ಆಯುಷ್
azadi ka amrit mahotsav

ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು  ಆಸ್ಪತ್ರೆಯಲ್ಲಿ “ರತ್ನಶ್ರೀ – ಆರೋಗ್ಯಧಾಮ” ಉದ್ಘಾಟಿಸಿದ ಶ್ರೀ ಸರ್ಬಾನಂದ ಸೋನೋವಾಲ್

Posted On: 25 SEP 2021 6:47PM by PIB Bengaluru

ಕೇಂದ್ರ ಆಯುಷ್, ಬಂದರು, ನೌಕಾ ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೋವಾಲ್,  ಕರ್ನಾಟಕದ ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿಂದು “ರತ್ನಶ್ರೀ – ಆರೋಗ್ಯಧಾಮ” ಘಟಕವನ್ನು ಉದ್ಘಾಟಿಸಿದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಮತ್ತು ಕರ್ನಾಟಕ ಸರ್ಕಾರದ ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಹೊಸ ಘಟಕದಲ್ಲಿ ಸೌಂದರ್ಯವರ್ಧಕ ಔಷಧ ಘಟಕ – ಶೃಂಗಾರ, ಡಿಲಕ್ಸ್ ವಾರ್ಡ್ – ಆರೋಗ್ಯ ಘಟಕ, ಧ್ಯಾನ ಮಂದಿರ, ಪಂಚಕರ್ಮ ಚಿಕಿತ್ಸಾ ಕೇಂದ್ರ ಮತ್ತು ವಿಶೇಷ ವಾರ್ಡ್ ಒಳಗೊಂಡಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನುದ್ದೇಶಿಸಿ ಮಾತನಾಡಿದ ಶ್ರೀ ಸರ್ಬಾನಂದ ಸೋನೋವಾಲ್, ಸಮಗ್ರ ಆರೋಗ್ಯ ಉತ್ತೇಜನದಲ್ಲಿ ಆಯುರ್ವೇದದ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಆಯುಷ್ ವ್ಯವಸ್ಥೆಯ ಔಷಧಗಳನ್ನು ಪಡೆಯುವ ಮೂಲಕ ಭಾರತೀಯರ ಆರೋಗ್ಯ ಸ್ಥಿತಿಗತಿಯನ್ನು ವೃದ್ಧಿಸಬಹುದಾಗಿದೆ ಮತ್ತು ಆ ಮೂಲಕ ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸಬಹುದಾಗಿದೆ ಎಂದು ಹೇಳಿದರು.

ಆಯುರ್ವೇದಕ್ಕೆ ಜಾಗತಿಕ ಮಟ್ಟದಲ್ಲಿ ಇನ್ನು ಹೆಚ್ಚಿನ ಮಾನ್ಯತೆ ದೊರಕುವಂತಾಗಲು ಆಯುರ್ವೇದ ಕ್ಷೇತ್ರದಲ್ಲಿ ಇನ್ನೂ ವ್ಯಾಪಕ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ಇಂದು ಉದ್ಘಾಟಿಸಿದ ಆಸ್ಪತ್ರೆಯ ಈ ಘಟಕ ಮನುಕುಲಕ್ಕೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲಿ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಕನಸನ್ನು ಬಲವರ್ಧನೆಗೊಳಿಸುತ್ತದೆ ಎಂದು ಸಚಿವರು ಆಶಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಮಾರಿ ಶೋಭಾ ಕರಂದ್ಲಾಜೆ ಅವರು, ಶಿಕ್ಷಣ ಸಂಸ್ಥೆಯನ್ನು ಶ್ರೇಷ್ಠ ಸಂಸ್ಥೆಯನ್ನಾಗಿ ರೂಪಿಸುವ ಡಾ. ವೀರೇಂದ್ರ ಹೆಗಡೆ ಅವರ ದೂರದೃಷ್ಟಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಅಲ್ಲದೆ ಅವರು ಗ್ರಾಮೀಣ ಭಾರತದಲ್ಲಿ ಸ್ವಯಂ ಉದ್ಯೋಗ ಅಭಿವೃದ್ಧಿಗೆ ರುಡ್ ಸೆಟ್(ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ)ಯ ಪಾತ್ರವನ್ನು ವಿವರಿಸಿ, ಆ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿ ನಿಂತಿದೆ ಎಂದು ಹೇಳಿದರು.

ಉಜಿರೆಯ ಎಸ್ ಡಿಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗಡೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಆರೋಗ್ಯ ಉತ್ತೇಜನದಲ್ಲಿ ಆಯುರ್ವೇದದ ಪಾತ್ರದ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿದರು. ವ್ಯಕ್ತಿಗಳ ರೋಗ ನಿರೋಧಕ ಶಕ್ತಿ ವೃದ್ಧಿಗೆ ವಿಶೇಷವಾಗಿ ಕೋವಿಡ್-19ನಂತಹ ಸಾಂಕ್ರಾಮಿಕದ ಸಂದರ್ಭದಲ್ಲಿ ಆಯುರ್ವೇದದ ಪ್ರಾಮುಖ್ಯವನ್ನು ಬಲವಾಗಿ ಪ್ರತಿಪಾದಿಸಿದರು. ಜನರು ತಮ್ಮ ಕಾಯಿಲೆಗಳಿಗೆ ಆಯುರ್ವೇದವನ್ನು ಮೊದಲ ಹಂತದ ಚಿಕಿತ್ಸೆಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಅಂತಹ ಆಯ್ಕೆಯನ್ನು ಒದಗಿಸುವ ಉದ್ದೇಶದಿಂದ ರತ್ನಶ್ರೀ ಆರೋಗ್ಯಧಾಮವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

***


(Release ID: 1758158) Visitor Counter : 244


Read this release in: English , Hindi