ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯು ಪ್ರಾರಂಭವಾದಾಗಿನಿಂದ 44000 ಅನುಮೋದನೆಗಳನ್ನು ಸುಗಮಗೊಳಿಸಿದೆ; 28 ಸಾವಿರಕ್ಕೂ ಹೆಚ್ಚು ಅರ್ಜಿಗಳು ಪ್ರಕ್ರಿಯೆಯಲ್ಲಿವೆ


ಹೂಡಿಕೆದಾರರು ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ (ನ್ಯಾಶನಲ್ ಸಿಂಗಲ್ ವಿಂಡೋ ಸಿಸ್ಟಮ್ -ಎನ್‌ ಎಸ್‌ ಡಬ್ಲ್ಯು ಎಸ್‌) ಮೂಲಕ 248 G2B ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು

ಮುಂದಿನ ವಾರ ಎನ್‌ ಎಸ್‌ ಡಬ್ಲ್ಯು ಎಸ್‌ ಕುರಿತ ಪರಿಶೀಲನೆ ನಡೆಯಲಿದೆ

Posted On: 01 DEC 2022 3:41PM by PIB Bengaluru

ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯು (ಎನ್‌ ಎಸ್‌ ಡಬ್ಲ್ಯು ಎಸ್‌) ಪ್ರಸ್ತುತ 26 ಕೇಂದ್ರ ಸಚಿವಾಲಯಗಳು/ ಇಲಾಖೆಗಳಿಂದ 248 G2B ಅನುಮತಿಗಾಗಿ ಅರ್ಜಿಗಳನ್ನು ಸ್ವೀಕರಿಸುತ್ತದೆ, ಜೊತೆಗೆ 16 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿವಿಧ ರಾಜ್ಯ/ ಕೇಂದ್ರಾಡಳಿತ ಪ್ರದೇಶ ಮಟ್ಟದ ಅನುಮತಿಗಳ ಅರ್ಜಿಗಳನ್ನೂ ಸ್ವೀಕರಿಸುತ್ತದೆ.

ಈ ಪೋರ್ಟಲ್ ಹೂಡಿಕೆದಾರ ಸಮುದಾಯದಿಂದ ಹೆಚ್ಚಿನ ಆಕರ್ಷಣೆ ಪಡೆಯುತ್ತಿದೆ ಮತ್ತು ಇಲ್ಲಿಯವರೆಗೆ ಸುಮಾರು 3.7 ಲಕ್ಷಕ್ಕೂ ಹೆಚ್ಚು ಅನನ್ಯ ಸಂದರ್ಶಕರನ್ನು ಹೊಂದಿದೆ. ಎನ್‌ ಎಸ್‌ ಡಬ್ಲ್ಯು ಎಸ್‌ ಮೂಲಕ 44,000ಕ್ಕೂ ಹೆಚ್ಚು ಅನುಮೋದನೆಗಳನ್ನು ಸುಗಮಗೊಳಿಸಲಾಗಿದೆ ಮತ್ತು 28,000ಕ್ಕೂ ಹೆಚ್ಚು ಅನುಮೋದನೆಗಳು ಪ್ರಸ್ತುತ ಪ್ರಕ್ರಿಯೆಯಲ್ಲಿವೆ. ಬಳಕೆದಾರರ/ಉದ್ಯಮದ ಪ್ರತಿಕ್ರಿಯೆಯನ್ನು ಆಧರಿಸಿ ಹೆಚ್ಚಿನ ಸಂಖ್ಯೆಯ ಅನುಮೋದನೆಗಳು ಮತ್ತು ಪರವಾನಗಿಗಳನ್ನು ಹಂತಹಂತವಾಗಿ ಪೋರ್ಟಲ್ ನಲ್ಲಿ ಸೇರಿಸಲಾಗುವುದು. ಎಲ್ಲ ಕ್ಷೇತ್ರಗಳಲ್ಲಿ ಅನುಕೂಲಕರ ವ್ಯಾಪಾರ ಮತ್ತು ಹೂಡಿಕೆ ವಾತಾವರಣವನ್ನು ಸೃಷ್ಟಿಸಲು ಸುಧಾರಣೆಗಳು ಮತ್ತು ಇತರ ದಿಟ್ಟ ಕ್ರಮಗಳಿಗೆ ಸರ್ಕಾರ ಬದ್ಧವಾಗಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಸೆಪ್ಟೆಂಬರ್ 22, 2021 ರಂದು ಎಲ್ಲಾ ಭಾಗೀದಾರರು ಮತ್ತು ಸಾರ್ವಜನಿಕರಿಗಾಗಿ ಎನ್‌ ಎಸ್‌ ಡಬ್ಲ್ಯು ಎಸ್‌ ಗೆ ಚಾಲನೆ ನೀಡಿದರು. ಹೂಡಿಕೆ ಅನುಮತಿ ಘಟಕ (ಐಸಿಸಿ) ರಚನೆಯ ಬಜೆಟ್ ಘೋಷಣೆಯ ಪ್ರಕಾರ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಎನ್‌ ಎಸ್‌ ಡಬ್ಲ್ಯು ಎಸ್‌ ಅನ್ನು ರಚಿಸಿದೆ. ಇದು ಹೂಡಿಕೆದಾರರು, ಉದ್ಯಮಿಗಳು ಮತ್ತು ಭಾರತದಲ್ಲಿನ ವ್ಯವಹಾರಗಳಿಗೆ ಅಗತ್ಯವಿರುವ ಅನುಮೋದನೆಗಳು ಮತ್ತು ಅನುಮತಿಗಳನ್ನು ಗುರುತಿಸಲು ಮತ್ತು ಪಡೆಯಲು ಏಕ ವೇದಿಕೆಯನ್ನು ಒದಗಿಸುತ್ತದೆ. 

ವಿವಿಧ ಸಚಿವಾಲಯಗಳಿಗೆ ಮಾಹಿತಿ ಸಲ್ಲಿಸುವುದನ್ನು ಕಡಿಮೆ ಮಾಡಲು, ಅನುಸರಣೆ ಹೊರೆಯನ್ನು ಕಡಿಮೆ ಮಾಡಲು, ವಲಯದ ನಿರ್ದಿಷ್ಟ ಸುಧಾರಣೆಗಳು ಮತ್ತು ಯೋಜನೆಗಳನ್ನು ಉತ್ತೇಜಿಸಲು, ಯೋಜನೆಗಳ ಆರಂಭಿಕ ಬೆಳವಣಿಗೆ ಅವಧಿಯನ್ನು ಕಡಿಮೆ ಮಾಡಲು ಮತ್ತು ವ್ಯವಹಾರವನ್ನು ಪ್ರಾರಂಭಿಸುವ ಮತ್ತು ವ್ಯವಹಾರವನ್ನು ಮಾಡುವ ಸುಲಭತೆಯನ್ನು ಉತ್ತೇಜಿಸಲು ಈ ವ್ಯವಸ್ಥೆಯನ್ನು  ರೂಪಿಸಲಾಗಿದೆ.  ಎನ್‌ ಎಸ್‌ ಡಬ್ಲ್ಯು ಎಸ್‌ ಗುರುತಿಸುವಿಕೆ, ಅನ್ವಯಿಸುವಿಕೆ ಮತ್ತು ಎಲ್ಲ ಸಮಗ್ರ ರಾಜ್ಯಗಳು ಮತ್ತು ಕೇಂದ್ರ ಇಲಾಖೆಗಳಿಗೆ ಅನುಮೋದನೆಗಳ ನಂತರದ ನಿಗಾ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ, ಇದು ನಿಜವಾದ ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯಾಗಿದೆ. 

ನಿಮ್ಮ ಅನುಮೋದನೆಗಳ ಬಗ್ಗೆ ತಿಳಿಯಿರಿ (ಕೆವೈಎ) ಈ ಸೇವೆಯು ಎನ್‌ ಎಸ್‌ ಡಬ್ಲ್ಯು ಎಸ್‌ ನಲ್ಲಿ 32 ಕೇಂದ್ರ ಸಚಿವಾಲಯಗಳು/ಇಲಾಖೆಗಳ 544 ಅನುಮೋದನೆಗಳು ಮತ್ತು 30 ರಾಜ್ಯಗಳು/ಯುಟಿಗಳ 2895 ಅನುಮೋದನೆಗಳ ಬಗ್ಗೆ  ನೈಜ ಸಮಯದ ವಿವರ ನೀಡುತ್ತದೆ. ಒಟ್ಟು 3439 ಅನುಮೋದನೆಗಳನ್ನು ಪಟ್ಟಿ ಮಾಡಲಾಗಿದೆ. ಒಟ್ಟು 1,32,510 ಹೂಡಿಕೆದಾರರು ಕೆವೈಎ ಮಾಡ್ಯೂಲ್ ಅನ್ನು ತಮ್ಮ ವ್ಯವಹಾರಗಳಿಗೆ ಅಗತ್ಯವಿರುವ ಅನುಮೋದನೆಗಳ ಬಗ್ಗೆ ತಿಳಿದುಕೊಳ್ಳಲು ಬಳಸಿದ್ದಾರೆ. 248 ಅನುಮೋದನೆಗಳೊಂದಿಗೆ 26 ಸಚಿವಾಲಯಗಳು/ ಇಲಾಖೆಗಳು ನೈಜ ಸಮಯದ ಮಾಹಿತಿ ನೀಡುತ್ತವೆ. (ಇದರ ವ್ಯಾಪ್ತಿಯಲ್ಲಿ ಒಟ್ಟು ಅನುಮೋದನೆಗಳು: 376). ಆಂಧ್ರಪ್ರದೇಶ, ಬಿಹಾರ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ನಾಗಾಲ್ಯಾಂಡ್, ಒಡಿಶಾ, ಪಂಜಾಬ್, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸೇರಿ 16 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈ ವ್ಯವಸ್ಥೆಯಲ್ಲಿ ಸೇರಿವೆ.

ಇನ್ನೂ 5 ರಾಜ್ಯಗಳು (ಹರಿಯಾಣ, ಅಂಡಮಾನ್ ಮತ್ತು ನಿಕೋಬಾರ್, ತ್ರಿಪುರಾ, ಜಾರ್ಖಂಡ್ ಮತ್ತು ಅರುಣಾಚಲ ಪ್ರದೇಶ) ಡಿಸೆಂಬರ್ 15 ರೊಳಗೆ ಇದರಲ್ಲಿ ಸೇರ್ಪಡೆಯಾಗಲು ತಂಡಗಳು ಕೆಲಸ ಮಾಡುತ್ತಿವೆ. ಇಲ್ಲಿಯವರೆಗೆ ಎನ್‌ ಎಸ್‌ ಡಬ್ಲ್ಯು ಎಸ್‌ ನಲ್ಲಿ ಒಟ್ಟು 71,000 ಅನುಮೋದನೆಗಳನ್ನು ಅನ್ವಯಿಸಲಾಗಿದೆ. ಅಮೆರಿಕಾ, ಬ್ರಿಟನ್‌ ಮತ್ತು ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಸೇರಿದಂತೆ 157 ದೇಶಗಳ ಸಂದರ್ಶಕರು ಎನ್‌ ಎಸ್‌ ಡಬ್ಲ್ಯು ಎಸ್‌ ಗೆ ಭೇಟಿ ನೀಡಿದ್ದಾರೆ. 31 ಡಿಸೆಂಬರ್ 2022 ರೊಳಗೆ ಉಳಿದಿರುವ 8 ಸಚಿವಾಲಯಗಳು/ಭಾರತದ ಇಲಾಖೆಗಳು ಮತ್ತು 31 ಮಾರ್ಚ್ 2023 ರೊಳಗೆ ಬಾಕಿ ಇರುವ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳನ್ನು ಈ ವ್ಯವಸ್ಥೆಯಡಿ ಸೇರಿಸುವ ನಿರೀಕ್ಷೆ ಇದೆ.

ಎನ್‌ ಎಸ್‌ ಡಬ್ಲ್ಯು ಎಸ್‌ (ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ) ನ ಪ್ರಗತಿ ಮತ್ತು ಸ್ಥಿತಿಯ ಪರಿಶೀಲನೆಯು 5ನೇ ಡಿಸೆಂಬರ್ 2022 ರಂದು ಸಚಿವಾಲಯಗಳು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೈಗಾರಿಕಾ ಪ್ರತಿನಿಧಿಗಳೊಂದಿಗೆ ನಡೆಯಲಿದೆ. ಈ ನಿಟ್ಟಿನಲ್ಲಿ, ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯೊಂದಿಗೆ ವಿವಿಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳನ್ನು ಇದರಲ್ಲಿ ಸೇರಿಸುವ ಕುರಿತ ಸ್ಥಿತಿಯನ್ನು ಚರ್ಚಿಸಲು ಪೂರ್ವಸಿದ್ಧತಾ ಸಭೆಗಳನ್ನು ನಡೆಸಲಾಗಿದೆ.

ಈ ಸಭೆಗಳು ಭಾಗೀದಾರರ ಸಕ್ರಿಯ ಭಾಗವಹಿಸುವಿಕೆಗೆ ಸಾಕ್ಷಿಯಾಗಿವೆ. ಡಿಪಿಐಐಟಿ ಮತ್ತು ಇನ್ವೆಸ್ಟ್ ಇಂಡಿಯಾ ಈ ರಾಷ್ಟ್ರೀಯ ಪೋರ್ಟಲ್ ಅನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಸಚಿವಾಲಯಗಳು, ರಾಜ್ಯಗಳು ಮತ್ತು ಕೈಗಾರಿಕಾ ಸಂಘಗಳೊಂದಿಗೆ ನಿಯಮಿತವಾಗಿ ಪರಿಶೀಲನಾ ಸಭೆಗಳನ್ನು ನಡೆಸುತ್ತಿದೆ. ಡಿಪಿಐಐಟಿಯ ವಿಶೇಷ ಕಾರ್ಯದರ್ಶಿ ನಡೆಸಿದ ಪರಿಶೀಲನಾ ಸಭೆಗಳಲ್ಲಿ ರಾಜ್ಯಗಳು ಮತ್ತು ಸಚಿವಾಲಯಗಳಿಂದ 150 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ ಮತ್ತು ಎನ್‌ ಎಸ್‌ ಡಬ್ಲ್ಯು ಎಸ್‌ ನ ಮುಂದಿನ ದಾರಿಯ ಕುರಿತು ಚರ್ಚೆ ನಡೆಸಿದ್ದಾರೆ.

ಭಾಗೀದಾರ ಸಚಿವಾಲಯಗಳು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗಿನ ಸಂವಾದದ ಸಮಯದಲ್ಲಿ, ದೇಶದ ಬಲವಾದ ಬೆಳವಣಿಗೆಯ ಪಥದ ಬಗ್ಗೆ ಮತ್ತು ನಮ್ಮ ಮಹತ್ವಾಕಾಂಕ್ಷೆಗಳು ಮತ್ತು ಗುರಿಗಳನ್ನು ಸಾಧಿಸಲು 'ಇಡೀ ಸರ್ಕಾರದ' ವಿಧಾನವು ಹೇಗೆ ನಿರ್ಣಾಯಕವಾಗಿದೆ ಎಂಬ ಬಗ್ಗೆ ಒತ್ತಿ ಹೇಳಲಾಯಿತು. ಈ ಹಿನ್ನೆಲೆಯಲ್ಲಿ, ಎನ್‌ ಎಸ್‌ ಡಬ್ಲ್ಯು ಎಸ್‌ ಉಪಕ್ರಮವು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಂದೇ ಪೋರ್ಟಲ್‌ನಲ್ಲಿ ಹೂಡಿಕೆದಾರರ ಸಂಬಂಧಿತ ಅನುಮತಿಗಳನ್ನು ಪಾರದರ್ಶಕತೆ ಮತ್ತು ಹೊಣೆಗಾರಿಕೆ ಮತ್ತು ಸುಲಭ ವ್ಯವಹಾರವನ್ನು ಉತ್ತೇಜಿಸಲು ಒಗ್ಗೂಡಿರುವುದು 'ಇಡೀ ಸರ್ಕಾರದ' ವಿಧಾನಕ್ಕೆ ಪರಿಪೂರ್ಣ ಉದಾಹರಣೆಯಾಗಿದೆ.

*****



(Release ID: 1880315) Visitor Counter : 259


Read this release in: English , Urdu , Hindi , Gujarati