ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಇನ್ನಷ್ಟು ಹೆಚ್ಚಿನ ಉತ್ಪನ್ನಗಳಿಗೆ ಗುಣಮಟ್ಟ ನಿಯಂತ್ರಣ ಆದೇಶವನ್ನು ಅನ್ವಯಿಸಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಲಹೆ


ಪ್ರತಿಯೊಂದು ಉತ್ಪನ್ನಕ್ಕೂ ಭಾರತವು ತನ್ನದೇ ಆದ ಗುಣಮಟ್ಟದ ಮಾನದಂಡಗಳನ್ನು ಹೊಂದಿರಬೇಕು ಮತ್ತು ಜಾಗತಿಕ ಮಾನದಂಡಗಳೊಂದಿಗೆ ಗುರುತಿಸಿಕೊಳ್ಳುವಂತೆ ಕೈಗಾರಿಕೆಗಳಿಗೆ ಶ್ರೀ ಗೋಯಲ್ ಕರೆ. 

ಸಮಕಾಲೀನ ಪರೀಕ್ಷಾ ಪರಿಸರ ವ್ಯವಸ್ಥೆಯು ಜಾಗತಿಕ ಉತ್ಪಾದನಾ ಶಕ್ತಿಯಾಗಬೇಕು: ಶ್ರೀ ಗೋಯಲ್

ಉದ್ಯಮದ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಪ್ರಯೋಗಾಲಯ ಪ್ರಮಾಣೀಕರಣದಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅನ್ನು ಬಳಸಬಹುದು

ವಿಶ್ವ ಮಾನದಂಡಗಳ ಸಮಗ್ರ ಅಧ್ಯಯನವನ್ನು ಕೈಗೊಳ್ಳುವಂತೆ ಮತ್ತು ಭಾರತವು ಅಳವಡಿಸಿಕೊಳ್ಳ ಬೇಕಾಗಿರುವ ಕ್ಷೇತ್ರಗಳ ಬಗ್ಗೆ  ಗಮನ ಕೇಂದ್ರೀಕರಿಸುವಂತೆ  ಬಿಐಎಸ್ ಗೆ ಮನವಿ ಮಾಡಿದ ಸಚಿವರು

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ವಿಚಾರಸಂಕಿರಣದ  ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಶ್ರೀ ಗೋಯಲ್ ಭಾಷಣ

Posted On: 03 NOV 2022 5:46PM by PIB Bengaluru

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು, ಭಾರತವು ಗುಣಮಟ್ಟದ ಪ್ರಜ್ಞೆಯುಳ್ಳ ರಾಷ್ಟ್ರವಾಗಬೇಕಾಗಿದೆ ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದಕ್ಕೆ ಅಡಿಪಾಯವನ್ನು ಸಿದ್ಧಪಡಿಸುವ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿ ಗುಣಮಟ್ಟವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಭಾರತವು ಗುಣಮಟ್ಟದಲ್ಲಿ ನಾಯಕನಾಗುವವರೆಗೆ, ಅದು ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಲು ಸಾಧ್ಯವಾಗುವುದಿಲ್ಲ ಎಂದವರು ಅಭಿಪ್ರಾಯಪಟ್ಟರು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಆಯೋಜಿಸಿದ ಆತ್ಮನಿರ್ಭರ ಭಾರತದ ಪ್ರಯೋಗಾಲಯಗಳಲ್ಲಿ ಹೊರಹೊಮ್ಮುತ್ತಿರುವ ಜಾಗತಿಕ ಪ್ರವೃತ್ತಿಗಳ ಕುರಿತ ವಿಚಾರಸಂಕಿರಣದ  ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಜಾಗತಿಕ ಉತ್ಪಾದನಾ ಶಕ್ತಿಯಾಗಲು, ಭಾರತವು ತನ್ನ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಬೇಕು ಮತ್ತು ತಾನು ಒದಗಿಸುವ ಸರಕುಗಳು ಮತ್ತು ಸೇವೆಗಳಿಗೆ ಉತ್ತಮ ಗುಣಮಟ್ಟದ ಮಾನದಂಡಗಳನ್ನು ಜಾರಿಗೆ ತರಬೇಕು ಎಂದು ಶ್ರೀ ಗೋಯಲ್ ಹೇಳಿದರು. ಈ ಇಡೀ ಪರಿಸರ ವ್ಯವಸ್ಥೆಯಲ್ಲಿ ಬಿಐಎಸ್ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದು ಶ್ರೀ ಗೋಯಲ್ ಹೇಳಿದರು.  ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಯಶಸ್ಸಿನಲ್ಲಿ ವೇಗವರ್ಧಕ ಪಾತ್ರವನ್ನು ವಹಿಸಿದ್ದಕ್ಕಾಗಿ ಅವರು ಬಿಐಎಸ್ ಅನ್ನು ಶ್ಲಾಘಿಸಿದರು.

ವಿಚಾರ ಸಂಕಿರಣದ ಕಾರ್ಯಸೂಚಿಯನ್ನು ಉಲ್ಲೇಖಿಸಿದ ಶ್ರೀ ಗೋಯಲ್ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ಯಲು ಭಾರತವು ಉತ್ಪಾದನಾ ಶಕ್ತಿಯಾಗಬೇಕಿದ್ದು, ಅದಕ್ಕೆ ಅತ್ಯಗತ್ಯವಾಗಿರುವ ಆಧುನಿಕ ಸಮಕಾಲೀನ ಪರೀಕ್ಷಾ ಪರಿಸರ ವ್ಯವಸ್ಥೆಯಲ್ಲಿ ಹೇಗೆ ಮುಂಚೂಣಿಯಲ್ಲಿರ ಬಹುದೆಂಬುದರ ಬಗ್ಗೆ  ನಾವು ಯೋಚಿಸುತ್ತಿದ್ದೇವೆ ಎಂದು ಹೇಳಿದರು. ಒಂದು ಶತಕೋಟಿಗೂ ಹೆಚ್ಚು ಜನರ ಆಕಾಂಕ್ಷೆಗಳನ್ನು ಪೂರೈಸಲು ಮಾತ್ರವಲ್ಲದೆ, ಬಹಳ ಬೇಡಿಕೆಯಿರುವ ಅಗತ್ಯಗಳನ್ನು ಪೂರೈಸಲು ಭಾರತಕ್ಕಾಗಿ ರೂಪಿಸಲಾಗಿರುವ ಪರೀಕ್ಷೆ ಮತ್ತು ಪ್ರಯೋಗಾಲಯ ವ್ಯವಸ್ಥೆಗಳನ್ನು ವಿಶ್ವದ ಅವಿಭಾಜ್ಯ ಅಂಗವನ್ನಾಗಿ ಮಾಡಲು ಭಾರತವು ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎಂಬುದನ್ನು  ಅವರು ಒತ್ತಿ ಹೇಳಿದರು.

ಬಿಐಎಸ್ ತನ್ನದೇ ಪ್ರಕ್ರಿಯೆಗಳನ್ನು ಮೌಲ್ಯಮಾಪನ ಮಾಡಲು ಮತ್ತು ಆಧುನಿಕ ಆವಶ್ಯಕತೆಗಳೊಂದಿಗೆ ಹೊಂದಿಕೊಳ್ಳಲು ತನ್ನನ್ನು ತಾನು ಮರುಮೌಲ್ಯಮಾಪನ ಮಾಡುವ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಗೋಯಲ್, ಬಿಐಎಸ್ ನ ಎಲ್ಲಾ ಮೂರು ಸ್ತಂಭಗಳಾದ ಮಾನದಂಡಗಳ ಸೃಷ್ಟಿ, ದೇಶಾದ್ಯಂತ ಸಾಕಷ್ಟು ಪ್ರಯೋಗಾಲಯ ಪರೀಕ್ಷಾ ಸೌಲಭ್ಯಗಳನ್ನು ಖಾತ್ರಿಪಡಿಸುವುದು ಮತ್ತು ಉತ್ಪನ್ನಗಳು ಹಾಗು ಪ್ರಕ್ರಿಯೆಗಳ ಪ್ರಮಾಣೀಕರಣವು ಹೆಚ್ಚು ಸಮಕಾಲೀನ ಮತ್ತು ತಂತ್ರಜ್ಞಾನ ಚಾಲಿತವಾಗಬೇಕು ಎಂದೂ  ಹೇಳಿದರು.

ಭಾರತದ ಪ್ರಯೋಗಾಲಯ ಮೂಲಸೌಕರ್ಯದ ಮ್ಯಾಪಿಂಗ್ ಮಾಡಲಾಗಿದೆ ಎಂದು ಶ್ರೀ ಗೋಯಲ್ ಹೇಳಿದರು. ಇದು ದೇಶಾದ್ಯಂತ ಪರೀಕ್ಷಾ ಮೂಲಸೌಕರ್ಯದಲ್ಲಿನ ನಿರ್ಣಾಯಕ ಅಂತರಗಳನ್ನು/ಕಂದಕಗಳನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ. ನಿರ್ದಿಷ್ಟ ಕೈಗಾರಿಕೆಗಳು ತಮ್ಮ ಉತ್ಪನ್ನಗಳನ್ನು ಪ್ರಮಾಣೀಕರಿಸಲು ಈ ಅಂತರಗಳು ದೂರ ಕ್ರಮಿಸಬೇಕಾದಂತಹ ಅಗತ್ಯವನ್ನು ಹೇಳುವಂತಹವಾಗಿರಬಹುದು ಎಂದು ಅವರು ವಿವರಿಸಿದರು. ಪ್ರಯೋಗಾಲಯಗಳಲ್ಲಿ ಬಳಕೆಯಲ್ಲಿರುವ ತಂತ್ರಜ್ಞಾನದ ವಿಷಯದಲ್ಲಿ ಅಥವಾ ಬಳಸಲಾಗುತ್ತಿರುವ ಸಲಕರಣೆಗಳ ಮಾದರಿಗಳಲ್ಲಿ ಅಂತರಗಳು ಇರಬಹುದು. ಈ ಅಂತರಗಳನ್ನು ತುಂಬಲು ಬಿಐಎಸ್ ಒಂದು ಮಾರ್ಗಸೂಚಿಯನ್ನು ರೂಪಿಸುತ್ತಿದೆ ಎಂದು ಅವರು ಹೇಳಿದರು. ಭಾರತವನ್ನು ಗುಣಮಟ್ಟದ ಪ್ರಜ್ಞೆಯುಳ್ಳ ದೇಶವನ್ನಾಗಿ ಮಾಡಲು, ಸರ್ಕಾರವು ಸಾಮೂಹಿಕವಾಗಿ ಖಾಸಗಿ ವಲಯದೊಂದಿಗೆ ತೊಡಗಿಸಿಕೊಳ್ಳುತ್ತದೆ ಮತ್ತು ಬೆಂಬಲವನ್ನು ವಿಸ್ತರಿಸುತ್ತದೆ ಹಾಗು ಸಾಕಷ್ಟು ಮೂಲಸೌಕರ್ಯಗಳನ್ನು ಹೊಂದಲು ಪ್ರಯೋಗಾಲಯಗಳಲ್ಲಿ ಹೂಡಿಕೆಗಳನ್ನು ಅನ್ವೇಷಿಸುತ್ತದೆ ಎಂದು ಶ್ರೀ ಗೋಯಲ್ ಹೇಳಿದರು. ಮಾನವ ಮಧ್ಯಪ್ರವೇಶವನ್ನು ಕಡಿಮೆ ಮಾಡುವ ಸಲುವಾಗಿ ತಂತ್ರಜ್ಞಾನವು ಈ ಎಲ್ಲಾ ಪ್ರಯತ್ನಗಳ ಕೇಂದ್ರಬಿಂದುವಾಗಲಿದೆ ಎಂದು ಅವರು ಹೇಳಿದರು.

ದೇಶದ ಇನ್ನಷ್ಟು ಹೆಚ್ಚಿನ ಉತ್ಪನ್ನಗಳಿಗೆ ಗುಣಮಟ್ಟ ನಿಯಂತ್ರಣ ಆದೇಶಗಳನ್ನು ಅನ್ವಯಿಸಲು ಅವರು ಸಲಹೆ ನೀಡಿದರು ಮತ್ತು ಮಧ್ಯಮ ಹಾಗು ದೊಡ್ಡ ಕೈಗಾರಿಕೆಗಳು ಉತ್ತಮ ಗುಣಮಟ್ಟದ ಮಾನದಂಡಗಳು ಹಾಗು ಗುಣಮಟ್ಟ ನಿಯಂತ್ರಣ ಆದೇಶಗಳನ್ನು ಅನ್ವಯಿಸಿಕೊಳ್ಳಲು ಯಾವುದೇ ನೆಪವನ್ನು ಹೇಳುವಂತಿಲ್ಲ ಮತ್ತು ಅದಕ್ಕೆ ಕ್ಷಮೆ ಇಲ್ಲ ಎಂದು ಹೇಳಿದರು. ಇದನ್ನು ಕಾರ್ಯಗತಗೊಳಿಸುವುದರಿಂದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸ್ವೀಕಾರಾರ್ಹತೆ ಲಭಿಸಲು ಸಾಧ್ಯವಾಗುತ್ತದೆ ಮತ್ತು ಕಡಿಮೆ ಗುಣಮಟ್ಟದ ಸರಕುಗಳು ಭಾರತಕ್ಕೆ ಬರದಂತೆ ನೋಡಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದವರು ಹೇಳಿದರು.

ವಿಶ್ವವು ಯಾವ ಗುಣಮಟ್ಟದ ಮಾನದಂಡಗಳನ್ನು ಅಳವಡಿಸಿಕೊಳ್ಳುತ್ತಿದೆ, ಭಾರತವು ಯಾವ ಕ್ಷೇತ್ರಗಳ ಮೇಲೆ ಗಮನ ಹರಿಸಬೇಕಾಗಿದೆ ಮತ್ತು ಆ ಮಾನದಂಡಗಳನ್ನು ಪೂರೈಸಲು ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸುವಂತೆ ಅವರು ಬಿಐಎಸ್ ಗೆ ಒತ್ತಾಯಿಸಿದರು. ಪ್ರತಿಯೊಂದು ಉತ್ಪನ್ನಕ್ಕೆ ಸಂಬಂಧಿಸಿ  ನಾವು ನಮ್ಮದೇ ಆದ ಭಾರತೀಯ ಮಾನದಂಡಗಳನ್ನು ಹೊಂದಿರಬೇಕು ಎಂದು ಹೇಳಿದ ಅವರು, ಜಾಗತಿಕ ಮಾನದಂಡಗಳೊಂದಿಗೆ ಹೊಂದಿಕೊಳ್ಳುವಂತೆ ಕೈಗಾರಿಕೆಗಳಿಗೆ ಕರೆ ನೀಡಿದರು.

ಆರ್ಟಿಫಿಷಿಯಲ್ ಇಂಟಲಿಜನ್ಸ್ ಅನ್ನು ಪ್ರಯೋಗಾಲಯ ಪ್ರಮಾಣೀಕರಣದಲ್ಲಿ ಬಳಸಬಹುದು ಎಂದು ಅವರು ಸೂಚಿಸಿದರು. ಇದರ ಬಗ್ಗೆ ವಿವರಿಸಿದ ಅವರು, ಯಾವುದೇ ಕಂಪನಿಯು ನಿರಂತರವಾಗಿ ಉತ್ತಮ ಗುಣಮಟ್ಟದ ಮಾನದಂಡಗಳಿಗೆ ಬದ್ಧವಾಗಿದ್ದರೆ, ಅವುಗಳನ್ನು ಪುನರಾವರ್ತಿತ ತಪಾಸಣೆಗಳಿಂದ ಮುಕ್ತಗೊಳಿಸಬಹುದು ಅಥವಾ ದೀರ್ಘಾವಧಿಗೆ ಪರವಾನಗಿಗಳನ್ನು ನೀಡಬಹುದು ಎಂದು ಹೇಳಿದರು. ಇದು ನಮ್ಮ ಉದ್ಯಮದ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಸ್ಥಿರವಾದ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ. ಪರೀಕ್ಷಾ ಶುಲ್ಕಗಳ ವಿಷಯದಲ್ಲಿ ಮಹಿಳಾ ಉದ್ಯಮಿಗಳು, ಯುವ ನವೋದ್ಯಮಗಳು, ಎಂಎಸ್ಎಂಇಗಳಿಗೆ ಗಮನಾರ್ಹ ಬೆಂಬಲವನ್ನು ವಿಸ್ತರಿಸುವ ಬಗ್ಗೆ ಪರಿಶೀಲಿಸುವಂತೆ ಅವರು ಬಿಐಎಸ್ ಗೆ  ಸೂಚಿಸಿದರು.
ದೇಶೀಯವಾಗಿ ತಯಾರಿಸಿದ ಆಟಿಕೆಗಳನ್ನು ಉಲ್ಲೇಖಿಸಿದ ಸಚಿವರು,  ಗುಣಮಟ್ಟ, ಸ್ಥಿರತೆ ಮತ್ತು ಸುರಕ್ಷತೆಯ ಮಾನದಂಡಗಳನ್ನು ಪೂರೈಸುವುದರೊಂದಿಗೆ ಸರ್ಕಾರದ ಪ್ರಯತ್ನಗಳು ಪರಿವರ್ತನೆಯ ಫಲಿತಾಂಶಗಳಿಗೆ ಕಾರಣವಾಗಿವೆ ಎಂದು  ಹೇಳಿದರು. 

ಶ್ರೀ ಗೋಯಲ್ ಅವರು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಬಗ್ಗೆ  ಒತ್ತಿ ಹೇಳಿದರು. ಇದು ಸಾಮೂಹಿಕ ಪ್ರಯತ್ನವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಮತ್ತು ಈ ಪ್ರಯತ್ನದಲ್ಲಿ ಮಾಧ್ಯಮಗಳ ಬೆಂಬಲವನ್ನು ಕೋರಿದರು. ಭಾರತವನ್ನು ಪರೀಕ್ಷಾ ಕೇಂದ್ರವನ್ನಾಗಿ ಮಾಡಲು ಮತ್ತು ಉನ್ನತ ಗುಣಮಟ್ಟದ ಬಗ್ಗೆ ಪ್ರಜ್ಞೆ ಹೊಂದಿರುವ ದೇಶವನ್ನಾಗಿ ಮಾಡಲು, ಅದಕ್ಕಾಗಿ ಆಗ್ರಹ ಮಾಡುವ  ಗ್ರಾಹಕರಾಗುವುದಕ್ಕಿಂತ ಉತ್ತಮವಾದ ಬೇರೆ  ಮಾರ್ಗವಿಲ್ಲ. ಗುಣಮಟ್ಟಕ್ಕಾಗಿ ಬೇಡಿಕೆಯಿಡುವುದು ನಮ್ಮ ಉತ್ಪಾದಕರಿಗೆ ಮತ್ತು ಇಡೀ ಪರಿಸರ ವ್ಯವಸ್ಥೆಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತವನ್ನು ಚೈತನ್ಯ ಶೀಲ, ಆಧುನಿಕ, ಸಮಕಾಲೀನ, ತಾಂತ್ರಿಕವಾಗಿ ಸಶಕ್ತವಾದ ಪರೀಕ್ಷೆ, ತಪಾಸಣೆ ಮತ್ತು ಪ್ರಮಾಣೀಕರಣದ  ಕಥೆಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

*****



(Release ID: 1873634) Visitor Counter : 108


Read this release in: English , Urdu , Hindi