ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಉದ್ದೇಶಿತ ಬೃಹತ್ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಪಾರ್ಕ್ ಸ್ಥಾಪನೆಗೆ ಪರಿಶೀಲನಾ ಸಭೆ ನಡೆಸಿದ ಕೇಂದ್ರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ

Posted On: 24 JUN 2020 6:10PM by PIB Bengaluru

ಉದ್ದೇಶಿತ ಬೃಹತ್ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಪಾರ್ಕ್ ಸ್ಥಾಪನೆಗೆ ಪರಿಶೀಲನಾ ಸಭೆ ನಡೆಸಿದ

ಕೇಂದ್ರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ

 

ದೇಶಾದ್ಯಂತ ಉದ್ದೇಶಿತ ಮೂರು ಬೃಹತ್ ಔಷಧ ಮತ್ತು ನಾಲ್ಕು ವೈದ್ಯಕೀಯ ಉಪಕರಣಗಳ ಪಾರ್ಕ್ ಗಳ ಅಭಿವೃದ್ಧಿ ಮತ್ತು ಸ್ಥಾಪನೆಯ ನಾನಾ ಆಯಾಮಗಳ ಕುರಿತಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಅವರು, ಕೇಂದ್ರ ಸಹಾಯಕ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಹಾಗೂ ತಮ್ಮ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.

ಸಚಿವರು ಪಾರ್ಕ್ ಗಳ ಅಭಿವೃದ್ಧಿ ವ್ಯವಸ್ಥಿತವಾಗಿರಲು ಕೆಲವೊಂದು ನಿರ್ದಿಷ್ಟ ಉದ್ದೇಶಗಳ ಮಾನದಂಡಗಳನ್ನು ಆಧರಿಸಿ ಪಿಎಲ್ಐ ಯೋಜನೆ ಅಡಿ ಪಾರ್ಕ್ ಸ್ಥಾಪನೆಯಾಗಲಿರುವ ಸ್ಥಳಗಳು ಮತ್ತು ಫಲಾನುಭವಿಗಳ ಆಯ್ಕೆಗೆ ಸೂಕ್ತ ನಿಯಮಗಳನ್ನು ರೂಪಿಸಬೇಕು ಎಂದು ಸಲಹೆ ಮಾಡಿದರು.

ಯೋಜನೆಗಳಿಂದ ದೇಶೀಯ ಔಷಧ ಉತ್ಪಾದನೆ ಮತ್ತು ವೈದ್ಯಕೀಯ ಸಾಧನಗಳ ಉತ್ಪಾದನೆಯಲ್ಲಿ ಸ್ಪರ್ಧೆ ಹೆಚ್ಚಲಿದೆ ಹಾಗೂ ಅತ್ಯಾಧುನಿಕ ಮೂಲಸೌಕರ್ಯ ಹಾಗೂ ಸಾಗಣೆ ಸೌಕರ್ಯಗಳ ಪ್ರಯೋಜನಗಳು ಲಭ್ಯವಾಗಲಿವೆ ಎಂದು ಸಚಿವ ಶ್ರೀ ಸದಾನಂದ ಗೌಡ ಅವರು ತಿಳಿಸಿದರು. ಪಾರ್ಕ್ ಗಳ ಅಭಿವೃದ್ಧಿಯಿಂದಾಗಿ ನಮ್ಮ ಆಮದು ಮೇಲಿನ ಅವಲಂಬನೆ ತಗ್ಗುವುದಲ್ಲದೆ, ಭಾರತವನ್ನು ಔಷಧ ರಫ್ತಿನಲ್ಲಿ ಜಾಗತಿಕವಾಗಿ ಪ್ರಮುಖ ರಾಷ್ಟ್ರವನ್ನಾಗಿ ಮಾಡಲು ಸಹಾಯಕವಾಗುತ್ತದೆ ಎಂದರು. ತಲಾ ಆದಾಯ ಹೆಚ್ಚಳ ಮತ್ತು ಜೀವನ ಶೈಲಿ ಕಾಯಿಲೆಗಳು ಹೆಚ್ಚಾಗುತ್ತಿರುವುದರಿಂದ ಔಷಧಗಳು ಮತ್ತು ಸಾಧನಗಳಿಗೆ ಅಂದರೆ ಸ್ಟೆಂಟ್ ನಂತಹ ಸಾಧನಗಳಿಗೆ ಭವಿಷ್ಯದಲ್ಲಿ ಜನರು ಸ್ವತಃ ಹಣ ಖರ್ಚು ಮಾಡಬೇಕಾಗುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೇಶದ ಪ್ರತಿಯೊಬ್ಬ ಪ್ರಜೆಗೂ ಕೈಗೆಟಕುವ ದರದಲ್ಲಿ ಎಲ್ಲ ಬಗೆಯ ಔಷಧಗಳು ಲಭ್ಯವಾಗುವಂತೆ ಮಾಡಬೇಕು ಎಂಬ ದೂರದೃಷ್ಟಿಯನ್ನು ಹೊಂದಿದ್ದಾರೆ. ಅದಕ್ಕಾಗಿ ದೇಶದಲ್ಲಿಯೇ ಕಡಿಮೆ ದರದಲ್ಲಿ ಔಷಧಗಳನ್ನು ಉತ್ಪಾದಿಸಬೇಕಾಗಿದೆ. ಅದಕ್ಕೆ ಇಂತಹ ಯೋಜನೆಗಳು ಅತ್ಯಂತ ಸಕಾಲಿಕವಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ಆತ್ಮ ನಿರ್ಭರ ಭಾರತನಿರ್ಮಾಣಕ್ಕೆ ಮತ್ತು ದೇಶದಲ್ಲಿ ಔಷಧ ಭದ್ರತೆ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅದಕ್ಕಾಗಿ ಔಷಧಗಳ ಆಮದು ಅವಲಂಬನೆ ತಗ್ಗಿಸಲು ಮತ್ತು ಸ್ಥಳೀಯವಾಗಿ ಉತ್ಪಾದಿಸಲು ಉತ್ತೇಜನ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ, ದೇಶದಲ್ಲಿ ಮೂರು ಬೃಹತ್ ಔಷಧ ಪಾರ್ಕ್ ಮತ್ತು ನಾಲ್ಕು ವೈದ್ಯಕೀಯ ಸಾಧನಗಳ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಲು 2020 ಮಾರ್ಚ್ 21ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಬೃಹತ್ ಔಷಧ ಪಾರ್ಕ್ ಗಳ ಉತ್ತೇಜನಕ್ಕೆ ಭಾರತ ಸರ್ಕಾರ, ಎಲ್ಲಾ ಮೂರು ಬೃಹತ್ ಔಷಧ ಪಾರ್ಕ್ ಗಳಿಗೆ ಒಂದು ಬಾರಿ ಗರಿಷ್ಠ ಒಂದು ಸಾವಿರ ಕೋಟಿ ರೂ. ಅನುದಾನವನ್ನು ತಲಾ ಒಂದೊಂದು ಪಾರ್ಕ್ ಗಳಿಗೆ ನೀಡಲಾಗುವುದು ಅಥವಾ ಸಾಮಾನ್ಯ ಮೂಲಸೌಕರ್ಯ ಯೋಜನೆಯ ಒಟ್ಟು ವೆಚ್ಚದ ಶೇಕಡ 70ರಷ್ಟು (ಕಣಿವೆ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳಿಗಾದರೆ ಶೇಕಡ 90ರಷ್ಟು), ಯಾವುದು ಕಡಿಮೆಯೋ ಅದು. ಅಲ್ಲದೆ ಹೆಚ್ಚುವರಿಯಾಗಿ ಸರ್ಕಾರ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲು ಉತ್ಪಾದನೆ ಆಧಾರಿತ ರಿಯಾಯಿತಿ (ಪಿಎಲ್ಐ) ಯೋಜನೆಯಡಿ ಗುರುತಿಸಲಾಗಿರುವ 53 ಬಗೆಯ ಗಂಭೀರ ಕೆಎಸ್ಎಂಎಸ್/ಔಷಧಗಳಿಗೆ ಮತ್ತು ಎಪಿಐಗಳಿಗೆ 2020-21ರಿಂದ 2027-28 ಯೋಜನೆಯ ಅವಧಿಯಲ್ಲಿ ಒಟ್ಟು 6,940 ಕೋಟಿ ರೂ.ಗಳನ್ನು ನೀಡಲಿದೆ.

ಅದೇ ರೀತಿ ವೈದ್ಯಕೀಯ ಸಾಧನಗಳ ಪಾರ್ಕ್ ಉತ್ತೇಜನಕ್ಕೆ ಭಾರತ ಸರ್ಕಾರ ಒಂದು ಬಾರಿ ಎಲ್ಲಾ ನಾಲ್ಕು ವೈದ್ಯಕೀಯ ಸಾಧನಗಳ ಪಾರ್ಕ್ ಗಳಿಗೆ ತಲಾ ಗರಿಷ್ಠ 100 ಕೋಟಿ ರೂ.ಗಳ ವರೆಗೆ ಅಥವಾ ಯೋಜನೆಯ ಒಟ್ಟು ವೆಚ್ಚದ ಶೇಕಡ 70ರಷ್ಟು (ಕಣಿವೆ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳಿಗಾದರೆ ಶೇಕಡ 90ರಷ್ಟು), ಯಾವುದು ಕಡಿಮೆಯೋ ಅಷ್ಟನ್ನು ನೀಡಲಿದೆ. ಇದಲ್ಲದೆ ಹೆಚ್ಚುವರಿಯಾಗಿ ಸರ್ಕಾರ ಉತ್ಪಾದನೆ ಆಧಾರಿತ ರಿಯಾಯಿತಿ(ಪಿಎಲ್ಐ) ಯೋಜನೆಯಲ್ಲಿ ವೈದ್ಯಕೀಯ ಸಲಕರಣೆಗಳ ದೇಶೀಯ ಉತ್ಪಾದನೆ ಉತ್ತೇಜನಕ್ಕೆ 2020-21ರಿಂದ 2025-26 ಯೋಜನೆಯ ಅವಧಿಗೆ ಒಟ್ಟು 3,420 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದೆ.

ಫಾರ್ಮಸಿಟಿಕಲ್ಸ್ ಇಲಾಖೆಯ ಕಾರ್ಯದರ್ಶಿ, ಬೃಹತ್ ಔಷಧ ಪಾರ್ಕ್ ಮತ್ತು ವೈದ್ಯಕೀಯ ಸಾಧನಗಳ ಪಾರ್ಕ್ ನಾನಾ ಆಯಾಮಗಳ ಕುರಿತಂತೆ ಸಂಕ್ಷಿಪ್ತ ವಿವರಣೆಯನ್ನು ನೀಡಿದರು ಮತ್ತು ಯೋಜನೆಗಳ ಅನುಷ್ಠಾನಕ್ಕೆ ಇಲಾಖೆ ಮಾರ್ಗಸೂಚಿಗಳನ್ನು ರೂಪಿಸುವ ಪ್ರಕ್ರಿಯಯಲ್ಲಿ ತೊಡಗಿದೆ ಎಂದು ಹೇಳಿದರು.

ಸಭೆಯಲ್ಲಿ ಫಾರ್ಮಸಿಟಿಕಲ್ಸ್ ಕಾರ್ಯದರ್ಶಿ ಶ್ರೀ ಪಿ.ಡಿ. ವಘೇಲಾ, ಜಂಟಿ ಕಾರ್ಯದರ್ಶಿ ಶ್ರೀ ನವದೀಪ್ ರಿನ್ವ ಮತ್ತು ಜಂಟಿ ಔಷಧ ನಿಯಂತ್ರಕ ಡಾ. ಎಸ್. ಈಶ್ವರ ರೆಡ್ಡಿ ಭಾಗವಹಿಸಿದ್ದರು.

***


(Release ID: 1634198) Visitor Counter : 193