ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಅಂತಾರಾಷ್ಟ್ರೀಯ ಅರಣ್ಯ ದಿನದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ‘ಕಾವೇರಿ ಕೂಗು’ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಭಾಗಿ


ಜಲಸಂರಕ್ಷಣೆಯನ್ನು ನಾವು ಖಾತ್ರಿಪಡಿಸಬೇಕು; ನೀರಿನ ದುರ್ಬಳಕೆಗೆ ನಮಗೆ ಯಾವುದೇ ಹಕ್ಕಿಲ್ಲ: ಶ್ರೀ ಪ್ರಕಾಶ್ ಜಾವಡೇಕರ್

Posted On: 21 MAR 2021 5:58PM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ, ವಾರ್ತಾ ಮತ್ತು ಪ್ರಸಾರ ಹಾಗೂ ಭಾರೀ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರು ಇಂದು ಅರಣ್ಯದಿಂದ ಕೃಷಿ ಭೂಮಿಯತ್ತ ಸಾಗುವ ‘ಕಾವೇರಿ ಕೂಗು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಅರಣ್ಯ ದಿನದ ಅಂಗವಾಗಿ ಬೆಂಗಳೂರಿನಲ್ಲಿ ಅರಣ್ಯ ಸಂರಕ್ಷಣೆ ನಿಟ್ಟಿನಲ್ಲಿ ಮುಂದಡಿಯಿಡುವ ಈ ಕಾರ್ಯಕ್ರಮ ನಡೆಯಿತು. ಈಶಾ ಫೌಂಡೇಶನ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮತ್ತು ಸಂಸ್ಥೆಯ ಸಂಸ್ಥಾಪಕ ಶ್ರೀ ಸದ್ಗುರು ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್, ಮಳೆಯಿಂದ ಲಭ್ಯವಾಗುವ ಪ್ರತಿಯೊಂದು ಹನಿ ನೀರು ಉಳಿಸುವುದನ್ನು ನಾವು ಖಾತ್ರಿಪಡಿಸಬೇಕು ಹಾಗೂ ಅದನ್ನು ಭೂಮಿಯಲ್ಲಿ ಇಂಗುವಂತೆ ಮಾಡಬೇಕು. ನೀರನ್ನು ಉಳಿಸಬೇಕು ಮತ್ತು ನೀರು ಮರು ಉತ್ಪತ್ತಿ ಮಾಡಬೇಕು. ಮಿತವಾಗಿ ನೀರು ಬಳಕೆ ಮಾಡುವುದನ್ನು ನಾವು ಖಾತ್ರಿಪಡಿಸಬೇಕು. ನೀರನ್ನು ಉಳಿಸುವುದು, ನೀರನ್ನು ಮರು ಸಂಸ್ಕರಣೆ ಮಾಡುವುದು ಮತ್ತು ಅದನ್ನು ಪುನರ್ ಬಳಕೆ ಮಾಡಬೇಕಿದೆ. ನೀರಿನ ಸಂರಕ್ಷಣೆಯನ್ನು ನಾವು ಖಾತ್ರಿಪಡಿಸಬೇಕಿದೆ ಮತ್ತು ನೀರಿನ ದುರ್ಬಳಕೆಗೆ ಯಾವುದೇ ಹಕ್ಕಿಲ್ಲ. ನದಿಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಅಲ್ಲದೆ ಸಚಿವರು ಜಲಸಂರಕ್ಷಣೆ ನಿಟ್ಟಿನಲ್ಲಿ ಈಶಾ ಫೌಂಡೇಶನ್ ನಡೆಸುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು.

ಅಲ್ಲದೆ ಸಚಿವರು ಮಾನವ ಪ್ರಾಣಿ ಸಂಘರ್ಷಗಳ ಘಟನೆಗಳನ್ನು ಉಲ್ಲೇಖಿಸಿದರು ಮತ್ತು ಕೇಂದ್ರ ಸರ್ಕಾರದ ಯೋಜನೆಯಿಂದ ಹೇಗೆ ಅರಣ್ಯದಲ್ಲಿ ಪ್ರಾಣಿಗಳಿಗೆ ಹೆಚ್ಚಿನ ಆಹಾರ ಹಾಗೂ ನೀರಿನ ಲಭ್ಯವಾಗುತ್ತಿದೆ ಮತ್ತು ಇದರಿಂದ ಸಂಘರ್ಷ ಪ್ರಕರಣಗಳು ತಗ್ಗಿವೆ ಎಂದು ವಿವರಿಸಿದರು. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಜನರು ಕೈಗೊಳ್ಳುವ ಎಲ್ಲ ಯೋಜನೆಗಳನ್ನು ತಾವು ಸದಾ ಸ್ವಾಗತಿಸುವುದಾಗಿ ಹೇಳಿದ ಕೇಂದ್ರ ಸಚಿವರು, ಅರಣ್ಯ ರಕ್ಷಣೆ ಮತ್ತು ಸಂರಕ್ಷಣೆಗೆ ನಾವೆಲ್ಲರೂ ಒಗ್ಗೂಡಬೇಕಿದೆ ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ, ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಸಂಸ್ಥೆ ಕೈಗೊಂಡಿರುವ ಪ್ರಯತ್ನಗಳನ್ನು ಅಭಿನಂದಿಸಿದರು ಮತ್ತು ಸರ್ಕಾರ ಕೈಗೊಂಡಿರುವ ಹಲವು ಅರಣ್ಯೀಕರಣ ಯೋಜನೆಗಳನ್ನು ಪ್ರಸ್ತಾಪಿಸಿದರು ಮತ್ತು ಅರಣ್ಯ ಸಂರಕ್ಷಣೆ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಇತರೆ ಉಪಕ್ರಮಗಳ ಕುರಿತು ವಿವರಿಸಿದರು.  

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸದ್ಗುರು ಅವರು, ಕಾವೇರಿ ನದಿ ಪುನರುಜ್ಜೀವದ ನಾನಾ ಆಯಾಮಗಳ ಕುರಿತು ವಿವರಿಸಿದರು ಮತ್ತು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಕೈಗೊಂಡಿರುವ ನಾನಾ ಯೋಜನೆಗಳ ಕುರಿತು ತಿಳಿಸಿದರು.  
ನಂತರ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಕರ್ನಾಟಕದ ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ವೃಕ್ಷ ಆಧಾರಿತ ಕೃಷಿಯನ್ನು ಅಳವಡಿಸಿಕೊಂಡಿರುವ ರೈತರಿಗೆ ಸಸಿಗಳನ್ನು ನೀಡುವ ಮೂಲಕ ಅವರನ್ನು ಸನ್ಮಾನಿಸಿದರು.

***



(Release ID: 1706450) Visitor Counter : 79


Read this release in: English