ಸಹಕಾರ ಸಚಿವಾಲಯ
azadi ka amrit mahotsav g20-india-2023

​​​​​​​ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕದ ಪುತ್ತೂರಿನಲ್ಲಿ ಕ್ಯಾಂಪ್ಕೊ (ಸೆಂಟ್ರಲ್ ಅರಿಕಾನಟ್ ಅಂಡ್ ಕೋಕ್ಕೊ ಮಾರ್ಕೆಟಿಂಗ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್) ನ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು


ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನಿರ್ಮಿಸಲಾದ ಶ್ರೀ ಭಾರತಿ ಅಮರಜ್ಯೋತಿ ದೇವಾಲಯವನ್ನು ಶ್ರೀ ಅಮಿತ್ ಶಾ ಅವರು ಉದ್ಘಾಟಿಸಿದರು. ಪುತ್ತೂರಿನ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿಯೂ ಅವರು ಪ್ರಾರ್ಥನೆ ಸಲ್ಲಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಅಂತ್ಯೋದಯ ತತ್ವವನ್ನು ಅನುಸರಿಸುವ ಮೂಲಕ ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಅಭಿಯಾನವನ್ನು ಪ್ರಾರಂಭಿಸಿದೆ. ಈ ಮಿಷನ್ ನ ಅಡಿಯಲ್ಲಿ, ಪ್ರತಿ ಬಡವರಿಗೆ ಮನೆ, ವಿದ್ಯುತ್, ನೀರು, ಅನಿಲ, ಶೌಚಾಲಯ, ಆರೋಗ್ಯ ವಿಮೆ ಮತ್ತು ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಹಕಾರ ಸಚಿವಾಲಯವನ್ನು ರಚಿಸಿ, ಸಹಕಾರಿ ಸಂಸ್ಥೆಗಳ ಮೂಲಕ ರೈತರು ಮತ್ತು ಹಳ್ಳಿಗಳಿಗೆ ಸೇವೆ ಸಲ್ಲಿಸುವ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ

ದೂರದೃಷ್ಟಿಯ ರೈತ ನಾಯಕ ಶ್ರೀ ವಾರಣಾಸಿ ಸುಬ್ರಾಯ ಭಟ್ ಅವರು 1973ರಲ್ಲಿ ಸ್ಥಾಪಿಸಿದ ಕ್ಯಾಂಪ್ಕೊ ಒಂದು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಪ್ರಾರಂಭದ ಸಮಯದಲ್ಲಿ, 3000 ಸದಸ್ಯರನ್ನು ಹೊಂದಿದ್ದ ಈ ಕ್ಯಾಂಪ್ಕೊ ಸಂಸ್ಥೆ, ಇಂದು 3,000 ಕೋಟಿ ರೂ.ಗಳ ವಾರ್ಷಿಕ ವಹಿವಾಟಿನೊಂದಿಗೆ 1,38,000 ಸದಸ್ಯರನ್ನು ಹೊಂದಿರುವ ದೈತ್ಯ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ

ಒಂದು ಸಂಸ್ಥೆಯು 50 ವರ್ಷಗಳನ್ನು ಪೂರೈಸಿದಾಗ, ರೈತರಿಗೆ ಮತ್ತು ಅದರ ಸದಸ್ಯರಿಗೆ ಆ ಸಂಸ್ಥೆಯು ತನ್ನ ಅತ್ಯುತ್ತಮ ಸಾಮರ್ಥ್ಯದೊಂದಿಗೆ ಸೇವೆ ಸಲ್ಲಿಸಿದೆ ಎಂದು ಪ್ರಮಾಣೀಕರಿಸುತ್ತದೆ

ದೇಶದ ಮೊದಲ ಅಗ್ರಿ ಮಾಲ್ ಅನ್ನು ಕ್ಯಾಂಪ್ಕೊ ನಿರ್ಮಿಸುತ್ತಿದೆ, ಈ ಬಹುಮಹಡಿ ಅಗ್ರಿ ಮಾಲ್ ಕೃಷಿಯ ಎಲ್ಲಾ ಉಪಕರಣಗಳು, ಸಲಕರಣೆಗಳು ಮತ್ತು ಶೇಖರಣಾ ಸೌಲಭ್ಯಗಳನ್ನು ಹೊಂದಿರುತ್ತದೆ

ಶ್ರೀ ಮೋದಿಯವರ ನಾಯಕತ್ವದಲ್ಲಿ, ದೇಶಾದ್ಯಂತ ನಮ್ಮ ಪಕ್ಷದ ಸರ್ಕಾರಗಳು ರಾಷ್ಟ್ರೀಯ ಭದ್ರತೆ, ಸಮೃದ್ಧಿ ಮತ್ತು ಬಡವರ ಕಲ್ಯಾಣಕ್ಕಾಗಿ ಸಮರ್ಪಿತವಾಗಿವೆ

ಹಿಂದಿನ ಸರ್ಕಾರವು ಪಿ ಎಫ್ ಐನ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) 1700 ಜನರನ್ನು ಬಿಡುಗಡೆ ಮಾಡಿತ್ತು, ಆದರೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸಿ ಅದನ್ನು ಶಾಶ್ವತವಾಗಿ ಮುಚ್ಚಿದ್ದಾರೆ. ತುಷ್ಟೀಕರಣದ ಮೂಲಕ ರಾಷ್ಟ್ರ-ವಿರೋಧಿ ಶಕ್ತಿಗಳಿಗೆ ಅಧಿಕಾರ ನೀಡುವವರು ಕರ್ನಾಟಕವನ್ನು ಎಂದಿಗೂ ಸುರಕ್ಷಿತವಾಗಿಡಲು ಸಾಧ್ಯವಿಲ್ಲ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ನಮ್ಮ ರಾಷ್ಟ್ರವನ್ನು ಭದ್ರಪಡಿಸಿ, ನಮ್ಮ ದೇಶದಿಂದ ಭಯೋತ್ಪಾದನೆ ಮತ್ತು ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಿದೆ

Posted On: 11 FEB 2023 9:06PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕದ ಪುತ್ತೂರಿನಲ್ಲಿ ಕ್ಯಾಂಪ್ಕೊದ (ಸೆಂಟ್ರಲ್ ಅರಿಕಾನಟ್ ಅಂಡ್ ಕೋಕ್ಕೊ ಮಾರ್ಕೆಟಿಂಗ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್) ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನಿರ್ಮಿಸಲಾದ ಶ್ರೀ ಭಾರತಿ ಅಮರಜ್ಯೋತಿ ದೇವಾಲಯವನ್ನು ಶ್ರೀ ಅಮಿತ್ ಶಾ ಉದ್ಘಾಟಿಸಿದರು. ಅವರು ಪುತ್ತೂರಿನ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಪ್ರಾರ್ಥನೆಯನ್ನೂ ಕೂಡಾ ಸಲ್ಲಿಸಿದರು. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಮ್ಮ ಸರ್ಕಾರ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಅಂತ್ಯೋದಯ ತತ್ವವನ್ನು ಅನುಸರಿಸುವ ಮೂಲಕ ಬಡವರ ಕಲ್ಯಾಣಕ್ಕಾಗಿ ಅಭಿಯಾನವನ್ನು ಪ್ರಾರಂಭಿಸಿದೆ. ಈ ಮಿಷನ್ ನ ಅಡಿಯಲ್ಲಿ ಪ್ರತಿ ಬಡವರಿಗೆ ಮನೆ, ವಿದ್ಯುತ್, ನೀರು, ಅನಿಲ, ಶೌಚಾಲಯ, ಆರೋಗ್ಯ ವಿಮೆ ಮತ್ತು ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗಿದೆ ಎಂದು ಕೇಂದ್ರ ಸಹಕಾರ ಸಚಿವರು ತಮ್ಮ ಭಾಷಣದಲ್ಲಿ ತಿಳಿಸಿದರು. ದೇಶಾದ್ಯಂತ ನಮ್ಮ ಪಕ್ಷದ ಸರ್ಕಾರಗಳು ರಾಷ್ಟ್ರೀಯ ಭದ್ರತೆ, ಸಮೃದ್ಧಿ ಮತ್ತು ಬಡವರ ಕಲ್ಯಾಣಕ್ಕೆ ಬದ್ಧವಾಗಿವೆ ಎಂದು ಶ್ರೀ ಶಾ ಹೇಳಿದರು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜೀ ಅವರು ಈ ಮೂರೂ ವಿಚಾರಗಳನ್ನು ಸಮಗ್ರ ಮಾನವತಾವಾದದ ತತ್ತ್ವಶಾಸ್ತ್ರದಲ್ಲಿ ಅಳವಡಿಸಿ ಪ್ರಚಾರ ಮಾಡಿದ್ದಾರೆ ಎಂದು ಹೇಳಿದರು.  ಕೇಂದ್ರ ಗೃಹ ಸಚಿವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು.

ಇಂದು ಕ್ಯಾಂಪ್ಕೊದ ಆಗ್ರೋ ಮಾಲ್ ಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ 1,50,000 ಚದರ ಅಡಿ ವಿಸ್ತೀರ್ಣದ ಆಗ್ರೋ ಮಾಲ್ ನಲ್ಲಿ ಕೃಷಿ ಉಪಕರಣಗಳು, ಯಂತ್ರೋಪಕರಣಗಳು, ಕೀಟನಾಶಕಗಳು, ರಸಗೊಬ್ಬರಗಳು, ಬೀಜಗಳು ಮತ್ತು ಸಂಗ್ರಹಣೆಯಂತಹ ಎಲ್ಲಾ ಸೌಲಭ್ಯಗಳು ಲಭ್ಯವಿರಲಿವೆ. ಇದು ಸಹಕಾರಿ ಆಧಾರದ ಮೇಲೆ ಕಾರ್ಯನಿರ್ವಹಿಸುವ ಭಾರತದ ಮೊದಲ ಆಗ್ರೋ ಮಾಲ್ ಆಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕ್ಯಾಂಪ್ಕೊ 50 ವರ್ಷಗಳನ್ನು ಪೂರೈಸಿದೆ. ಒಂದು ಸಂಸ್ಥೆಯು 50 ವರ್ಷಗಳನ್ನು ಪೂರೈಸಿದರೆ, ಆ ಸಂಸ್ಥೆಯು ರೈತರಿಗೆ ಮತ್ತು ಅದರ ಸದಸ್ಯರಿಗೆ ತನ್ನ ಅತ್ಯುತ್ತಮ ಸಾಮರ್ಥ್ಯದೊಂದಿಗೆ ಸೇವೆ ಸಲ್ಲಿಸಿದೆ ಎಂದು ಪ್ರಮಾಣೀಕರಿಸಿದೆ ಎಂದರ್ಥ ಎಂದು ಅವರು ಹೇಳಿದರು. ದೂರದೃಷ್ಟಿಯ ರೈತ ನಾಯಕ ಶ್ರೀ ವಾರಣಾಸಿ ಸುಬ್ರಾಯ ಭಟ್ ಅವರು 1973ರಲ್ಲಿ ಸ್ಥಾಪಿಸಿದ ಕ್ಯಾಂಪ್ಕೊ ಇಂದು ಒಂದು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ ಎಂದು ಶ್ರೀ ಶಾ ಹೇಳಿದರು. ಪ್ರಾರಂಭದ ಸಮಯದಲ್ಲಿ, ಇದು 3000 ಸದಸ್ಯರನ್ನು ಹೊಂದಿತ್ತು, ಆದರೆ ಇಂದು, 3,000 ಕೋಟಿ ರೂ.ಗಳ ವಾರ್ಷಿಕ ವಹಿವಾಟಿನೊಂದಿಗೆ, ಕ್ಯಾಂಪ್ಕೊ 1,38,000 ಸದಸ್ಯರನ್ನು ಹೊಂದಿರುವ ದೈತ್ಯ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಹಕಾರ ಸಚಿವಾಲಯವನ್ನು ಸ್ಥಾಪಿಸಿ, ಸಹಕಾರಿ ಸಂಸ್ಥೆಗಳ ಮೂಲಕ ರೈತರಿಗೆ ಮತ್ತು ಗ್ರಾಮಗಳಿಗೆ ಸೇವೆ ಸಲ್ಲಿಸಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂದು ದೇಶದ ಪ್ರಥಮ ಸಹಕಾರ ಸಚಿವರು ಹೇಳಿದರು. ಕ್ಯಾಂಪ್ಕೊ ಒಂದು ಸಹಕಾರಿ ಸಂಸ್ಥೆಯಾಗಿದ್ದು, ವಿಂಡ್ ಮಿಲ್ ಘಟಕ ಮತ್ತು 500 ಮೆಗಾವ್ಯಾಟ್ ಸೌರ ಫಲಕಗಳನ್ನು ಅದು ನಿರ್ಮಿಸಿದೆ ಎಂದು ಅವರು ಹೇಳಿದರು. 107 ಶಾಖೆಗಳು, 2000 ಉದ್ಯೋಗಿಗಳು ಮತ್ತು 2700 ಕೋಟಿ ರೂ.ಗಳ ವಹಿವಾಟು, ಜನರು ಕ್ಯಾಂಪ್ಕೊ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಬಜೆಟ್ ನಲ್ಲಿ ಪ್ರತಿ ಪಂಚಾಯಿತಿಯಲ್ಲಿಯೂ ಬಹು-ಆಯಾಮದ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು (ಪಿಎಸಿಎಸ್) ನಿರ್ಮಿಸಲು ನಿರ್ಧರಿಸಿದ್ದಾರೆ.  ಮುಂದಿನ 3 ವರ್ಷಗಳಲ್ಲಿ ಭಾರತದಲ್ಲಿ 2 ಲಕ್ಷ ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು ರಚಿಸಲಾಗುವುದು ಎಂದರು. ಇದರೊಂದಿಗೆ, ಸಹಕಾರ ಸಂಸ್ಥೆಗಳಿಗಾಗಿ ಅನೇಕ ಸೌಲಭ್ಯಗಳನ್ನು ಘೋಷಿಸಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ವಲಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಹಿಂದಿನ ಸರ್ಕಾರವು ಪಿಎಫ್ಐನ 1700 ಜನರನ್ನು ಬಿಡುಗಡೆ ಮಾಡಿದೆ, ಆದರೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಪಿಎಫ್ಐ ಅನ್ನು ನಿಷೇಧಿಸಿ, ಅದನ್ನು ಶಾಶ್ವತವಾಗಿ ಮುಚ್ಚಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಶಾ ಹೇಳಿದರು. ತುಷ್ಟೀಕರಣದ ಮೂಲಕ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಸಹಕಾರ ನೀಡುವವರು ಕರ್ನಾಟಕವನ್ನು ಎಂದಿಗೂ ಸುರಕ್ಷಿತವಾಗಿಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ರಾಷ್ಟ್ರವನ್ನು ಭದ್ರಪಡಿಸಿ, ದೇಶದಿಂದ ಭಯೋತ್ಪಾದನೆ ಮತ್ತು ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಿದೆ ಎಂದು ಶ್ರೀ ಶಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಿದಾಗ ಯಾವುದೇ ಹಿಂಸಾಚಾರ ನಡೆದಿಲ್ಲ. ಶ್ರೀ ನರೇಂದ್ರ ಮೋದಿಯವರು ಆಗಸ್ಟ್ 5, 2019ರಂದು 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಕಾಶ್ಮೀರವನ್ನು ಶಾಶ್ವತವಾಗಿ ಭಾರತ ಮಾತೆಯ ಮುಕುಟವನ್ನಾಗಿಸಿದರು ಎಂದು ಅವರು ಹೇಳಿದರು.

ದಕ್ಷಿಣ ಕರ್ನಾಟಕದಲ್ಲಿ ಹೈಡ್ರೋಜನ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದ್ದೇವೆ. ಈ ಯೋಜನೆಯ ಅಡಿಯಲ್ಲಿ 104 ಎಕರೆ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿತವಾಗುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಾವು ಕ್ಯಾಂಪ್ಕೊವನ್ನು ಬಲಪಡಿಸುತ್ತಿದ್ದೇವೆ. ನಾವು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಮೂಲಕ ಮೀನುಗಾರರ ಸಹಕಾರಕ್ಕಾಗಿ ರಾಜ್ಯದಲ್ಲಿ ಪ್ರತ್ಯೇಕ ಸಚಿವಾಲಯವನ್ನು ರಚಿಸಿದ್ದೇವೆ. ಕರಾವಳಿ ಜಿಲ್ಲೆಗಳಲ್ಲಿ ಆಳಸಮುದ್ರ ಮೀನುಗಾರಿಕೆಯಲ್ಲಿ ನಾವು ಮೀನುಗಾರರಿಗೆ ಸಹಾಯ ಮಾಡುತ್ತಿದ್ದೇವೆ.

 

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ, 1000 ವಿದ್ಯಾರ್ಥಿಗಳ ಸಾಮರ್ಥ್ಯದ ಹಾಸ್ಟೆಲ್ ಅನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಬೆಂಗಳೂರು ಮತ್ತು ಮಂಗಳೂರನ್ನು ಸ್ಟಾರ್ಟ್ಅಪ್ ಹಬ್ ಗಳನ್ನಾಗಿ ಮಾಡಲಾಗಿದೆ. ಇದರೊಂದಿಗೆ ಶ್ರೀ ನಾರಾಯಣ ಗುರು ವಸತಿ ಶಾಲೆಯನ್ನು ನಿರ್ಮಿಸಲಾಗಿದೆ ಮತ್ತು ಶ್ರೀ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ಬುಡಕಟ್ಟು ಸಹೋದರರಿಗೆ ಸುಮಾರು 34,850 ಹೆಕ್ಟೇರ್ ಭೂಮಿಯನ್ನು ಒದಗಿಸಿದೆ.

ಭಾರತ ಸರ್ಕಾರವು ಶಿರಾಡಿ ಘಾಟ್ ನಲ್ಲಿ ಸುರಂಗ ರಸ್ತೆಯನ್ನು ನಿರ್ಮಿಸಿದೆ, ಇದು ಬಂದರು ಸಾರಿಗೆಗೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ, ಕರ್ನಾಟಕ ಸರ್ಕಾರವು ಕುಸುಲಕ್ಕಿಯನ್ನು (ಬೇಯಿಸಿದ ಅಕ್ಕಿ) ಖರೀದಿಸುವ ಮೂಲಕ ರೈತರೊಂದಿಗೆ ದೃಢವಾಗಿ ನಿಂತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ 3800 ಕೋಟಿ ರೂ.ಗಳ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.  ಮಂಗಳೂರು ಬಂದರನ್ನು ಮೇಲ್ದರ್ಜೆಗೇರಿಸಲು 1000 ಕೋಟಿ ರೂ.ಗಳ 5 ಯೋಜನೆಗಳನ್ನು ರೂಪಿಲಾಗಿದೆ. ನಮ್ಮ ಸರ್ಕಾರವು ಮಂಗಳೂರು ಸಂಸ್ಕರಣಾಗಾರಕ್ಕೆ 2500 ಕೋಟಿ ರೂ.ಗಳ ವಿಸ್ತರಣಾ ಕಾರ್ಯಕ್ರಮವನ್ನು ಸಹ ಮಂಜೂರು ಮಾಡಿದೆ ಎಂದು ಅವರು ತಿಳಿಸಿದರು.

******



(Release ID: 1898417) Visitor Counter : 451


Read this release in: English , Urdu , Hindi