ಪ್ರವಾಸೋದ್ಯಮ ಸಚಿವಾಲಯ
azadi ka amrit mahotsav

ಬೆಂಗಳೂರಿನಲ್ಲಿ ನಡೆದ ದಕ್ಷಿಣ ಪ್ರಾದೇಶಿಕ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರ ಸಮಾವೇಶದಲ್ಲಿ ಕೇಂದ್ರ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಭಾಷಣ


ಸ್ವದೇಶ್ ದರ್ಶನ್ ಯೋಜನೆಯಡಿ ಪ್ರವಾಸೋದ್ಯಮ ಸಚಿವಾಲಯವು ದಕ್ಷಿಣ ರಾಜ್ಯಗಳಲ್ಲಿ 1088 ಕೋಟಿ ರೂ. ಮೌಲ್ಯದ 15 ಯೋಜನೆಗಳನ್ನು ಮಂಜೂರು ಮಾಡಿದೆ: ಶ್ರೀ ಜಿ ಕಿಶನ್ ರೆಡ್ಡಿ

ಪ್ರಸಾದ್ ಯೋಜನೆಯಡಿ ದಕ್ಷಿಣ ರಾಜ್ಯಗಳಿಗೆ ಒಟ್ಟು ಯೋಜನಾ ವೆಚ್ಚದ ಶೇ. 15 ರಷ್ಟು ಮೌಲ್ಯದ 6 ಯೋಜನೆಗಳು ಮಂಜೂರು

Posted On: 28 OCT 2021 6:10PM by PIB Bengaluru

ಪ್ರಮುಖ ಅಂಶಗಳು

  • ದಕ್ಷಿಣ ಪ್ರಾದೇಶಿಕ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರ ಎರಡು ದಿನಗಳ ಸಮ್ಮೇಳನ ಬೆಂಗಳೂರಿನಲ್ಲಿ ಆರಂಭವಾಗಿದೆ
  • ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವ ಶ್ರೀ ಡಾ. ಎಲ್. ಮುರುಗನ್; ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಭಟ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
  • ಪ್ರವಾಸೋದ್ಯಮ, ಶಿಪ್ಪಿಂಗ್, ರೈಲ್ವೇ ಮತ್ತು ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳು ಮೊದಲ ದಿನವಾದ ಇಂದು ಪ್ರಸ್ತುತಿ ನೀಡಿದವು.

ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರು ಇಂದು ಕರ್ನಾಟಕದ ಬೆಂಗಳೂರಿನಲ್ಲಿ ದಕ್ಷಿಣ ಪ್ರಾದೇಶಿಕ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರ ಎರಡು ದಿನಗಳ ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಶ್ರೀ ಡಾ. ಎಲ್. ಮುರುಗನ್; ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀ ಅಜಯ್ ಭಟ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಶ್ರೀ. ಗೋವಿಂದ್ ಮೋಹನ್, ವಿವಿಧ ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು, ಮಾಧ್ಯಮ ಮತ್ತು ಉದ್ಯಮ ವಲಯದ ಪಾಲುದಾರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಜಿ. ಕಿಶನ್ ರೆಡ್ಡಿ, ಪ್ರಧಾನ ಮಂತ್ರಿಯವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ 100 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲು ನಮಗೆ 281 ದಿನಗಳು ಮಾತ್ರ ಬೇಕಾದವು. ಪ್ರವಾಸೋದ್ಯಮದ ಪುನರುಜ್ಜೀವನಕ್ಕೆ ಲಸಿಕೆಗಿಂತ ದೊಡ್ಡ ಆತ್ಮವಿಶ್ವಾಸ ವರ್ಧಕ ಬೇರೊಂದಿಲ್ಲ ಎಂದರು.“ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯತಂತ್ರದ ಕುರಿತು ಚರ್ಚಿಸಲು ಮತ್ತು ಪರ್ಯಾಲೋಚಿಸಲು ದಕ್ಷಿಣ ಭಾರತ ಪ್ರಾದೇಶಿಕ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರ ಸಮ್ಮೇಳನವು ಉತ್ತಮ ಭಾರತಕ್ಕಾಗಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪರಿಹಾರಗಳನ್ನು ಕಂಡುಕೊಳ್ಳಲು ಒಟ್ಟಾಗಿರುವ ಪ್ರಧಾನ ಮಂತ್ರಿಯವರ ಸಹಕಾರ ಒಕ್ಕೂಟ ವ್ಯವಸ್ಥೆಯ ಕಲ್ಪನೆಗೆ ಅನುಗುಣವಾಗಿದೆ “ ಎಂದು ಶ್ರೀ ರೆಡ್ಡಿ ಹೇಳಿದರು.

ದಕ್ಷಿಣ ಪ್ರದೇಶವು ತನ್ನ ಕೊಡುಗೆಗಳಲ್ಲಿ ಅನನ್ಯವಾಗಿದೆ. ಮೂಲಸೌಕರ್ಯ, ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಚಿವಾಲಯವು ವಿಶೇಷ ಒತ್ತು ನೀಡಿದೆ ಎಂದು ಶ್ರೀರೆಡ್ಡಿ ಹೇಳಿದರು. ಥೀಮ್ ಆಧಾರಿತ ಪ್ರವಾಸಿ ಸರ್ಕ್ಯೂಟ್‌ಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಸ್ವದೇಶ್ ದರ್ಶನ್ ಯೋಜನೆಯಡಿ, ಸಚಿವಾಲಯವು ದಕ್ಷಿಣ ರಾಜ್ಯಗಳಲ್ಲಿ 1088 ಕೋಟಿ ರೂ. ಮೌಲ್ಯದ 15 ಯೋಜನೆಗಳನ್ನು ಮಂಜೂರು ಮಾಡಿದೆ ಎಂದು ಶ್ರೀ ರೆಡ್ಡಿ ತಿಳಿಸಿದರು.  "ಪ್ರಸಾದ್ ಯೋಜನೆಯಡಿ (ತೀರ್ಥಯಾತ್ರೆ ಪುನಶ್ಚೇತನ ಮತ್ತು ಆಧ್ಯಾತ್ಮ ವರ್ಧನೆ ಅಭಿಯಾನ), ಸಚಿವಾಲಯವು ಈ ಪ್ರದೇಶದಲ್ಲಿ 6 ಯೋಜನೆಗಳನ್ನು ಮಂಜೂರು ಮಾಡಿದೆ, ಇದು ಯೋಜನೆಯ ಒಟ್ಟು ಬಜೆಟ್‌ನ ಶೇ.15 ರಷ್ಟಿದೆ" ಎಂದು ಅವರು ಹೇಳಿದರು.

ಇತ್ತೀಚೆಗೆ, ಪ್ರವಾಸೋದ್ಯಮ ಸಚಿವಾಲಯದ ಕೋರಿಕೆಯ ಮೇರೆಗೆ ವಿದೇಶಾಂಗ ಸಚಿವಾಲಯವು ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳಲ್ಲಿ 20 ಪ್ರವಾಸೋದ್ಯಮ ಅಧಿಕಾರಿಗಳನ್ನು ನೇಮಿಸಿದೆ. ಇದರಿಂದ ಆಸ್ಟ್ರೇಲಿಯಾ, ಕೆನಡಾ, ಅಮೆರಿಕಾ, ಫ್ರಾನ್ಸ್, ಜರ್ಮನಿ ಮತ್ತು ಗಲ್ಫ್ ರಾಷ್ಟ್ರಗಳಂತಹ ದೇಶಗಳಲ್ಲಿ ಭಾರತೀಯ ಪ್ರವಾಸೋದ್ಯಮವನ್ನು ವ್ಯಾಪಕವಾಗಿ ಉತ್ತೇಜಿಸಲು ಸಾಧ್ಯವಾಗುತ್ತದೆ ಎಂದು ಶ್ರೀ ರೆಡ್ಡಿ ಹೇಳಿದರು. "ಭಾರತದ ನಾಗರಿಕತೆಯ ಪರಂಪರೆಯು ಸಾವಿರಾರು ವರ್ಷಗಳ ಹಿಂದಿನದು ಮತ್ತು ಈ ಆಜಾದಿ ಕಾ ಅಮೃತ ಮಹೋತ್ಸವವು ನಮ್ಮ ಪರಂಪರೆಯ ಸಂರಕ್ಷಣೆಗಾಗಿ ಹೋರಾಡಿದ ಎಲ್ಲರಿಗೂ ಗೌರವ ಸಲ್ಲಿಸಲು ಒಂದು ಅವಕಾಶವಾಗಿದೆ" ಎಂದು ಅವರು ಹೇಳಿದರು.

ಡಾ. ಎಲ್. ಮುರುಗನ್ ಅವರು ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮದ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಭಾರತವನ್ನು ಬಹು ಮಾದರಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಅವರ ದೃಷ್ಟಿ ಈಗ ಕಾರ್ಯಗತಗೊಳ್ಳುತ್ತಿದೆ. ಭಾರತದ ಪ್ರತಿಯೊಂದು ರಾಜ್ಯವು ಶ್ರೀ ನರೇಂದ್ರ ಮೋದಿಯವರ ಈ ದೃಷ್ಟಿಕೋನಕ್ಕೆ ಕೊಡುಗೆ ನೀಡುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ನಾವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳಿಗೆ ಭೇಟಿ ನೀಡುವಂತೆ ಮಾಡುವುದು ಮತ್ತು ರಾಷ್ಟ್ರದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಶ್ರೀ ಮುರಗನ್ ಹೇಳಿದರು.

ಪ್ರವಾಸೋದ್ಯಮ ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಭಟ್ ಮಾತನಾಡಿ, ಇಂದಿನ ಬದಲಾಗುತ್ತಿರುವ ಜಗತ್ತಿನಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಪರಸ್ಪರ ಪೂರಕವಾಗಿವೆ. ಸಂಸ್ಕೃತಿಯು ಯಾವುದೇ ಸಮಾಜದ ಆತ್ಮವಾಗಿದ್ದರೆ, ಪ್ರವಾಸೋದ್ಯಮವು ಸಮಾಜವನ್ನು ಅರ್ಥಮಾಡಿಕೊಳ್ಳುವ ಮತ್ತು ತಿಳಿದುಕೊಳ್ಳುವ ಮಾಧ್ಯಮವಾಗಿದೆ. ಪ್ರವಾಸೋದ್ಯಮವು ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುವ ಸಾಧನವಾಗಿದೆ. ಅದಕ್ಕಾಗಿಯೇ ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ಒಂದೇ ನಾಣ್ಯದ ಎರಡು ಮುಖಗಳಂತೆ ನೋಡಬೇಕು. ದಕ್ಷಿಣ ಭಾರತದ ಜನರು ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಮತ್ತು ಅದಕ್ಕಾಗಿಯೇ ಇಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ ಎಂದರು. ಪ್ರವಾಸೋದ್ಯಮ ಕ್ಷೇತ್ರದ ಮೇಲೆ 100 ಕೋಟಿ ಲಸಿಕೆಯ ಪರಿಣಾಮವನ್ನು ಶ್ರೀ ಭಟ್ ಅವರು ಒತ್ತಿ ಹೇಳಿದರು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ ಮಾತನಾಡಿ, ಕರ್ನಾಟಕದ ಬೀದರ್‌ನಲ್ಲಿರುವ ಬಸವ ಕಲ್ಯಾಣ ಮತ್ತು ಬಸವೇಶ್ವರರ ಐತಿಹಾಸಿಕ ಮಹತ್ವದ ಬಗ್ಗೆ ತಿಳಿಸಿದರು. ಪ್ರಸಾದ್ ಯೋಜನೆಯಂತಹ ಪ್ರವಾಸೋದ್ಯಮ ಕಾರ್ಯಕ್ರಮಗಳ ಅಡಿಯಲ್ಲಿ ಬೀದರ್ ಅನ್ನು ಅಭಿವೃದ್ಧಿಪಡಿಸುವಂತೆ ಪ್ರವಾಸೋದ್ಯಮ ಸಚಿವಾಲಯವನ್ನು ಶ್ರೀ ಖೂಬಾ ಒತ್ತಾಯಿಸಿದರು.

ಸಮ್ಮೇಳನದ ಮೊದಲ ದಿನ ಪ್ರವಾಸೋದ್ಯಮ ಸಚಿವಾಲಯದ ಹೆಚ್ಚುವರಿ ಮಹಾ ನಿರ್ದೇಶಕಿ ಶ್ರೀಮತಿ ರೂಪಿಂದರ್ ಬ್ರಾರ್ ಅವರು ದಕ್ಷಿಣ ಪ್ರದೇಶದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ, ಮಾರುಕಟ್ಟೆ ಮತ್ತು ಪ್ರಚಾರ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ವಿವಿಧ ಯೋಜನೆಗಳು/ಉಪಕ್ರಮಗಳು/ಕಾರ್ಯಕ್ರಮಗಳ ಕುರಿತು ಪ್ರಸ್ತುತಿ ನೀಡಿದರು. ಅ ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಪ್ರವಾಸೋದ್ಯಮ ಸಚಿವಾಲಯದ ಮಹಾನಿರ್ದೇಶಕಿ ಶ್ರೀಮತಿ ವಿ ವಿದ್ಯಾವತಿ ಅವರು ದಕ್ಷಿಣ ಪ್ರದೇಶದ ಪಾರಂಪರಿಕ ಯೋಜನೆಗಳು, ಸ್ಮಾರಕಗಳು ಮತ್ತು ಇತರ ಸಾಂಸ್ಕೃತಿಕ ಉಪಕ್ರಮಗಳ ಕುರಿತು ಪ್ರಸ್ತುತಿ ನೀಡಿದರು. ದಕ್ಷಿಣ ಪ್ರದೇಶದಲ್ಲಿ ಕ್ರೂಸ್ ಪ್ರವಾಸೋದ್ಯಮ ಮತ್ತು ರೈಲು ಪ್ರವಾಸೋದ್ಯಮದ ಸಾಧ್ಯತೆ ಹಾಗೂ ದಕ್ಷಿಣ ಪ್ರದೇಶದ ರಾಜ್ಯ, ಕೇಂದ್ರಾಡಳಿತ ಪ್ರದೇಶವಾರು ಪ್ರಸ್ತುತಿಗಳನ್ನು ಸಹ ನೀಡಲಾಯಿತು.

ಪ್ರವಾಸೋದ್ಯಮ ಸಚಿವಾಲಯವು ಡಿಜಿಟಲ್, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳ ವಿವಿಧ ವೇದಿಕೆಗಳಲ್ಲಿ ದಕ್ಷಿಣ ಪ್ರದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಭಾರತವನ್ನು ಸಮಗ್ರ ತಾಣವಾಗಿ ಪ್ರಚಾರ ಮಾಡುತ್ತದೆ. ಏಪ್ರಿಲ್ 2020 ರಿಂದ, ದೇಖೋ ಅಪ್ನಾ ದೇಶ್ ಅಭಿಯಾನದ ಅಡಿಯಲ್ಲಿ, ಪ್ರವಾಸೋದ್ಯಮ ಸಚಿವಾಲಯವು ದಕ್ಷಿಣ ಪ್ರದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿವಿಧ ಪ್ರವಾಸೋದ್ಯಮ ಉತ್ಪನ್ನಗಳ ಮೇಲೆ ವೆಬಿನಾರ್‌ಗಳನ್ನು ನಡೆಸುತ್ತಿದೆ. ಈ ಪ್ರದೇಶದ ವಿವಿಧ ಸ್ಥಳಗಳಿಗೆ ವಿಮಾನ, ರೈಲು ಮತ್ತು ರಸ್ತೆಯ ಸಂಪರ್ಕವು ಅತ್ಯುತ್ತಮವಾಗಿದೆ ಮತ್ತು ಹೆಚ್ಚು ಜನರು ಭೇಟಿ ನೀಡುವ ಸ್ಥಳವಾಗಿದೆ.

ಪ್ರವಾಸೋದ್ಯಮ ಸಚಿವಾಲಯವು ಪ್ರವಾಸೋದ್ಯಮ ವಲಯದ ಕೌಶಲ್ಯ ಅಭಿವೃದ್ಧಿಯ ಬಗ್ಗೆ ಗಮನ ಕೇಂದ್ರೀಕರಿಸಿದೆ, ಪ್ರವಾಸಿಗರಿಗೆ ವಿಶ್ವ ದರ್ಜೆಯ ಸೇವೆಗಳನ್ನು ಒದಗಿಸಲು, ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರವಾಸಿ ತಾಣದ ಬಗ್ಗೆ ಜಾಗೃತಿ ಮೂಡಿಸಲು ಪ್ರಚಾರ ಮತ್ತು ಮಾರುಕಟ್ಟೆಗೆ ಉತ್ತಮ ತರಬೇತಿ ಪಡೆದ ಮತ್ತು ವೃತ್ತಿಪರ ಪ್ರವಾಸಿ ಫೆಸಿಲಿಟೇಟರ್‌ಗಳ ತಂಡವನ್ನು ರೂಪಿಸುವುದು ಅತ್ಯಗತ್ಯವಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ದೇಶೀಯ ಪ್ರವಾಸೋದ್ಯಮವು ಉತ್ತಮ ಚೇತರಿಕೆ ಕಾಣುತ್ತಿರುವುದರಿಂದ ಮತ್ತು ಶೀಘ್ರದಲ್ಲೇ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಗಡಿಗಳು ತೆರೆದುಕೊಳ್ಳುವುದರಿಂದ, ಪ್ರವಾಸಿಗರಲ್ಲಿ ವಿಶ್ವಾಸ ಮತ್ತು ನಂಬಿಕೆಯನ್ನು ಮೂಡಿಸುವುದು ಬಹಳ ಮುಖ್ಯ. ಈ ಸಂಬಂಧ, ಆರೋಗ್ಯ ಸಚಿವಾಲಯ ಮತ್ತು ಪ್ರವಾಸೋದ್ಯಮ ಸಚಿವಾಲಯವು ಈಗಾಗಲೇ ಕೋವಿಡ್-19 ಸುರಕ್ಷತೆ ಮತ್ತು ನೈರ್ಮಲ್ಯ ಶಿಷ್ಟಾಚಾರಗಳನ್ನು ಪ್ರಕಟಿಸಿದೆ.  ಕೋವಿಡ್-19 ಸುರಕ್ಷತೆ ಮತ್ತು ನೈರ್ಮಲ್ಯ ಮಾರ್ಗಸೂಚಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನೌಕರರು / ಗ್ರಾಹಕರ ಸುರಕ್ಷತೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ಆತಿಥ್ಯ ಉದ್ಯಮದಲ್ಲಿ ಮೌಲ್ಯಮಾಪನ, ಅರಿವು ಮತ್ತು ತರಬೇತಿಗಾಗಿ ವ್ಯವಸ್ಥೆಯನ್ನು (SAATHI) ಜಾರಿಗೆ ತಂದಿದೆ. SAATHI ಉಪಕ್ರಮವು ಹೋಟೆಲ್‌ಗಳ ಕಾರ್ಯಾಚರಣೆಯನ್ನು ಸುರಕ್ಷಿತವಾಗಿ ಮುಂದುವರಿಸಲು ಮತ್ತು ಅತಿಥಿಗಳ ವಿಶ್ವಾಸವನ್ನು ಪುನಃಸ್ಥಾಪಿಸಲು ಮತ್ತು ಜವಾಬ್ದಾರಿಯುತ ಹೋಟೆಲ್‌ನ ಇಮೇಜ್ ಅನ್ನು ಹೆಚ್ಚಿಸಲು ಹೋಟೆಲ್‌ಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಇಲ್ಲಿಯವರೆಗೆ, SAATHI ಅಡಿಯಲ್ಲಿ 10,000 ಕ್ಕೂ ಹೆಚ್ಚು ವಸತಿ ಘಟಕಗಳು ನೋಂದಾಯಿಸಿಕೊಂಡಿವೆ. ದಕ್ಷಿಣ ಪ್ರದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹೋಟೆಲ್ ಗಳು ಅಗತ್ಯ ಶಿಷ್ಟಾಚಾರಗಳನ್ನು ಅನುಸರಿಸಲು ಪೋರ್ಟಲ್‌ನಲ್ಲಿ ತಮ್ಮ ಘಟಕಗಳನ್ನು ನೋಂದಾಯಿಸುವಲ್ಲಿ ಉತ್ತಮವಾಗಿ ಸ್ಪಂದಿಸಿವೆ.

ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ್ ದರ್ಶನ್  ಮತ್ತು ಪ್ರಸಾದ್ ನಂತಹ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ದೇಶಾದ್ಯಂತ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಕೈಗೊಳ್ಳುತ್ತದೆ. ಸ್ವದೇಶ್ ದರ್ಶನ್ ಯೋಜನೆಯಲ್ಲಿ 76 ಯೋಜನೆಗಳನ್ನು ಭಾರತದಾದ್ಯಂತ ಮಂಜೂರು ಮಾಡಲಾಗಿದೆ, ಇದರಲ್ಲಿ ದಕ್ಷಿಣ ಪ್ರದೇಶ ರಾಜ್ಯಗಳು ಮತ್ತು ಯುಟಿಗಳ ಯೋಜನೆಗಳೂ ಸೇರಿವೆ. ಸ್ವದೇಶ್ ದರ್ಶನ್ ಯೋಜನೆಯಡಿಯಲ್ಲಿ ಕರಾವಳಿ ಸರ್ಕ್ಯೂಟ್, ಬೌದ್ಧ ಸರ್ಕ್ಯೂಟ್, ಇಕೋ ಸರ್ಕ್ಯೂಟ್, ಆಧ್ಯಾತ್ಮಿಕ ಸರ್ಕ್ಯೂಟ್ ಮುಂತಾದ ವಿಭಿನ್ನ ವಿಷಯಗಳಲ್ಲಿ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಪ್ರಸಾದ್ ಯೋಜನೆಯಡಿಯಲ್ಲಿ, ದಕ್ಷಿಣ ರಾಜ್ಯಗಳ ಯೋಜನೆಗಳೂ ಸೇರಿದಂತೆ ಭಾರತದಲ್ಲಿ 37 ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಈ ಪ್ರಯತ್ನಗಳು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪ್ರಮುಖ ಒತ್ತು ನೀಡುವ ನಿರೀಕ್ಷೆಯಿದೆ.

***


(Release ID: 1767375) Visitor Counter : 294


Read this release in: English , Hindi , Punjabi