ಸಂಸ್ಕೃತಿ ಸಚಿವಾಲಯ
azadi ka amrit mahotsav

ಆಂಧ್ರ ಪ್ರದೇಶದ ರಾಜಮಹೇಂದ್ರಾವರಂನಲ್ಲಿಂದು ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ 2022ಕ್ಕೆ ಚಾಲನೆ


ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವದಂತಹ ಉತ್ಸವಗಳು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಇನ್ನಷ್ಟು ಬಲಿಷ್ಟಗೊಳಿಸುತ್ತವೆ: ಶ್ರೀ ಶ್ರೀ ಬಿಶ್ವಭೂಷಣ ಹರಿಚಂದನ್

ಆರ್.ಎಸ್.ಎಂ.-2022 ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ, ಉತ್ತೇಜಿಸುವ ಮತ್ತು ಜನಪ್ರಿಯಗೊಳಿಸುವ ಉದ್ದೇಶವನ್ನು ಹೊಂದಿದೆ: ಶ್ರೀ ಜಿ. ಕಿಶನ್ ರೆಡ್ಡಿ

Posted On: 26 MAR 2022 9:19PM by PIB Bengaluru

ಅಜಾದಿ ಕಾ ಅಮೃತ ಮಹೋತ್ಸವ ಅಡಿಯಲ್ಲಿ ಬೃಹತ್ ಉತ್ಸವವಾದ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ 2022 ನ್ನು ಆಂಧ್ರ ಪ್ರದೇಶದ ರಾಜಮಹೇಂದ್ರಾವರಂನಲ್ಲಿ ಆಂಧ್ರ ಪ್ರದೇಶದ ರಾಜ್ಯಪಾಲರಾದ ಶ್ರೀ ಬಿಶ್ವಭೂಷಣ ಹರಿಚಂದನ್  ಅವರು ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಡಿ.ಒ.ಎನ್.ಇ.ಆರ್. ಸಚಿವರಾದ ಶ್ರೀ ಜಿ.ಕೆ.ರೆಡ್ಡಿ ಅವರ ಸಮ್ಮುಖದಲ್ಲಿ ಉದ್ಘಾಟಿಸಿದರು. ಆಂಧ್ರ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಎಂ.ಶ್ರೀನಿವಾಸ ರಾವ್, ಸಹಾಯಕ ಸಚಿವರಾದ ವೇಣುಗೋಪಾಲ್ ಕೃಷ್ಣ ಅವರು ಈ ಸಂದರ್ಭದಲ್ಲಿ ಹಾಜರಿದ್ದರು. 
ಆಂಧ್ರ ಪ್ರದೇಶ ರಾಜ್ಯಪಾಲರಾದ ಶ್ರೀ ಬಿಶ್ವಭೂಷಣ ಹರಿಚಂದನ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವಗಳಂತಹ ಉತ್ಸವಗಳು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಇನ್ನಷ್ಟು ಬಲಪಡಿಸುತ್ತವೆ ಎಂದರು. ಕೇಂದ್ರ ಸಂಸ್ಕೃತಿ ಸಚಿವಾಲಯ ದೇಶಾದ್ಯಂತ ವಿವಿಧ ಉತ್ಸವಗಳನ್ನು ಆಯೋಜಿಸುತ್ತಿದೆ, ಇವುಗಳಿಂದ ದೇಶದ ಜನರಲ್ಲಿ ರಾಷ್ಟ್ರೀಯತೆಯನ್ನು ಬೆಳೆಸಲು ಸಹಾಯವಾಗುತ್ತದೆ ಎಂದೂ ಅವರು ನುಡಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಓರ್ವ ರಾಷ್ಟ್ರೀಯವಾದಿ ನಾಯಕರಲ್ಲೊಬ್ಬರು ಎಂದು ಶ್ಲಾಘಿಸಿದ ಅವರು,  ದೇಶದ ಜನರಲ್ಲಿ ಮತ್ತು ವೀರ ಸ್ವಾತಂತ್ರ್ಯ ಹೋರಾಟಗಾರರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಬೋಸ್ ಮೂಡಿಸಿದರು ಎಂದೂ ಹೇಳಿದರು. 
ಈ ಸಂದರ್ಭ ಮಾತನಾಡಿದ ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ವಲಯ ಅಭಿವೃದ್ಧಿ (ಡಿ.ಒ.ಎನ್.ಇ.ಆರ್.) ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವವು ಸಂಸ್ಕೃತಿ ಸಚಿವಾಲಯದ ಪ್ರಮುಖ ಉತ್ಸವವಾಗಿದ್ದು, ಅದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಕಾಪಿಡುವ, ಉತ್ತೇಜಿಸುವ ಮತ್ತು ಜನಪ್ರಿಯಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದರು.  
ಹನ್ನೆರಡನೇ ಆವೃತ್ತಿಯ ಆರ್.ಎಸ್.ಎಂ.-2022ರ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದ ಕೇಂದ್ರ ಸಚಿವರು ಆರ್.ಎಸ್.ಎಂ.-2022 ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಮಾರ್ಚ್ 26 ರಿಂದ ಆರಂಭಗೊಂಡು ಏಪ್ರಿಲ್ 3ರವರೆಗೆ ನಡೆಯುವ ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಉತ್ಸವ ಎಂದರು. 
ನಮ್ಮ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ತೆಲುಗು ರಾಜ್ಯಗಳ ವೈವಿಧ್ಯವನ್ನು ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವವಾಗಿ ಆಚರಿಸಲು ವಿಶಿಷ್ಟ ಹಬ್ಬ ಆಚರಣೆಯ ಅವಕಾಶವನ್ನು ಒದಗಿಸಿಕೊಟ್ಟಿರುವುದಕ್ಕಾಗಿ ಪ್ರಧಾನ ಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಅವರು ಇದರಿಂದ “ಭಾರತ ಒಂದು ರಾಷ್ಟ್ರ” ಎಂಬ ಹಿನ್ನೆಲೆಯಲ್ಲಿ ಜನರನ್ನು ಅದರಲ್ಲೂ ವಿಶೇಷವಾಗಿ ಯುವಜನತೆಯನ್ನು ದೇಶೀಯ ಸಂಸ್ಕೃತಿ, ಅದರ ಬಹುಮುಖೀ  ಆಯಾಮ, ಭವ್ಯತೆ ಮತ್ತು ಚಾರಿತ್ರಿಕ ಮಹತ್ವದ ಜೊತೆ  ಮರುಜೋಡಿಸಲು  ಅವಕಾಶ ದೊರೆಯುತ್ತದೆ ಎಂದೂ ಹೇಳಿದರು. 
ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವವು ಜಾನಪದ ಮತ್ತು ಬುಡಕಟ್ಟು ಕಲೆ, ನೃತ್ಯ, ಸಂಗೀತ, ಅಡುಗೆ ಮತ್ತು ಒಂದು ರಾಜ್ಯದ ಸಂಸ್ಕೃತಿಯನ್ನು ಇತರ ರಾಜ್ಯಗಳಲ್ಲಿ ಪ್ರದರ್ಶಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ ಕೇಂದ್ರ ಸಚಿವರು ಇದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದೀ ಜೀ ಅವರ ಗುರಿಯಾದ “ಏಕ ಭಾರತ್ ಶ್ರೇಷ್ಠ ಭಾರತ್” ನ್ನು ಬಲಪಡಿಸುತ್ತದೆ, ದಕ್ಷಿಣದ ರಾಜ್ಯಗಳ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುವುದರ ಜೊತೆಗೆ ಭಾರತದ ಸ್ಥಳೀಯ ಜನತೆಗೆ ಇತರ ಭಾಗಗಳ ವೈವಿಧ್ಯಮಯ ಸಂಸ್ಕೃತಿಯನ್ನು ಪರಿಚಯಿಸುತ್ತದೆ ಎಂದರು. 
ಭಾರತ ಸರಕಾರವು ದೇಶಾದ್ಯಂತ ವಿವಿಧ ಮಾದರಿಯ ಕಲೆ ಮತ್ತು ಸಂಸ್ಕೃತಿಯನ್ನು ಕಾಪಿಡಲು ಮತ್ತು ಉತ್ತೇಜಿಸಲು ಏಳು ವಲಯ ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಿದೆ ಎಂದವರು ತಿಳಿಸಿದರು. ಈ ವರ್ಷ ರಾಜಮಂಡ್ರಿ, ವಾರಂಗಲ್ ಮತ್ತು ಹೈದರಾಬಾದ್ ನಗರಗಳಲ್ಲಿ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗುತ್ತಿದೆ, ಅದು ಸಂಸ್ಕೃತಿಗಳ ಸಂಗಮವನ್ನು ಪರಿಚಯಿಸಲಿದೆ ಮತ್ತು ಭಾರತದ ಶ್ರೀಮಂತ ಸಂಸ್ಕೃತಿ ನೀಡುವ ಕೊಡುಗೆಯನ್ನು ಇತರ ಭಾರತೀಯರಿಗೆ  ಅರಿತುಕೊಳ್ಳಲು ವೇಗವರ್ಧಕದಂತೆ ಕೆಲಸ ಮಾಡಲಿದೆ ಎಂದೂ ಹೇಳಿದರು. 
ರಾಜಮ‌ಂಡ್ರಿಯ ಸರಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ಎರಡು ದಿನಗಳ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ 2022ರ ಮಾರ್ಚ್ 26 ಮತ್ತು 27ರಂದು ಆಯೋಜನೆಯಾಗಿದೆ. ಮೊದಲ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವವನ್ನು 2015ರಲ್ಲಿ ಆಯೋಜಿಸಲಾಗಿತ್ತು ಮತ್ತು ಅದು ಮಾಧ್ಯಮಗಳು ಹಾಗು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿದ್ದು ಈ ಉತ್ಸವದ ಸರಣಿಗಳನ್ನು ಆಯೋಜಿಸಲು ಪ್ರೇರಣೆಯನ್ನು ಒದಗಿಸಿತು. 
ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವವು ಪ್ರತಿಯೊಬ್ಬರಿಗೂ ಭಾರತದ ಸಾಂಪ್ರದಾಯಿಕ, ಬುಡಕಟ್ಟುಗಳ, ಶಾಸ್ತ್ರೀಯ ಮತ್ತು ಜನಪ್ರಿಯ ಕಲಾ ಪ್ರಕಾರಗಳನ್ನು ಒಂದೇ ಸೂರಿನಡಿಯಲ್ಲಿ ನೋಡುವ ಅವಕಾಶವನ್ನು ಒದಗಿಸುತ್ತದೆ. ಇಲ್ಲಿ ಸುಮಾರು 1000 ಕಲಾವಿದರು ತಮ್ಮ ಪ್ರತಿಭೆಯನ್ನು ಸಾದರಪಡಿಸುತ್ತಾರೆ. ಪ್ರಾದೇಶಿಕ ಸಂಸ್ಕೃತಿಯನ್ನು ಪ್ರತಿನಿಧಿಸುವ ಮತ್ತು ಸಾಂಪ್ರದಾಯಿಕ ಕಲೆಗಳು ಹಾಗು ಕರಕುಶಲ ವಸ್ತುಗಳನ್ನು ಪ್ರದರ್ಶಿಸುವ ವರ್ಣಮಯ ಅಂಗಣಗಳನ್ನು ಇಲ್ಲಿ ರೂಪಿಸಲಾಗಿದೆ. ಹಾಗು ಇಲ್ಲಿ ಸಾಂಪ್ರದಾಯಿಕ ಕಲೆಗಳು ಮತ್ತು ಕರಕುಶಲ ವಸ್ತುಗಳನ್ನು ಪ್ರದರ್ಶಿಸುವ ಹಾಗು ತಮ್ಮ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಕರಕುಶಲಕರ್ಮಿಗಳು ಹಾಕಿದ್ದಾರೆ. 
ಜನಪದ ಕಲಾವಿದರು ದಿನವಿಡೀ ವೇದಿಕೆಯಲ್ಲಿ ಇಲ್ಲವೇ ಜನರ ನಡುವೆ ಯಾವುದೇ ಪೂರ್ವಸಿದ್ಧತೆ ಇಲ್ಲದೆ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ. ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಜೆ ಗಂಟೆ 5.30 ರಿಂದ ರಾತ್ರಿ 10.30 ರವರೆಗೆ ನಡೆಸಲಾಗುತ್ತದೆ. 
ಜನಪದ ಕಲಾತಂಡಗಳಲ್ಲದೆ ಪ್ರಮುಖ ಪದ್ಮ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ವಿವಿಧ ಪ್ರಕಾರಗಳಿಗೆ ಸೇರಿದ ಶಾಸ್ತ್ರೀಯ ಕಲಾವಿದರು ಪ್ರತೀವರ್ಷ ಮಹೋತ್ಸವದಲ್ಲಿ ಪ್ರದರ್ಶನಗಳನ್ನು, ಕಾರ್ಯಕ್ರಮಗಳನ್ನು ನೀಡುತ್ತಾರೆ. ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವಗಳು ಆಯೋಜಿಸಲ್ಪಡುವ  ರಾಜ್ಯಗಳ ಪ್ರಾದೇಶಿಕ ಸೊಬಗನ್ನು ಪ್ರತಿನಿಧಿಸುವಂತೆ ಕಲಾವಿದರನ್ನು ಆಯ್ಕೆ ಮಾಡುವುದಕ್ಕಾಗಿ ವಿಶೇಷ ಮುತುವರ್ಜಿಯನ್ನು ವಹಿಸಲಾಗುತ್ತದೆ. 
ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವದಡಿಯಲ್ಲಿ 2022ರ ಮಾರ್ಚ್ 29 ಮತ್ತು 30ರಂದು ವಾರಂಗಲ್ ನಲ್ಲಿ ಮತ್ತು ಮೂರು ದಿನಗಳ ಕಾಲ ಹೈದರಾಬಾದಿನಲ್ಲಿ ದಿನಾಂಕ 01.04.2022ರಿಂದ 03.04.2022ರವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

***


(Release ID: 1810290) Visitor Counter : 278


Read this release in: English , Urdu , Hindi