ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ನಿಯಂತ್ರಣ ಮತ್ತು ನಿರ್ಬಂಧ ಕ್ರಮಕ್ಕೆ ಮಹಾರಾಷ್ಟ್ರ, ಛತ್ತೀಸ್ ಗಢ ಮತ್ತು ಪಂಜಾಬ್ ಗೆ 50 ಉನ್ನತ ಮಟ್ಟದ ಸಾರ್ವಜನಿಕ ಆರೋಗ್ಯ ತಂಡಗಳನ್ನು ನಿಯೋಜಿಸಿದ ಕೇಂದ್ರ ಸರ್ಕಾರ

Posted On: 05 APR 2021 9:36PM by PIB Bengaluru

ಕೇಂದ್ರ ಸರ್ಕಾರ 50 ಉನ್ನತ ಮಟ್ಟದ ಬಹು ಆಯಾಮದ ಸಾರ್ವಜನಿಕ ಆರೋಗ್ಯ ತಂಡಗಳನ್ನು ರಚಿಸಿದೆ ಮತ್ತು ಅವುಗಳನ್ನು ಇತ್ತೀಚಿನ ದಿನಗಳಲ್ಲಿ ಪ್ರತಿ ದಿನ ಅಧಿಕ ಸಂಖ್ಯೆಯ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮತ್ತು ಅಧಿಕ ಸಾವಿನ ಪ್ರಮಾಣವಿರುವ ಮಹಾರಾಷ್ಟ್ರ, ಛತ್ತೀಸ್ ಗಢ ಮತ್ತು ಪಂಜಾಬ್ ರಾಜ್ಯಗಳ 50 ಜಿಲ್ಲೆಗಳಿಗೆ ನಿಯೋಜಿಸಿದೆ. ಈ ತಂಡಗಳು ಮಹಾರಾಷ್ಟ್ರದ 30 ಜಿಲ್ಲೆಗಳು, ಛತ್ತೀಸ್ ಗಢದ 11 ಜಿಲ್ಲೆಗಳು ಮತ್ತು ಪಂಜಾಬ್ ನ 9 ಜಿಲ್ಲೆಗಳಿಗೆ ಕಳುಹಿಸಲಾಗಿದ್ದು ಅವು ಕೋವಿಡ್-19 ಕುರಿತು ನಿಗಾ, ನಿಯಂತ್ರಣ ಮತ್ತು ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ನೆರವು ನೀಡಲಿವೆ.

          ಇಬ್ಬರು ಸದಸ್ಯರ ಈ ಉನ್ನತ ಮಟ್ಟದ ತಂಡದಲ್ಲಿ ಓರ್ವ ಕ್ಲಿನಿಕಲ್/ಸಾಂಕ್ರಾಮಿಕ ತಜ್ಞರು ಮತ್ತು ಓರ್ವ ಸಾರ್ವಜನಿಕ ಆರೋಗ್ಯ ತಜ್ಞರು ಇದ್ದಾರೆ. ಈ ತಂಡಗಳು ತಕ್ಷಣವೇ ರಾಜ್ಯಗಳಿಗೆ ಭೇಟಿ ನೀಡಲಿವೆ ಮತ್ತು ಒಟ್ಟಾರೆ ಕೋವಿಡ್-19 ನಿರ್ವಹಣೆ ವಿಶೇಷವಾಗಿ ಸೋಂಕು ಪತ್ತೆ ಪರೀಕ್ಷೆ, ನಿಗಾ ಮತ್ತು ನಿರ್ಬಂಧ ಕ್ರಮಗಳ ಕುರಿತು ಮೇಲ್ವಿಚಾರಣೆ ನಡೆಸಲಿದೆ. ಅಲ್ಲದೆ ಕೋವಿಡ್-19 ಸೂಕ್ತ ನಡವಳಿಕೆ ಮತ್ತು ಅದರ ಜಾರಿ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ, ಆಂಬುಲೆನ್ಸ್, ವೆಂಟಿಲೇಟರ್,  ವೈದ್ಯಕೀಯ ಆಕ್ಸಿಜನ್ ಮತ್ತಿತರ ಅಗತ್ಯ ಸಾಗಾಣೆ ಹಾಗೂ ಕೋವಿಡ್-19 ಲಸಿಕೀಕರಣದ ಪ್ರಗತಿಯ ಮೇಲ್ವಿಚಾರಣೆ ನಡೆಸಲಿವೆ.

          ಮಹಾರಾಷ್ಟ್ರ, ಛತ್ತೀಸ್ ಗಢ ಮತ್ತು ಪಂಜಾಬ್ ಈ ಮೂರು ರಾಜ್ಯಗಳಿಗೆ ಭಾರತ ಸರ್ಕಾರದ ಮೂವರು ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಜವಳಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರರಾದ ಶ್ರೀ ವಿಜಯ್ ಕುಮಾರ್ ಸಿಂಗ್, ಪಂಜಾಬ್ ನ ನೋಡಲ್ ಅಧಿಕಾರಿಯಾಗಿ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ರಿಚಾ ಶರ್ಮಾ ಅವರನ್ನು ಛತ್ತೀಸ್ ಗಢದ ನೋಡಲ್ ಅಧಿಕಾರಿಯಾಗಿ ಹಾಗೂ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಕುನಾಕ್ ಕುಮಾರ್ ಅವರನ್ನು ಮಹಾರಾಷ್ಟ್ರದ ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಉನ್ನತ ಮಟ್ಟದ ತಂಡಗಳು ಈ ಮೂರು ರಾಜ್ಯಗಳ ನೋಡಲ್ ಅಧಿಕಾರಿಗಳ ಜೊತೆ ಸಮನ್ವಯದಿಂದ ಅವರು ಸೂಚಿಸಿದ ಕಾರ್ಯಗಳನ್ನು ನಿರ್ವಹಿಸಲಿವೆ. ಈ ತಂಡಗಳು ಸೋಂಕು ಪತ್ತೆ ಪರೀಕ್ಷೆ, ಸಂಪರ್ಕ ಪತ್ತೆ ಸೇರಿದಂತೆ ನಿಗಾ ಮತ್ತು ನಿರ್ಬಂಧ, ಐಸಿಯು, ವೆಂಟಿಲೇಟರ್ ಮತ್ತು ಆಕ್ಸಿಜನ್ ವ್ಯವಸ್ಥೆ ಇರುವ ಹಾಸಿಗೆಗಳು ಸೇರಿದಂತೆ ಆಸ್ಪತ್ರೆ ಮೂಲಸೌಕರ್ಯ, ಕೋವಿಡ್ ಸೂಕ್ತ ನಡವಳಿಕೆ ಜಾರಿ ಮತ್ತು ಕೋವಿಡ್ ಲಸಿಕೀಕರಣ ಈ ಐದು ಅಂಶಗಳ ಕುರಿತು ಪ್ರತಿ ದಿನ ವರದಿಗಳನ್ನು ಸಲ್ಲಿಸಲಿವೆ.

          ಕೇಂದ್ರ ಸರ್ಕಾರ ‘ಸಹಕಾರ ಒಕ್ಕೂಟ’ ಕಾರ್ಯತಂತ್ರದಡಿ ‘ಇಡೀ ಸರ್ಕಾರ’ ಮತ್ತು ‘ಇಡೀ ಸಮಾಜ’ ಎಂಬ ಮನೋಭಾವದಡಿ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಕೋವಿಡ್-19 ನಿರ್ವಹಣೆಗೆ ರಾಜ್ಯಗಳು/ಕೇಂದ್ರಾಡಳಿತ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಬಲವರ್ಧನೆ ಭಾಗವಾಗಿ ಕೇಂದ್ರ ಸರ್ಕಾರ ಕಾಲ ಕಾಲಕ್ಕೆ ನಾನಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ತಂಡಗಳನ್ನು ನಿಯೋಜಿಸುತ್ತಿದೆ. ಈ ತಂಡಗಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚಿಸಿ ಪರಿಸ್ಥಿತಿ ನಿರ್ವಹಣೆಯ ಸವಾಲುಗಳು ಮತ್ತು ವಿಚಾರಗಳ ಕುರಿತು ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಿ, ಸದ್ಯ ಕೈಗೊಂಡಿರುವ ಚಟುವಟಿಕೆಗಳ ಬಲವರ್ಧನೆಗೆ ಯಾವುದಾದರೂ ಅಡ್ಡಿ ಆತಂಕಗಳಿದ್ದರೆ ಅವುಗಳನ್ನು ನಿವಾರಿಸುವ ಪ್ರಯತ್ನ ನಡೆಸಲಿವೆ.  

 

****



(Release ID: 1710038) Visitor Counter : 166