ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಉತ್ಪಾದಕ ಕೃತಕ ಬುದ್ಧಿಮತ್ತೆ
प्रविष्टि तिथि:
03 FEB 2023 4:06PM by PIB Bengaluru
ಹೊಸ ವಿಷಯ (ಕಂಟೆಂಟ್) ವನ್ನು ರಚಿಸಲು ಅಸ್ತಿತ್ವದಲ್ಲಿರುವ ಪಠ್ಯ, ಧ್ವನಿಮುದ್ರಿಕೆಗಳು ಅಥವಾ ಚಿತ್ರಗಳನ್ನು ಬಳಸಲು ಕೃತಕ ಬುದ್ಧಿಮತ್ತೆ ಹೊಂದಿರುವ ಯಂತ್ರಗಳ ಸಾಮರ್ಥ್ಯವನ್ನು ಉತ್ಪಾದಕ ಕೃತಕ ಬುದ್ಧಿಮತ್ತೆ (ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಎಂದು ಕರೆಯಲಾಗುತ್ತದೆ. ಉತ್ಪಾದಕ ಕೃತಕ ಬುದ್ಧಿಮತ್ತೆ ಬಳಕೆಯು ಇನ್ನೂ ಆರಂಭಿಕ ಹಂತಗಳಲ್ಲಿದೆ ಮತ್ತು ತಂತ್ರಜ್ಞಾನವು ವಿಕಸನಗೊಂಡಂತೆ ಮತ್ತು ಸುಧಾರಣೆ ಕಂಡಂತೆ ಅದರ ಪ್ರಭಾವವು ಬೆಳೆಯುವ ಸಾಧ್ಯತೆಯಿದೆ. ಶಿಕ್ಷಣ, ಉತ್ಪಾದನೆ, ಆರೋಗ್ಯ, ಹಣಕಾಸು ಮತ್ತು ಇತರ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನಗಳ ಹೊರಹೊಮ್ಮುವಿಕೆ ಮತ್ತು ಅವುಗಳ ತ್ವರಿತ ಪ್ರಸರಣವನ್ನು ಸರ್ಕಾರವು ಅರಿತುಕೊಂಡಿದೆ.
ಸರ್ಕಾರವು ಕೃತಕ ಬುದ್ಧಿಮತ್ತೆಯನ್ನು (ಎಐ) ನಮ್ಮ ಡಿಜಿಟಲ್ ಆರ್ಥಿಕತೆ, ಹೂಡಿಕೆಗಳು ಮತ್ತು ಉದ್ಯೋಗಗಳ ಬೆಳವಣಿಗೆಗೆ ಚಾಲಕಶಕ್ತಿ ಎಂದು ಪರಿಗಣಿಸುತ್ತದೆ. ಕೃತಕ ಬುದ್ಧಿಮತ್ತೆಯ ಸಂಶೋಧನೆ ಮತ್ತು ಅಳವಡಿಕೆಗಾಗಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸರ್ಕಾರವು ಕೃತಕ ಬುದ್ಧಿಮತ್ತೆಗಾಗಿ ರಾಷ್ಟ್ರೀಯ ಕಾರ್ಯತಂತ್ರವನ್ನು ಪ್ರಕಟಿಸಿದೆ.
ತರುವಾಯ 'ಮೇಕ್ ಎಐ ಇನ್ ಇಂಡಿಯಾ ಮತ್ತು ಮೇಕ್ ಎಐ ವರ್ಕ್ ಫಾರ್ ಇಂಡಿಯಾʼ ಎಂಬ ದೃಷ್ಟಿಯೊಂದಿಗೆ, ಎಐ ಆಧಾರಿತ ಪರಿಹಾರಗಳ ಅಭಿವೃದ್ಧಿಗಾಗಿ 'ಕೃತಕ ಬುದ್ಧಿಮತ್ತೆಯ ರಾಷ್ಟ್ರೀಯ ಕಾರ್ಯಕ್ರಮ' ಅನುಷ್ಠಾನವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅನುಮೋದಿಸಿದೆ ಮತ್ತು ಎಲ್ಲರಿಗೂ #AI ನ ಜವಾಬ್ದಾರಿಯುತ ಮತ್ತು ಪರಿವರ್ತನೆಯ ಬಳಕೆಯನ್ನು ಖಚಿತಪಡಿಸುತ್ತಿದೆ. ಅಲ್ಲದೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಷ್ಟ್ರೀಯ ಮಿಷನ್ ಆನ್ ಇಂಟರ್ ಡಿಸಿಪ್ಲಿನರಿ ಸೈಬರ್-ಫಿಸಿಕಲ್ ಸಿಸ್ಟಮ್ಸ್ (ಎನ್ ಎಂ- ಐಸಿಪಿಎಸ್) ಅನ್ನು ಅನುಷ್ಠಾನಗೊಳಿಸುತ್ತಿದೆ.
ಈ ಮಿಷನ್ ಅಡಿಯಲ್ಲಿ, ಖರಗ್‌ಪುರ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಕುರಿತು ತಂತ್ರಜ್ಞಾನ ಆವಿಷ್ಕಾರ ಕೇಂದ್ರಗಳನ್ನು (ಟಿಐಹೆಚ್) ಸ್ಥಾಪಿಸಲಾಗಿದೆ, ಇದು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮುಂದಿನ ಪೀಳಿಗೆಯ ವಿಜ್ಞಾನಿಗಳು, ಎಂಜಿನಿಯರ್‌ಗಳು, ತಂತ್ರಜ್ಞರು ಮತ್ತು ತಂತ್ರಜ್ಞರ ಸೃಷ್ಟಿಗೆ ಅತ್ಯಾಧುನಿಕ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಉತ್ಪಾದಕ ಕೃತಕ ಬುದ್ಧಿಮತ್ತೆಯ ಉದ್ಯೋಗದ ಕುರಿತು ಯಾವುದೇ ಅಂಕಿಅಂಶಗಳು ಲಭ್ಯವಿಲ್ಲ. ಆದಾಗ್ಯೂ, ನಾಸ್ಕಾಂ ಡೇಟಾ ಪ್ರಕಾರ, ಭಾರತದಲ್ಲಿ ಒಟ್ಟಾರೆ ಎಐ ಉದ್ಯೋಗಗಳು ಸುಮಾರು 416,000 ಎಂದು ಅಂದಾಜಿಸಲಾಗಿದೆ. ಈ ವಲಯದ ಬೆಳವಣಿಗೆಯ ದರವು ಸುಮಾರು ಶೇ.20-25 ಎಂದು ಅಂದಾಜಿಸಲಾಗಿದೆ. ಇದಲ್ಲದೆ, 2035 ರ ವೇಳೆಗೆ ಭಾರತದ ಆರ್ಥಿಕತೆಗೆ ಎಐ ಹೆಚ್ಚುವರಿ 957 ಶತಕೋಟಿ ಡಾಲರ್ ಕೊಡುಗೆಯನ್ನು ನೀಡುವ ನಿರೀಕ್ಷೆಯಿದೆ.
ಉತ್ಪಾದಕ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ತಂತ್ರಜ್ಞಾನಗಳು ಇನ್ನೂ ವಿಕಸನಗೊಳ್ಳುತ್ತಿವೆ; ಪ್ರಸ್ತುತ, ಉತ್ಪಾದಕ ಕೃತಕ ಬುದ್ಧಿಮತ್ತೆಗೆ ಯಾವುದೇ ನಿರ್ದಿಷ್ಟ ನಿಯಂತ್ರಣವಿಲ್ಲ. ಆದಾಗ್ಯೂ, ಎಐ ಅನ್ನು ಅಭಿವೃದ್ಧಿ ಮತ್ತು ನಿಯೋಜನೆಯು ಗೌಪ್ಯತೆ, ಡೇಟಾ ರಕ್ಷಣೆ, ಬೌದ್ಧಿಕ ಆಸ್ತಿ ಮತ್ತು ಸೈಬರ್ ಭದ್ರತೆಗೆ ಸಂಬಂಧಿಸಿದ ಕಾನೂನುಗಳು ಮತ್ತು ನೀತಿಗಳ ಮೂಲಕ ನಿಯಂತ್ರಿಸಲಾಗುತ್ತಿದೆ.
ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
****
(रिलीज़ आईडी: 1896082)
आगंतुक पटल : 406