ಕೃಷಿ ಸಚಿವಾಲಯ

ಇ-ನಾಮ್ ಅಡಿಯಲ್ಲಿ ವೇದಿಕೆಗಳ ವೇದಿಕೆ (ಪ್ಲಾಟ್ ಫಾರ್ಮ್ ಆಫ್ ಪ್ಲಾಟ್ ಫಾರ್ಮ್ಸ್ -ಪಿಒಪಿ) ಗೆ ಚಾಲನೆ ನೀಡಿ, 1018 ಎಫ್.ಪಿ.ಒಗಳಿಗೆ 37 ಕೋಟಿ ರೂ.ಗಳಿಗೂ ಹೆಚ್ಚು ಈಕ್ವಿಟಿ ಅನುದಾನ ಬಿಡುಗಡೆ ಮಾಡಿದ ಕೇಂದ್ರ ಕೃಷಿ ಸಚಿವ ಶ್ರೀ ತೋಮರ್


ಇ-ನಾಮ್ ಕಾಫಿ ಟೇಬಲ್ ಬುಕ್ ಬಿಡುಗಡೆ

Posted On: 14 JUL 2022 6:53PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರಿಂದು ಕರ್ನಾಟಕದ ಬೆಂಗಳೂರಿನಲ್ಲಿ ನಡೆದ ರಾಜ್ಯ ಕೃಷಿ ಮತ್ತು ತೋಟಗಾರಿಕೆ ಸಚಿವರ ಸಮಾವೇಶದ ವೇಳೆ ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನಾಮ್) ಅಡಿಯಲ್ಲಿ ವೇದಿಕೆಗಳ ವೇದಿಕೆ( ಪ್ಲಾಟ್ ಫಾರ್ಮ್ ಆಫ್ ಪ್ಲಾಟ್ ಫಾರ್ಮ್ಸ್ -ಪಿಒಪಿ)ಗೆ ಚಾಲನೆ ನೀಡಿದರು. 1,018 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್.ಪಿ.ಒ) 37 ಕೋಟಿ ರೂ.ಗೂ ಹೆಚ್ಚು ಈಕ್ವಿಟಿ ಅನುದಾನವನ್ನು ಸಹ ಬಿಡುಗಡೆ ಮಾಡಿದರು. ಇದರಿಂದ ಸುಮಾರು 3.5 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ.

ಶ್ರೀ ತೋಮರ್ ಅವರ ಜೊತೆಗೆ, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರುಗಳಾದ ಶ್ರೀಮತಿ ಶೋಭಾ ಕರಂದ್ಲಾಜೆ ಮತ್ತು ಶ್ರೀ ಕೈಲಾಶ್ ಚೌಧರಿ, ಕರ್ನಾಟಕ ಸರ್ಕಾರದ ಕೃಷಿ ಸಚಿವ ಶ್ರೀ ಬಿ.ಸಿ.ಪಾಟೀಲ್, ರಾಜ್ಯದ ಸಚಿವರುಗಳು, ಕೇಂದ್ರ ಕೃಷಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

ಪಿಒಪಿಯನ್ನು ಪರಿಚಯಿಸುವುದರೊಂದಿಗೆ, ರೈತರು ತಮ್ಮ ರಾಜ್ಯದ ಗಡಿಗಳ ಹೊರಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗಲಿದೆ. ಇದು ಬಹು ಮಾರುಕಟ್ಟೆಗಳು, ಖರೀದಿದಾರರು ಮತ್ತು ಸೇವಾ ಪೂರೈಕೆದಾರರೊಂದಿಗೆ ರೈತರ ಡಿಜಿಟಲ್ ಪ್ರವೇಶವನ್ನು ಹೆಚ್ಚಿಸುತ್ತದೆ ಮತ್ತು ಬೆಲೆ ಶೋಧ ಕಾರ್ಯವಿಧಾನ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ಸಾಕಾರವನ್ನು ಉತ್ತಮಪಡಿಸುವ ಗುರಿಯೊಂದಿಗೆ ವ್ಯಾಪಾರ ವಹಿವಾಟುಗಳಲ್ಲಿ ಪಾರದರ್ಶಕತೆಯನ್ನು ತರುತ್ತದೆ. ವಿವಿಧ ವೇದಿಕೆಗಳ 41 ಸೇವಾ ಪೂರೈಕೆದಾರರು ಪಿಒಪಿ ವ್ಯಾಪ್ತಿಯಲ್ಲಿದ್ದು, ವ್ಯಾಪಾರ, ಗುಣಮಟ್ಟ ತಪಾಸಣೆ, ಉಗ್ರಾಣ, ಫಿನ್ ಟೆಕ್, ಮಾರುಕಟ್ಟೆ ಮಾಹಿತಿ, ಸಾರಿಗೆ ಮುಂತಾದ ವಿವಿಧ ಮೌಲ್ಯ ಸರಪಳಿ ಸೇವೆಗಳನ್ನು ಸುಗಮಗೊಳಿಸುತ್ತಾರೆ. ಪಿಒಪಿಯು ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ, ಇದು ಕೃಷಿ ಮೌಲ್ಯ ಸರಪಳಿಯ ವಿವಿಧ ವಿಭಾಗಗಳಲ್ಲಿ ವಿವಿಧ ವೇದಿಕೆಗಳ ನೈಪುಣ್ಯತೆಯಿಂದ ಪ್ರಯೋಜನ ಪಡೆಯುತ್ತದೆ.

ಇ-ನಾಮ್ ಸಂಯೋಜಿತ ಸೇವಾ ಪೂರೈಕೆದಾರರು (ಗುಣಮಟ್ಟದ ವಿಶ್ಲೇಷಣೆ, ವ್ಯಾಪಾರ, ಪಾವತಿ ವ್ಯವಸ್ಥೆಗಳು ಮತ್ತು ಸಾಗಣೆ ಸೇರಿದಂತೆ ಕೃಷಿ ಉತ್ಪನ್ನಗಳ ವ್ಯಾಪಾರಕ್ಕಾಗಿ ಸಮಗ್ರ ಸೇವೆಗಳನ್ನು ಒದಗಿಸುವ ಸೇವಾ ಪೂರೈಕೆದಾರರು), ಸಾಗಣೆ ಸೇವಾ ಪೂರೈಕೆದಾರರು, ಗುಣಮಟ್ಟ ಭರವಸೆ ಸೇವಾ ಪೂರೈಕೆದಾರರು, ಸ್ವಚ್ಛತೆ, ಶ್ರೇಣೀಕರಣ, ವಿಂಗಡಣೆ ಮತ್ತು ಪ್ಯಾಕೇಜಿಂಗ್ ಸೇವಾ ಪೂರೈಕೆದಾರರು, ಉಗ್ರಾಣ ಸೌಲಭ್ಯ ಸೇವಾ ಪೂರೈಕೆದಾರರು, ಕೃಷಿ ಆಧಾನ (ಇನ್ಪುಟ್) ಸೇವಾ ಪೂರೈಕೆದಾರರು, ತಂತ್ರಜ್ಞಾನ ಆಧಾರಿತ ಹಣಕಾಸು ಮತ್ತು ವಿಮಾ ಸೇವಾ ಪೂರೈಕೆದಾರರು, ಮಾಹಿತಿ ಪ್ರಸರಣ ಪೋರ್ಟಲ್ (ಸಲಹಾ ಸೇವೆಗಳು, ಬೆಳೆ ಮುನ್ಸೂಚನೆ, ಹವಾಮಾನ ನವೀಕರಣಗಳು, ರೈತರಿಗೆ ಸಾಮರ್ಥ್ಯ ವರ್ಧನೆ ಇತ್ಯಾದಿ) ಮತ್ತು ಇತರ ವೇದಿಕೆಗಳು (ಇ-ವಾಣಿಜ್ಯ, ಅಂತಾರಾಷ್ಟ್ರೀಯ ಕೃಷಿ-ವ್ಯಾಪಾರ ವೇದಿಕೆಗಳು, ವಿನಿಮಯ, ಖಾಸಗಿ ಮಾರುಕಟ್ಟೆ ವೇದಿಕೆಗಳು ಇತ್ಯಾದಿ) ಸೇರಿದಂತೆ ಸೇವಾ ಪೂರೈಕೆದಾರರ ವೇದಿಕೆಯನ್ನು "ವೇದಿಕೆಗಳ ವೇದಿಕೆ"ಯಾಗಿ ಏಕೀಕರಿಸುತ್ತದೆ.

ವಿವಿಧ ಸೇವಾ ಪೂರೈಕೆದಾರರ ಸೇರ್ಪಡೆಯು ಇ-ನಾಮ್ ವೇದಿಕೆಯ ಮೌಲ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ವೇದಿಕೆಗಳ ಬಳಕೆದಾರರಿಗೆ ವಿವಿಧ ಸೇವಾ ಪೂರೈಕೆದಾರರಿಂದ ಸೇವೆಗಳನ್ನು ಪಡೆಯುವ ಆಯ್ಕೆ ನೀಡುತ್ತದೆ. ಇದು ರೈತರು, ಎಫ್.ಪಿ.ಒಗಳು, ವ್ಯಾಪಾರಿಗಳು ಮತ್ತು ಇತರ ಬಾಧ್ಯಸ್ಥರಿಗೆ ಏಕಗವಾಕ್ಷಿಯ ಮೂಲಕ ಕೃಷಿ ಮೌಲ್ಯ ಸರಪಳಿಯಾದ್ಯಂತ ವಿವಿಧ ರೀತಿಯ ಸರಕುಗಳು ಮತ್ತು ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ, ಆ ಮೂಲಕ ಬಾಧ್ಯಸ್ಥರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ. ಇದಲ್ಲದೆ, ಉತ್ತಮ ಗುಣಮಟ್ಟದ ಸರಕುಗಳು/ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡುವಾಗ, ಇದು ಬಾಧ್ಯಸ್ಥರ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. ಇ-ನಾಮ್ ಮೊಬೈಲ್ ಅಪ್ಲಿಕೇಶನ್ ಮೂಲಕ ಪಿಒಪಿಯನ್ನು ಪ್ರವೇಶಿಸಬಹುದು, ಇದನ್ನು ಗೂಗಲ್ ಪ್ಲೇ ಸ್ಟೋರ್ಸ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಸಂದರ್ಭದಲ್ಲಿ, ಶ್ರೀ ತೋಮರ್, ಸಿಎಸ್ಎಸ್ ಅಡಿಯಲ್ಲಿ 1,018 ಎಫ್.ಪಿ.ಒಗಳಿಗೆ 37 ಕೋಟಿ ರೂ.ಗಳಿಗೂ ಹೆಚ್ಚಿನ ಈಕ್ವಿಟಿ ಅನುದಾನವನ್ನು ಬಿಡುಗಡೆ ಮಾಡಿದರು, ಇದು ಸುಮಾರು 3.5 ಲಕ್ಷ ರೈತರಿಗೆ ಪ್ರಯೋಜನವನ್ನು ನೀಡುತ್ತದೆ, ಇದು 10 ಸಾವಿರ ಎಫ್.ಪಿ.ಒಗಳನ್ನು ಸ್ಥಾಪಿಸುವ ಗುರಿಗೆ ಪೂರಕವಾಗಿರುತ್ತದೆ. ಉತ್ಪಾದಕ ಸದಸ್ಯರ ಈಕ್ವಿಟಿ, ಕೇಂದ್ರ ಸರ್ಕಾರದಿಂದ ಇದೇ ರೀತಿಯ ಈಕ್ವಿಟಿ ಅನುದಾನದ ಜೊತೆಗೆ, ಎಫ್.ಪಿ.ಒ.ಗಳ ಆರ್ಥಿಕ ನೆಲೆಯನ್ನು ಬಲಪಡಿಸುತ್ತದೆ ಮತ್ತು ಅವರ ಯೋಜನೆಗಳು ಮತ್ತು ವ್ಯವಹಾರ ಅಭಿವೃದ್ಧಿಗಾಗಿ ದುಡಿಯುವ ಬಂಡವಾಳದ ಅವಶ್ಯಕತೆಗಳಿಗಾಗಿ ಹಣಕಾಸು ಸಂಸ್ಥೆಗಳಿಂದ ಸಾಲಗಳನ್ನು ಪಡೆಯಲು ಅವರಿಗೆ ನೆರವಾಗುತ್ತದೆ. ಈ ಯೋಜನೆಯಡಿ, ಪ್ರತಿ ಎಫ್.ಪಿ.ಒಗೆ 3 ವರ್ಷಗಳ ಅವಧಿಗೆ 18 ಲಕ್ಷ ರೂ.ಗಳವರೆಗೆ ಆರ್ಥಿಕ ನೆರವನ್ನು ಒದಗಿಸಲಾಗುವುದು. ಇದಲ್ಲದೆ, ಪ್ರತಿ ಎಫ್.ಪಿ.ಒ.ಗೆ 15 ಲಕ್ಷ ರೂ.ಗಳ ಮಿತಿಯೊಳಗೆ ಎಫ್.ಪಿ.ಓ.ನ ಪ್ರತಿ ರೈತ ಸದಸ್ಯರಿಗೆ 2,000 ರೂ. ಸಾಲ ಲಭ್ಯವಿರುತ್ತದೆ. ಪ್ರತಿ ಎಫ್.ಪಿ.ಒ.ಗೆ 2 ಕೋಟಿ ರೂ.ಗಳವರೆಗೆ ಯಾವುದೇ ಅರ್ಹ ಸಾಲ ನೀಡುವ ಸಂಸ್ಥೆಯಿಂದ ಯೋಜನಾ ಸಾಲ ಅಥವಾ ತತ್ಸಮಾನ ಅನುದಾನದ ಅವಕಾಶವೂ ಇರುತ್ತದೆ.

ಕೃಷಿ ಸಚಿವರು ಬಿಡುಗಡೆ ಮಾಡಿದ ಕಾಫಿ ಟೇಬಲ್ ಪುಸ್ತಕವು ನಾವೀನ್ಯತೆ ಮತ್ತು ತಂತ್ರಜ್ಞಾನದ ಮೂಲಕ ದೇಶದಲ್ಲಿ ಕೃಷಿ ಉತ್ಪನ್ನಗಳ ವ್ಯಾಪಾರದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರುವಲ್ಲಿ ಇ-ನಾಮ್ ನ ಪ್ರಯತ್ನ ಮತ್ತು ಪಯಣವನ್ನು ಪ್ರದರ್ಶಿಸುತ್ತದೆ. ಇ-ನಾಮ್ ಕುರಿತ ಕಾಫಿ ಟೇಬಲ್ ಪುಸ್ತಕವು ಎಪಿಎಂಸಿ ಮಂಡಿಗಳ ಡಿಜಿಟಲೀಕರಣವನ್ನು ಸುಗಮಗೊಳಿಸುವ ಮೂಲಕ ರೈತರು ಮತ್ತು ಬಾಧ್ಯಸ್ಥರ ಪ್ರಯೋಜನಗಳು ಮತ್ತು ಯಶಸ್ಸನ್ನು ಪ್ರದರ್ಶಿಸುವತ್ತ ಗಮನ ಹರಿಸುತ್ತದೆ.

*********

 (Release ID: 1841592) Visitor Counter : 174


Read this release in: Hindi , English , Urdu