ವಾರ್ತಾ ಮತ್ತು ಪ್ರಸಾರ ಸಚಿವಾಲಯ

280 ಚಲನಚಿತ್ರಗಳು, 79 ದೇಶಗಳು, 9 ದಿನಗಳು, ಒಂದು ಇಫ್ಫಿ, ಶೂನ್ಯ ಲೋಪ!

Posted On: 17 NOV 2022 7:53PM by PIB Bengaluru

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ -ಇಫ್ಫಿಯ 53ನೇ ಆವೃತ್ತಿ,  ಗೋವಾದ ತಲೈಗಾವೊದ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ವರ್ಣರಂಜಿತ ಉದ್ಘಾಟನಾ ಸಮಾರಂಭಕ್ಕೆ ಸಜ್ಜಾಗಿದೆ. ಉತ್ಸವದ ಈ ಆವೃತ್ತಿಯು ಚಲನಚಿತ್ರ ಪ್ರತಿನಿಧಿಗಳಿಗೆ 280 ಚಲನಚಿತ್ರಗಳ ಒಂದು ಸಂಚಯವನ್ನು ಪ್ರಸ್ತುತಪಡಿಸಿ, ಒಟ್ಟು 79 ದೇಶಗಳ ಜನರ ಜೀವನ, ಆಕಾಂಕ್ಷೆಗಳು ಮತ್ತು ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಆಹ್ವಾನಿಸುತ್ತದೆ. ಉತ್ಸವದ ಸಿದ್ಧತೆಗಳು ಭರದಿಂದ ಸಾಗಿದ್ದು, ಉತ್ಸವದ ನಿರ್ದೇಶಕ ಮತ್ತು ಎನ್.ಎಫ್.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ, ರವೀಂದರ್ ಭಾಕರ್; ಇಎಸ್ಜಿ ಸಿಇಒ, ಶ್ವೇತಾ ಸಚನ್; ಪಿಐಬಿಯ ಮಹಾನಿರ್ದೇಶಕ ಮೋನಿದೀಪಾ ಮುಖರ್ಜಿ; ಮತ್ತು ಪಿಐಬಿಯ ಹೆಚ್ಚುವರಿ ಮಹಾನಿರ್ದೇಶಕ ಪ್ರಾಗ್ಯಾ ಪಲಿವಾಲ್ ಗೌರ್ ಅವರು ಪಣಜಿಯ ಹಳೆ ಜಿಎಂಸಿ ಕಟ್ಟಡದಲ್ಲಿ ಇಂದು ಉತ್ಸವದ ಪೂರ್ವಭಾವಿ ಸಭೆ - ಅಥವಾ ಕರ್ಟನ್-ಫ್ಲೈಯರ್ ಎಂದು ಹೇಳಲಾಗುವ ಸಭೆ - ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 

ಸಭೆಯ ಮುಖ್ಯಾಂಶಗಳು ಈ ಕೆಳಕಂಡಂತಿವೆ:
ಡಯಟರ್ ಬರ್ನರ್ ನಿರ್ದೇಶನದ ಆಸ್ಟ್ರಿಯಾದ ಅಲ್ಮಾ ಮತ್ತು ಆಸ್ಕರ್ ಚಿತ್ರಗಳು  ಚಿತ್ರೋತ್ಸವಕ್ಕೆ ಚಾಲನೆ ನೀಡಲಿವೆ. ಪಂಜಿಂ ನ ಐನಾಕ್ಸ್-1 ರಲ್ಲಿ ಮಧ್ಯಾಹ್ನ 2.00 ಗಂಟೆಗೆ ಆರಂಭಿಕ ಚಿತ್ರಕ್ಕೆ ಕೆಂಪುಹಾಸಿನ ಸ್ವಾಗತ ದೊರಕಲಿದ್ದು, ನಂತರ ಚಿತ್ರದ ಪ್ರದರ್ಶನ ನಡೆಯಲಿದೆ.

ಪೋಲಿಷ್ ಚಲನಚಿತ್ರ ಕ್ರಿಜ್ಜ್ಟೋಫ್ ಜಾನುಸ್ಸಿ ಅವರ ಪರ್ಫೆಕ್ಟ್ ನಂಬರ್ ಸಮಾರೋಪದ ಚಿತ್ರವಾಗಿದೆ. ನವೆಂಬರ್ 28 ರಂದು ಮಧ್ಯಾಹ್ನ 2.00 ಗಂಟೆಗೆ ಪಂಜಿಮ್ ನ ಐನಾಕ್ಸ್-1 ರಲ್ಲಿ ಚಿತ್ರದ ಸಮಾರೋಪ ಸಮಾರಂಭ ಪ್ರಾರಂಭವಾಗಲಿದೆ.

ಮರ್ಸಿಡಿಸ್ ಬ್ರೈಸ್ ಮೋರ್ಗನ್ ಅವರ ಜರ್ಮನಿ, ಕೆನಡಾ ಮತ್ತು ಯುಎಸ್ಎಯಲ್ಲಿ 2022 ರಲ್ಲಿ ಸೆಟ್ಟೇರಿರುವ ಫಿಕ್ಸೇಷನ್ ಚಿತ್ರವು ಚಿತ್ರೋತ್ಸವದ ಮಧ್ಯದ ಚಿತ್ರವಾಗಿದೆ.

ಭಾರತದ 25 ಚಲನಚಿತ್ರಗಳು ಮತ್ತು 19 ಸಾಕ್ಷ್ಯಚಿತ್ರ (ನಾನ್-ಫೀಚರ್)ಗಳು 'ಭಾರತೀಯ ಪನೋರಮಾ'ದಲ್ಲಿ ಪ್ರದರ್ಶನಗೊಳ್ಳಲಿದ್ದು, 183 ಚಲನಚಿತ್ರಗಳು ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಭಾಗವಾಗಲಿವೆ.

52 ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತೆ ಆಶಾ ಪಾರೇಖ್ ಅವರಿಗಾಗಿ ಉತ್ಸವದ ವಿಶೇಷ ವಿಭಾಗದಲ್ಲಿ ತೀಸ್ರಿ ಮಂಜಿಲ್, ದೋ ಬದನ್ ಮತ್ತು ಕಟಿ ಪತಂಗ್ ಎಂಬ ಮೂರು ಚಲನಚಿತ್ರಗಳ ಪ್ರದರ್ಶನ ಆಯೋಜಿಸಿದೆ.

ಮಣಿಪುರಿ ಸಿನೆಮಾ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಮಣಿಪುರ ರಾಜ್ಯ ಚಲನಚಿತ್ರ ಅಭಿವೃದ್ಧಿ ಸಂಸ್ಥೆ ಸಂಗ್ರಹಿಸಿರುವ ಐದು ಚಲನಚಿತ್ರಗಳು ಮತ್ತು ಐದು ನಾನ್-ಫೀಚರ್ ಚಲನಚಿತ್ರಗಳ ಪ್ಯಾಕೇಜ್ ಅನ್ನು ಭಾರತೀಯ ಪನೋರಮಾ ಅಡಿಯಲ್ಲಿ ಪ್ರದರ್ಶಿಸಲಾಗುತ್ತಿದೆ.

ಈಶಾನ್ಯ ಭಾರತದ ಚಲನಚಿತ್ರಗಳನ್ನು ಉತ್ತೇಜಿಸುವ ಉಪಕ್ರಮವಾಗಿ, 5 ಚಲನಚಿತ್ರಗಳು ಮತ್ತು 5 ನಾನ್-ಫೀಚರ್ ಚಲನಚಿತ್ರಗಳು ಮಣಿಪುರಿ ಚಿತ್ರರಂಗದ ಸುವರ್ಣ ಮಹೋತ್ಸವವನ್ನು ಆಚರಿಸಲಿವೆ.

ಅತ್ಯುತ್ತಮ ವಿದೇಶಿ ಭಾಷಾ ವಿಭಾಗದಲ್ಲಿ ಆಸ್ಕರ್ ಗೆ ಭಾರತದ ಅಧಿಕೃತ ಪ್ರವೇಶ ಪಡೆದ ಪಾನ್ ನಳಿನ್ ಅವರ ಚೆಲ್ಲೋ ಶೋ-ದಿ ಲಾಸ್ಟ್ ಫಿಲ್ಮ್ ಶೋ, ಮತ್ತು ಮಧುರ್ ಭಂಡಾರ್ಕರ್ ಅವರ ಇಂಡಿಯಾ ಲಾಕ್ ಡೌನ್ ನ ವಿಶೇಷ ಚಿತ್ರ ಪ್ರದರ್ಶನಗಳೂ ಇರಲಿವೆ.

ಭಾರತೀಯ ರಾಷ್ಟ್ರೀಯ ಚಲನಚಿತ್ರ ಸಂಗ್ರಹಾಲಯ ಚಲನಚಿತ್ರಗಳನ್ನು ಎನ್ಎಫ್.ಡಿ.ಸಿ 'ಭಾರತೀಯ ಪುನರ್ ಸ್ಥಾಪಿತ ಮೇರು ಚಿತ್ರಗಳು (ಇಂಡಿಯನ್ ರಿಸ್ಟೋರ್ಟೆಡ್ ಕ್ಲಾಸಿಕ್ಸ್)' ವಿಭಾಗದಲ್ಲಿ ಪ್ರದರ್ಶಿಸಲಿದೆ. ಇವುಗಳಲ್ಲಿ ಸೊಹ್ರಾಬ್ ಮೋದಿ ಅವರ 1957 ರ ವೇಷಭೂಷಣ ಕಥಾನಕ ನೌಷರ್ವಾನ್-ಎ-ಆದಿಲ್, ರಮೇಶ್ ಮಹೇಶ್ವರಿ ಅವರ 1969 ರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಪಂಜಾಬಿ ಚಿತ್ರ ನಾನಕ್ ನಾಮ್ ಜಹಾಜ್ ಹೈ, ಕೆ ವಿಶ್ವನಾಥ್ ಅವರ 1980 ರ ತೆಲುಗು ಸಂಗೀತ ಪ್ರಧಾನಚಿತ್ರ ಶಂಕರಾಭರಣಂ ಮತ್ತು ಎರಡು ಸತ್ಯಜಿತ್ ರೇ ಮೇರು ಚಿತ್ರಗಳಾದ, 1977 ರ ಅವಧಿಯಲ್ಲಿ ನಿರ್ಮಾಣವಾದ ಶತರಂಜ್  ಕೆ ಖಿಲಾಡಿ ಮತ್ತು 1989 ರ ಸಾಮಾಜಿಕ, ಗಾನಶತ್ರು ಸಹ ಸೇರಿವೆ.

ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ಪ್ಯಾನಿಷ್ ಚಲನಚಿತ್ರ ನಿರ್ದೇಶಕ ಕಾರ್ಲೋಸ್ ಸೌರಾ ಅವರಿಗೆ ನೀಡಲಾಗುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ಅವರ ಪುತ್ರಿ ಅನ್ನಾ ಸೌರಾ ಅವರು ಖ್ಯಾತ ಚಲನಚಿತ್ರ ನಿರ್ಮಾಪಕರ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಉತ್ಸವದಲ್ಲಿ ಅವರ ಸಮಗ್ರ ಜೀವನ ಸಾಧನೆಯನ್ನು ಪ್ರದರ್ಶಿಸಲಾಗುತ್ತಿದೆ.

ಫ್ರಾನ್ಸ್ 'ಸ್ಪಾಟ್ಲೈಟ್' ದೇಶವಾಗಿದ್ದು, ದೇಶ ಕೇಂದ್ರಿತ ಪ್ಯಾಕೇಜ್ ಅಡಿಯಲ್ಲಿ 8 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

'ಫಿಲ್ಮ್ ಬಜಾರ್'ನ ವಿವಿಧ ವಿಭಾಗಗಳಲ್ಲಿ ಕೆಲವು ಅತ್ಯುತ್ತಮ ಚಲನಚಿತ್ರಗಳು ಮತ್ತು ಚಲನಚಿತ್ರ ನಿರ್ಮಾಪಕರ ಸಾಧನೆ ಪ್ರದರ್ಶಿಸಲಿದೆ. ಮಾರ್ಚೆ ಡು ಕಾನ್ಸ್ ನಂತಹ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಅನುಗುಣವಾಗಿ ಪೆವಿಲಿಯನ್ ಗಳು ಮೊದಲ ಬಾರಿಗೆ ಇಫ್ಫಿಯಲ್ಲಿ ಕಾಣಿಸಿಕೊಳ್ಳಲಿವೆ. ಈ ವರ್ಷ ಒಟ್ಟು 42 ಪೆವಿಲಿಯನ್ ಗಳು ಇರಲಿವೆ. ವಿವಿಧ ರಾಜ್ಯ ಸರ್ಕಾರಗಳ ಚಲನಚಿತ್ರ ಕಚೇರಿಗಳು, ಭಾಗವಹಿಸುವ ದೇಶಗಳು, ಉದ್ಯಮದ ಪ್ರಮುಖರು ಮತ್ತು ಸಚಿವಾಲಯದ ಮಾಧ್ಯಮ ಘಟಕಗಳ ಮಳಿಗೆ ಇಲ್ಲಿರುತ್ತದೆ. ಇದೇ ಮೊದಲ ಬಾರಿಗೆ 'ದಿ ವ್ಯೂವಿಂಗ್ ರೂಮ್' ನಲ್ಲಿ ಅನೇಕ ಪುನರುಜ್ಜೀವಗೊಂಡ ಮೇರು ಚಿತ್ರಗಳು ಲಭ್ಯವಾಗಲಿದ್ದು, ಅಲ್ಲಿ ಯಾರೇ ಈ ಚಲನಚಿತ್ರಗಳ ಹಕ್ಕುಗಳನ್ನು ಖರೀದಿಸಲು ಮತ್ತು ವಿಶ್ವದಾದ್ಯಂತದ ಚಲನಚಿತ್ರೋತ್ಸವಗಳಲ್ಲಿ ಬಳಸಲು ಸಾಧ್ಯವಾಗುತ್ತದೆ.

ಪುಸ್ತಕದಿಂದ ಚಿತ್ರೋದ್ಯಮದವರೆಗೆ (ಬುಕ್ಸ್ ಟು ಬಾಕ್ಸ್ ಆಫೀಸ್) ಶೀರ್ಷಿಕೆಯಲ್ಲಿ ಪುಸ್ತಕವನ್ನು ಚಿತ್ರಕ್ಕೆ ಅಳವಡಿಸಿಕೊಳ್ಳುವ ಕಾರ್ಯಕ್ರಮವನ್ನು ಪರಿಚಯಿಸಲಾಗಿದ್ದು, ಪುಸ್ತಕಗಳಲ್ಲಿ ಮುದ್ರಿಸಲಾದ ಉತ್ತಮ ಕಥೆಗಳು ಮತ್ತು ಉತ್ತಮ ಚಲನಚಿತ್ರಗಳ ನಡುವಿನ ಅಂತರವನ್ನು ತಗ್ಗಿಸುವ ಉಪಕ್ರಮ ರೂಪಿಸಲಾಗಿದೆ ಎಂದು ಉತ್ಸವದ ನಿರ್ದೇಶಕರು ಮಾಹಿತಿ ನೀಡಿದರು. ಕೆಲವು ಅತ್ಯುತ್ತಮ ಪ್ರಕಾಶಕರು ತೆರೆಯಮೇಲೆ ತರಬಹುದಾದ ವಸ್ತು ವಿಷಯಕ್ಕೆ ಪರಿವರ್ತಿಸಬಹುದಾದ ಪುಸ್ತಕಗಳ ಹಕ್ಕುಗಳನ್ನು ಮಾರಾಟ ಮಾಡಲು ಉಪಸ್ಥಿತರಿರುವ ನಿರೀಕ್ಷೆಯೂ ಇದೆ.

ಗೋವಾದಾದ್ಯಂತ ಕಾರವಾನ್ ಗಳನ್ನು ನಿಯೋಜಿಸಲಾಗುವುದು ಮತ್ತು ಹಳ್ಳಿಗಳಲ್ಲಿನ ಜನರನ್ನು ತಲುಪುವ ಉಪಕ್ರಮವಾಗಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು.

ಬಯಲು ಕಡಲ ಕಿನಾರೆಯ ಪ್ರದರ್ಶನವನ್ನು ಸಹ ನಡೆಸಲಾಗುತ್ತಿದೆ.

'ಗೌರವ' ವಿಭಾಗವು ಹದಿನೈದು ಭಾರತೀಯ ಮತ್ತು ಐದು ಅಂತಾರಾಷ್ಟ್ರೀಯ ಚಲನಚಿತ್ರಗಳನ್ನು ಒಳಗೊಂಡಿರುತ್ತದೆ.

ನವೆಂಬರ್ 26 ರಂದು ಶಿಗ್ಮೋತ್ಸವ (ಸ್ಪ್ರಿಂಗ್ ಫೆಸ್ಟಿವಲ್) ಮತ್ತು 2022 ರ ನವೆಂಬರ್ 27 ರಂದು ಗೋವಾ ಕಾರ್ನಿವಲ್ ವಿಶೇಷ ಆಕರ್ಷಣೆಗಳಲ್ಲಿ ಸೇರಿವೆ.

ಆಜಾದಿ ಕಾ ಅಮೃತ ಮಹೋತ್ಸವ ಎಂಬ ವಿಷಯದ ಮೇಲೆ ಸಿಬಿಸಿ ಪ್ರದರ್ಶನವನ್ನು ಆಯೋಜಿಸುತ್ತದೆ.

ಗಾಲಿ ಕುರ್ಚಿ ಬಳಸುವ ಮತ್ತು ಆಟಿಸಂ ಸಮಸ್ಯೆಯ ನಟನಾ ಕೋರ್ಸ್ ಹೊಂದಿರುವ ವ್ಯಕ್ತಿಗಳಿಗಾಗಿ ಸ್ಮಾರ್ಟ್ ಫೋನ್ ಚಿತ್ರ ನಿರ್ಮಾಣವನ್ನೂ ನಡೆಸಲು ಎಫ್.ಟಿ.ಐ.ಐ. ಅವಕಾಶ ನೀಡಿದೆ.

ಹಿಂದಿ ಚಲನಚಿತ್ರಗಳ ಹಲವಾರು ಉತ್ಸವಗಳ ಅಗ್ರ ಚಿತ್ರಗಳೂ ಇರಲಿವೆ, ಅವುಗಳ ನಟರು ಸಿನೆಮಾವನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು ಉಪಸ್ಥಿತರಿರುತ್ತಾರೆ. ಪರೇಶ್ ರಾವಲ್ ಅವರ ದಿ ಸ್ಟೋರಿಟೇಲರ್, ಅಜಯ್ ದೇವಗನ್ ಮತ್ತು ಟಬು ಅವರ ದೃಶ್ಯಂ 2, ವರುಣ್ ಧವನ್ ಮತ್ತು ಕೃತಿ ಸನೋನ್ ಅವರ ಭೇಡಿಯಾ ಮತ್ತು ಯಾಮಿ ಗೌತಮ್ ಅವರ ಲಾಸ್ಟ್ ಇವುಗಳಲ್ಲಿ ಸೇರಿವೆ. ಮುಂಬರುವ ತೆಲುಗು ಚಿತ್ರ, ರೇಮೋ, ದೀಪ್ತಿ ನವಲ್ ಮತ್ತು ಕಲ್ಕಿ ಕೋಚ್ಲಿನ್ ಅವರ ಗೋಲ್ಡ್ ಫಿಶ್ ಮತ್ತು ರಣದೀಪ್ ಹೂಡಾ ಮತ್ತು ಇಲಿಯಾನಾ ಡಿ'ಕ್ರೂಜ್ ಅವರ ತೇರಾ ಕ್ಯಾ ಹೋಗಾ ಲವ್ಲಿ ಕೂಡ ಇಫ್ಫಿಯಲ್ಲಿ ಪ್ರದರ್ಶನಗೊಳ್ಳಲಿದ್ದು, ಇದರ ಜೊತೆಗೆ ಒಟಿಟಿ ಪ್ರದರ್ಶನಗಳಾದ ವಧಂಧಿ, ಖಾಕಿ ಮತ್ತು ಫೌಡಾ 4ನೇ ಆವೃತ್ತಿಯ ಸಂಚಿಕೆಗಳು ಕೂಡ ಇಫ್ಫಿಯಲ್ಲಿ ಪ್ರದರ್ಶನಗೊಳ್ಳಲಿವೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಉಪಕ್ರಮವಾದ 'ನಾಳಿನ 75 ರಚನಾತ್ಮಕ ಮನಸುಗಳು' ವಿಭಾಗದ ಎರಡನೇ ಆವೃತ್ತಿಯು ಮತ್ತೊಂದು ಆಕರ್ಷಣೆಯಾಗಿದೆ ಎಂದು ಉತ್ಸವದ ನಿರ್ದೇಶಕರು ಮಾಹಿತಿ ನೀಡಿದರು. ಚಲನಚಿತ್ರ ನಿರ್ಮಾಪಕರನ್ನು ಗುರುತಿಸುತ್ತಿರುವುದು ಭಾರತದ ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಸಂಕೇತವಾಗಿದೆ.

ಕ್ರಿಝಿಸ್ಟೋಫ್ ಜಾನುಸ್ಸಿ, ಲಾವ್ ಡಿಯಾಜ್, ನದಾವ್ ಲಾಪಿಡ್, ಜಿಂಕೊ ಗೋಟೋಹ್, ಮ್ಯಾಡಿ ಹ್ಯಾಸನ್, ಜಾನ್ ಲಾಯ್ಡ್ ಕ್ರೂಜ್, ಜೆನೆಸಿಸ್ ರೊಡ್ರಿಗಸ್, ಮಾರ್ಕ್ ಓಸ್ಬೋರ್ನ್, ಜಿಯೋನ್ ಕ್ಯು ಹ್ವಾನ್, ಡೇನಿಯಲ್ ಗೋಲ್ಡ ಹೆಬರ್ ಮತ್ತು ನಟಾಲಿಯಾ ಲೋಪೆಜ್ ಗಲ್ಲಾರ್ಡೊ ಸೇರಿದಂತೆ 118 ಅಂತಾರಾಷ್ಟ್ರೀಯ ಚಲನಚಿತ್ರ ಗಣ್ಯರು ಉತ್ಸವದಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ ಎಂದು ಉತ್ಸವದ ನಿರ್ದೇಶಕರು ಮಾಧ್ಯಮಗಳಿಗೆ ತಿಳಿಸಿದರು. ಭಾರತೀಯ ಚಲನಚಿತ್ರ ರಂಗದ 221 ಗಣ್ಯರೂ ತಮ್ಮ ಪಾಲ್ಗೊಳ್ಳುವಿಕೆ  ದೃಢಪಡಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಅಜಯ್ ದೇವಗನ್ ಸುನೀಲ್ ಶೆಟ್ಟಿ, ವರುಣ್ ಧವನ್, ಕೃತಿ ಸನೋನ್ ಪ್ರಭುದೇವ, ಮನೋಜ್ ಬಾಜಪೇಯಿ, ನವಾಜುದ್ದೀನ್ ಸಿದ್ದಿಕಿ, ಶೇಖರ್ ಕಪೂರ್, ರಾಣಾ ದಗ್ಗುಬತ್ತಿ, ಮಣಿರತ್ನಂ, ಎ.ಆರ್.ರೆಹಮಾನ್, ಪಂಕಜ್ ತ್ರಿಪಾಠಿ, ಪರೇಶ್ ರಾವಲ್, ಅಕ್ಷಯೆ ಖನ್ನಾ, ಕಲ್ಕಿ ಕೋಚ್ಲಿನ್, ಯಾಮಿ ಗೌತಮ್, ದಿನೇಶ್ ವಿಜನ್ ಇಲಿಯಾನಾ ಡಿ'ಕ್ರೂಜ್ ಆರ್ ಬಾಲ್ಕಿ ಅನುಪಮ್ ಖೇರ್ ಮತ್ತು ಭೂಷಣ್ ಕುಮಾರ್ ಇವರಲ್ಲಿ ಸೇರಿದ್ದಾರೆ.

2022ರ ನವೆಂಬರ್ 20, ರಂದು ಗೋವಾದ ತಲೈಗಾವೊದ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಚಿತ್ರೋತ್ಸವದ ಉದ್ಘಾಟನಾ ಸಮಾರಂಭವು ಸಂಜೆ 4.00 ಗಂಟೆಗೆ ಪ್ರಾರಂಭವಾಗಲಿದ್ದು, ಸಂಜೆ 5.00 ರಿಂದ ರಾತ್ರಿ 9.00 ರವರೆಗೆ ನಡೆಯಲಿದೆ. ಉದ್ಘಾಟನಾ ಸಮಾರಂಭದ ಪ್ರಸಾರದ ಹಕ್ಕುಗಳನ್ನು ಮಾಧ್ಯಮ ಪಾಲುದಾರರಿಗೆ ನೀಡಲಾಗಿದೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಒಳಗೊಂಡ ಮನರಂಜನಾ ವಿಭಾಗವನ್ನು ಹೊರತುಪಡಿಸಿ ಉದ್ಘಾಟನಾ ಸಮಾರಂಭದ ವೀಡಿಯೊ ಚಿತ್ರೀಕರಣ ಕವರೇಜ್ ಅನ್ನು ಸಾರ್ವಜನಿಕ ಪ್ರಸಾರಕ ದೂರದರ್ಶನದಿಂದ ಮಾತ್ರ ನೀಡಲಾಗುವುದು ಎಂದು ಉತ್ಸವದ ನಿರ್ದೇಶಕರು ಮಾಹಿತಿ ನೀಡಿದರು. ಮನರಂಜನಾ ವಿಭಾಗದ ವೀಡಿಯೊ ಚಿತ್ರೀಕರಣ ಪ್ರಸಾರವನ್ನು ಮಾಧ್ಯಮ ಪಾಲುದಾರರಿಗೆ ಮಾತ್ರ ಕಾಯ್ದಿರಿಸಲಾಗಿದೆ; ಆದಾಗ್ಯೂ, ಮನರಂಜನಾ ವಿಭಾಗ ಸೇರಿದಂತೆ ಸಮಾರಂಭದ ಆಯ್ದ ವೀಡಿಯೊ ತುಣುಕುಗಳು ಅದೇ ದಿನ ಮಾಧ್ಯಮಗಳಿಗೆ ಲಭ್ಯವಾಗುತ್ತವೆ. ಇನ್ನೂ ಇಡೀ ಕಾರ್ಯಕ್ರಮದ ಛಾಯಾಗ್ರಹಣಕ್ಕೆ ಅನುಮತಿಸಲಾಗಿದೆ. ಇದಲ್ಲದೆ, ಮಾಧ್ಯಮಗಳು ಕೆಂಪುಹಾಸಿನಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಬಿತ್ತರಿಸಬಹುದು.

2022ರ ನವೆಂಬರ್ 28, ರಂದು ಗೋವಾದ ತಲೈಗಾವೊದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಚಿತ್ರೋತ್ಸವದ ಸಮಾರೋಪ ಸಂಜೆ 4.00 ಗಂಟೆಗೆ ಪ್ರಾರಂಭವಾಗಲಿದ್ದು, ನಂತರ ಸಂಜೆ 4.45 ರಿಂದ 7.00 ರವರೆಗೆ ಕಾರ್ಯಕ್ರಮ ನಡೆಯಲಿದೆ.

ಹೆಚ್ಚಿನ ವಿವರಗಳು ಬೇಕೆ? ಪಿಐಬಿ - https://pib.gov.in/newsite/iffi53.aspx ನಲ್ಲಿ ಈ ಹಿಂದಿನ ಮತ್ತು ಮುಂದಿನ ಉತ್ಸವದ ಮಾಹಿತಿ ವೀಕ್ಷಿಸಿ.

ಗೋವಾ ವಿಭಾಗದ ಚಲನಚಿತ್ರ ಪ್ರತಿನಿಧಿಗಳಿಗೆ 7 ನಾನ್ ಫೀಚರ್ ಫಿಲ್ಮ್ ಗಳನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ಇಎಸ್.ಜಿ ಸಿಇಒ, ಶ್ವೇತಾ ಸಚನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಆರ್ಡೋ ಡಿಸ್, ಬಿಫೋರ್ ಐ ಸ್ಲೀಪ್, ದಿ ವೈಟ್ ಶರ್ಟ್, ವಿಂಡ್ ಚೈಮ್ಸ್, ದಿ ವೈಟ್ ಡ್ರೀಮ್, ಗೋಯ್ ಸ್ವತಂತ್ರ್ಯಾಚೆ ಹೊಮ್ಖಾನ್ ಮತ್ತು ನಿಮ್ನ್ಯಾ ದಿಸಾಕ್  ಈ ಏಳು ಚಿತ್ರಗಳಾಗಿವೆ.  ಚಲನಚಿತ್ರ ನಿರ್ಮಾಪಕ ವಿನೋದ್ ಗಣತ್ರಾ, ನಿರ್ಮಾಪಕ, ನಿರ್ದೇಶಕ ಮತ್ತು ಬರಹಗಾರ ಇಮೋ ಸಿಂಗ್ ಮತ್ತು ನಿರ್ಮಾಪಕ ಮತ್ತು ನಟ ಪಂಪಲ್ಲಿ ಸಂದೀಪ್ ಕುಮಾರ್ ಅವರನ್ನು ಒಳಗೊಂಡ ತೀರ್ಪುಗಾರರು ಒಟ್ಟು 10 ಪ್ರವೇಶಗಳಿಂದ ಚಲನಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ.

ಉತ್ಸವದ ಇತರ ಆಕರ್ಷಣೆಗಳ ಬಗ್ಗೆಯೂ ಸಿ.ಇ.ಓ. ಮಾತನಾಡಿದ್ದು, ನೀವು ಈ ವಿವರಗಳನ್ನು ಇಲ್ಲಿ ನೋಡಬಹುದು.

ಪಿಐಬಿ ಹೆಚ್ಚುವರಿ ಮಹಾ ನಿರ್ದೇಶಕರಾದ, ಪ್ರಜ್ಞಾ ಪಾಲಿವಾಲ್ ಗೌರ್ ಅವರು ಸಾರ್ವಜನಿಕ ಸಂವಹನ ಮತ್ತು ಮಾಧ್ಯಮ ಸೌಲಭ್ಯ ವ್ಯವಸ್ಥೆಗಳ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದರು. 5೦೦ ಕ್ಕೂ ಹೆಚ್ಚು ಪತ್ರಕರ್ತರು ಮಾಧ್ಯಮ ಮಾನ್ಯತೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಸುಮಾರು 42೦ ಅರ್ಜಿಗಳನ್ನು ಪ್ರಕ್ರಿಯೆಗೊಳಪಡಿಸಲಾಗಿದೆ ಎಂದು ಎಡಿಜಿ ಮಾಹಿತಿ ನೀಡಿದರು. ಮಾಧ್ಯಮ ಪ್ರತಿನಿಧಿ ಕಾರ್ಡ್ ವಿತರಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಪಿಐಬಿ ಈ ಉತ್ಸವದ ವಿವಿಧ ಆಯಾಮಗಳಲ್ಲಿ ಇಂಗ್ಲಿಷ್, ಹಿಂದಿ, ಉರ್ದು ಮತ್ತು ದೇಶದ ಇತರ ಪ್ರಾದೇಶಿಕ ಭಾಷೆಗಳಲ್ಲಿ ಪತ್ರಿಕಾ ಪ್ರಕಟಣೆಗಳು / ಇಫ್ಫಿ ಕ್ರಾನಿಕಲ್ಸ್  ಮತ್ತು ಫೋಟೋಗಳು ಮತ್ತು ಬಹುಮಾಧ್ಯಮ ಪ್ರಕಟಣೆಗಳನ್ನು ಹೊರಡಿಸುತ್ತದೆ ಎಂದು ಅವರು ಹೇಳಿದರು. ಪಿಐಬಿ ಮಾಧ್ಯಮ ಸಮ್ಮೇಳನಗಳನ್ನು ಆಯೋಜಿಸುತ್ತಿದೆ ಅಥವಾ ನಾವು ಇಫ್ಫಿ ಟೇಬಲ್ ಟಾಕ್ಸ್ ಎಂದು ಕರೆಯುವ ಚಲನಚಿತ್ರ ನಿರ್ಮಾಪಕರು ಮತ್ತು ಚಲನಚಿತ್ರ ವ್ಯಕ್ತಿಗಳು ಮತ್ತು ಮಾಧ್ಯಮ ಮತ್ತು ಉತ್ಸವದ ಪ್ರತಿನಿಧಿಗಳ ನಡುವೆ ಸಮ್ಮೇಳನ ನಡೆಸುತ್ತಿದೆ. ಈ ಅಧಿವೇಶನಗಳನ್ನು ಪಿಐಬಿ ಇಂಡಿಯಾದ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರ ಮಾಡಲಾಗುವುದು. ಸಾರ್ವಜನಿಕ ಪಾಲ್ಗೊಳ್ಳುವಿಕೆ, ಆಸಕ್ತಿ ಮತ್ತು ಉತ್ಸವದಲ್ಲಿ ಪಾಲ್ಗೊಳ್ಳುವಿಕೆಯನ್ನು ಸುಧಾರಿಸಲು ಪಿಐಬಿ ಸಾಮಾಜಿಕ ಮಾಧ್ಯಮ ಸಂವಹನಗಳೊಂದಿಗೆ ಇವುಗಳನ್ನು ಪೂರೈಸುತ್ತಿದೆ; ಇದಕ್ಕಾಗಿ ನಾವು ಮೀಮ್ ಗಳು ಮತ್ತು ಕಸ್ಟಮ್ ವೀಡಿಯೊಗಳಂತಹ ಸಂವಹನದ ಸೃಜನಶೀಲ ರೂಪಗಳನ್ನು ಸಹ ಬಳಸುತ್ತಿದ್ದೇವೆ. ಇಫ್ಫಿ 52 ನೊಂದಿಗೆ ನಾವು ಪ್ರಾರಂಭಿಸಿದ ಇ-ನ್ಯೂಸ್ ಲೆಟರ್ ಇಫ್ಫಿಲಾಯ್ಡ್ ಎಂಬ ಉಪಕ್ರಮವನ್ನು ಸಹ ಪಿಐಬಿ ಹೊರತರಲಿದೆ.

ಕರ್ಟನ್-ಫ್ಲೈಯರ್ ಪತ್ರಿಕಾಗೋಷ್ಠಿಯಲ್ಲಿ ಏನಾಯಿತು ಎಂಬುದರ ಬಗ್ಗೆ ನೀವು ಇನ್ನೂ ಹೆಚ್ಚಿನದನ್ನು ತಿಳಿಯಲು ಬಯಸುವಿರಾ? ಈ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಿ: 

*****



(Release ID: 1877010) Visitor Counter : 249