ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಹಾಲ್‌ಮಾರ್ಕಿಂಗ್ ಮತ್ತು ಮೌಲ್ಯಮಾಪನ(ವಿಶ್ಲೇಷಣೆ) ಕೇಂದ್ರಗಳು 1.5 ವರ್ಷದಲ್ಲಿ 17 ಕೋಟಿಗೂ ಹೆಚ್ಚು ಚಿನ್ನಾಭರಣಗಳಿಗೆ ಹಾಲ್‌ಮಾರ್ಕಿಂಗ್ ಮಾಡಿವೆ

Posted On: 08 FEB 2023 5:28PM by PIB Bengaluru

ದೇಶಾದ್ಯಂತ ಇದುವರೆಗೆ 1374 ಹಾಲ್ ಮಾರ್ಕಿಂಗ್ ಮತ್ತು ಮೌಲ್ಯಮಾಪನ ಪ್ರಯೋಗಾಲಯಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಹಾಯಕ ಸಚಿವ ಶ್ರೀ ಸಾಧ್ವಿ ನಿರಂಜನ್ ಜ್ಯೋತಿ ಅವರು ಲೋಕಸಭೆಯಲ್ಲಿಂದು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದರು.

ದೇಶದ 256 ಜಿಲ್ಲೆಗಳಲ್ಲಿ ಮಾತ್ರ 2021 ಜೂನ್ 23ರಿಂದ ಹಾಲ್ ಮಾರ್ಕಿಂಗ್ ಕಡ್ಡಾಯ ಮಾಡಲಾಗಿದೆ, ಅವುಗಳಲ್ಲಿ ಕನಿಷ್ಠ ಒಂದು ಮಾನ್ಯತೆ ಪಡೆದ ಮೌಲ್ಯಮಾಪನ(ವಿಶ್ಲೇಷಣೆ) ಮತ್ತು ಹಾಲ್‌ಮಾರ್ಕಿಂಗ್ ಸೆಂಟರ್ (ಎಎಚ್ ಸಿ) ಹೊಂದಿವೆ. ಮೇಲಾಗಿ, 2022 ಜೂನ್ 01ರಿಂದ ಅನ್ವಯವಾಗುವಂತೆ, ಕಡ್ಡಾಯ ಹಾಲ್‌ಮಾರ್ಕಿಂಗ್‌ ವ್ಯಾಪ್ತಿಯನ್ನು ಇನ್ನೂ 32 ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ, ಕನಿಷ್ಠ ಒಂದು ಮಾನ್ಯತೆ ಪಡೆದ ಎಎಚ್ ಸಿ ಹೊಂದಿರುವ 288 ಜಿಲ್ಲೆಗಳಲ್ಲಿ ಕಡ್ಡಾಯ ಹಾಲ್‌ಮಾರ್ಕಿಂಗ್ ಆಡಳಿತ ಅನ್ವಯವಾಗುತ್ತದೆ. ಹಾಗಾಗಿ, ಹಾಲ್ ಮಾರ್ಕಿಂಗ್ ಕಡ್ಡಾಯ ಮಾಡಲಾಗಿರುವ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಬೇಡಿಕೆಗೆ ಅನುಗಣವಾಗಿ ಮೂಲಸೌಕರ್ಯ ಸಾಕಷ್ಟು ಪ್ರಮಾಣದಲ್ಲಿ ಇದೆ ಎಂದು ಸಚಿವರು ತಿಳಿಸಿದರು.

ಪ್ರಸ್ತುತ, ದೇಶದ 335 ಜಿಲ್ಲೆಗಳಲ್ಲಿ ಬಿಐಎಸ್ ಮಾನ್ಯತೆಯ 1374 ಎಎಚ್ ಸಿಗಳು ಕಾರ್ಯ ನಿರ್ವಹಿಸುತ್ತಿವೆ. ಹಾಗಾಗಿ, ಬಿಐಎಸ್ ನೋಂದಾಯಿತ ಆಭರಣ ತಯಾರಕರು ತಮ್ಮ ಚಿನ್ನಾಭರಣಗಳನ್ನು ಈ ಕೇಂದ್ರಗಳಿಗೆ ಕಳುಹಿಸಬಹುದು. ಮಾನ್ಯತೆ ಪಡೆದ ವಿಶ್ಲೇಷಣಾ ಮತ್ತು ಹಾಲ್‌ಮಾರ್ಕಿಂಗ್ ಸೆಂಟರ್(ಎಎಚ್ ಸಿ)ಗಳು ಕಳೆದ 1 ವರ್ಷ 5 ತಿಂಗಳಿಂದ ಇದುವರೆಗೆ 17 ಕೋಟಿಗಿಂತ ಹೆಚ್ಚಿನ ಚಿನ್ನಾಭರಣಗಳಿಗೆ ಹಾಲ್ ಮಾರ್ಕಿಂಗ್ ಮಾಡಿವೆ. ಹಾಲ್ ಮಾರ್ಕಿಂಗ್ ಕಡ್ಡಾಯ ಮಾಡಿದ ನಂತರ ಆಗಿರುವ ಬೆಳವಣಿಗೆ ಇದಾಗಿದೆ.

ಮಾನ್ಯತೆ ಪಡೆದ ವಿಶ್ಲೇಷಣಾ ಮತ್ತು ಹಾಲ್‌ಮಾರ್ಕಿಂಗ್ ಸೆಂಟರ್(ಎಎಚ್ ಸಿ)ಗಳ ಸ್ಥಾಪನೆಯು ಮಾರುಕಟ್ಟೆ ಚಾಲಿತ ವ್ಯಾಪಾರ ಚಟುವಟಿಕೆಯಾಗಿದ್ದು, ಖಾಸಗಿ ಚಿನ್ನಾಭರಣ ಉದ್ಯಮಶೀಲರ ಸ್ಥಳೀಯ ಬೇಡಿಕೆ ಆಧರಿಸಿ, ನಿರ್ದಿಷ್ಟ ಸ್ಥಳಗಳಲ್ಲಿ ಎಎಚ್ ಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಾಲ್ ಮಾರ್ಕಿಂಗ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದ ನಂತರ ದೇಶಾದ್ಯಂತ ಬಿಐಎಸ್ ಮಾನ್ಯತೆ ಪಡೆದ ವಿಶ್ಲೇಷಣಾ ಮತ್ತು ಹಾಲ್ ಮಾರ್ಕಿಂಗ್ ಕೇಂದ್ರಗಳ ಸಂಖ್ಯೆ ಕೇವಲ 1 ವರ್ಷ 5 ತಿಂಗಳ ಅವಧಿಯಲ್ಲಿ 942ರಿಂದ 1374ಕ್ಕೆ ಏರಿಕೆ ಕಂಡಿದೆ. ಇದಲ್ಲದೆ, ಮೌಲ್ಯಮಾಪನ ಮತ್ತು ಹಾಲ್ ಮಾರ್ಕಿಂಗ್ ಕೇಂದ್ರಗಳು ಅಸ್ತಿತದಲ್ಲಿ ಇಲ್ಲದ ನಿರ್ದಿಷ್ಟ ಸ್ಥಳಗಳಲ್ಲಿ 'ಚಿನ್ನದ ಮೌಲ್ಯಮಾಪನ ಮತ್ತು ಹಾಲ್‌ಮಾರ್ಕಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬಯಸುವ ಆಕಾಂಕ್ಷಿತ ಉದ್ಯಮಶೀಲರಿಗೆ ಕೇಂದ್ರ ಸರ್ಕಾರವು ನೆರವು ಅಥವಾ ಸಹಾಯಧನವನ್ನು ಸಹ ಒದಗಿಸುತ್ತಿದೆ. ಆಭರಣ ತಯಾರಕರಿಗೆ ಹಾಲ್‌ಮಾರ್ಕಿಂಗ್ ಸೌಲಭ್ಯವನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಬಿಐಎಸ್ ಮಾನ್ಯತೆ ಪಡೆದ ಎಎಚ್ ಸಿಗಳಿಂದ ಆಫ್‌ಸೈಟ್ ಕೇಂದ್ರಗಳನ್ನು (ಒಎಸ್ ಸಿ) ಸ್ಥಾಪಿಸುವ ಯೋಜನೆಯನ್ನು ಸಹ ಬಿಐಎಸ್ ಪ್ರಾರಂಭಿಸಿದೆ.

*****



(Release ID: 1897693) Visitor Counter : 72


Read this release in: Urdu , English