ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಭಾರತದ ಔಷಧ ಉದ್ಯಮವು ವಿಶ್ವದ ಆರೋಗ್ಯ ರಕ್ಷಣೆಯ ಪಾಲಕನಾಗುವ ಗುರಿಯನ್ನು ಹೊಂದಿರಬೇಕು: ಪಿಯೂಷ್ ಗೋಯಲ್


ಇಡೀ ಔಷಧ ಉದ್ಯಮವು ಉತ್ತಮ ಉತ್ಪಾದನಾ ಅಭ್ಯಾಸಗಳೊಂದಿಗೆ ಕೆಲಸ ಮಾಡಬೇಕು

Posted On: 15 APR 2022 4:58PM by PIB Bengaluru

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಭಾರತೀಯ ಔಷಧ ಉದ್ಯಮವು ವಿಶ್ವದ ಆರೋಗ್ಯ ರಕ್ಷಣೆಯ ಪಾಲಕನಾಗುವತ್ತ ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.  


 
ಮುಂಬೈನಲ್ಲಿ ಇಂದು ಭಾರತೀಯ ಔಷಧ ತಯಾರಕರ ಸಂಘದ (ಐಡಿಎಂಎ) 'ಇಂಡಿಯನ್ ಫಾರ್ಮಾ- ಗ್ಲೋಬಲ್ ಹೆಲ್ತ್ ಕೇರ್' ವಜ್ರಮಹೋತ್ಸವ ಸಮಾವೇಶದಲ್ಲಿ ಮಾತನಾಡಿದ ಶ್ರೀ ಗೋಯಲ್, ಭಾರತವನ್ನು ಈಗಾಗಲೇ 'ವಿಶ್ವದ ಔಷಧಾಲಯʼ ಎಂದು ಗುರುತಿಸಲಾಗಿದೆ ಎಂದರು. "ವಜ್ರಮಹೋತ್ಸವವು ನಮ್ಮ ಸಾಧನೆಗಳನ್ನು ಪ್ರತಿಬಿಂಬಿಸಲು ಮತ್ತು ಭವಿಷ್ಯಕ್ಕಾಗಿ ಯೋಜಿಸಲು ಉತ್ತಮ ಸಮಯವಾಗಿದೆ. ನಾವು `ಜನರಿಕ್‌’ ವಲಯದಲ್ಲಿನ ನಮ್ಮ ಸಾಮರ್ಥ್ಯಗಳ ಮೇಲೆ ಗಮನ ಹರಿಸುವುದು ಮಾತ್ರವಲ್ಲದೆ, ನಮ್ಮ ಉತ್ಪಾದನಾ ಪೂರ್ವ ಪೂರೈಕೆ ಸರಪಳಿ ಹಾಗೂ ಉತ್ಪಾದನೆ ನಂತರದ ಪೂರೈಕೆ ಸರಪಳಿಯನ್ನು ಖಾತರಿಪಡಿಸಿಕೊಳ್ಳುವುದು ಬಹಳ ಮುಖ್ಯ. ನಾವು ಉತ್ಪನ್ನದ ಅಭಿವೃದ್ಧಿಯನ್ನು ಪ್ರಯತ್ನಿಸುವುದು, ಹೊಸ ಆವಿಷ್ಕಾರಗಳನ್ನು ಮಾಡುವುದು ಮುಖ್ಯ,ʼʼ ಎಂದು ಶ್ರೀ ಗೋಯಲ್ ಹೇಳಿದರು. 


 
ಆರ್ಥಿಕ ಯಶಸ್ಸಿಗಾಗಿ ಮೂರು ಮಂತ್ರಗಳನ್ನು ಸಚಿವರು ಸೂಚಿಸಿದರು, ಅವೆಂದರೆ: ಆವಿಷ್ಕಾರದ ಮೇಲೆ ಗಮನ ಹರಿಸುವುದು, ಗುಣಮಟ್ಟಕ್ಕೆ ಒತ್ತು ನೀಡುವುದ ಮತ್ತು ವಿಶ್ವ ಮಾರುಕಟ್ಟೆಯೊಂದಿಗೆ ಕೆಲಸ ಮಾಡುವುದು. "ಅಂತರರಾಷ್ಟ್ರೀಯ ಸ್ಪರ್ಧಾತ್ಮಕತೆ ಬಹಳ ಮುಖ್ಯವಾಗಿರುತ್ತದೆ. ಹೊಸ ಬೆಳವಣಿಗೆಗಳು ಮತ್ತು ಉತ್ತಮ ಉತ್ಪಾದನಾ ಪದ್ಧತಿಗಳಿಗೆ ಅನುಗುಣವಾಗಿ ನಾವು ಮುಂದುವರಿಯಬೇಕಿರುವುದು ಬಹಳ ಮುಖ್ಯ,ʼʼ ಎಂದು ಅವರು ಹೇಳಿದರು. 

ದೇಶದ 750 ದೊಡ್ಡ ಔಷಧ ಕಂಪನಿಗಳು ಸಣ್ಣ ಕಂಪನಿಗಳನ್ನು ಬೆಂಬಲಿಸಬೇಕು ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಅವುಗಳಿಗೆ ಸಹಾಯ ಮಾಡಬೇಕು ಎಂದು ಶ್ರೀ ಗೋಯಲ್ ಮನವಿ ಮಾಡಿದರು. ʻಜಿಎಂಪಿʼ (ಉತ್ತಮ ತಯಾರಿಕಾ ಅಭ್ಯಾಸಗಳು) ಕಂಪನಿಗಳು ಈ ಉದ್ದೇಶಕ್ಕಾಗಿ ಒಂದು ನಿಧಿಯನ್ನು ಸ್ಥಾಪಿಸಿ, ನಿರ್ದಿಷ್ಟ ಕಾಲಮಿತಿಯೊಳಗೆ ಇಡೀ ಭಾರತದ ಔಷಧ ಉದ್ಯಮವು ಉತ್ತಮ ಉತ್ಪಾದನಾ ಅಭ್ಯಾಸಗಳೊಂದಿಗೆ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆಂಬ ಬಗ್ಗೆ ಗಮನ ಹರಿಸಬಹುದು ಎಂದು ಅವರು ಸಲಹೆ ನೀಡಿದರು. 


 
ಇತ್ತೀಚೆಗೆ ಯುಎಇ ಮತ್ತು ಆಸ್ಟ್ರೇಲಿಯಾದೊಂದಿಗೆ ಮಾಡಿಕೊಳ್ಳಲಾದ  ʻಮುಕ್ತ ವ್ಯಾಪಾರ ಒಪ್ಪಂದʼಗಳನ್ನು (ಎಫ್‌ಟಿಎ) ಉಲ್ಲೇಖಿಸಿದ ಶ್ರೀ ಗೋಯಲ್, ಸರ್ಕಾರವು ಉತ್ಪನ್ನಗಳ ಸುಲಭ ಅನುಮೋದನೆಗಾಗಿ ಮಾರ್ಗವನ್ನು ರಚಿಸಿದೆ ಎಂದು ಹೇಳಿದರು.  "ಇದೇ ಮೊದಲ ಬಾರಿಗೆ, ತಾಂತ್ರಿಕೇತರ ಅಡೆತಡೆಗಳ ಮೇಲೆ ಗಮನ ಕೇಂದ್ರೀಕರಿಸುವ ಒಪ್ಪಂದಗಳ ವಿಚಾರದಲ್ಲಿ ಕೆಲವೊಂದು ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಳ್ಳಲು ನಮಗೆ ಸಾಧ್ಯವಾಗಿದೆ". ಇದು ವಿಶೇಷವಾಗಿ ಔಷಧ ಉದ್ಯಮಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು. ಇದೇ ವೇಳೆ, ಉದ್ಯಮವು ತ್ವರಿತ ಅನುಮೋದನೆಗಳಿಗಾಗಿ ಈ ಹೊಸ ಒಪ್ಪಂದಗಳನ್ನು ಬಳಸಲು ಸಾಧ್ಯವಾಗಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಸರ್ಕಾರವು ʻಎಪಿಐʼಗಳಿಗಾಗಿ ಮತ್ತು ವೈದ್ಯಕೀಯ ಸಾಧನಗಳಿಗಾಗಿ ʻಪಿಎಲ್ಐʼನಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು. 

"ನಾವು ಭಾರತದ ಆಸ್ತಿ ಹಕ್ಕುಗಳ (ಐಪಿಆರ್) ನೀತಿಯನ್ನು ಬಲಪಡಿಸಿದ್ದೇವೆ. ನಮ್ಮ ದೇಶೀಯ ಪೇಟೆಂಟ್ ಸಲ್ಲಿಕೆಯು ಕಳೆದ 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪೇಟೆಂಟ್‌ ಸಲ್ಲಿಕೆಗಿಂತ ಹೆಚ್ಚಾಗಿದೆ. ಇದೊಂದು ಉತ್ತಮ ಸಂಕೇತ,ʼʼ ಎಂದ ಸಚಿವರು. "ಪೇಟೆಂಟ್ ಅರ್ಜಿಗಳು 7-8 ವರ್ಷಗಳ ಹಿಂದೆ ಇದ್ದುದಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ" ಎಂದು ಮಾಹಿತಿ ನೀಡಿದರು. 

 


2022ರ ಮಾರ್ಚ್ನಲ್ಲಿ 25 ಶತಕೋಟಿ ಡಾಲರ್‌ಗಳನ್ನು ಮುಟ್ಟಿದ ಭಾರತದ ಔಷಧ ಉದ್ಯಮವು ರಫ್ತಿನಲ್ಲಿ ಐದನೇ ಅತಿದೊಡ್ಡ ರಾಷ್ಟ್ರವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. "ಕಳೆದ 10 ವರ್ಷಗಳಲ್ಲಿ ನಾವು ಕಂಡ ಅಸಾಧಾರಣ ಬೆಳವಣಿಗೆಯನ್ನು ನಾವು ಮುಂದುವರಿಸಿ, ಸ್ವಾವಲಂಬನೆಯನ್ನು ಖಾತರಿಡಪಸಿಕೊಳ್ಳಬೇಕು, ಏಕೆಂದರೆ ಜಾಗತಿಕ ಪೂರೈಕೆ ಸರಪಳಿಗಳು ಹೆಚ್ಚು ಅನಿರೀಕ್ಷಿತವಾಗುತ್ತಿವೆ," ಎಂದು ಅವರು ಹೇಳಿದರು. 

ಕೋವಿಡ್ ಸಾಂಕ್ರಾಮಿಕದಿಂದ ಉಂಟಾದ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ, ಭಾರತದ ಬೃಹತ್ ಲಸಿಕಾ ಅಭಿಯಾನದ ಯಶಸ್ಸನ್ನು ಖಾತರಿಪಡಿಸಿದ್ದಲ್ಲದೆ, 200ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಗಳು ಮತ್ತು ಔಷಧಿಗಳನ್ನು ಪೂರೈಸುವ ಮೂಲಕ ಅತ್ಯಂತ ಸಕಾರಾತ್ಮಕತೆಯನ್ನು ಪ್ರದರ್ಶಿಸಿದ್ದಕ್ಕಾಗಿ ಶ್ರೀ ಪಿಯೂಷ್ ಗೋಯಲ್ ಅವರು ಭಾರತದ ಔಷಧ ಉದ್ಯಮವನ್ನು ಶ್ಲಾಘಿಸಿದರು. 

ಸಚಿವರ ಭಾಷಣವನ್ನು ಈ ಲಿಂಕ್‌ನಲ್ಲಿ ವೀಕ್ಷಿಸಬಹುದು. 

***



(Release ID: 1817207) Visitor Counter : 147


Read this release in: English , Marathi