ಚುನಾವಣಾ ಆಯೋಗ

ದುರ್ಗಮ ಪ್ರದೇಶಗಳನ್ನು ಏರುವ ಮತ್ತು ದೂರದ ಮತಗಟ್ಟೆಗಳಲ್ಲಿ [ಪಿ.ಎಸ್.ಎಸ್] ಕಾರ್ಯನಿರ್ವಹಿಸುವ ಮತಗಟ್ಟೆ ಸಿಬ್ಬಂದಿಯ ದೃಢತೆ ಮತ್ತು ಮತದಾರರಿಗೆ ವಂದನೆಗಳು


ದೂರದ ಮತ್ತು ಸಂಕಷ್ಟದಾಯಕ ಮತಗಟ್ಟೆಗಳಿಗೆ ನಿಯೋಜಿಸುವ ಚುನಾವಣಾ ಸಿಬ್ಬಂದಿಗೆ ಸಂಭಾವನೆಯಲ್ಲಿ ಹೆಚ್ಚಳ

ಸಿಇಓಗಳು ಮತ್ತು ಡಿಇಓಗಳು ಎಲ್ಲಾ ಪಿ-ಮೈನಸ್ 3, ದೂರದ ಮತ್ತು ತ್ರಾಸದಾಯಕ ಮತಗಟ್ಟೆಗಳಿಗೆ ಭೇಟಿ ನೀಡಬೇಕು

ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಮತದಾರರ ನಿರಾಸಕ್ತಿ ವಿಭಿನ್ನವಾಗಿದೆ.

ಕಾರ್ಪೋರೇಟ್ ಮತ್ತು ಸಂಘಟಿತ ವಲಯದ ಸಿಬ್ಬಂದಿ ಮತದಾನಕ್ಕಾಗಿ ರಜೆ ತೆಗೆದುಕೊಳ್ಳುತ್ತಾರೆ ಆದರೆ ಮತದಾನದ ಮಾಡದೇ ಇರುವುದನ್ನು ಗಮನಿಸುವುದಿಲ್ಲ

ವಲಸೆ ಮತದಾರರು ಮತದಾನದಲ್ಲಿ ಪಾಲ್ಗೊಳ್ಳುವ ವಿಷಯವನ್ನು ಬಗೆಹರಿಸಲು ಸಮಿತಿ ರಚನೆ

Posted On: 07 JUN 2022 5:18PM by PIB Bengaluru

ಭಾರತದ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿಂದು ಚುನಾವಣಾ ಆಯೋಗದ ಸಭೆ ನಡೆಯಿತು. ಇ.ಸಿ. ಶ್ರೀ ಅನುಪ್ ಚಂದ್ರ ಪಾಂಡೆ ಅವರೊಂದಿಗೆ ಉತ್ತರಾಖಂಡದ ಚಿಮೋಲಿ ಜಿಲ್ಲೆಯಲ್ಲಿ ದುಮಾಕ್ ಮತ್ತು ಕಲ್ಗೋಥ್ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ಸಿಇಸಿ ಅವರು ಭೇಟಿ ನೀಡಿದ ಕುರಿತು ಚರ್ಚಿಸಲಾಯಿತು.  ಶ್ರೀ ಅನೂಪ್ ಪಾಂಡೆ ಅವರು ಡಿಎಂ ಪಿತೋರಗಢ‍್ ಗೆ ಭೇಟಿ ನೀಡಿದ ಶ್ರೀಮಂತ ಅನುಭವಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.

ಮತದಾನಕ್ಕಿಂತ ಮೂರು ದಿನಗಳ ಮುನ್ನ ಚುನಾವಣಾ ಸಿಬ್ಬಂದಿ ಕಠಿಣವಾದ ಗುಡ್ಡಗಾಡು ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿ ಸುಮಾರು 18 ಕಿಲೋಮೀಟರ್ ಸಾಗುತ್ತಾರೆ. ಇವರಷ್ಟೇ ತೆರಳುವುದಿಲ್ಲ, ಬದಲಿಗೆ ಇವಿಎಂಗಳು ಮತ್ತು ವಿವಿಪ್ಯಾಟ್ ಗಳು, ಸಂಪೂರ್ಣ ಚುನಾವಣಾ ಪರಿಕರಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ.  ಇಲ್ಲಿ ಇಂತಹ 440 ದೂರದ/ತ್ರಾಸದಾಯಕ ಮತಗಟ್ಟೆಗಳಿದ್ದು, [ಪಿ-ಮೈನಸ್3 ವಿಭಾಗ] ಮತಗಟ್ಟೆಗಳನ್ನು ತಲುಪಲು ಮೂರು ದಿನಗಳು ಬೇಕಾಗುತ್ತದೆ.  

ಸಂವಾದ ಸಂದರ್ಭದಲ್ಲಿ ಸಿಇಸಿ ಅವರು ಮಾಹಿತಿ ನೀಡಿ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ದೂರ ಪ್ರದೇಶದ ದುಮಾಕ್ ಗ್ರಾಮದಲ್ಲಿ ಶೇ 71.14 ಮತ್ತು ಕಾಲ್ಗೋಥ್ ಗ್ರಾಮದಲ್ಲಿ ಶೇ 80.45 ರಷ್ಟು ಮತ ಸಂಗ್ರಹವಾಗಿತ್ತು. ಪುರುಷ ಮತದಾರರಿಗೆ ಸರಿ ಸಮಾನವಾಗಿ ಮಹಿಳಾ ಮತದಾರರು ಸಹ ಮತದಾನದಲ್ಲಿ ಪಾಲ್ಗೊಂಡಿದ್ದರು. ದುಮಾಕ್ ಮತ್ತು ಕಾಲ್ಗೋಥ್ ನಂತಹ ಹಳ್ಳಿಗಳಲ್ಲಿ ಸುಮಾರು 20 ರಿಂದ 25 ರಷ್ಟು ನೋಂದಾಯಿತ ಮತದಾರರು ತಮ್ಮ ಕ್ಷೇತ್ರಗಳಲ್ಲಿ ಮತ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರು ತಮ್ಮ ಉದ್ಯೋಗ ಅಥವಾ ಶೈಕ್ಷಣಿಕ ಉದ್ದೇಶದಿಂದ ತಮ್ಮ ಗ್ರಾಮ ಮತ್ತು ರಾಜ್ಯದಿಂದ ಹೊರಗೆ ಹೋಗಬೇಕಾಗುತ್ತದೆ. ಈ ಪರಿಸ್ಥಿತಿಯು ದೂರದ ಮತದಾರರ ಮತದಾನಕ್ಕೆ ಅನುಕೂಲವಾಗುವಂತೆ ನಿರೀಕ್ಷಿತ ಪ್ರಗತಿಯ ಸಾಧ್ಯತೆಗಳನ್ನು ಅನ್ವೇಷಿಸಲು ಇದೀಗ ಹೊಸ ಅವಕಾಶವನ್ನು ತೆರೆದಂತಾಗಿದೆ.   

2019 ರ ಸಾಮಾನ್ಯ ಚುನಾವಣೆಯಲ್ಲಿ ಕೆಲವು ನಗರ ಪ್ರದೇಶಗಳ ಕ್ಷೇತ್ರಗಳಲ್ಲಿ ಶೇ 50 ಕ್ಕಿಂತ ಕಡಿಮೆ ಮತದಾನವಾಗಿರುವುದನ್ನು ಆಯೋಗ ಗಮನಿಸಿದೆ. ನಗರ ಪ್ರದೇಶಗಳಲ್ಲಿನ ಯಾವುದೇ ಮತದಾರರಿಗೆ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದರೂ ಮೆಟ್ರೋಪಾಲಿಟನ್/ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ತೀರಾ ಕಡಿಮೆ ಇರುವ ಬಗ್ಗೆ ಆಯೋಗ ಕಳವಳಗೊಂಡಿದೆ. ನಗರ ಪ್ರದೇಶಗಳಲ್ಲಿ ಮತದಾನದ ನಿರಾಸಕ್ತಿ ನಿವಾರಿಸುವ ಅಗತ್ಯವಿದೆ ಎಂಬುದನ್ನು ಮನಗಂಡಿದೆ.  

ವಿವರವಾದ ಚರ್ಚೆಯ ನಂತರ ಆಯೋಗ ಈ ಕೆಳಕಂಡಂತೆ ತೀರ್ಮಾನಗಳನ್ನು ಕೈಗೊಂಡಿದೆ.

1      ದೂರದ ದುಮಾಕ್ ಮತ್ತು ಕಲ್ಗೋಥ್ ಹಾಗೂ ಇದೇ ರೀತಿಯ ಗ್ರಾಮಗಳ ಮತದಾರರು ಉತ್ಸಾಹದಿಂದ ಮತ್ತು ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳುವ ಪ್ರಕ್ರಿಯೆಗೆ ತನ್ನ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದೆ. ಇದರಿಂದ ಭಾರತವನ್ನು ಉಜ್ವಲ ಪ್ರಜಾತಂತ್ರ ರಾಷ್ಟ್ರವನ್ನಾಗಿ ಮಾಡಲು ಕೊಡುಗೆ ನೀಡಿದಂತಾಗುತ್ತದೆ ಚುನಾವಣಾ ಆಯೋಗ ಹೇಳಿದೆ.

2    ಪ್ರಜಾಪ್ರಭುತ್ವದ ಭರವಸೆ ಮತ್ತು ಸ್ಪೂರ್ತಿಯನ್ನು ಶ್ರೇಷ್ಠತೆಯ ಹಂತಕ್ಕೆ ಕೊಂಡೊಯ್ಯಲು ಮತಗಟ್ಟೆ ಅಧಿಕಾರಿಗಳ ಸಮರ್ಪಿತ ತಂಡದ ಶ್ರದ್ಧೆ ಮತ್ತು ನಂಬಿಕೆಗೆ ಇಸಿಐ ವಂದನೆ ಸಲ್ಲಿಸಿದೆ.

3      ದೂರದ ಮತ್ತು ಕಷ್ಟಕರ ಪ್ರದೇಶಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ ಮತಗಟ್ಟೆ ಸಿಬ್ಬಂದಿಯ ಸಮರ್ಪಣಾ ಮನೋಭಾವವನ್ನು ಅನುಮೋದಿಸಿದ ಆಯೋಗ 3 ದಿನ ಮುಂಚಿತವಾಗಿ ಮತಗಟ್ಟೆಗಳಿಗೆ ತೆರಳುವ ಮತಗಟ್ಟೆ ಸಿಬ್ಬಂದಿಯ ಸಂಭಾವನೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಿದೆ[ಇದುವರೆಗೆ ಮತಗಟ್ಟೆ ಅಧಿಕಾರಿಗಳಿಗೆ ಪ್ರತಿ ದಿನದ ಸಂಭಾವನೆ ಎಲ್ಲರಿಗೂ ಒಂದೇ ರೂಪದಲ್ಲಿತ್ತು.] ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂತಹ ಮತಗಟ್ಟೆಗಳನ್ನು ಗುರುತಿಸಿ ಸಂಭಾವನೆ ಮೊತ್ತವನ್ನು ಹೆಚ್ಚಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ.

4     ಕಳೆದ ಹಲವಾರು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ ಡಿಇಓಗಳು/ಆರ್.ಓಗಳು ಮಾರ್ಗನಕ್ಷೆಯ ಮೂಲಕ ಪಿ-ಮೈನಸ್3 ಮತ್ತು ಪಿ-ಮೈನಸ್2 ಮತಗಟ್ಟೆಗಳನ್ನು ಮರುಪರಿಶೀಲನೆ ಮೂಲಕ ನಿಗದಿ ಮಾಡಬೇಕು ಹಾಗೂ ಮತಗಟ್ಟೆಗಳಿಗೆ ತಲುಪಲು ಸುರಕ್ಷಿತ ಮಾರ್ಗವನ್ನು ಗುರುತಿಸಬೇಕು ಎಂದು ಸೂಚಿಸಿದೆ.

5     ಇವಿಎಂ-ವಿವಿಪ್ಯಾಟ್ ಯಂತ್ರಗಳನ್ನು ತಾಂತ್ರಿಕವಾಗಿ ವಿನ್ಯಾಸಗೊಳಿಸಲಾಗಿದ್ದು, ಯಂತ್ರಗಳನ್ನು ತೆರೆಯಲು ಅನಧಿಕೃತ ಪ್ರಯತ್ನಗಳನ್ನು ತಡೆಯುವ [ಒಂದು ಬಾರಿ ಪ್ರೋಗ್ರಾಮಬಲ್ ಚಿಪ್ ನಿಂದ ನಿಷ್ಪ್ರಯೋಜಕವಾಗುತ್ತವೆ] ಹಿನ್ನೆಲೆಯಲ್ಲಿ ಸೂಕ್ತ ರೀತಿಯಲ್ಲಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ವಿಶೇಷವಾಗಿ ನೀರು/ಧಕ್ಕೆಯಾಗುವುದನ್ನು ತಡೆಯುವ, ಹೆಚ್ಚಿನ ರಕ್ಷಣೆ ಹೊಂದಿರುವ ಬ್ಯಾಕ್ ಪ್ಯಾಕ್ ಗಳ ನಿರ್ಮಾಣ/ಸುಲಭವಾಗಿ ಇವಿಎಂ-ವಿವಿಪ್ಯಾಟ್ ಗಳನ್ನು ಕೊಂಡೊಯ್ಯುವ ಮತ್ತು ದುರ್ಗಮ ಪ್ರದೇಶಗಳಲ್ಲೂ ಸುಗಮವಾಗಿ ತೆಗೆದುಕೊಂಡು ಹೋಗುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆಯೋಗ ತೀರ್ಮಾನಿಸಿದೆ.

6      ಸಂಸತ್ ಇಲ್ಲವೆ ರಾಜ್ಯ ವಿಧಾನಸಭೆಗಳಿಗೆ ನಡೆಯುವ ಚುನಾವಣೆಗೂ ಒಂದು ವರ್ಷ ಮುನ್ನ ಪಿ-3 ಮತಗಟ್ಟೆಗಳನ್ನು ಗುರುತಿಸುವಂತೆ ಡಿಇಓಗಳು/ಆರ್.ಒಗಳಿಗೆ ನಿರ್ದೇಶನ ನೀಡಲಾಗಿದೆ. ಸಿಇಓಗಳು ಕೂಡ ಕೆಲವು ಮತಗಟ್ಟೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕಾಗುತ್ತದೆ.

7      ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 5 ಅತಿ ಕಡಿಮೆ ಮತದಾನವಾಗುವ ಮತಗಟ್ಟೆಗಳನ್ನು ಗುರುತಿಸುವಂತೆ ಆಯೋಗ ಡಿಇಓಗಳು/ಆರ್.ಓಗಳಿಗೆ ನಿರ್ದೇಶನ ನೀಡಿದೆ. ಕಡಿಮೆ ಮತದಾನಕ್ಕೆ ಕಾರಣವಾದ ಅಂಶಗಳನ್ನು ಗುರುತಿಸಲು ಅವರು ಬೂತ್ ಗಳಿಗೆ ಭೇಟಿ ನೀಡಬೇಕು ಮತ್ತು ಮತದಾನ ಪ್ರಕ್ರಿಯೆಗೆ ಅಡ್ಡಿಯಾಗುವ ವಿಷಯಗಳಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.  

8      ನಗರ ಪ್ರದೇಶಗಳಲ್ಲಿ ಮತದಾನದ ಬಗ್ಗೆ ನಿರಾಸಕ್ತಿ ಇದ್ದರೆ ಆಯೋಗ ಕೇಂದ್ರೀಕೃತ ಚಟುವಟಿಕೆಗಳನ್ನು ನಡೆಸಬೇಕು. ನೆಗೋಷಬಲ್ ಇನ್ಸ್ಟ್ರುಮೆಂಟ್ ಕಾಯ್ದೆಯಡಿ ಮತದಾನದ ದಿನದಂದು ರಜೆ ಘೋಷಿಸಬೇಕು. ಮತದಾನ ಮಾಡಲು ಉದ್ಯೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಎಲ್ಲಾ ಕೇಂದ್ರ/ ರಾಜ್ಯ ಸರ್ಕಾರಗಳ ಇಲಾಖೆಗಳು, ಸಿಪಿಎಸ್ ಯುಗಳು/ರಾಜ್ಯ ಪಿಎಸ್ ಯುಗಳು ಮತ್ತು 500 ಕ್ಕಿಂತ ಹೆಚ್ಚು ಸಿಬ್ಬಂದಿ ಹೊಂದಿರುವ ಕಾರ್ಪೋರೇಟ್ ವಲಯದ ಕಚೇರಿಗಳು ಮತದಾನಕ್ಕೆ ರಜೆ ಪಡೆದುಕೊಂಡು ಮತದಾನ ಮಾಡದಿದ್ದರೆ ಅಂತಹವನ್ನು ಪತ್ತೆ ಮಾಡಲು ನೋಡೆಲ್ ಅಧಿಕಾರಿಯನ್ನು ನೇಮಿಸಬೇಕು. ಮತದಾನ ಮಾಡದ ಸದಸ್ಯರಿಗೆ ವಿಶೇಷ ಮತದಾನದ ಮಹತ್ವ ಕುರಿತ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ ಕುರಿತು ಜಾಗೃತಿ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

9      ಹೊಸದಾಗಿ ನೋಂದಣಿಯಾಗಿರುವ ಮತದಾರರ ಮನೆಗಳಿಗೆ ಇಪಿಐ ಕಾರ್ಡ್ ಗಳನ್ನು ವಿತರಿಸುವುದನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ. ಇವರು ಮತದಾನ ಮಾಡುವುದು ತಮ್ಮ ಕರ್ತವ್ಯ ಎಂದು ಮನವರಿಕೆ ಮಾಡಿಕೊಡಲಾಗುತ್ತಿದೆ. ವಿಶೇಷವಾಗಿ ಮತದಾರರ ಶಿಕ್ಷಣ ಮತ್ತು ಚುನಾವಣಾ ಪಾಲ್ಗೊಳ್ಳುವಿಕೆ ಕುರಿತು ಯುವ ಮತದಾರರಿಗೆ ಅರಿವು ಮೂಡಿಸಲು ತೀರ್ಮಾನಿಸಲಾಗಿದೆ.  

10      ಮತದಾರರು ನಗರ ಪ್ರದೇಶ ಮತ್ತು ಇತರೆ ಭಾಗಗಳಿಗೆ ಶಿಕ್ಷಣ, ಉದ್ಯೋಗ ಮತ್ತಿತರ ಉದ್ದೇಶಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮತದಾರರು ವಾಪಸ್ ಬಂದು ಮತದಾನ ಮಾಡಲು ತ್ರಾಸದಾಯಕವಾಗುತ್ತದೆ. ಹೀಗಾಗಿ ಆಯೋಗ ಮೊದಲ ಬಾರಿಗೆ ಪ್ರಾಯೋಗಿಕವಾಗಿ ದೂರದ ಮತದಾರರಿಗೆ ಮತದಾನ ಮಾಡಲು ಸೂಕ್ತ ವ್ಯವಸ್ಥೆ ಮಾಡುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ಮಾಡಲು ಸಮಿತಿ ರಚನೆಗೆ ನಿರ್ಧರಿಸಿದೆ. ವರದಿ ಬಂದ ಬಳಿಕ ಮತದಾರರು ಮತ್ತು ರಾಜಕೀಯ ಪಕ್ಷಗಳು ಪ್ರಾಥಮಿಕ ಮಧ್ಯಸ್ಥಿಕೆದಾರರಾಗಿರುವುದರಿಂದ ರಾಜಕೀಯ ಪಕ್ಷಗಳು ಒಳಗೊಂಡಂತೆ ಎಲ್ಲಾ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆಯನ್ನು ಪ್ರಾರಂಭಿಸಲು ತೀರ್ಮಾನಿಸಿದೆ.  

1      ಮೂರು ದಿನಗಳ ಮುಂಚೆ ಮತಗಟ್ಟೆಗೆ ತೆರಳುವ ಚುನಾವಣಾ ಸಿಬ್ಬಂದಿಯ ಸಂಭಾವನೆ ದ್ವಿಗುಣಗೊಳಿಸಲು ನಿರ್ಧಾರ

2     ಎಲ್ಲಾ ಸಿಇಒಗಳು/ಡಿಇಓಗಳು ಮತಗಟ್ಟೆಗಳಿಗೆ ತೆರಳುವ ಸುರಕ್ಷಿತ ಮಾರ್ಗಗಳನ್ನು ಗುರುತು ಮಾಡಲು ಮಾರ್ಗನಕ್ಷೆಯನ್ನು ಮರು ರೂಪಿಸಬೇಕು

3      ಇವಿಎಂ-ವಿವಿಪ್ಯಾಟ್ ಗಳನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ನೀರಿನಿಂದ ರಕ್ಷಣೆ/ಧಕ್ಕೆಯಾಗುವುದನ್ನು ತಡೆಯುವ ವಿನ್ಯಾಸದ ಬ್ಯಾಕ್ ಪ್ಯಾಕ್ ಗಳ ನಿರ್ಮಾಣಕ್ಕೆ ಕ್ರಮ

4      ಎಲ್ಲಾ ಡಿಇಓಗಳು/ಆರ್.ಒಗಳು ಪಿ-3 ಪ್ರದೇಶಗಳಿಗೆ ಭೇಟಿ ನೀಡಬೇಕು

5      ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗುವ ಐದು ಮತಗಟ್ಟೆಗಳಿಗೆ ಡಿಇಓಗಳು/ಆರ್.ಓಗಳು ಭೇಟಿ ನೀಡಿ ಕಾರಣಗಳನ್ನು ಪತ್ತೆ ಮಾಡಬೇಕು. ಮತದಾನದ ಪ್ರಕ್ರಿಯೆಗೆ ಅಡ್ಡಿಪಡಿಸುವ ಅಂಶಗಳನ್ನು ತಗ್ಗಿಸಲು ನಿರ್ದಿಷ್ಟ ಕ್ರಮಗಳನ್ನು ಜಾರಿಗೊಳಿಸಬೇಕು.

6      ಎಲ್ಲಾ ಸರ್ಕಾರಗಳು/ಸಿಪಿಎಸ್ ಯುಗಳು/ ರಾಜ್ಯ ಪಿಎಸ್ ಯುಗಳು/ 500 ಕ್ಕೂ ಹೆಚ್ಚು ಸಿಬ್ಬಂದಿ ಇರುವ ಕಾರ್ಪೋರೇಟ್ ವಲಯದ ಕಚೇರಿಗಳಲ್ಲಿ ಮತದಾನಕ್ಕಾಗಿ ರಜೆ ಪಡೆದು ಮತದಾನ ಮಾಡದೇ ಇರುವವರನ್ನು ಪತ್ತೆ ಮಾಡಲು ನೋಡೆಲ್ ಅಧಿಕಾರಿ ನೇಮಕ ಮಾಡುವ ಜೊತೆಗೆ ಇಂತಹ ಉದ್ಯೋಗಿಗಳಿಗೆ ಮತದಾನದ ಮಹತ್ವದ ಬಗ್ಗೆ ಶಿಕ್ಷಣ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕುರಿತಂತೆ ಜಾಗೃತಿ ಮೂಡಿಸಲು ನಿರ್ಧಾರ  

7      ಯುವ ಮತದಾರರಿಗೆ ವಿಶೇಷವಾಗಿ ಮತದಾನದ ಮಹತ್ವ ಕುರಿತು ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲು ನಿರ್ಧಾರ.

8      ವಲಸೆ ಮತದಾರರ ಸಮಸ್ಯೆಗಳನ್ನು ಬಗೆಹರಿಸಲು ಸಮಿತಿ ರಚನೆ. ಸಮಿತಿ ವರದಿ ಬಂದ ನಂತರ ರಾಜಕೀಯ ಪಕ್ಷಗಳು ಒಳಗೊಂಡಂತೆ ಎಲ್ಲಾ ಪಾಲುದಾರರ ಜತೆ ವಿಸ್ತೃತ ಸಮಾಲೋಚನೆ ನಡೆಸಲು ತೀರ್ಮಾನಿಸಲಾಗಿದೆ.

*****



(Release ID: 1831939) Visitor Counter : 434


Read this release in: English , Urdu , Hindi