ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ವರ್ಗಾವಣೆ ವಿಧಾನದ ಬದಲಾವಣೆಗೆ ಸಂಪುಟ ಅನುಮೋದನೆ 


ಪರಿಶಿಷ್ಟ ಜಾತಿ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರದಿಂದ ಭಾರೀ ಒತ್ತು;  ಐದು ವರ್ಷಗಳಲ್ಲಿ 4 ಕೋಟಿಗೂ ಅಧಿಕ ಪರಿಶಿಷ್ಟಜಾತಿ ವಿದ್ಯಾರ್ಥಿಗಳಿಗೆ 59 ಸಾವಿರ ಕೋಟಿ ರೂ.ಗಳ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅನುಮೋದನೆ

Posted On: 23 DEC 2020 4:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ  ಸಂಪುಟ ಸಮಿತಿ ಸಭೆಯಲ್ಲಿ ಪರಿಶಿಷ್ಟಜಾತಿಗೆ ಸೇರಿದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ(ಪಿಎಂಸಿ-ಎಸ್ ಸಿ) ನೀಡುವ ಕೇಂದ್ರದ ಪ್ರಾಯೋಜಿತ ಯೋಜನೆಯಲ್ಲಿ ಕೆಲವೊಂದು ಮಹತ್ವದ ಹಾಗೂ ಬದಲಾವಣೆಗಳನ್ನು ಮಾಡಲು ಅನುಮೋದನೆ ನೀಡಲಾಯಿತು. ಇದರಿಂದಾಗಿ ಮುಂದಿನ ಐದು ವರ್ಷಗಳಲ್ಲಿ ನಾಲ್ಕು ಕೋಟಿಗೂ ಅಧಿಕ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಅವರು ಯಶಸ್ವಿಯಾಗಿ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಬಹುದಾಗಿದೆ.

ಸಚಿವ ಸಂಪುಟ ಒಟ್ಟು 59,048 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ಅನುಮೋದನೆ ನೀಡಿದ್ದು, ಇದರಲ್ಲಿ ಕೇಂದ್ರ ಸರ್ಕಾರ 35,534 ಕೋಟಿ(ಶೇ.60ರಷ್ಟು) ವ್ಯಯ ಮಾಡಲಿದೆ ಹಾಗೂ ಉಳಿದ ಹಣವನ್ನು ರಾಜ್ಯ ಸರ್ಕಾರಗಳು ಖರ್ಚು ಮಾಡಲಿವೆ. ಇದು ಹಾಲಿ ಇರುವ ಬದ್ಧತಾ ಹೊಣೆಗಾರಿಕೆ ವ್ಯವಸ್ಥೆಯನ್ನು ಬದಲಾಯಿಸಲಿದ್ದು, ಮಹತ್ವದ ಯೋಜನೆಯಲ್ಲಿ ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾಗುವಂತೆ ಮಾಡಲಿದೆ.

11ನೇ ತರಗತಿ ಹಾಗೂ ಆನಂತರ ಮೆಟ್ರಿಕ್ ಕೋರ್ಸ್ ಗಳನ್ನು ಮಾಡುವ ಎಲ್ಲ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರಕಲಿದ್ದು, ಸರ್ಕಾರ ಅವರ ಶಿಕ್ಷಣದ ವೆಚ್ಚವನ್ನು ಭರಿಸಲಿದೆ.

ಕೇಂದ್ರ ಸರ್ಕಾರ ಇದಕ್ಕೆ ಹೆಚ್ಚಿನ ಒತ್ತು ನೀಡಲು ಬದ್ಧತೆಯನ್ನು ವ್ಯಕ್ತಪಡಿಸಿದ್ದು, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಜಿಇಆರ್ (ಉನ್ನತ ಶಿಕ್ಷಣ)ನಲ್ಲಿ ರಾಷ್ಟ್ರೀಯ ಮಾನದಂಡವನ್ನು ತಲುಪುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಚುರುಕುಗೊಳಿಸಲಾಗುವುದು.

ಯೋಜನೆಯ ವಿವರಗಳು ಕೆಳಗಿನಂತಿದೆ:

ಯೋಜನೆಯಲ್ಲಿ ಕಡುಬಡವ ವಿದ್ಯಾರ್ಥಿಗಳ ಪ್ರವೇಶ, ಸಕಾಲದಲ್ಲಿ ಪಾವತಿ, ಸಮಗ್ರ ಹೊಣೆಗಾರಿಕೆ, ನಿರಂತರ ಮೇಲ್ವಿಚಾರಣೆ ಮತ್ತು ಸಂಪೂರ್ಣ ಪಾರದರ್ಶಕತೆಗೆ ಒತ್ತು ನೀಡಲಾಗುವುದು.

  1. ಹತ್ತನೇ ತರಗತಿ ತೇರ್ಗಡೆ ಹೊಂದಿರುವ ಬಡ ಕುಟುಂಬಗಳ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಉನ್ನತ ಶಿಕ್ಷಣ ಕೋರ್ಸ್ ಗಳಿಗೆ ಪ್ರವೇಶ ಪಡೆಯುವುದನ್ನು ಪ್ರೋತ್ಸಾಹಿಸಲು ಅಭಿಯಾನವನ್ನು ಆರಂಭಿಸಲಾಗುವುದು. ಅಂತಹ 1.36 ಕೋಟಿ ಬಡ ವಿದ್ಯಾರ್ಥಿಗಳು ಇದ್ದಾರೆ ಎಂದು ಅಂದಾಜಿಸಲಾಗಿದ್ದು, ಅವರು ಸದ್ಯ 10ನೇ ತರಗತಿ ನಂತರ ತಮ್ಮ ಶಿಕ್ಷಣವನ್ನು ಮುಂದುವರಿಸುತ್ತಿಲ್ಲ. ಅಂತಹವರನ್ನು ಮುಂದಿನ ಐದು ವರ್ಷದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಗೆ ತರಲಾಗುವುದು.
  2. ಯೋಜನೆಯನ್ನು ಆನ್ ಲೈನ್ ವೇದಿಕೆಯ ಮೂಲಕ ಉತ್ಕೃಷ್ಟ ಸೈಬರ್ ಸುರಕ್ಷತಾ ಕ್ರಮಗಳೊಂದಿಗೆ ನಡೆಸಲಾಗುವುದು. ಇದರಿಂದ ಪಾರದರ್ಶಕತೆ, ಉತ್ತರದಾಯಿತ್ವ, ದಕ್ಷತೆ ಹೆಚ್ಚಾಗುವುದಲ್ಲದೆ, ಯಾವುದೇ ವಿಳಂಬವಿಲ್ಲದೆ ಸಕಾಲದಲ್ಲಿ ನೆರವು ದೊರಕಲಿದೆ.
  3. ರಾಜ್ಯಗಳು ಅರ್ಹತೆ, ಜಾತಿ ಸ್ಥಿತಿಗತಿ, ಆಧಾರ್ ದೃಢೀಕರಣ ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ಆನ್ ಲೈನ್ ಮೂಲಕ ಪಡೆದು, ಅವುಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಬೇಕು.
  4. ನೇರ ನಗದು ವರ್ಗಾವಣೆ(ಡಿಬಿಟಿ) ಅಡಿ ಯೋಜನೆ ಎಲ್ಲ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ವರ್ಗಾಯಿಸಲಾಗುವುದು ಮತ್ತು ಆಧಾರ್ ಸಂಯೋಜಿತ ಪಾವತಿ ವ್ಯವಸ್ಥೆಯನ್ನು ಬಳಕೆ ಮಾಡಲಾಗುವುದು. 2020-22ನೇ ಸಾಲಿನಿಂದ ಆರಂಭವಾಗಿ ಕೇಂದ್ರದ ಪಾಲು(ಶೇ.60ರಷ್ಟನ್ನು) ಯೋಜನೆಗೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನಿಗದಿತ ಸಮಯಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಿರುವುದನ್ನು ಖಾತ್ರಿಪಡಿಸಿಕೊಂಡು ಡಿಬಿಟಿ ವಿಧಾನದ ಮೂಲಕ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿದೆ.
  5. ಸಾಮಾಜಿಕ ಲೆಕ್ಕಪರಿಶೋಧನೆ ವಾರ್ಷಿಕ ಮೂರನೇ ವ್ಯಕ್ತಿ ಮೌಲ್ಯಮಾಪನ ಮತ್ತು ಪ್ರತಿಯೊಂದು ಸಂಸ್ಥೆಗಳ ಅರ್ಧವಾರ್ಷಿಕ ಸ್ವಯಂ ಲೆಕ್ಕ ಪರಿಶೋಧನಾ ವರದಿಗಳನ್ನು ಪಡೆಯುವ ಮೂಲಕ ಮೇಲ್ವಿಚಾರಣಾ ಕಾರ್ಯತಂತ್ರವನ್ನು ಮತ್ತಷ್ಟು ಬಲವರ್ಧನೆ ಮಾಡಲಾಗುವುದು.
  6. 2017-18 ರಿಂದ 2019-20 ವರೆಗೆ ವಾರ್ಷಿಕ 1100 ಕೋಟಿ ರೂ. ಕೇಂದ್ರದ ನೆರವು ಲಭ್ಯವಾಗುತ್ತಿದೆ. ಇದೀಗ 2020-21 ರಿಂದ 2025-26 ವರೆಗೆ ವಾರ್ಷಿಕ ಸುಮಾರು 6000 ಕೋಟಿ ರೂ. ಅನುದಾನ ಲಭ್ಯವಾಗಲಿದೆ, ಹಿಂದಿನ ಮೊತ್ತಕ್ಕೆ ಹೋಲಿಸಿದರೆ ಇದು ಐದು ಪಟ್ಟಿಗೂ ಅಧಿಕ.

***


(Release ID: 1683203) Visitor Counter : 197