ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ದೇಶವನ್ನು ಜಗತ್ತಿನ ಶ್ರೇಷ್ಟ 10 ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಿಸಲು ‘ಟೀಮ್ ಇಂಡಿಯಾ’ ಆಗಿ ಕೆಲಸ ಮಾಡೋಣ - ಅನುರಾಗ್ ಠಾಕೂರ್.
ಗುಜರಾತ್‌ನ ಕೆವಾಡಿಯಾದಲ್ಲಿ ಕ್ರೀಡಾ ಸಚಿವರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಕೇಂದ್ರ ಕ್ರೀಡಾ ಸಚಿವರು; ಕ್ರೀಡಾ ಮೂಲಸೌಕರ್ಯವನ್ನು ಸುಧಾರಿಸಲು ಮತ್ತು ಕ್ರೀಡಾಪಟುಗಳನ್ನು ಸಶಕ್ತೀಕರಣಗೊಳಿಸಲು ಕೇಂದ್ರ-ರಾಜ್ಯಗಳ ಏಕೀಕೃತ ಪ್ರಯತ್ನಗಳಿಗೆ ಒತ್ತು.
Posted On:
24 JUN 2022 4:46PM by PIB Bengaluru
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಭಾರತವನ್ನು ವಿಶ್ವದ ಅಗ್ರ 10 ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಿಸಲು ಕೇಂದ್ರ ಮತ್ತು ರಾಜ್ಯಗಳ ಏಕೀಕೃತ ಧೋರಣೆ ಅವಶ್ಯ ಎಂದು ಹೇಳಿದ್ದಾರೆ. ಗುಜರಾತ್‌ನ ಕೆವಾಡಿಯಾದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ರಾಜ್ಯಗಳು ಮತ್ತು ಕೇಂದ್ರವು ವ್ಯೂಹಗಳನ್ನು ಮತ್ತು ಮೂಲಸೌಕರ್ಯಗಳನ್ನು ರೂಪಿಸಿದರೆ ಮತ್ತು 'ಟೀಮ್ ಇಂಡಿಯಾ'ದ ಉತ್ಸಾಹದೊಂದಿಗೆ ಕಾರ್ಯಕ್ರಮಗಳನ್ನು ಹಾಗು ಸ್ಪರ್ಧೆಗಳನ್ನು ಆಯೋಜಿಸಿದರೆ ಕ್ರೀಡೆಗಳ ಮತ್ತು ಆಟಗಾರರ ಪ್ರಗತಿ ಸಾಧ್ಯವಾಗುತ್ತದೆ. ಆದುದರಿಂದ ರಾಜ್ಯಗಳ ಗಡಿಗಳನ್ನು ಮೀರಿ ರಾಷ್ಟ್ರೀಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ" ಎಂದು ಅವರು ಹೇಳಿದರು.
ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿರುವ ರಾಜ್ಯಗಳ ಕ್ರೀಡಾ ಸಚಿವರು ಮತ್ತು ಅಧಿಕಾರಿಗಳು ಈ ಸಂದರ್ಭವನ್ನು ಜ್ಞಾನ ಹಂಚಿಕೆಯ ವೇದಿಕೆಯಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದ ಕೇಂದ್ರ ಸಚಿವರು ದೇಶದಲ್ಲಿ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಪ್ರತೀ ರಾಜ್ಯಗಳ ಉತ್ತಮ ಪದ್ಧತಿಗಳನ್ನು ಮುನ್ನೆಲೆಗೆ ತಂದು ಏಕೀಕೃತ ಧೋರಣೆಯನ್ನು ಅಳವಡಿಸಿಕೊಳ್ಳಬೇಕು ಎಂದೂ ಹೇಳಿದರು. "ಕ್ರೀಡೆಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುವಾಗ ಎಲ್ಲಾ ರಾಜ್ಯಗಳಿಗೂ ಎದುರಾಗುವಂತಹ ಹಲವಾರು ಸಾಮಾನ್ಯ ಸಮಸ್ಯೆಗಳಿವೆ ಮತ್ತು ಚರ್ಚೆ ಹಾಗು ಸಮಾಲೋಚನೆಗಳ ಮೂಲಕ ಇವುಗಳಿಗೆ ಕೆಲವು ಸಾಮಾನ್ಯ ಪರಿಹಾರಗಳನ್ನು ಕಂಡುಹಿಡಿಯಬಹುದು." ಎಂದೂ ಅವರು ನುಡಿದರು.
ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಕ್ರೀಡಾಂಗಣ ಜಿಯೋ ಟ್ಯಾಗಿಂಗ್, ರಾಜ್ಯಗಳಲ್ಲಿ ತರಬೇತಿ ಕೇಂದ್ರಗಳು, ಅಕಾಡೆಮಿಗಳು, ಕ್ರೀಡಾ ಸ್ಪರ್ಧೆಗಳ ಮೂಲಕ ಪ್ರತಿಭೆಗಳ ಶೋಧ ಮತ್ತು ಅಭಿವೃದ್ಧಿ, ಮಹಿಳೆಯರಿಗೆ ಉತ್ತೇಜನ, ದಿವ್ಯಾಂಗರು, ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳ ಜನರಿಗೆ ಉತ್ತೇಜನ, ದೇಶೀಯ ಕ್ರೀಡೆಗಳು ಹಾಗು ಆಂಟಿ ಡೋಪಿಂಗ್ ಕುರಿತು ಜಾಗೃತಿ ಮತ್ತು ಶಿಕ್ಷಣದ ಮಹತ್ವ, ಕ್ರೀಡೆಗೆ ಪೂರಕವಾದಂತಹ ಮತ್ತು ವೃತ್ತಿಪರರಿಗಾಗಿ ಸೂಕ್ತ ಪರಿಸರ ವ್ಯವಸ್ಥೆಯ ನಿರ್ಮಾಣ ಸಹಿತ ಇತರ ವಿಷಯಗಳು ಸಮ್ಮೇಳನದಲ್ಲಿ ಚರ್ಚೆಯಾಗಲಿವೆ ಎಂದೂ ಸಚಿವರು ಹೇಳಿದರು. .
ಗುಜರಾತ್ ಕ್ರೀಡಾ ಸಚಿವ ಹರ್ಷ್ ಸಾಂಘ್ವಿ ತಮ್ಮ ಉದ್ಘಾಟನಾ ಭಾಷಣದಲ್ಲಿ "ಇಲ್ಲಿ ಇರುವ ಪ್ರತಿಯೊಬ್ಬರೂ ನಿರ್ದಿಷ್ಟ ರಾಜ್ಯವನ್ನು ಪ್ರತಿನಿಧಿಸಲು ಬಂದಿದ್ದೇವೆ. ನಮಗೆ ಬೇರೆ ಬೇರೆ ಸಮಸ್ಯೆಗಳು ಮತ್ತು ಅಷ್ಟೇ ವೈವಿಧ್ಯಮಯ ಸಾಮರ್ಥ್ಯಗಳು ಇರಬಹುದು, ಆದರೆ ಸಮ್ಮೇಳನವು ಮುಕ್ತಾಯಗೊಂಡಾಗ, ಎರಡು ದಿನಗಳ ಕೊನೆಯಲ್ಲಿ ನಾವು ಒಂದೇ ತಂಡವಾಗಿ -ಟೀಮ್ ಇಂಡಿಯಾದಂತೆ ಕೆಲಸ ಮಾಡಲು ತಯಾರಾಗಲಿದ್ದೇವೆ ಎಂಬ ಬಗ್ಗೆ ತಮಗೆ ಖಚಿತ ವಿಶ್ವಾಸವಿದೆ” ಎಂದರು.
15 ರಾಜ್ಯಗಳ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು, ಭಾರತ ಸರಕಾರದ ಕ್ರೀಡಾ ಕಾರ್ಯದರ್ಶಿ ಶ್ರೀಮತಿ ಸುಜಾತಾ ಚತುರ್ವೇದಿ, ಭಾರತ ಸರಕಾರದ ಯುವಜನ ವ್ಯವಹಾರಗಳ ಕಾರ್ಯದರ್ಶಿ ಶ್ರೀ. ಸಂಜಯ್ ಕುಮಾರ್, 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.
******
(Release ID: 1836869)
Visitor Counter : 108