ರೈಲ್ವೇ ಸಚಿವಾಲಯ
2020-21ನೇ ಹಣಕಾಸು ವರ್ಷದಲ್ಲಿ ರೈಲ್ವೆ ಉದ್ಯೋಗಿಗಳಿಗೆ ʻಉತ್ಪಾದಕತೆ ಆಧರಿತ ಬೋನಸ್ʼ ನೀಡಲು ಸಚಿವ ಸಂಪುಟ ಅನುಮೋದನೆ
Posted On:
06 OCT 2021 3:41PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2020-21ನೇ ಹಣಕಾಸು ವರ್ಷದಲ್ಲಿ ಎಲ್ಲ ಅರ್ಹ ನಾನ್-ಗೆಜೆಟೆಡ್ ರೈಲ್ವೆ ನೌಕರರಿಗೆ (ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ) 78 ದಿನಗಳ ವೇತನಕ್ಕೆ ಸಮನಾದ ʻಉತ್ಪಾದಕತೆ ಆಧರಿತ ಬೋನಸ್ʼ(ಪಿಎಲ್‌ಬಿ) ನೀಡಲು ಅನುಮೋದನೆ ನೀಡಿದೆ.
ರೈಲ್ವೆ ನೌಕರರಿಗೆ 78 ದಿನಗಳ ʻಪಿಎಲ್‌ಬಿʼ ಪಾವತಿಯಿಂದ 1984.73 ಕೋಟಿ ರೂ.ಗಳ ಆರ್ಥಿಕ ಪರಿಣಾಮ ಉಂಟಾಗಬಹುದೆಂದು ಅಂದಾಜಿಸಲಾಗಿದೆ. ಅರ್ಹ ನಾನ್-ಗೆಜೆಟೆಡ್ ರೈಲ್ವೆ ನೌಕರರಿಗೆ ʻಪಿಎಲ್‌ಬಿʼ ಪಾವತಿಸಲು ಮಾಸಿಕ 7000/- ರೂ.ಗಳ ವೇತನ ಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಹ ರೈಲ್ವೆ ಉದ್ಯೋಗಿಗೆ 78 ದಿನಗಳಿಗೆ ಪಾವತಿಸುವ ಗರಿಷ್ಠ ಮೊತ್ತ 17,951 ರೂಪಾಯಿಗಳು.
ಈ ನಿರ್ಧಾರದಿಂದ ಸುಮಾರು 11.56 ಲಕ್ಷ ಗೆಜೆಟೆಡೇತರ ರೈಲ್ವೆ ಉದ್ಯೋಗಿಗಳು ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ಪ್ರತಿ ವರ್ಷ ದಸರಾ/ ಪೂಜಾ ರಜಾದಿನಗಳಿಗೆ ಮೊದಲು ಅರ್ಹ ರೈಲ್ವೆ ಉದ್ಯೋಗಿಗಳಿಗೆ ʻಪಿಎಲ್‌ಬಿʼ ಪಾವತಿ ಮಾಡಲಾಗುತ್ತದೆ. ಈ ವರ್ಷವೂ ರಜಾದಿನಗಳಿಗೆ ಮುನ್ನ ಸಂಪುಟದ ನಿರ್ಧಾರವನ್ನು ಜಾರಿಗೊಳಿಸಲಾಗುವುದು.
2010-11ರಿಂದ 2019-20ರ ವರೆಗಿನ ಆರ್ಥಿಕ ವರ್ಷಗಳಲ್ಲಿ 78 ದಿನಗಳ ವೇತನದ ʻಪಿಎಲ್‌ಬಿʼ ಮೊತ್ತವನ್ನು ಪಾವತಿಸಲಾಗಿದೆ. 2020-21ನೇ ವರ್ಷವೂ 78 ದಿನಗಳ ವೇತನಕ್ಕೆ ಸಮಾನವಾದ ʻಪಿಎಲ್‌ಬಿʼ ನೀಡಲಾಗುವುದು. ಈ ಕ್ರಮವು ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಉದ್ಯೋಗಿಗಳನ್ನು ಉತ್ತೇಜಿಸಬಹುದೆಂಬ ನಿರೀಕ್ಷೆ ಹೊಂದಲಾಗಿದೆ.
ರೈಲ್ವೆಯ ʻಉತ್ಪಾದಕತೆ ಆಧರಿತ ಬೋನಸ್ʼ ದೇಶವ್ಯಾಪಿ ಎಲ್ಲಾ ನಾನ್-ಗೆಜೆಟೆಡ್ ರೈಲ್ವೆ ಉದ್ಯೋಗಿಗಳಿಗೆ (ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ) ಅನ್ವಯಿಸುತ್ತದೆ.
ʻಪಿಎಲ್‌ಬಿʼ ಲೆಕ್ಕಾಚಾರ ಮಾಡುವ ವಿಧಾನ:
ಎ) 23.9.2000ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿದ ಸೂತ್ರದ ಪ್ರಕಾರ 1998-99ರಿಂದ 2013-14ರವರೆಗಿನ ವರ್ಷಗಳಿಗೆ ʻಪಿಎಲ್‌ಬಿʼಯನ್ನು ಪಾವತಿಸಲಾಯಿತು. (ಬಂಡವಾಳ ಮೌಲ್ಯ ಮತ್ತು ಸಿಬ್ಬಂದಿ ಬಲಕ್ಕೆ ಸಂಬಂಧಿಸಿದಂತೆ ಸ್ವಲ್ಪ ಬದಲಾವಣೆಗಳನ್ನು ಮಾಡಿದ 2002-03 ರಿಂದ 2004-05ರವರೆಗಿನ ಅವಧಿ ಹೊರತುಪಡಿಸಿ). ಈ ಸೂತ್ರವು ʻಇನ್‌ಪುಟ್ : ಔಟ್‌ಪುಟ್ʼ ಆಧಾರಿತವಾಗಿದ್ದು, ಇಲ್ಲಿ ಔಟ್‌ಪುಟ್ ಅನ್ನು ಸಮೀಕರಿಸಿದ ನಿವ್ವಳ ಟನ್ ಕಿಲೋಮೀಟರ್‌ಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತಿತ್ತು. ʻಇನ್‌ಪುಟ್ʼ ಅನ್ನು ಬಂಡವಾಳ ಮೌಲ್ಯ ಮಾರ್ಪಡಿಸಿದ ಗೆಜೆಟೆಡೇತರ ಸಿಬ್ಬಂದಿ ಸಂಖ್ಯೆ (ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ) ಆಧರಿತವಾಗಿ ಪರಿಗಣಿಸಲಾಗುತ್ತಿತ್ತು.
ಬಿ) 2012-13ನೇ ಹಣಕಾಸು ವರ್ಷದಲ್ಲಿ 78 ದಿನಗಳ ಅವಧಿಯ ʻಪಿಎಲ್‌ಬಿʼಯನ್ನು ವಿಶೇಷ ಪ್ರಕರಣವಾಗಿ ಅನುಮೋದಿಸಲಾಯಿತು. ಆರನೇ ಕೇಂದ್ರ ವೇತನ ಆಯೋಗದ (ಸಿಪಿಸಿ) ಶಿಫಾರಸುಗಳು ಮತ್ತು ಹಣಕಾಸು ಸಚಿವಾಲಯದ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ʻಪಿಎಲ್‌ಬಿʼ ಲೆಕ್ಕಾಚಾರ ಸೂತ್ರವನ್ನು ಮರುಪರಿಶೀಲಿಸುವ ಷರತ್ತಿನೊಂದಿಗೆ ಈ ಅನುಮೋದನೆ ನೀಡಲಾಗಿತ್ತು. ಆ ಬಳಿಕ ರೈಲ್ವೆ ಸಚಿವಾಲಯವು ಹೊಸ ಸೂತ್ರವನ್ನು ರೂಪಿಸಲು ಒಂದು ಸಮಿತಿಯನ್ನು ರಚಿಸಿತು.
ಸಿ) ಈ ಸಮಿತಿಯು, 2000ನೇ ವರ್ಷದ ಸೂತ್ರ ಮತ್ತು ಕಾರ್ಯಾಚರಣೆ ಅನುಪಾತ (ಓಆರ್) ಆಧರಿತ ನೂತನ ಸೂತ್ರ ಎರಡನ್ನೂ 50:50 ಅನುಪಾತದಲ್ಲಿ ಅನುಸರಿಸಬಹುದು ಎಂದು ಶಿಫಾರಸು ಸಲ್ಲಿಸಿತು. ಈ ಸೂತ್ರವು ಭೌತಿಕ ನಿಯತಾಂಕಗಳು ಮತ್ತು ಹಣಕಾಸು ನಿಯತಾಂಕಗಳು ಎರಡೂ ವಿಷಯಗಳಲ್ಲಿ ಉತ್ಪಾದಕತೆಗೆ ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸಿತು. ಸಮಿತಿಯು ಶಿಫಾರಸು ಮಾಡಿದ ಈ ಸೂತ್ರವನ್ನು 2014-15 ರಿಂದ 2019-20 ರವರೆಗೆ ʻಪಿಎಲ್‌ಬಿʼ ಲೆಕ್ಕಾಚಾರಕ್ಕಾಗಿ ಬಳಸಲಾಗಿದೆ.
ಹಿನ್ನೆಲೆ:
ರೈಲ್ವೆಯು ʻಪಿಎಲ್‌ಬಿʼ ಪರಿಕಲ್ಪನೆಯನ್ನು ಪರಿಚಯಿಸಿದ ಭಾರತ ಸರಕಾರದ ಮೊದಲ ಇಲಾಖೆಯಾಗಿದೆ. 1979-80ರಲ್ಲೇ ರೈಲ್ವೆಯು ಇದನ್ನು ಜಾರಿಗೊಳಿಸಿತು. ಇಡೀ ಆರ್ಥಿಕತೆಯ ಕಾರ್ಯಕ್ಷಮತೆಗಾಗಿ ಮೂಲಸೌಕರ್ಯ ಬೆಂಬಲ ಒದಗಿಸಲು ರೈಲ್ವೆ ವಹಿಸುವ ಪಾತ್ರವನ್ನು ಆ ಸಮಯದಲ್ಲಿ ಮುಖ್ಯ ಪರಿಗಣನೆಯಾಗಿ ತೆಗೆದುಕೊಳ್ಳಲಾಗಿತ್ತು. ರೈಲ್ವೆ ನಿರ್ವಹಿಸುತ್ತಿದ್ದ ಒಟ್ಟಾರೆ ಕಾರ್ಯದ ಹಿನ್ನೆಲೆಯಲ್ಲಿ, ಈ ಇಲಾಖೆಯಲ್ಲಿ 'ಬೋನಸ್ ಪಾವತಿ ಕಾಯ್ದೆ-1965'ರ ಅನುಸಾರ ಬೋನಸ್ ಪರಿಕಲ್ಪನೆಗೆ ಬದಲಾಗಿ ʻಪಿಎಲ್‌ಬಿʼ ಪರಿಕಲ್ಪನೆಯನ್ನು ಪರಿಚಯಿಸುವುದು ಅಪೇಕ್ಷಣೀಯ ಎಂದು ಪರಿಗಣಿಸಲಾಯಿತು. ʻಬೋನಸ್ ಪಾವತಿ ಕಾಯ್ದೆʼ ರೈಲ್ವೆಗೆ ಅನ್ವಯವಾಗದಿದ್ದರೂ, "ವೇತನ/ಪಾವತಿ ಮಿತಿ"ಯನ್ನು ನಿರ್ಧರಿಸಲು ಮತ್ತು 'ಸಂಬಳ'/'ವೇತನ'ದ ವ್ಯಾಖ್ಯಾನ ಇತ್ಯಾದಿಗಳನ್ನು ನಿರ್ಧರಿಸುವ ಉದ್ದೇಶಕ್ಕಾಗಿ ಆ ಕಾಯ್ದೆಯಲ್ಲಿರುವ ವಿಶಾಲ ತತ್ವಗಳನ್ನು ಹಾಗೇ ಉಳಿಸಿಕೊಳ್ಳಲಾಯಿತು. ರೈಲ್ವೆಯಲ್ಲಿ ʻಪಿಎಲ್‌ಬಿʼ ಯೋಜನೆ 1979-80ನೇ ವರ್ಷದಿಂದ ಜಾರಿಗೆ ಬಂದಿತು. ʻಆಲ್ ಇಂಡಿಯಾ ರೈಲ್ವೆಮೆನ್ ಫೆಡರೇಷನ್ʼ ಮತ್ತು ʻನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ರೈಲ್ವೆಮೆನ್ʼ ಎಂಬ ಎರಡು ಮಾನ್ಯತೆ ಪಡೆದ ಒಕ್ಕೂಟಗಳೊಂದಿಗೆ ಸಮಾಲೋಚಿಸಿ ಮತ್ತು ಸಂಪುಟದ ಅನುಮೋದನೆಯೊಂದಿಗೆ ʻಪಿಎಲ್‌ಬಿʼ ಕ್ರಮೇಣ ವಿಕಸನಗೊಂಡಿತು. ಈ ಯೋಜನೆಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಶೀಲನೆ ಮಾಡಲಾಗುತ್ತದೆ.
***
(Release ID: 1761494)
Visitor Counter : 379