ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

​​​​​​​ಭಾರತದಲ್ಲಿ ಆಸಿಡ್ ಗಳ ಆನ್‌ಲೈನ್ ಮಾರಾಟದ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(CCPA) ನೊಟೀಸ್ ಜಾರಿ


ವಿನಾಶಕಾರಿ ಆಸಿಡ್ ಗಳ ಸುಲಭವಾಗಿ ಲಭ್ಯವಾಗುವುದಕ್ಕೆ ಕಾರಣಗಳನ್ನು ತೋರಿಸುವಂತೆ ಇ-ಕಾಮರ್ಸ್ ಘಟಕಗಳಿಗೆ ಸಿಸಿಪಿಎ ಒತ್ತಾಯ

Posted On: 16 DEC 2022 3:52PM by PIB Bengaluru

ಗ್ರಾಹಕ ವ್ಯವಹಾರಗಳ ಇಲಾಖೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮವನ್ನು ತೆಗೆದುಕೊಂಡಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಮಧ್ಯೆ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು CCPA ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದೆ. 

ಸಿಸಿಪಿಎ ಎರಡು ಇ-ಕಾಮರ್ಸ್ ಘಟಕಗಳಿಗೆ ನೋಟಿಸ್‌ ಜಾರಿ ಮಾಡಿದೆ. ಅವುಗಳು ಫ್ಲಿಪ್‌ಕಾರ್ಟ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ಮತ್ತು ಫ್ಯಾಶ್‌ನಿಯರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (meesho.com). ಈ ಕಂಪೆನಿಗಳು ತಮ್ಮ ಆನ್ ಲೈನ್ ವಹಿವಾಟಿನಲ್ಲಿ ಆಸಿಡ್ ಮಾರಾಟಕ್ಕೆ ಸಂಬಂಧಿಸಿದ ಉಲ್ಲಂಘನೆಗಳಿಗಾಗಿ 7 ದಿನಗಳೊಳಗೆ ವಿವರವಾದ ಪ್ರತಿಕ್ರಿಯೆಗಳನ್ನು ನೀಡುವಂತೆ ಆದೇಶ ಹೊರಡಿಸಿದೆ. 

ಭಾರತದಲ್ಲಿ ಗ್ರಾಹಕರ ಆಸಕ್ತಿಯ ಕಾವಲುಗಾರ ಸಿಸಿಪಿಎ, ಈ ಇ-ಕಾಮರ್ಸ್ ವೇದಿಕೆಗಳಲ್ಲಿ ಹೆಚ್ಚು ನಾಶಕಾರಿ ಆಸಿಡ್ ಗಳು ಮಾರಾಟವಾಗುತ್ತವೆ ಎಂದು ಪತ್ತೆಹಚ್ಚಿದೆ. ಈ ಇ-ಪ್ಲಾಟ್‌ಫಾರ್ಮ್‌ಗಳಲ್ಲಿ ಅಂತಹ ಆಸಿಡ್ ಗಳ ಸುಲಭ ಮತ್ತು ಅನಿಯಂತ್ರಿತ ಲಭ್ಯತೆಯನ್ನು ಪ್ರಶ್ನಿಸಿದೆ. ಅಂತಹ ಅಪಾಯಕಾರಿ ಆಸಿಡ್ ಗಳು ಗ್ರಾಹಕರಿಗೆ ಸುಲಭವಾಗಿ ಸಿಗುವುದು ಸಾರ್ವಜನಿಕರಿಗೆ ಅಪಾಯಕಾರಿ ಮತ್ತು ಅಸುರಕ್ಷಿತವಾಗಿದೆ.

ಇತ್ತೀಚೆಗೆ ದೆಹಲಿಯಲ್ಲಿ 17 ವರ್ಷದ ಯುವಕನ ಮೇಲೆ ನಡೆದ ಅಹಿತಕರ ಘಟನೆಯ ಬಳಿಕ ಆರೋಪಿಗಳು ಫ್ಲಿಪ್‌ಕಾರ್ಟ್‌ನಿಂದ ಆಸಿಡ್ ಖರೀದಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿದ್ದವು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿಸಿಪಿಎ, ವಿವರವಾದ ಪ್ರತಿಕ್ರಿಯೆಯನ್ನು 7 ದಿನಗಳೊಳಗೆ ಸಲ್ಲಿಸಲು ಆದೇಶಿಸಿದೆ. 

ಲಕ್ಷ್ಮಿ v/s ಯೂನಿಯನ್ ಆಫ್ ಇಂಡಿಯಾ &Ors [(2014) 4 SCC 427] ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ, ಗೃಹ ವ್ಯವಹಾರಗಳ ಸಚಿವಾಲಯ, ಜನರ ಮೇಲೆ ಆಸಿಡ್ ದಾಳಿಗಳನ್ನು ತಡೆಗಟ್ಟಲು ಮತ್ತು ಆಸಿಡ್ ದಾಳಿಯಿಂದ ಬದುಕುಳಿದವರ ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು” ಕುರಿತು 2013ರ ಆಗಸ್ಟ್ 30ರಂದು ಆದೇಶ ನೀಡಿತ್ತು. ಆಸಿಡ್ ದಾಳಿಗಳನ್ನು ಕಡಿಮೆ ಮಾಡಲು ಮತ್ತು ದಾಳಿಗೊಳಗಾದವರ ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಕಾನೂನಿನಲ್ಲಿ ಉಲ್ಲೇಖಿಸಿರುವ ಕ್ರಮಗಳನ್ನು ಜಾರಿಗೆ ತರಲು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು. ಆಸಿಡ್ ಗಳ ಮಾರಾಟವನ್ನು ನಿಯಂತ್ರಿಸಲು ಹಲವಾರು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿವೆ. ಈ ಇ-ಕಾಮರ್ಸ್ ಮಾರಾಟ ಸಂಸ್ಥೆಗಳ ಉತ್ಪನ್ನಗಳು ರಾಷ್ಟ್ರದ ಉದ್ದಗಲಕ್ಕೂ ತಲುಪುತ್ತವೆ. ಈ ನಿಟ್ಟಿನಲ್ಲಿ ಇ-ಕಾಮರ್ಸ್ ಕಂಪೆನಿಗಳು ನಡೆಸಿರುವ ಪರಿಶೀಲನೆಗಳು ಮತ್ತು ಅನುಸರಣೆಗಳನ್ನು ಒದಗಿಸಲು ಸಿಸಿಪಿಎ ಸೂಚಿಸಿದೆ. 

CCPA, ನಾಶಕಾರಿ ಆಸಿಡ್ ಗಳ ಆನ್‌ಲೈನ್ ಮಾರಾಟದ ಬಗ್ಗೆ ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಮುಂದಾಗಿದ್ದು, ಮೀಶೋ ಆಪ್ ನಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಮತ್ತು ಗೃಹ ಸಚಿವಾಲಯ ನೀಡಿದ ಸಲಹೆಯನ್ನು ಉಲ್ಲಂಘಿಸಿ ಆಸಿಡ್ ಮಾರಾಟ ಮಾಡುವುದನ್ನು ಪತ್ತೆಹಚ್ಚಿದೆ. 

CCPA ಸೂಚನೆಗಳ ನಿರ್ದೇಶನದಂತೆ, ಈ ಇ-ಕಾಮರ್ಸ್ ಘಟಕಗಳು ಕಾನೂನು ಉಲ್ಲಂಘಿಸುವುದು ಕಂಡುಬಂದರೆ ಗ್ರಾಹಕ ಸಂರಕ್ಷಣಾ ಕಾಯಿದೆ, 2019 ರ ನಿಬಂಧನೆಗಳ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. 

ಗ್ರಾಹಕ ಸಂರಕ್ಷಣಾ ಕಾಯಿದೆ, 2019 ರ ಸೆಕ್ಷನ್ 2(9) ಅಡಿಯಲ್ಲಿ ವ್ಯಾಖ್ಯಾನಿಸಲಾದ 'ಗ್ರಾಹಕ ಹಕ್ಕುಗಳು' ಜನರ ಜೀವ ಮತ್ತು ಆಸ್ತಿಪಾಸ್ತಿಗೆ ಅಪಾಯಕಾರಿಯಾದ ಸರಕುಗಳು, ಉತ್ಪನ್ನಗಳು ಅಥವಾ ಸೇವೆಗಳ ಮಾರುಕಟ್ಟೆ-ಪ್ರಚಾರ ವಿರುದ್ಧ ರಕ್ಷಿಸುವ ಹಕ್ಕನ್ನು ಒಳಗೊಂಡಿದೆ. ಇ-ಮಾರುಕಟ್ಟೆ ಸಂಸ್ಥೆಗಳು ಎಗ್ಗಿಲ್ಲದೆ, ಅನಿಯಂತ್ರಿತವಾಗಿ ನಾಶಕಾರಿ ಆಸಿಡ್ ಗಳನ್ನು ಮಾರಾಟ ಮಾಡುವುದು ಕಂಡುಬಂದರೆ ಜನರನ್ನು ವಿನಾಶಕ್ಕೆ ದೂಡಿದಂತೆ ಆಗುತ್ತದೆ. ಸಮಾಜದ ದುರ್ಬಲ ವರ್ಗಗಳಾದ ಮಹಿಳೆಯರು ಮತ್ತು ಮಕ್ಕಳಿಗೆ ಹಾನಿಕಾರಕ ಪರಿಣಾಮ ಬೀರಬಹುದು ಎಂದು ಹೇಳುತ್ತದೆ. 

ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಗಳು, 2020 ರ ಸೆಕ್ಷನ್ 4 (3) ರ ಪ್ರಕಾರ, ಯಾವುದೇ ಇ-ಕಾಮರ್ಸ್ ಘಟಕವು ತನ್ನ ವೇದಿಕೆಯಲ್ಲಿ ಅಥವಾ ಇನ್ಯಾವುದೇ ವ್ಯವಹಾರದ ಸಂದರ್ಭದಲ್ಲಿ ಅನ್ಯಾಯದ ವ್ಯಾಪಾರ ಮಾಡುವಂತಿಲ್ಲ. 

ತುರ್ತು ಅಗತ್ಯ ಮತ್ತು ಗಮನವನ್ನು ಪರಿಗಣಿಸಿ, ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಸೆಕ್ಷನ್ 18 (1) ರ ಅಡಿಯಲ್ಲಿ ಸಿಸಿಪಿಎ, ಸ್ವಪ್ರೇರಿತವಾಗಿ ಈ ಕ್ರಮ ಕೈಗೊಂಡಿದೆ. ಇದು ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು, ಉತ್ತೇಜಿಸಲು ಮತ್ತು ಜಾರಿಗೊಳಿಸಲು ಅಧಿಕಾರ ನೀಡುತ್ತದೆ. ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟುವುದು, ಅನ್ಯಾಯದ ವ್ಯಾಪಾರದ ಅಭ್ಯಾಸಗಳನ್ನು ತಡೆಗಟ್ಟುವುದು ಮತ್ತು ಅಂತಹ ಆಚರಣೆಗಳಲ್ಲಿ ಯಾವುದೇ ವ್ಯಕ್ತಿಯು ತನ್ನನ್ನು ತೊಡಗಿಸಿಕೊಳ್ಳದಂತೆ ನೋಡಿಕೊಳ್ಳುತ್ತದೆ. 

ಈ ಮೂಲಕ ಸಿಸಿಪಿಎ, ಗ್ರಾಹಕರ ಹಿತಾಸಕ್ತಿಗಳನ್ನು ಬಲಪಡಿಸಲು, ಅವರ ಸುರಕ್ಷತೆ ರಕ್ಷಣೆಗೆ ಬದ್ಧವಾಗಿದೆ.

****



(Release ID: 1884177) Visitor Counter : 127


Read this release in: English , Gujarati , Urdu , Hindi