ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

2014 ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳ ಫಲವಾಗಿ ರೂಪುಗೊಂಡ ಭಾರತ ಮತ್ತು ಅದರ ಸದೃಢ ನವೋದ್ಯಮಗಳು ಹಾಗೂ ಉದ್ಯಮಿಗಳ ಕಥೆಯು ಒಂದು ನೈಜ, ರೋಮಾಂಚಕ ಹಾಗೂ ದೀರ್ಘಕಾಲೀನ: ʻಭಾರತ ಜಾಗತಿಕ ವೇದಿಕೆʼಯಲ್ಲಿ (ಐಜಿಎಫ್) ರಾಜೀವ್ ಚಂದ್ರಶೇಖರ್ ಅಭಿಮತ


ಬೆಳೆಯುತ್ತಿರುವ ಉದ್ಯಮಶೀಲತೆ ಮತ್ತು ನಾವಿನ್ಯತೆಯ ವಿದ್ಯಮಾನಕ್ಕೆ ಭಾರತದ ಎಲ್ಲಾ ಭಾಗಗಳ ಯುವಕರನ್ನು ಸೇರಿಸುವುದು ನರೇಂದ್ರ ಮೋದಿ ಸರಕಾರದ ಧ್ಯೇಯವಾಗಿದೆ

ಡಿಜಿಟಲ್ ಅವಕಾಶಗಳು  ಕೆಲವು ನಗರಗಳಲ್ಲಿ ಕೇಂದ್ರೀಕರಣಗೊಳ್ಳಬಾರದು,  ಅವು 2ನೇ ಸ್ತರದ ನಗರಗಳಿಗೆ ವ್ಯಾಪಿಸಬೇಕು

Posted On: 08 MAR 2022 6:40PM by PIB Bengaluru

ಕೇಂದ್ರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ʻಆತ್ಮನಿರ್ಭರ ಭಾರತ್ʼ ಆಶಯವನ್ನು ಮುನ್ನಡೆಸುತ್ತಿರುವ ʻನವ ಭಾರತದ ಉದ್ಯಮʼದ (ʻನ್ಯೂ ಇಂಡಿಯಾ ಇಂಕ್) ಬಗ್ಗೆ ಮಾತನಾಡಿದರು. 2014ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳ ಫಲವಾಗಿ ಭಾರತದ ಯಶೋಗಾಥೆ, ಅದರ ಸದೃಢ ನವೋದ್ಯಮಗಳು ಹಾಗೂ ಉದ್ಯಮಶೀಲತೆಯು ರೂಪುಗೊಂಡಿದ್ದು, ಅದೊಂದು ರೋಮಾಂಚಕ ಹಾಗೂ ಸುದೀರ್ಘ ಪರಿಣಾಮ ಬೀರುವಂತಹ ಕಥೆ ಯಾಗಿದೆ ಎಂದು ಸಚಿವರು ಹೇಳಿದರು. ಬೆಳೆಯುತ್ತಿರುವ ಉದ್ಯಮಶೀಲತೆ ಮತ್ತು ನಾವಿನ್ಯತೆಯ ವಿದ್ಯಮಾನಕ್ಕೆ ಭಾರತದ ಎಲ್ಲಾ ಭಾಗಗಳ ಯುವಕರನ್ನು ಸೇರಿಸುವುದು ನರೇಂದ್ರ ಮೋದಿ ಸರಕಾರದ ಧ್ಯೇಯವಾಗಿದೆ. ಹೀಗಾಗಿ ಡಿಜಿಟಲ್ ಅವಕಾಶಗಳು 2ನೇ ಹಂತದ ನಗರಗಳಿಗೆ ಮತ್ತಷ್ಟು ವ್ಯಾಪಿಸುವಂತೆ ಖಾತರಿಪಡಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಜಾಗತಿಕ ವೇದಿಕೆಗಳಲ್ಲಿ ಭಾರತದ ಸಾಧನೆಯನ್ನು ಬಿಂಬಿಸುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು. ಈ ಯಶೋಗಾಥೆಯೇ ಭಾರತೀಯ ಟೆಕ್ ಕ್ಷೇತ್ರದಲ್ಲಿ ಪರಿವರ್ತನೆಯ ಬಿಂದುವಾಗಿರುವುದರಿಂದ ಮತ್ತು ಹೆಚ್ಚು ಹೆಚ್ಚು ಜಾಗತಿಕ ಹೂಡಿಕೆದಾರರು ನವ ಭಾರತದ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳುವಂತಾಗಲು ಜಾಗತಿಕ ರಂಗದಲ್ಲಿ ಭಾರತದ ಯಶೋಗಾಥೆಯನ್ನು ಒತ್ತಿ ಹೇಳುವ ಅಗತ್ಯವಿದೆ ಎಂದು ಹೇಳಿದರು. ಆಡಳಿತ ಮತ್ತು ಜನರ ಜೀವನದಲ್ಲಿ ತಂತ್ರಜ್ಞಾನವು ಹೇಗೆ ತ್ವರಿತಗತಿಯಲ್ಲಿ ಹಾಸುಹೊಕ್ಕಾಗಿದೆ ಎಂಬುದನ್ನು ವಿವರಿಸಿದ ಶ್ರೀ ರಾಜೀವ್ ಚಂದ್ರಶೇಖರ್ ಅವರು, "ಭಾರತದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳಿರದಂತಹ ನಾವಿನ್ಯತೆಯ ಆಳ ಮತ್ತು ವ್ಯಾಪಕ ವಿಸ್ತರಣೆಗೆ ಮುಂದಿನ 2-3 ವರ್ಷಗಳು ಸಾಕ್ಷಿಯಾಗಲಿವೆ" ಎಂದು ಹೇಳಿದರು.

ಸಮಾರೋಪದ ಅಧಿವೇಶನದಲ್ಲಿ ಸಚಿವರು ಉದಯೋನ್ಮುಖ ಉದ್ಯಮಿಗಳಿಗೆ ಸಲಹೆಯನ್ನೂ ನೀಡಿದರು. "ಪಠ್ಯಪುಸ್ತಕಗಳನ್ನು ಮೀರಿ  ನೀವು ಹೊಂದಿರುವ ಕೌಶಲ್ಯಗಳು ಮತ್ತು ಸಾಮರ್ಥ್ಯಗಳನ್ನು ಕಂಡುಹಿಡಿಯಲು ಪ್ರಯತ್ನಿಸಿ, ಅವುಗಳ ಅಭಿವೃದ್ಧಿ ಅತ್ಯಗತ್ಯ. ದೃಢನಿಶ್ಚಯ ಮತ್ತು ಉತ್ಸಾಹದ ಹೊರತಾಗಿ ಯಶಸ್ಸಿಗೆ ಬೇರೆ ಸಿದ್ಧ ಸೂತ್ರಗಳಿಲ್ಲ," ಎಂದರು.

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾದ 2 ದಿನಗಳ ʻಭಾರತ ಜಾಗತಿಕ ವೇದಿಕೆ-2022ʼ (ʼಇಂಡಿಯಾ ಗ್ಲೋಬಲ್ ಫೋರಂ-2022) ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದರು. ಈ ಹಿಂದಿನ ಆವೃತ್ತಿಗಳನ್ನು ಲಂಡನ್ ಮತ್ತು ದುಬೈನಲ್ಲಿ ಆಯೋಜಿಸಲಾಗಿತ್ತು. ಸಚಿವರು - ʻದಿ ನ್ಯೂ ಇಂಡಿಯಾ ಇಂಕ್ʼ, ʻದಿ ಯುನಿಕಾರ್ನ್ ರೌಂಡ್ ಟೇಬಲ್ʼ, ʻದಿ ಗ್ಲೋಬಲ್ ಸಪ್ಲೈ ಚೈನ್ʼ, ʻಎಜುಕೇಶನ್ & ಸ್ಕಿಲ್ಸ್ ಬೋರ್ಡ್‌ರೂಮ್ʼ ಅಧಿವೇಶನಗಳಲ್ಲಿ ಪಾಲ್ಗೊಂಡರು. ಜೊತೆಗೆ ಕಾರ್ಯಕ್ರಮದ ಸಮಾರೋಪ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.

ಬೆಳಗ್ಗೆ ನಡೆದ ಉಪಾಹಾರ ಕೂಟದ ಅಧಿವೇಶನದಲ್ಲಿ ಸುಮಾರು 30 ಸಿಇಓಗಳು ಮತ್ತು ಬೃಹತ್‌ ನವೋದ್ಯಮಗಳ (ಯುನಿಕಾರ್ನ್‌) ಸ್ಥಾಪಕರು ಭಾಗವಹಿಸಿದ್ದರು. ಸಚಿವರು, ಅಧಿಕಾರ ವಹಿಸಿಕೊಂಡಾಗಿನಿಂದಲೂ ದೇಶಾದ್ಯಂತ ವಿವಿದ ನವೋದ್ಯಮಿಗಳನ್ನು ಭೇಟಿಯಾಗುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ಕುರಿತು ಮಾತನಾಡಿದ ಸಚಿವರು, "ಕೋವಿಡೋತ್ತರ ಕಾಲಘಟ್ಟದಲ್ಲಿ ಆತ್ಮವಿಶ್ವಾಸ ಮತ್ತು ಆಕಾಂಕ್ಷೆಯ ಭಾವನೆ ಮೂಡಿದೆ. ಅದು ಭಾರತದ ಮಹಿಳೆಯರು ಮತ್ತು ಪುರುಷರು ಇಬ್ಬರನ್ನೂ ಉನ್ನತ ಗುರಿಗಳ ಬೆನ್ನು ಹತ್ತಲು ಪ್ರೇರೇಪಿಸುತ್ತದೆ. ಭಾರತದಲ್ಲಿ ಇಂದು ಮಹಿಳೆಯರು ತಾವು ಏನು ಬೇಕಾದರೂ ಸಾಧಿಸಬಹುದು ಎಂದು ನಂಬುವ ಮನಸ್ಥಿತಿ ಇದೆ," ಎಂದರು.

ವೇದಿಕೆಯಲ್ಲಿ ಗೌರವಾನ್ವಿತ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆಯ ಸಹಾಯಕ ಸಚಿವರಾದ ಶ್ರೀ ಮೀನಾಕ್ಷಿ ಲೇಖಿ ಹಾಗೂ ಕರ್ನಾಟಕ ಸರಕಾರ, ಉದ್ಯಮ ಹಾಗೂ ಮಾಧ್ಯಮದ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಐಜಿಎಫ್ ಬಗ್ಗೆ: ʻಐಜಿಎಫ್ʼ - ಇದು ಅಂತರರಾಷ್ಟ್ರೀಯ ವ್ಯವಹಾರ ಮತ್ತು ಜಾಗತಿಕ ನಾಯಕರಿಗೆ ಕಾರ್ಯಸೂಚಿ-ರೂಪಿಸುವ ವೇದಿಕೆಯಾಗಿದೆ. ಇದು ಅಂತರರಾಷ್ಟ್ರೀಯ ಕಾರ್ಪೊರೇಟ್‌ಗಳು ಮತ್ತು ನೀತಿ ನಿರೂಪಕರಿಗೆ ತಮ್ಮ ವಲಯಗಳು ಮತ್ತು ವ್ಯೂಹಾತ್ಮಕ ಪ್ರಾಮುಖ್ಯತೆಯ ವಿಚಾರಗಳಲ್ಲಿ ಮಧ್ಯಸ್ಥಗಾರರೊಂದಿಗೆ ಸಂವಹನ ನಡೆಸಲು ವೇದಿಕೆಗಳ ಆಯ್ಕೆಯನ್ನು ಒದಗಿಸುತ್ತದೆ. ನಮ್ಮ ಇಂತಹ ವೇದಿಕೆಗಳು ದೊಡ್ಡ ಜಾಗತಿಕ ಸಮಾವೇಶಗಳಿಂದ ಹಿಡಿದು, ವಿಶೇಷ ಆಹ್ವಾನಿತರಿಗಷ್ಟೇ ಸೀಮಿತವಾದ ಸಭೆಗಳು,  ನಿಕಟ ಸಮಾಲೋಚನೆಗಳು ಮತ್ತು ವಿಶ್ಲೇಷಣೆ, ಮತ್ತು ನಮ್ಮ ಮಾಧ್ಯಮಗಳ ಮೂಲಕ ನಡೆಸುವ ಸಂದರ್ಶನಗಳು ಮತ್ತು ಚಿಂತನಾ ನಾಯಕತ್ವದವರೆಗೆ ವ್ಯಾಪಿಸಿವೆ. 

***



(Release ID: 1804147) Visitor Counter : 202


Read this release in: English , Hindi