ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಬಗ್ಗೆ ಹೊಸ ಮಾಹಿತಿ

Posted On: 24 MAR 2020 7:51PM by PIB Bengaluru

ಕೋವಿಡ್-19 ಬಗ್ಗೆ ಹೊಸ ಮಾಹಿತಿ

 

ದೇಶದಲ್ಲಿ ಕೋವಿಡ್-19ರ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಯನ್ನು ಉನ್ನತ ಮಟ್ಟದಲ್ಲಿ ನಿಗಾವಹಿಸಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ರಾಜ್ಯಗಳ ಸಹಯೋಗದೊಂದಿಗೆ ವಿವಿಧ ಕ್ರಮಗಳನ್ನು ಪ್ರಾರಂಭಿಸಲಾಗಿದೆ.  ಮಾನ್ಯ ಪ್ರಧಾನ ಮಂತ್ರಿಗಳು ಸಂಬಂಧಪಟ್ಟ ಸಚಿವಾಲಯಗಳು / ಇಲಾಖೆಗಳು ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಉನ್ನತ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಮೇಲ್ವಿಚಾರಣೆಯನ್ನು ಮತ್ತು ಪರಿಶೀಲನೆಯನ್ನು ಮಾಡುತ್ತಿದ್ದಾರೆ.  ವೈದ್ಯರು ಮತ್ತು ಆರೋಗ್ಯ ವೃತ್ತಿಪರರ ಪ್ರತಿನಿಧಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ಈ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಅವರ ನಿರಂತರ ಒಳಗೊಳ್ಳುವಿಕೆ ಮತ್ತು ಬೆಂಬಲವನ್ನು ಪಡೆಯಲು   ಪ್ರಧಾನಮಂತ್ರಿಯವರು ಅವರೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು.  ಈ ಸಂದಿಗ್ಧ ಪರಿಸ್ಥಿತಿಯಲ್ಲಿ  ರಾಷ್ಟ್ರಕ್ಕೆ ಮಾಡಿದ ಸತತ ಸೇವೆಗಾಗಿ ವೈದ್ಯರು, ದಾದಿಯರು ಮತ್ತು ಎಲ್ಲಾ ಆರೋಗ್ಯ ವೃತ್ತಿಪರರಿಗೆ ಅವರು ಧನ್ಯವಾದ ಅರ್ಪಿಸಿದರು.  ಅವರು ಇಂದು ಮುದ್ರಣ ಮಾಧ್ಯಮದೊಂದಿಗೂ ಸಹ ವೀಡಿಯೊ ಕಾನ್ಫರೆನ್ಸ್ ನಡೆಸಿದರು, ಈ ಮಾತುಕತೆಯಲ್ಲಿ ಸರಿಯಾದ ಮಾಹಿತಿಯನ್ನು ಸಾಮಾನ್ಯ ಜನರಿಗೆ ಪ್ರಸಾರ ಮಾಡಲು ಮಾಧ್ಯಮದವರ ಬೆಂಬಲವನ್ನು ಕೋರಿದರು.
ಇದಲ್ಲದೆ, ದೇಶದಲ್ಲಿ ಕೋವಿಡ್-19ರ ನಿರ್ವಹಣೆಗೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮುಂದೆ ಒದಗುವ ಸನ್ನಿವೇಶ ಮತ್ತು ಅದಕ್ಕಾಗಿ ಇರುವ ಸನ್ನದ್ಧತೆಯನ್ನು ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕ್ಯಾಬಿನೆಟ್ ಕಾರ್ಯದರ್ಶಿಯವರು  ಉನ್ನತ ಮಟ್ಟದ ಸಭೆಗಳನ್ನು ನಡೆಸುತ್ತಿದ್ದಾರೆ.   ಪ್ರಸರಣ ಸರಪಳಿಯನ್ನು ಮುರಿಯಲು  ಸೋಂಕು ಪತ್ತೆಯಾದ ಪ್ರಕರಣಗಳ ವ್ಯಕ್ತಿಗಳ ಮೇಲೆ ಕಣ್ಗಾವಲು ಇಡಲು ಮತ್ತು ಸಂಪರ್ಕಿಸಲು ಪತ್ತೆಹಚ್ಚುವಿಕೆಯನ್ನು ಮತ್ತಷ್ಟು  ಹೆಚ್ಚಿಸಲು ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಕೇಳಿದ್ದಾರೆ.   ಈ ಸವಾಲನ್ನು ಎದುರಿಸಲು ಆರೋಗ್ಯ ಮೂಲಸೌಕರ್ಯಗಳನ್ನು ಸಿದ್ಧಪಡಿಸುವಲ್ಲಿ ರಾಜ್ಯಗಳು ತಮ್ಮ ಶ್ರಮ ಮತ್ತು ಆರ್ಥಿಕ ಸಂಪನ್ಮೂಲಗಳ ಕಡೆ ಹೆಚ್ಚು ಗಮನ ಕೊಡಬೇಕೆಂದು ಅವರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.   ಈ ಹಂತದಲ್ಲಿ ಇದೇ ಪ್ರಥಮ ಆದ್ಯತೆಯಾಗಿರಬೇಕು.  ಮೀಸಲಾದ ಕೋವಿಡ್-19ರ ಆಸ್ಪತ್ರೆಗಳನ್ನು ರಚಿಸಲು, ವೈದ್ಯಕೀಯ ಸಂಸ್ಥೆಗಳನ್ನು ಪಿಪಿಇಗಳೊಂದಿಗೆ (ವೈಯಕ್ತಿಕ ರಕ್ಷಣಾ ಸಲಕರಣೆ) ಸಿದ್ಧಪಡಿಸುವುದು, ವೆಂಟಿಲೇಟರ್‌ಗಳು ಮತ್ತು ಇತರ ಅಗತ್ಯ ಉಪಕರಣಗಳೊಂದಿಗೆ ಸಜ್ಜುಗೊಳಿಸಲು ಅವರು ಸಾಕಷ್ಟು ಸಂಪನ್ಮೂಲಗಳನ್ನು ವಿನಿಯೋಗಿಸಬೇಕು.  ಅಗತ್ಯ ಸೇವೆಗಳು ಮತ್ತು ಸರಬರಾಜುಗಳು ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳನ್ನು ಕೇಳಲಾಗಿದೆ.  ಆಸ್ಪತ್ರೆಗಳು, ವೈದ್ಯಕೀಯ ಅಂಗಡಿಗಳು ಮತ್ತು ಔಷಧಿಗಳು, ಲಸಿಕೆಗಳು, ಸ್ಯಾನಿಟೈಜರ್‌ಗಳು, ಮುಖಗವಸುಗಳು ಮತ್ತು ವೈದ್ಯಕೀಯ ಸಾಧನಗಳ ತಯಾರಿಕೆಯಲ್ಲಿ ತೊಡಗಿರುವ ಸಂಸ್ಥೆಗಳು ಇವುಗಳಲ್ಲಿ ಸೇರಿವೆ. ಕಣ್ಗಾವಲಿಗೆ ಪೂರಕವಾಗಿ ಮತ್ತು ಕ್ಷೇತ್ರ ಮಟ್ಟದಲ್ಲಿ ಕ್ಷಿಪ್ರ ಕಾರ್ಯತಂಡಗಳನ್ನು ಬಲಪಡಿಸಲು ಮತ್ತು ಕಣ್ಗಾವಲಿನ ಸಮಯದಲ್ಲಿ ಯಾವುದೇ ಶಂಕಿತ ಮತ್ತು ಹೆಚ್ಚಿನ ಅಪಾಯದ ವ್ಯಕ್ತಿಯು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು  ಜಿಲ್ಲಾಧಿಕಾರಿಗಳ ಅಡಿಯಲ್ಲಿ ನಾಗರಿಕ ಇಲಾಖೆಗಳನ್ನು ಸಜ್ಜುಗೊಳಿಸಲು ರಾಜ್ಯಗಳನ್ನು ಕೇಳಲಾಗಿದೆ.
ಕೋವಿಡ್ – 19 ಪ್ರಕರಣಗಳಿಗೆ ಮೀಸಲಾಗಿರುವ ಆಸ್ಪತ್ರೆಗಳನ್ನು ಹೊಂದಿರುವ ರಾಜ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರವು ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಗುಜರಾತ್, ಅಸ್ಸಾಂ, ಜಾರ್ಖಂಡ್, ರಾಜಸ್ಥಾನ, ಗೋವಾ, ಕರ್ನಾಟಕ, ಮಧ್ಯ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು  ಕೋವಿಡ್ -19ರ ನಿರ್ವಹಣೆಗೆ ಮೀಸಲಾಗಿರುವ ಆಸ್ಪತ್ರೆಗಳನ್ನು ಸ್ಥಾಪಿಸುತ್ತಿವೆ.
ಸಾಮಾಜಿಕ ಅಂತರದ ಅನುಷ್ಠಾನವನ್ನು ಜಾರಿಗೊಳಿಸಲು, ಬಹುತೇಕ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಲಾಕ್ ಡೌನ್ ಮಾಡಲು ಆದೇಶಗಳನ್ನು ನೀಡಿವೆ. 30 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪೂರ್ಣ ಲಾಕ್ ಡೌನ್ ವಿಧಿಸಿವೆ.  ಲಾಕ್ ಡೌನ್ ಕ್ರಮಗಳ ಅನುಷ್ಠಾನವನ್ನು ಜಾರಿಗೊಳಿಸಲು ರಾಜ್ಯಗಳನ್ನು ಕೇಳಲಾಗಿದೆ. ಭಾಗಶಃ ಅನುಷ್ಠಾನವು ಕೋವಿಡ್-19ರ ಪ್ರಸರಣದ ವೇಗವನ್ನು ತಡೆಗಟ್ಟುವ ಉದ್ದೇಶವನ್ನು ಸಾಧಿಸುವುದಿಲ್ಲ ಎನ್ನುವುದನ್ನು ಒತ್ತಿಹೇಳಲಾಗಿದೆ. ಕ್ಯಾಬಿನೆಟ್ ಕಾರ್ಯದರ್ಶಿಯವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದಾರೆ.
ಇದಲ್ಲದೆ, ಸ್ವದೇಶಿ ತಯಾರಕರನ್ನು ಗುರುತಿಸಲಾಗಿದೆ ಮತ್ತು ಪಿಪಿಇಗಳು, ಎನ್ 95 ಮುಖಗವಸುಗಳು ಮತ್ತು ವೈದ್ಯರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಿರುವ ಇತರ ರಕ್ಷಣಾ ಸಾಧನಗಳ ಕೊರತೆಯಿರಬಾರದು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕೊಳ್ಳುವುದನ್ನು ಪ್ರಾರಂಭಿಸಲಾಗಿದೆ.
ಇದಲ್ಲದೆ, 118 ಪ್ರಯೋಗಾಲಯಗಳನ್ನು ದಿನಕ್ಕೆ 12,000 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯದೊಂದಿಗೆ ಕೋವಿಡ್-19 ಪರೀಕ್ಷೆಯ ಐಸಿಎಂಆರ್ ನೆಟ್‌ವರ್ಕ್‌ನಲ್ಲಿ ಸೇರಿಸಲಾಗಿದೆ. ಕಳೆದ ಐದು ದಿನಗಳಲ್ಲಿ, ದಿನಕ್ಕೆ ಸರಾಸರಿ 1338 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದಲ್ಲದೆ, ಕೋವಿಡ್-19 ಪರೀಕ್ಷೆಗಾಗಿ 22 ಖಾಸಗಿ ಲ್ಯಾಬ್ ಶ್ರೇಣಿಗಳು ಐಸಿಎಂಆರ್ ನಲ್ಲಿ (ಮಾರ್ಚ್ 24, 2020 ರವರೆಗೆ) ನೋಂದಾಯಿಸಿವೆ. ಅವುಗಳು ದೇಶಾದ್ಯಂತ 15,500 ಸಂಗ್ರಹ ಕೇಂದ್ರಗಳನ್ನು ಹೊಂದಿವೆ. ಅಲ್ಲದೆ, 15 ಕಿಟ್ ತಯಾರಕರಲ್ಲಿ, ಎನ್ಐವಿ ಪುಣೆಯು  ಮೂರು ಪಿಸಿಆರ್ ಆಧಾರಿತ ಕಿಟ್ ಮತ್ತು 1 ಆಂಟಿಬಾಡಿ ಡಿಟೆಕ್ಷನ್ ಕಿಟ್ ಅನ್ನು ಅನುಮೋದಿಸಿದೆ. ಇವುಗಳಲ್ಲಿ ಒಂದು ಭಾರತೀಯ ಉತ್ಪಾದಕ ಸಂಸ್ಥೆಯಾಗಿದೆ.

ಎಸ್ ಎ ಆರ್ ಎಸ್ – ಸಿಓವಿ - 2 ಸೋಂಕಿನ ರೋಗನಿರೋಧಕಕ್ಕೆ ಹೈಡ್ರಾಕ್ಸಿ-ಕ್ಲೋರೊಕ್ವಿನ್ ಬಳಕೆಯನ್ನು ಈ ಕೆಳಗಿನವುಗಳಿಗೆ ಮಾತ್ರ ಶಿಫಾರಸು ಮಾಡಲಾಗಿದೆ:
1) ಕೋವಿಡ್ -19 ಶಂಕಿತ ಅಥವಾ ದೃಢಪಡಿಸಿದ ಪ್ರಕರಣಗಳ ಆರೈಕೆಯಲ್ಲಿ ತೊಡಗಿರುವ ರೋಗಲಕ್ಷಣರಹಿತ ಆರೋಗ್ಯ ಕಾರ್ಯಕರ್ತರು;
2) ಪ್ರಯೋಗಾಲಯ ದೃಢಪಡಿಸಿದ ವ್ಯಕ್ತಿಗಳ ಮನೆಯಲ್ಲಿರುವ ರೋಗಲಕ್ಷಣರಹಿತ ವ್ಯಕ್ತಿಗಳು.

 

***

 



(Release ID: 1608167) Visitor Counter : 210


Read this release in: English , Hindi , Gujarati , Telugu