ಪ್ರಧಾನ ಮಂತ್ರಿಯವರ ಕಛೇರಿ

ಜನವರಿ 20ರಂದು 'ಆಜಾದಿ ಕಾ ಅಮೃತ ಮಹೋತ್ಸವ್‌ ಸೆ ಸ್ವರ್ಣಿಮ್ ಭಾರತ್ ಕೆ ಔರ್‌' ರಾಷ್ಟ್ರೀಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಲಿರುವ ಪ್ರಧಾನಮಂತ್ರಿಗಳು


ʻಬ್ರಹ್ಮ ಕುಮಾರಿಸ್‌ʼನ ಏಳು ಉಪಕ್ರಮಗಳಿಗೆ ಚಾಲನೆ ನೀಡಲಿರುವ ಪ್ರಧಾನಿ


Posted On: 19 JAN 2022 12:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜನವರಿ 20ರಂದು ಬೆಳಿಗ್ಗೆ 10:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ 'ಆಜಾದಿ ಕೆ ಅಮೃತಮಹೋತ್ಸವ್ ಸೆ ಸ್ವರ್ಣಿಮ್ ಭಾರತ್ ಕೆ ಔರ್‌ʼ ರಾಷ್ಟ್ರೀಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ. ʻಆಜಾದಿ ಕಾ ಅಮೃತ್ ಮಹೋತ್ಸವʼದ ಭಾಗವಾಗಿ ʻಬ್ರಹ್ಮ ಕುಮಾರಿಸ್‌ʼ ಸಂಘಟನೆಯು ಇಡೀ ವರ್ಷಕ್ಕೆ ಹಮ್ಮಿಕೊಂಡ ವಿಶೇಷ ಉಪಕ್ರಮಗಳನ್ನು ಈ ಕಾರ್ಯಕ್ರಮವು ಅನಾವರಣಗೊಳಿಸಲಿದೆ. 30ಕ್ಕೂ ಹೆಚ್ಚು ಅಭಿಯಾನಗಳು ಮತ್ತು 15000ಕ್ಕೂ ಹೆಚ್ಚು ಕಾರ್ಯಕ್ರಮಗಳು ಇದರಲ್ಲಿ ಸೇರಿವೆ.

ಈ ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿಯವರು ʻಬ್ರಹ್ಮ ಕುಮಾರಿಸ್‌ʼನ ಏಳು ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಇವುಗಳಲ್ಲಿ ʻನನ್ನ ಭಾರತ, ಆರೋಗ್ಯ ಭಾರತʼ, ʻಆತ್ಮನಿರ್ಭರ್ ಭಾರತ್: ಸ್ವಾವಲಂಬಿ ರೈತರುʼ, ʻಮಹಿಳೆಯರು: ಭಾರತದ ಧ್ವಜಧಾರಿಗಳುʼ, ʻಶಾಂತಿ ಬಸ್ ಅಭಿಯಾನದ ಶಕ್ತಿʼ, ʻಅಂದೇಖಾ ಭಾರತ್ ಸೈಕಲ್ ರ‍್ಯಾಲಿʼ, ʻಯುನೈಟೆಡ್ ಇಂಡಿಯಾ ಮೋಟಾರ್ ಬೈಕ್ ಅಭಿಯಾನʼ ಮತ್ತು ʻಸ್ವಚ್ಛ ಭಾರತ ಅಭಿಯಾನʼದಡಿ ಹಸಿರು ಉಪಕ್ರಮಗಳು ಸೇರಿವೆ.

ʻನನ್ನ ಭಾರತ, ಆರೋಗ್ಯ ಭಾರತʼ ಉಪಕ್ರಮದಲ್ಲಿ, ಆಧ್ಯಾತ್ಮಿಕತೆ, ಯೋಗಕ್ಷೇಮ ಮತ್ತು ಪೌಷ್ಟಿಕತೆಯ ಮೇಲೆ ಗಮನ ಕೇಂದ್ರೀಕರಿಸಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಇವುಗಳಲ್ಲಿ ವೈದ್ಯಕೀಯ ಶಿಬಿರಗಳ ಸಂಘಟನೆ, ಕ್ಯಾನ್ಸರ್ ತಪಾಸಣೆ, ವೈದ್ಯರು ಮತ್ತು ಇತರ ಆರೋಗ್ಯ ಸೇವಾ ಕಾರ್ಯಕರ್ತರ ಸಮಾವೇಶಗಳು ಸೇರಿವೆ. ʻಆತ್ಮನಿರ್ಭರ ಭಾರತ್: ಸ್ವಾವಲಂಬಿ ರೈತರುʼ ಕಾರ್ಯಕ್ರಮದ ಅಡಿಯಲ್ಲಿ 75 ರೈತ ಸಬಲೀಕರಣ ಅಭಿಯಾನಗಳು, 75 ರೈತ ಸಮಾವೇಶಗಳು, 75 ಸುಸ್ಥಿರ ಯೋಗ ಕೃಷಿ ತರಬೇತಿ ಕಾರ್ಯಕ್ರಮಗಳು ಮತ್ತು ರೈತರ ಕಲ್ಯಾಣಕ್ಕಾಗಿ ಹಲವಾರು ಉಪಕ್ರಮಗಳು ನಡೆಯಲಿವೆ. ʻಮಹಿಳೆಯರು: ಭಾರತದ ಧ್ವಜಧಾರಿಗಳುʼ ಕಾರ್ಯಕ್ರಮದ ಅಡಿಯಲ್ಲಿನ ಉಪಕ್ರಮಗಳು ಮಹಿಳಾ ಸಬಲೀಕರಣ ಮತ್ತು ಹೆಣ್ಣು ಮಕ್ಕಳ ಸಬಲೀಕರಣದ ಮೂಲಕ ಸಾಮಾಜಿಕ ಪರಿವರ್ತನೆಯತ್ತ ಗಮನ ಹರಿಸಲಿವೆ.

ʻಶಾಂತಿ ಬಸ್‌ನ ಶಕ್ತಿʼ ಅಭಿಯಾನವನ್ನು 75 ನಗರಗಳು ಮತ್ತು ತಾಲೂಕುಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವುದು. ಇದರ ಅಡಿಯಲ್ಲಿ ಇಂದಿನ ಯುವಜನರ ಸಕಾರಾತ್ಮಕ ಪರಿವರ್ತನೆಯ ಕುರಿತು ಪ್ರದರ್ಶನವನ್ನು ಏರ್ಪಡಿಸಲಾಗುವುದು. ಪಾರಂಪರಿಕ ಮತ್ತು ಪರಿಸರದ ನಡುವಿನ ಸಂಪರ್ಕವನ್ನು ಸೆಳೆಯುವ ನಿಟ್ಟಿನಲ್ಲಿ, ವಿವಿಧ ಪಾರಂಪರಿಕ ತಾಣಗಳಿಗೆ ʻಅಂದೇಖಾ ಭಾರತ್ ಸೈಕಲ್ ರ‍್ಯಾಲಿʼ ನಡೆಯಲಿದೆ. ʻಯುನೈಟೆಡ್ ಇಂಡಿಯಾ ಮೋಟಾರ್ ಬೈಕ್ʼ ಅಭಿಯಾನವು ಮೌಂಟ್ ಅಬುವಿನಿಂದ ದೆಹಲಿಯವರೆಗೆ ನಡೆಯಲಿದೆ ಮತ್ತು ಅನೇಕ ನಗರಗಳ ಮೂಲಕ ಇದು ಸಾಗಲಿದೆ. ʻಸ್ವಚ್ಛ ಭಾರತ ಅಭಿಯಾನʼದ ಅಡಿಯಲ್ಲಿ ಮಾಸಿಕ ಸ್ವಚ್ಛತಾ ಅಭಿಯಾನಗಳು, ಸಮುದಾಯ ಸ್ವಚ್ಛತಾ ಕಾರ್ಯಕ್ರಮಗಳು ಮತ್ತು ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲಾಗುವುದು.

ಈ ಕಾರ್ಯಕ್ರಮದ ಸಮಯದಲ್ಲಿ, ಗ್ರ್ಯಾಮಿ ಪ್ರಶಸ್ತಿ ವಿಜೇತ ಶ್ರೀ ರಿಕಿ ಕೆಜ್ ಅವರು ಸಂಯೋಜಿಸಿರುವ ʻಆಜಾದಿ ಕಾ ಅಮೃತ್ ಮಹೋತ್ಸವʼಕ್ಕೆ ಮೀಸಲಾದ ವಿಶೇಷ ಹಾಡನ್ನು ಸಹ ಬಿಡುಗಡೆ ಮಾಡಲಾಗುವುದು.

ʻಬ್ರಹ್ಮ ಕುಮಾರೀಸ್ʼ ಎಂಬುದು ವೈಯಕ್ತಿಕ ಪರಿವರ್ತನೆ ಮತ್ತು ವಿಶ್ವ ನವೀಕರಣಕ್ಕೆ ಮೀಸಲಾದ ವಿಶ್ವವ್ಯಾಪಿ ಆಧ್ಯಾತ್ಮಿಕ ಚಳವಳಿಯಾಗಿದೆ. 1937ರಲ್ಲಿ ಭಾರತದಲ್ಲಿ ಸ್ಥಾಪಿತವಾದ ʻಬ್ರಹ್ಮ ಕುಮಾರಿಸ್ʼ 130 ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿದೆ. ʻಬ್ರಹ್ಮ ಕುಮಾರಿಸ್ʼ ಸಂಸ್ಥಾಪಕರಾದ ಪಿತಾಶ್ರೀ ಪ್ರಜಾಪಿತಾ ಬ್ರಹ್ಮ ಅವರ 53ನೇ ಸ್ವರ್ಗಾರೋಹಣ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

***



(Release ID: 1790931) Visitor Counter : 228


Read this release in: English