ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಬುಡಕಟ್ಟು ಗೌರವ ದಿನದ ಸಂದರ್ಭದಲ್ಲಿ, ಉಲಿಹಟುವಿನಲ್ಲಿ ಬಿರ್ಸಾ ಮುಂಡಾ ಅವರಿಗೆ ಗೌರವ ನಮನ ಸಲ್ಲಿಸಿದ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು



ಸಂಸತ್ ಭವನದ ಆವರಣದಲ್ಲಿರುವ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ  ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್

ಬುಡಕಟ್ಟು ಗೌರವ ದಿನದ ಮೂಲಕ ದೇಶದ ಬುಡಕಟ್ಟು ಪರಂಪರೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವುದು ಮತ್ತು ಆದಿವಾಸಿ ಸಮುದಾಯದ ಅಭಿವೃದ್ಧಿಗಾಗಿ ಸಂಕಲ್ಪ ಮಾಡುವುದು 'ಪಂಚ ಪ್ರಾಣ'ದ ಶಕ್ತಿಯ ಭಾಗವಾಗಿದೆ : ಪ್ರಧಾನ ಮಂತ್ರಿ

ಬುಡಕಟ್ಟು ಗೌರವ ದಿನ ಆಚರಣೆಯಲ್ಲಿ ಭಾಗವಹಿಸಿದ ಕೇಂದ್ರ ಸಚಿವ ಶ್ರೀ ಅರ್ಜುನ್ ಮುಂಡಾ ಮತ್ತು ಸಂಸದರು ಹಾಗೂ ಇತರ ಗಣ್ಯರು

ನ್ಯಾಯದ ಹಿತದೃಷ್ಟಿಯಿಂದ ಎಲ್ಲವನ್ನೂ ತ್ಯಾಗ ಮಾಡುವ ಮನೋಭಾವವು ಬುಡಕಟ್ಟು ಸಮಾಜದ ವಿಶೇಷತೆಯಾಗಿದೆ: ಶ್ರೀಮತಿ ದ್ರೌಪದಿ ಮುರ್ಮು

ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಬುಡಕಟ್ಟು ಗೌರವ ದಿನ ಎಂದು ಆಚರಿಸಲು ಸರ್ಕಾರ ನಿರ್ಧರಿಸಿದೆ: ಅರ್ಜುನ್ ಮುಂಡಾ

Posted On: 15 NOV 2022 6:57PM by PIB Bengaluru

ಮುಖ್ಯಾಂಶಗಳು:
•    ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಸ್ಥಳವಾದ ಉಲಿಹಟುವಿಗೆ ಭೇಟಿ ನೀಡಿದ್ದರು.
•    ಭಗವಾನ್ ಬಿರ್ಸಾ ಮುಂಡಾ ಅವರ ಕನಸುಗಳನ್ನು ಸಾಕಾರಗೊಳಿಸಲು ರಾಷ್ಟ್ರವು 'ಪಂಚ ಪ್ರಾಣ'ದ ಶಕ್ತಿಯೊಂದಿಗೆ ಸಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ವಿಶೇಷ ಸಂದೇಶದಲ್ಲಿ ತಿಳಿಸಿದ್ದಾರೆ.
•    ಇಂದು ಮಧ್ಯಪ್ರದೇಶದ ಶಹದೋಲ್ ನಲ್ಲಿ ನಡೆದ ಬುಡಕಟ್ಟು ಸಮಾಗಮವನ್ನುದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ.
•    ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ಶ್ರೀ ಜಗದೀಪ್ ಧನಕರ್ ಮತ್ತು ಇತರ ಸಂಸದರು ಸಹ ಖ್ಯಾತ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಿರ್ಸಾ ಮುಂಡಾ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು, ಇತರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಇಂದು ದೇಶಾದ್ಯಂತ ಬುಡಕಟ್ಟು ಗೌರವ ದಿನವನ್ನು ಆಚರಿಸಿತು.

ಈ ಸಂದರ್ಭದಲ್ಲಿ, ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಸ್ಥಳವಾದ ಜಾರ್ಖಂಡ್ ನ ಖುಂಟಿಯಲ್ಲಿರುವ ಉಲಿಹಟುವಿಗೆ ಭೇಟಿ ನೀಡಿದ್ದರು.

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಉಲಿಹಟುವಿನಲ್ಲಿ, ಕೇಂದ್ರ ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಶ್ರೀ ಅರ್ಜುನ್ ಮುಂಡಾ ಅವರು ಜಾರ್ಖಂಡ್ ರಾಜ್ಯಪಾಲರಾದ ಶ್ರೀ ರಮೇಶ್ ಬೈಸ್, ಜಾರ್ಖಂಡ್ ಮುಖ್ಯಮಂತ್ರಿ ಶ್ರೀ ಹೇಮಂತ್ ಸೊರೇನ್ ಮತ್ತು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಅವರ ಉಪಸ್ಥಿತಿಯಲ್ಲಿ ಸ್ವಾಗತಿಸಿದರು.

ರಾಷ್ಟ್ರಪತಿಗಳು ಮತ್ತು ಇತರ ಗಣ್ಯರು ಭಗವಾನ್ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಶ್ರೀ ಅರ್ಜುನ್ ಮುಂಡಾ ಅವರು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಲಡಾಖ್ ನ ಪಶ್ಮಿನಾ ಶಾಲು ಮತ್ತು ಭಗವಾನ್ ಬಿರ್ಸಾ ಮುಂಡಾ ಅವರ ಪ್ರತಿಮೆಯನ್ನು ಅವರ ಈ ಭೇಟಿಯ ಸಂದರ್ಭದಲ್ಲಿ ನೀಡಿದರು.

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಉಲಿಹಟುವಿನಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಅನುಯಾಯಿಗಳೊಂದಿಗೆ ಸಂವಾದ ನಡೆಸಿದರು. ರಾಷ್ಟ್ರಪತಿಯವರು ಇಂದು ಉಲಿಹಟುವಿನಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಸಂಬಂಧಿಕರು/ವಂಶಸ್ಥರು ಮತ್ತು ಮೊಮ್ಮಗ ಸುಖ್ರಾಮ್ ಮುಂಡಾ ಅವರನ್ನು ಸನ್ಮಾನಿಸಿದರು.

ಇಂದು ಮಧ್ಯಪ್ರದೇಶದ ಶಹದೋಲ್ ನಲ್ಲಿ ನಡೆದ ಬುಡಕಟ್ಟು ಸಮಾಗಮವನ್ನುದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಿದರು.  ಈ ಸಂದರ್ಭದಲ್ಲಿ ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗುಭಾಯಿ ಪಟೇಲ್, ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಉಪಸ್ಥಿತರಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಯವರು, ಬುಡಕಟ್ಟು ಗೌರವ ದಿನದ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭ ಕೋರಿದರು. ಮಧ್ಯಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಬುಡಕಟ್ಟು ಜನಸಂಖ್ಯೆಯನ್ನು ಹೊಂದಿದೆ ಎಂದು ಅವರು ಹೇಳಿದರು. ಆದ್ದರಿಂದ, ಈ ಸಮಾಗಮವನ್ನು ರಾಜ್ಯದಲ್ಲಿ ಆಯೋಜಿಸಿರುವುದು ಸೂಕ್ತವಾಗಿದೆ ಎಂದರು.

ನ್ಯಾಯದ ಹಿತದೃಷ್ಟಿಯಿಂದ ಎಲ್ಲವನ್ನೂ ತ್ಯಾಗ ಮಾಡುವ ಮನೋಭಾವ ಬುಡಕಟ್ಟು ಸಮಾಜದ ವಿಶೇಷತೆಯಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ, ವಿಭಿನ್ನ ಸಿದ್ಧಾಂತಗಳು ಮತ್ತು ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸಿವೆ. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವು ಬುಡಕಟ್ಟು ಸಮುದಾಯಗಳ ಹಲವಾರು ಹೋರಾಟಗಳ ಸರಣಿಯನ್ನು ಸಹ ಒಳಗೊಂಡಿದೆ. ಜಾರ್ಖಂಡ್ ನ ಭಗವಾನ್ ಬಿರ್ಸಾ ಮುಂಡಾ ಮತ್ತು ಸಿಧು-ಕನ್ಹು, ಮಧ್ಯಪ್ರದೇಶದ ತಾಂತಿಯಾ ಭಿಲ್ ಮತ್ತು ಭೀಮಾ ನಾಯಕ್, ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು, ಮಣಿಪುರದ ರಾಣಿ ಗೈಡಿನ್ಲಿಯು ಮತ್ತು ಒಡಿಶಾದ ಶಹೀದ್ ಲಕ್ಷ್ಮಣ್ ನಾಯಕ್ ಅವರಂತಹ ಅನೇಕ ಮಹಾನ್ ವ್ಯಕ್ತಿಗಳು ಬುಡಕಟ್ಟು ಹೆಮ್ಮೆಯನ್ನು ಹೆಚ್ಚಿಸಿದ್ದಾರೆ ಮತ್ತು ದೇಶದ ಘನತೆಯನ್ನು ಹೆಚ್ಚಿಸಿದ್ದಾರೆ. ಕಿಶೋರ್ ಸಿಂಗ್, ಖಾಜ್ಯಾ ನಾಯಕ್, ರಾಣಿ ಫೂಲ್ ಕುನ್ವರ್, ಸೀತಾರಾಂ ಕನ್ವರ್, ಮಹುವಾ ಕೋಲ್, ಶಂಕರ್ ಷಾ ಮತ್ತು ರಘುನಾಥ್ ಷಾ ಮಧ್ಯಪ್ರದೇಶದ ಅನೇಕ ಕ್ರಾಂತಿಕಾರಿ ಯೋಧರಲ್ಲಿ ಸೇರಿದ್ದಾರೆ. 'ಚಿಂದ್ವಾರದ ಗಾಂಧಿ' ಎಂದು ಗೌರವಿಸಲಾಗುವ ಶ್ರೀ ಬಾದಲ್ ಭೋಯಿ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಅಹಿಂಸೆಯ ಮಾರ್ಗವನ್ನು ಆರಿಸಿಕೊಂಡಿದ್ದರು. ಅಂತಹ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಷ್ಟ್ರಪತಿಯವರು ಗೌರವ ನಮನ ಸಲ್ಲಿಸಿದರು.

ಮಧ್ಯಪ್ರದೇಶದ ಚಂಬಲ್, ಮಾಲ್ವಾ, ಬುಂದೇಲ್ಖಂಡ್, ಬಘೇಲ್ಖಂಡ್ ಮತ್ತು ಮಹಾಕೋಶಾಲ್ ಪ್ರದೇಶಗಳ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ಬುಡಕಟ್ಟು ಸಮುದಾಯಗಳು ಪ್ರಮುಖ ಪಾತ್ರ ವಹಿಸಿವೆ ಎಂದು ರಾಷ್ಟ್ರಪತಿ ಹೇಳಿದರು. ಒಂದು ಕಾಲದಲ್ಲಿ ಬುಡಕಟ್ಟು ರಾಜರ ಆಳ್ವಿಕೆಯಲ್ಲಿ ಸಮೃದ್ಧಿಯಿಂದ ತುಂಬಿದ್ದ ಈ ಪ್ರದೇಶವು ಮತ್ತೊಮ್ಮೆ ಆಧುನಿಕ ಅಭಿವೃದ್ಧಿಯ ಪ್ರಭಾವಶಾಲಿ ಗಾಥೆಗಳನ್ನು ಬರೆಯುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಹೆಚ್ಚಿನ ಬುಡಕಟ್ಟು ಪ್ರದೇಶಗಳು ಅರಣ್ಯ ಮತ್ತು ಖನಿಜ ಸಂಪತ್ತಿನಿಂದ ಸಮೃದ್ಧವಾಗಿವೆ ಎಂದು ರಾಷ್ಟ್ರಪತಿಯವರು ಹೇಳಿದರು. ನಮ್ಮ ಬುಡಕಟ್ಟು ಸಹೋದರ ಸಹೋದರಿಯರು ಪ್ರಕೃತಿಯನ್ನು ಆಧರಿಸಿದ ಜೀವನವನ್ನು ನಡೆಸುತ್ತಾರೆ ಮತ್ತು ಪ್ರಕೃತಿಯನ್ನು ಗೌರವದಿಂದ ರಕ್ಷಿಸುತ್ತಾರೆ. ಈ ನೈಸರ್ಗಿಕ ಸಂಪತ್ತನ್ನು ಶೋಷಣೆಯಿಂದ ರಕ್ಷಿಸಲು ಅವರು ಬ್ರಿಟಿಷ್ ಆಳ್ವಿಕೆ ವಿರುದ್ಧ ಉಗ್ರವಾಗಿ ಹೋರಾಡಿದ್ದರು. ಅವರ ತ್ಯಾಗದಿಂದಾಗಿ ಅರಣ್ಯ ಸಂಪತ್ತಿನ ಸಂರಕ್ಷಣೆ ಬಹುಮಟ್ಟಿಗೆ ಸಾಧ್ಯವಾಯಿತು. ಇಂದಿನ ದಿನಗಳಲ್ಲಿ, ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಸಮಯದಲ್ಲಿ, ಪ್ರತಿಯೊಬ್ಬರೂ ಬುಡಕಟ್ಟು ಸಮಾಜದ ಜೀವನಶೈಲಿ ಮತ್ತು ಅರಣ್ಯ ಸಂರಕ್ಷಣೆಯ ಕಡೆಗೆ ಅವರ ದೃಢಸಂಕಲ್ಪದಿಂದ ಕಲಿಯಬೇಕಾಗಿದೆ ಎಂದರು.

http://ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಂದೇಶದಲ್ಲಿ, ಭಗವಾನ್ ಬಿರ್ಸಾ ಮುಂಡಾ ಮತ್ತು ಕೋಟ್ಯಂತರ ಬುಡಕಟ್ಟುಯ ಧೀರ ಹೃದಯಗಳ ಕನಸುಗಳನ್ನು ಸಾಕಾರಗೊಳಿಸಲು ರಾಷ್ಟ್ರವು 'ಪಂಚ ಪ್ರಾಣ'ದ ಶಕ್ತಿಯೊಂದಿಗೆ ಸಾಗುತ್ತಿದೆ ಎಂದು ಹೇಳಿದ್ದಾರೆ. "ಬುಡಕಟ್ಟು ಗೌರವ ದಿನದ ಮೂಲಕ ದೇಶದ ಬುಡಕಟ್ಟು ಪರಂಪರೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವುದು ಮತ್ತು ಆದಿವಾಸಿ ಸಮುದಾಯದ ಅಭಿವೃದ್ಧಿಗಾಗಿ ಸಂಕಲ್ಪ ಮಾಡುವುದು ಆ ಶಕ್ತಿಯ ಭಾಗವಾಗಿದೆ" ಎಂದು ಅವರು ಹೇಳಿದ್ದಾರೆ. ಪ್ರಧಾನಮಂತ್ರಿಯವರು ಇಂದು ವಿಡಿಯೋ ಸಂದೇಶದ ಮೂಲಕ ಬುಡಕಟ್ಟು ಗೌರವ ದಿನ ಸಂದರ್ಭದಲ್ಲಿ ರಾಷ್ಟ್ರಕ್ಕೆ ಶುಭಾಶಯ ಸಲ್ಲಿಸಿದರು.

ಭಗವಾನ್ ಬಿರ್ಸಾ ಮುಂಡಾ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿಯವರು, ನವೆಂಬರ್ 15 ಆದಿವಾಸಿ ಸಂಪ್ರದಾಯವನ್ನು ಆಚರಿಸುವ ದಿನವಾಗಿದೆ, ಏಕೆಂದರೆ ಭಗವಾನ್ ಬಿರ್ಸಾ ಮುಂಡಾ ಅವರು ನಮ್ಮ ಸ್ವಾತಂತ್ರ್ಯ ಹೋರಾಟದ ನಾಯಕ ಮಾತ್ರವಲ್ಲ, ನಮ್ಮ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶಕ್ತಿಯ ವಾಹಕರಾಗಿದ್ದರು ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಸಮುದಾಯದ ಕೊಡುಗೆಯನ್ನು ಸ್ಮರಿಸಿರುವ ಪ್ರಧಾನಮಂತ್ರಿಯವರು, ಪ್ರಮುಖ ಬುಡಕಟ್ಟು ಚಳವಳಿಗಳು ಮತ್ತು ಸ್ವಾತಂತ್ರ್ಯ ಸಂಗ್ರಾಮಗಳನ್ನು ಸ್ಮರಿಸಿದ್ದಾರೆ. ತಿಲಕ್ ಮಾಂಝಿ ನೇತೃತ್ವದ ದಾಮಿನ್ ಸಂಗ್ರಾಮ್, ಬುಧು ಭಗತ್ ನೇತೃತ್ವದ ಲಾರ್ಕಾ ಚಳವಳಿ, ಸಿಧು-ಕನ್ಹು ಕ್ರಾಂತಿ, ತಾನಾ ಭಗತ್ ಚಳವಳಿ, ವೆಗ್ಡಾ ಭಿಲ್ ಚಳವಳಿ, ನಾಯ್ಕ್ಡಾ ಚಳವಳಿ, ಸಂತ ಜೋರಿಯಾ ಪರಮೇಶ್ವರ ಮತ್ತು ರೂಪ್ ಸಿಂಗ್ ನಾಯಕ್, ಲಿಮ್ದಿ ದಾಹೋಡ್ ಸಮರ, ಮಂಗಢದ ಗೋವಿಂದ್ ಗುರು ಜಿ ಮತ್ತು ಅಲ್ಲೂರಿ ಸೀತಾರಾಮ್ ರಾಜು ನೇತೃತ್ವದ ರಾಮಪ್ಪ ಚಳವಳಿಯನ್ನು ಅವರು ಸ್ಮರಿಸಿದ್ದಾರೆ.

ಬುಡಕಟ್ಟು ಜನಾಂಗದ ಕೊಡುಗೆಯನ್ನು ಅಂಗೀಕರಿಸುವ ಮತ್ತು ಆಚರಿಸುವ ಕ್ರಮಗಳನ್ನು ಪ್ರಧಾನಮಂತ್ರಿಯವರು ಪಟ್ಟಿ ಮಾಡಿದರು. ಅವರು ದೇಶದ ವಿವಿಧ ಭಾಗಗಳಲ್ಲಿನ ಬುಡಕಟ್ಟು ವಸ್ತುಸಂಗ್ರಹಾಲಯಗಳು ಮತ್ತು ಜನ್ ಧನ್, ಗೋಬರ್ಧನ್, ವನ್ ಧನ್, ಸ್ವಸಹಾಯ ಗುಂಪುಗಳು, ಸ್ವಚ್ಛ ಭಾರತ್, ಪ್ರಧಾನ ಮಂತ್ರಿ ವಸತಿ ಯೋಜನೆ, ಮಾತೃತ್ವ ವಂದನಾ ಯೋಜನೆ, ಗ್ರಾಮೀಣ ರಸ್ತೆ ಯೋಜನೆ, ಮೊಬೈಲ್ ಸಂಪರ್ಕ, ಏಕಲವ್ಯ ಶಾಲೆಗಳು, ಶೇಕಡಾ 90 ರಷ್ಟು ಅರಣ್ಯ ಉತ್ಪನ್ನಗಳಿಗೆ ಎಂಎಸ್ಪಿ, ಸಿಕಲ್ -ಸೆಲ್ ರಕ್ತಹೀನತೆ, ಬುಡಕಟ್ಟು ಸಂಶೋಧನಾ ಸಂಸ್ಥೆಗಳು, ಉಚಿತ ಕೊರೊನಾ ಲಸಿಕೆ ಮತ್ತು ಇಂದ್ರಧನುಷ್ ಅಭಿಯಾನದಂತಹ ಯೋಜನೆಗಳ ಬಗ್ಗೆ ಮಾತನಾಡಿದರು.

ಆದಿವಾಸಿ ಸಮಾಜದ ಶೌರ್ಯ, ಸಮುದಾಯ ಜೀವನ ಮತ್ತು ಒಳಗೊಳ್ಳುವಿಕೆಯನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. "ಈ ಭವ್ಯ ಪರಂಪರೆಯಿಂದ ಕಲಿಯುವ ಮೂಲಕ ಭಾರತವು ತನ್ನ ಭವಿಷ್ಯಕ್ಕೆ ಆಕಾರವನ್ನು ನೀಡಬೇಕಾಗಿದೆ. ಬುಡಕಟ್ಟುಯ ಗೌರವ ದಿನ ಇದಕ್ಕೆ ಒಂದು ಅವಕಾಶ ಮತ್ತು ಮಾಧ್ಯಮವಾಗಲಿದೆ ಎಂಬ ಖಾತ್ರಿ ನನಗಿದೆ", ಎಂದು ಪ್ರಧಾನಮಂತ್ರಿಯವರು ತಮ್ಮ ಸಂದೇಶ ಮುಕ್ತಾಯಗೊಳಿಸಿದರು.

ಮತ್ತೊಂದು ಕಾರ್ಯಕ್ರಮದಲ್ಲಿ, ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ಶ್ರೀ ಜಗದೀಪ್ ಧನಕರ್ ಮತ್ತು ಇತರ ಸಂಸದರು ಇಂದು ಸಂಸತ್ ಭವನದ ಆವರಣದಲ್ಲಿ ಪ್ರಸಿದ್ಧ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಿರ್ಸಾ ಮುಂಡಾ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
https://pib.gov.in/PressReleseDetail.aspx?PMO=3&PRID=1875984

ಶ್ರೀ ಬಿರ್ಸಾ ಮುಂಡಾ ಅವರು ಬ್ರಿಟಿಷರ ದಬ್ಬಾಳಿಕೆಯ ಆಡಳಿತದ ವಿರುದ್ಧ ಬುಡಕಟ್ಟು ಆಂದೋಲನವನ್ನು ಮುನ್ನಡೆಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಅಮೂಲ್ಯ ಕೊಡುಗೆ ನೀಡಿದರು ಮತ್ತು ಬುಡಕಟ್ಟು ಜನರ ಹಕ್ಕುಗಳನ್ನು ರಕ್ಷಿಸಲು ದಣಿವರಿಯದ ಪ್ರಯತ್ನಗಳನ್ನು ಮಾಡಿದರು.

ಮಧ್ಯಪ್ರದೇಶದ ಶಹದೋಲ್ ನಲ್ಲಿ ಇಂದು ನಡೆದ ಬುಡಕಟ್ಟು ಸಮಾಗಮದಲ್ಲಿ ಶ್ರೀ ಅರ್ಜುನ್ ಮುಂಡಾ ಅವರು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಬುಡಕಟ್ಟು ಗೌರವ ದಿನ ಎಂದು ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ, ಬುಡಕಟ್ಟು ಸಮಾಜದ ಅಭಿವೃದ್ಧಿಗಾಗಿ ಸರ್ಕಾರವು ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದೆ. ರಾಜ್ಯ ಮತ್ತು ಇಡೀ ದೇಶದಲ್ಲಿ ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನಕ್ಕಾಗಿ ಉತ್ತಮ ಕೆಲಸಗಳು ನಡೆಯುತ್ತಿವೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರು ಹೇಳಿದರು. ಬುಡಕಟ್ಟು ಜನರ ಸ್ವಾಭಾವಿಕ ಜೀವನವು ಹಾಗೆಯೇ ಉಳಿಯಲು ಇದನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಅವರು ಹೇಳಿದರು.

ಪಿಇಎಸ್ಎಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಅವರು " ಪಿಇಎಸ್ಎ, 1996 ಸಾಂವಿಧಾನಿಕ ವ್ಯವಸ್ಥೆಯನ್ನು ಸಾಂಪ್ರದಾಯಿಕ ವ್ಯವಸ್ಥೆಯೊಂದಿಗೆ ಜೋಡಿಸುವ ಬಗ್ಗೆ ಮತ್ತು ಅದನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ" ಎಂದು ಹೇಳಿದರು. ಪಿಇಎಸ್ಎ ಕಾನೂನು ಸ್ವರಾಜ್ಯದ ಮೂಲ ತತ್ವವನ್ನು ವಿವರಿಸುತ್ತದೆ ಎಂದು ಅವರು ಹೇಳಿದರು. ಶಿಕ್ಷಣ ಕ್ಷೇತ್ರದಲ್ಲೂ ಆದಿವಾಸಿಗಳನ್ನು ಕೈಬಿಡಬಾರದು ಮತ್ತು ಇದಕ್ಕಾಗಿ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಮತ್ತಷ್ಟು ಬಲಪಡಿಸುವ ಕೆಲಸ ಪೂರ್ಣ ಉತ್ಸಾಹದಿಂದ ನಡೆಯುತ್ತಿದೆ ಎಂದು ಅವರು ಹೇಳಿದರು. ಬುಡಕಟ್ಟು ಗೌರವ ದಿನ 2022 ಅನ್ನು ಜನರ ಪಾಲ್ಗೊಳ್ಳುವಿಕೆಯ ಸ್ಫೂರ್ತಿಯೊಂದಿಗೆ ಆಚರಿಸಲು, ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮೈಗೌ ಸಹಯೋಗದೊಂದಿಗೆ 'ಬಿರ್ಸಾ ಮುಂಡಾರಿಂದ ನಾ ಪಡೆದ ಸ್ಫೂರ್ತಿ' ಎಂಬ ವಿಷಯದ ಮೇಲೆ ಆನ್ ಲೈನ್ 'ಅತ್ಯುತ್ತಮ ಪ್ರಬಂಧ' ಸ್ಪರ್ಧೆಯನ್ನು ನಡೆಸುತ್ತಿದೆ. ಬುಡಕಟ್ಟು ಗೌರವ ದಿನ 2022 ರ ಆಚರಣೆಯ ಭಾಗವಾಗಿ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮೈಗೌ ಸಹಯೋಗದೊಂದಿಗೆ 'ಎಲೆಮರೆಯ ಕಾಯಿಯಂತಿರುವ ಬುಡಕಟ್ಟು ನಾಯಕರು' ಎಂಬ ವಿಷಯದ ಮೇಲೆ ಬಿರ್ಸಾ ಮುಂಡಾ ರೀತಿ ನಿಮ್ಮ ಮಕ್ಕಳಿಗೆ ವೇಷ  ತೊಡಿಸಿ ಭಾಗವಹಿಸಿ ಎಂದು ಆನ್ ಲೈನ್ 'ಅತ್ಯುತ್ತಮ ವೇಷಭೂಷಣ' ಸ್ಪರ್ಧೆಗೆ ನಾಗರಿಕರನ್ನು ಆಹ್ವಾನಿಸಲಾಗಿತ್ತು.

ಈ ಸ್ಪರ್ಧೆಯ ಸರಣಿಯಲ್ಲಿ ಮಕ್ಕಳು ಬಿರ್ಸಾ ಮುಂಡಾ ವೇಷ ಧರಿಸಿ ಮೈಗೌ ಪ್ಲಾಟ್ ಫಾರ್ಮ್ ನಲ್ಲಿ ಒಂದು ಫೋಟೋವನ್ನು ಅಪ್ ಲೋಡ್ ಮಾಡಬೇಕಾಗಿತ್ತು. ಈ ವೇಷಭೂಷಣ ಸ್ಪರ್ಧೆಯಲ್ಲಿ, 2 ರಿಂದ 10 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ಬುಡಕಟ್ಟುಯ ಗೌರವ ದಿನ ಆಚರಣೆ, 2022 ರ ಭಾಗವಾಗಿ, ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮೈಗೌ ಸಹಯೋಗದೊಂದಿಗೆ 'ಬಿರ್ಸಾ ಮುಂಡಾರ ತತ್ವಗಳು' ಎಂಬ ವಿಷಯದ ಮೇಲೆ ಆನ್ ಲೈನ್ 'ಅತ್ಯುತ್ತಮ ಜಿಂಗಲ್' ಸ್ಪರ್ಧೆಯನ್ನು ನಡೆಸುತ್ತಿದೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮೈ ಗೌನ ಸಹಯೋಗದೊಂದಿಗೆ 'ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರು' ಎಂಬ ವಿಷಯದ ಮೇಲೆ ಆನ್ ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ಸಹ ನಡೆಸುತ್ತಿದೆ. 

ನವದೆಹಲಿ: 2021 ರಿಂದ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ "ಬಿರ್ಸಾ ಮುಂಡಾ" ಅವರ ಜನ್ಮದಿನದ ಅಂಗವಾಗಿ ನವೆಂಬರ್ 15 ಅನ್ನು 'ಬುಡಕಟ್ಟು ಗೌರವ ದಿನ' ಎಂದು ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ, ಅವರು ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ, ಸಮಾಜ ಸುಧಾರಕ ಮತ್ತು ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ಶೋಷಣೆಯ ವ್ಯವಸ್ಥೆಗಳ ವಿರುದ್ಧ ಉಲ್ಗುಲಾನ್ (ದಂಗೆ) ಎಂಬ ಬುಡಕಟ್ಟು ಆಂದೋಲನವನ್ನು ಮುನ್ನಡೆಸಿದವರು. ಬುಡಕಟ್ಟು ಜನರು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಏಕತೆಯನ್ನು ಆಚರಿಸಲು ಪ್ರೋತ್ಸಾಹಿಸಿದ್ದರಿಂದ ಅವರನ್ನು ಧರ್ತಿ ಅಬ್ಬಾ ಎಂದೂ ಕರೆಯಲಾಗುತ್ತದೆ.

ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ವಚ್ಛತಾ ಅಭಿಯಾನಗಳು, ಬುಡಕಟ್ಟು ಗೀತೆಗಳು, ನೃತ್ಯ, ಚಿತ್ರಕಲೆ ಸ್ಪರ್ಧೆಗಳಂತಹ ಉತ್ಸವಗಳೊಂದಿಗೆ ಅನುಸೂಚಿತ ಪ್ರದೇಶಗಳಾದ್ಯಂತ ಜನಜಾಗೃತಿ ಗೌರವ ದಿನವನ್ನು ದೇಶಭಕ್ತಿ ಉತ್ಸಾಹದಿಂದ ಆಚರಿಸಲಾಯಿತು.

ಹಿಮಾಚಲ ಪ್ರದೇಶದಲ್ಲಿ ವಿಶೇಷವಾಗಿ ಪಾಂಗಿ ಪ್ರದೇಶದಲ್ಲಿ ಇದನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು, ಅಲ್ಲಿ ಝಂಕಿಗಳು ಮತ್ತು ಸಾಂಪ್ರದಾಯಿಕ ಜೀವನಶೈಲಿ, ದೇಶೀಯ ಕೃಷಿ ಪದ್ಧತಿಗಳನ್ನು ಪ್ರದರ್ಶಿಸುವ ಫುಲ್ಯಾತ್ರಾ, ಜೋಕಾರುವಿನ ಮೆರವಣಿಗೆಗಳು ಪ್ರಮುಖ ಆಕರ್ಷಣೆಗಳಾಗಿದ್ದವು. ಸುಮಾರು 3೦೦ ಜನರು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲಾಹೌಲ್-ಸ್ಪಿತಿಯ ಶಾಲೆಗಳಲ್ಲಿ, ಚರ್ಚೆಗಳು, ಘೋಷಣೆಗಳು, ಭಿತ್ತಿಪತ್ರ ರಚನೆ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ವಸ್ತುಗಳನ್ನು ಪ್ರಮುಖ ಆಕರ್ಷಣೆಗಳಾಗಿಟ್ಟುಕೊಂಡು ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಸಂಬಂಧಿತ ಲಿಂಕ್ ಗಳು:
http://ಪ್ರಬಂಧ ರಚನೆ: ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರಿಂದ ನಾ ಪಡೆದ ಸ್ಫೂರ್ತಿ | MyGov.in

ನಿಮ್ಮ ಮಕ್ಕಳನ್ನು ಬುಡಕಟ್ಟು ನಾಯಕ ಬಿರ್ಸಾ ಮುಂಡಾ ರೀತಿ ಅಲಂಕರಿಸಿ | MyGov.in  

ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಮತ್ತು ಅವರ ತತ್ತ್ವಗಳ ಬಗ್ಗೆ  ಒಂದು ಜಿಂಗಲ್ ರಚಿಸಿ | MyGov.in

ಬುಡಕಟ್ಟು ಗೌರವ ದಿನದ ರಸಪ್ರಶ್ನೆ | MyGov

ರಸಪ್ರಶ್ನೆಸ್ಪರ್ಧೆ ಪಿಡಿಎಫ್ ನೋಡಲು ಇಲ್ಲಿ ಕ್ಲಿಕ್ ಮಾಡಿ
**
NB/SK



(Release ID: 1876296) Visitor Counter : 325


Read this release in: English , Urdu , Hindi