಸದಲ್ಲೂ ʻಪಿಎಸ್‌ಯುʼಗಳು ತೊಡಗಿವೆ. ಜೊತೆಗ, ಇದನ್ನು ಸಂಸ್ಕರಿಸಿದ ತ್ಯಾಜ್ಯವನ್ನು ಭೂಗತ ಗಣಿಗಳಲ್ಲಿ ಶೇಖರಿಸಿಡುವ ಕೆಲಸದಲ್ಲೂ ನಿರತವಾಗಿವೆ. ಈ ಪ್ರಯತ್ನದಲ್ಲಿ, ಕಲ್ಲಿದ್ದಲು ʻಪಿಎಸ್‌ಯುʼಗಳು 4 ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಮತ್ತು 3 ತ್ಯಾಜ್ಯದಿಂದ ಮರಳು ತಯಾರಿಕೆ ಸ್ಥಾವರಗಳನ್ನು ಕಾರ್ಯಾರಂಭಮಾಡಿವೆ.  
 
5.       ನವೀಕರಿಸಬಹುದಾದ ಇಂಧನಗಳ ಉತ್ತೇಜನ:
ಗಣಿಗಾರಿಕೆಯಿಂದ ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡಲು ಮತ್ತು ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿಯತ್ತ ಪ್ರಗತಿ ಸಾಧಿಸಲು, ಕಲ್ಲಿದ್ದಲು ʻಪಿಎಸ್‌ಯುʼಗಳು 31.03.2022ರ ಹೊತ್ತಿಗೆ ಸುಮಾರು 1649 ಮೆಗಾವ್ಯಾಟ್ (ಸೌರ - 1598 ಮೆಗಾವ್ಯಾಟ್ ಮತ್ತು ಪವನ ಗಿರಣಿಗಳು - 51 ಮೆಗಾವ್ಯಾಟ್) ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸಿವೆ. 
 
6.       ಇಂಧನ ದಕ್ಷ ಕ್ರಮಗಳು: ಕಲ್ಲಿದ್ದಲು ʻಪಿಎಸ್‌ಯುʼಗಳು ಎಲ್ಇಡಿ ದೀಪಗಳು, ಇಂಧನ ದಕ್ಷತೆಯ ಎಸಿಗಳು, ಇ-ವಾಹನಗಳು, ಸೂಪರ್ ಫ್ಯಾನ್‌ಗಳು, ಪರಿಣಾಮಕಾರಿ ವಾಟರ್ ಹೀಟರ್‌ಗಳು, ಬೀದಿ ದೀಪಗಳಲ್ಲಿ ಆಟೋ ಟೈಮರ್‌ಗಳು ಮತ್ತು ಕೆಪಾಸಿಟರ್ ಬ್ಯಾಂಕ್‌ಗಳ ಬಳಕೆಯಂತಹ ವಿವಿಧ ಇಂಧನ ಸಂರಕ್ಷಣೆ ಮತ್ತು ದಕ್ಷತೆಯ ಕ್ರಮಗಳನ್ನು ಅಳವಡಿಸಿಕೊಂಡಿವೆ. 
 
ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಭೂಸುಧಾರಣೆಯು ನಿರಂತರ ಪ್ರಕ್ರಿಯೆಯಾಗಿದೆ. ಕಲ್ಲಿದ್ದಲನ್ನು ಹೊರತೆಗೆದ ನಂತರದ ಅನುಮೋದಿತ ಗಣಿ ಮುಚ್ಚುವಿಕೆ ಯೋಜನೆ (ಎಂಸಿಪಿ) / ಪರಿಸರ ಅನುಮತಿ ಷರತ್ತುಗಳ ಪ್ರಕಾರ ಪುನರುಜ್ಜೀವನ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ʻಹಂತ ಹಂತದʼ ಮತ್ತು ʻಅಂತಿಮ ಗಣಿ ಮುಚ್ಚುವ ಚಟುವಟಿಕೆʼಗಳಿಗೆ ಸಂಬಂಧಿಸಿದಂತೆ ವಿವರವಾದ ನಿಬಂಧನೆಗಳೂ ಇದರಲ್ಲಿ ಸೇರಿವೆ. ಗಣಿಗಾರಿಕೆ ಕಾರ್ಯಾಚರಣೆಗಳ ಸಂದರ್ಭದಲ್ಲಿ, ಗಣಿಗಾರಿಕೆಯ ಪ್ರತಿಕೂಲ ಪರಿಣಾಮಗಳನ್ನು ಸಾಧ್ಯವಾದಷ್ಟು ಬೇಗ ತಗ್ಗಿಸುವ ನಿಟ್ಟಿನಲ್ಲಿ ಗಣಿಗಾರಿಕೆ ಕಂಪನಿಗಳು ಗಣಿಗಾರಿಕೆ ಜೊತೆ ಜೊತೆಗೇ ʻಹಂತವಾಗಿ ಗಣಿ ಮುಚ್ಚುವʼ (ಪ್ರೋಗ್ರೆಸೀವ್‌ ಮೈನ್‌ ಕ್ಲೋಷರ್‌) ಚಟುವಟಿಕೆಗಳನ್ನು ನಡೆಸುತ್ತವೆ. ಗಣಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಿದ ನಂತರ ಅನುಮೋದಿತ ಅಂತಿಮ ʻಎಂಸಿಪಿʼ ಪ್ರಕಾರ ಪುನಃಸ್ಥಾಪನೆಯಂತಹ ಅಂತಿಮ ಗಣಿ ಮುಚ್ಚುವ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲಾಗುತ್ತದೆ.
 
ʻಕೋಲ್ ಇಂಡಿಯಾ ಲಿಮಿಟೆಡ್ʼ, 2021-22ರಲ್ಲಿ ಕೈಗೊಂಡ ಉಪಗ್ರಹ ಕಣ್ಗಾವಲು ಅಧ್ಯಯನದ ಪ್ರಕಾರ, ವಾರ್ಷಿಕವಾಗಿ 5 ದಶಲಕ್ಷ ಕ್ಯೂಬಿಕ್‌ ಮೀಟರ್‌ಗಿಂತ (ತ್ಯಾಜ್ಯ+ ಕಲ್ಲಿದ್ದಲು) ಹೆಚ್ಚು ಉತ್ಪಾದಿಸುತ್ತಿರುವ 76 ತೆರೆದ ಗಣಿಗಾರಿಕೆ ಯೋಜನೆಗಳ ಒಟ್ಟು ಉತ್ಖನನ ಪ್ರದೇಶದಲ್ಲಿ, 45.01% ಪ್ರದೇಶವು ಬ್ಯಾಕ್ ಫಿಲ್ಲಿಂಗ್ ಹಂತದಲ್ಲಿದೆ, 17.52% ಜೈವಿಕವಾಗಿ ಪುನಸ್ಥಾಪಿತ ಪ್ರದೇಶ ಮತ್ತು 37.47% ಪ್ರದೇಶವು ಸಕ್ರಿಯ ಗಣಿಗಾರಿಕೆಯಲ್ಲಿದೆ.
 
ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. 


 ***
 



(Release ID: 1899141) Visitor Counter : 163


Read this release in: English , Urdu