ಜಲ ಶಕ್ತಿ ಸಚಿವಾಲಯ

ಗಂಗಾ ರಾಷ್ಟ್ರೀಯ ಮಂಡಳಿ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ

Posted On: 14 DEC 2019 5:46PM by PIB Bengaluru

ಗಂಗಾ ರಾಷ್ಟ್ರೀಯ ಮಂಡಳಿ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರಪ್ರದೇಶ ಕಾನ್ಪುರದಲ್ಲಿ ಗಂಗಾ ರಾಷ್ಟ್ರೀಯ ಮಂಡಳಿಯ ಪ್ರಥಮ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಗಂಗಾ ಮತ್ತು ಅದರ ಉಪನದಿಗಳು ಸೇರಿದಂತೆ ಗಂಗಾ ನದಿ ಅಚ್ಚುಕಟ್ಟು ಪ್ರದೇಶದ ಪುನರುಜ್ಜೀವನ ಮತ್ತು ಮಾಲಿನ್ಯ ತಡೆಯ ಸಮಗ್ರ ಮೇಲ್ವಿಚಾರಣೆ ಜವಾಬ್ದಾರಿಯನ್ನು ಮಂಡಳಿಗೆ ವಹಿಸಲಾಗಿದೆ. ಮಂಡಳಿ ಮೊದಲ ಸಭೆಯಲ್ಲಿ ಸಂಬಂಧಿಸಿದ ಎಲ್ಲ ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳ ಧೋರಣೆಯನ್ನು ‘ಗಂಗಾ ಕೇಂದ್ರಿತ’ಗೊಳಿಸಲು ಒತ್ತು ನೀಡುವ ಗುರಿ ಹೊಂದಲಾಗಿತ್ತು.
ಸಭೆಯಲ್ಲಿ ಕೇಂದ್ರ ಜಲಶಕ್ತಿ, ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಆರೋಗ್ಯ, ನಗರ ವ್ಯವಹಾರಗಳು, ಇಂಧನ, ಪ್ರವಾಸೋದ್ಯಮ, ಬಂದರು, ಸಚಿವರುಗಳು ಮತ್ತು ಉತ್ತರಾಖಂಡ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು, ಬಿಹಾರದ ಉಪಮುಖ್ಯಮಂತ್ರಿ, ನೀತಿ ಆಯೋಗದ ಉಪಾಧ್ಯಕ್ಷರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಪಶ್ಚಿಮಬಂಗಾಳದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿರಲಿಲ್ಲ ಮತ್ತು ಜಾರ್ಖಂಡ್ ನಲ್ಲಿ ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಮತ್ತು ಚುನಾವಣೆ ನಡೆಯುತ್ತಿರುವುದರಿಂದ ಅಲ್ಲಿನ ಪ್ರತಿನಿಧಿಗಳೂ ಸಹ ಭಾಗವಹಿಸಿರಲಿಲ್ಲ.
ಪ್ರಧಾನಮಂತ್ರಿಗಳು ಗಂಗಾ ನದಿ ಶುದ್ಧೀಕರಣಕ್ಕಾಗಿ ‘ಸ್ವಚ್ಛತಾ’, ‘ಅವಿರಳತಾ’ ಮತ್ತು‘ನಿರ್ಮಲತಾ’ ಗುರಿಯಾಗಿಟ್ಟುಕೊಂಡು ನಡೆಯುತ್ತಿರುವ ಸಮಾಲೋಚನೆಗಳು ಹಾಗೂ ಕೆಲಸ ಕಾರ್ಯಗಳ ಬಗ್ಗೆ ಪರಾಮರ್ಶಿಸಿದರು. ಪ್ರಧಾನಿ ಅವರು, ಗಂಗಾ ಮಾತೆ ಉಪಖಂಡದ ಅತ್ಯಂತ ಪವಿತ್ರ ನದಿಯಾಗಿದ್ದು, ಅದರ ಪುನರುಜ್ಜೀವನ ಸಹಕಾರ ಒಕ್ಕೂಟ ವ್ಯವಸ್ಥೆಯ ಮಾದರಿ ಉದಾಹರಣೆಯಾಗಬೇಕು ಎಂದರು. ಪ್ರಧಾನಮಂತ್ರಿ ಅವರು ಗಂಗಾ ನದಿ ಪುನರುಜ್ಜೀವನ ದೇಶದ ಬಹುಕಾಲದಿಂದ ಬಾಕಿ ಇದ್ದ ದೊಡ್ಡ ಸವಾಲು ಎಂದರು. ಅವರು ಸರ್ಕಾರ 2014ರಲ್ಲಿ ‘ನಮಾಮಿ ಗಂಗಾ’ಯೋಜನೆಯನ್ನು ಕೈಗೆತ್ತಿಕೊಂಡ ನಂತರ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಲಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ಸರ್ಕಾರದ ನಾನಾ ಪ್ರಯತ್ನಗಳನ್ನು ಸಮಗ್ರವಾಗಿ ಒಗ್ಗೂಡಿಸಿ ಮಾಲಿನ್ಯ ತಡೆ, ನದಿ ಸಂರಕ್ಷಣೆ ಮತ್ತು ಗಂಗಾ ಪುನರುಜ್ಜೀವನಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಮಾಲಿನ್ಯ ನಿಯಂತ್ರಣ ಮತ್ತು ಕಾಗದದ ಕಾರ್ಖಾನೆಗಳು ಹೊರ ಹಾಕುತ್ತಿದ್ದ ತ್ಯಾಜ್ಯವನ್ನು ಶೂನ್ಯಕ್ಕೆ ಇಳಿಸಿರುವುದು ಗಮನಿಸಲೇಬೇಕಾದ ಸಾಧನೆಯಾಗಿದೆ ಎಂದ ಅವರು, ಆ ನಿಟ್ಟಿನಲ್ಲಿ ಇನ್ನು ಸಾಕಷ್ಟು ಕೆಲಸ ಮಾಡಬೇಕಿದೆ ಎಂದರು.
ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ 2015-20ರ ಅವಧಿಗೆ ಗಂಗಾ ನದಿ ಹಾದು ಹೋಗುವ ಐದು ರಾಜ್ಯಗಳಲ್ಲಿ ನದಿಯ ನೀರು ಯಾವುದೇ ಅಡೆ-ತಡೆಗಳಲ್ಲಿ ಸರಾಗವಾಗಿ ಹಾದು ಹೋಗುವಂತೆ ಮಾಡಲು 20 ಸಾವಿರ ಕೋಟಿ ರೂಪಾಯಿಗಳ ಯೋಜನೆಗಳ ಜಾರಿಗೆ ಬದ್ಧತೆಯನ್ನು ತೋರಿದೆ. ಈವರೆಗೆ 7700 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು, ಅದರಲ್ಲಿ ಬಹುತೇಕ ಹಣ ಹೊಸದಾಗಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ನಿರ್ಮಾಣಕ್ಕೆ ವ್ಯಯಿಸಲಾಗಿದೆ.
ನಿರ್ಮಲಾ ಗಂಗಾ ಚೌಕಟ್ಟಿನ್ಲಲಿ ಕಾರ್ಯನಿರ್ವಹಿಸಲು ಸಾರ್ವಜನಿಕರಿಂದ ದೊಡ್ಡಮಟ್ಟದ ಸಂಪೂರ್ಣ ಸಹಕಾರ ಅಗತ್ಯವಿದೆ ಎಂದು ಪ್ರತಿಪಾದಿಸಿದ ಪ್ರಧಾನಮಂತ್ರಿ, ರಾಷ್ಟ್ರೀಯ ನದಿಗಳ ತಟದಲ್ಲಿರುವ ನಗರಗಳಲ್ಲಿ ಉತ್ತಮ ಚಾಲ್ತಿಯಲ್ಲಿರುವ ಪದ್ಧತಿಗಳ ಅಳವಡಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲೆಗಳಲ್ಲಿ ಜಿಲ್ಲಾ ಗಂಗಾ ಸಮಿತಿಗಳನ್ನು ಸುಧಾರಿಸಿ, ಅವುಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಮತ್ತು ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಪರಿಣಾಮಕಾರಿ ಒಪ್ಪಂದಗಳನ್ನು ಮಾಡಿಕೊಳ್ಳಬೇಕು ಎಂದರು.
ಗಂಗಾ ನದಿ ಪುನರುಜ್ಜೀವನ ಯೋಜನೆಗಳಿಗೆ ಸಾರ್ವಜನಿಕರು, ಅನಿವಾಸಿ ವಿದೇಶಿ ಭಾರತೀಯರು, ಕಾರ್ಪೊರೇಟ್ ಉದ್ಯಮಿಗಳಿಗೆ ನೆರವು ನೀಡಲು ಸಹಕಾರಿಯಾಗುವಂತೆ ಶುದ್ಧ ಗಂಗಾ ನಿಧಿ (ಸಿಜಿಎಫ್)ಯನ್ನು ಸರ್ಕಾರ ಸ್ಥಾಪಿಸಿದೆ. ಗೌರವಾನ್ವಿತ ಪ್ರಧಾನಮಂತ್ರಿಗಳು 2014ರಿಂದೀಚೆಗೆ ತಾವು ಸ್ವೀಕರಿಸಿದ ಉಡುಗೊರೆಗಳನ್ನು ಹರಾಜು ಮಾಡಿದ್ದರಿಂದ ಬಂದ ಹಣ ಹಾಗೂ ಸಿಯೋಲ್ ಶಾಂತಿ ಪ್ರಶಸ್ತಿಯಿಂದ ದೊರೆತ ನಗದು ಸೇರಿ ಒಟ್ಟು 16.53 ಕೋಟಿ ರೂಪಾಯಿಗಳನ್ನು ಸಿಜಿಎಫ್ ಗೆ ದೇಣಿಗೆ ನೀಡಿದ್ದಾರೆ.
‘ನಮಾಮಿ ಗಂಗೆ’ಯನ್ನು ‘ಅರ್ಥ ಗಂಗೆ’ಯನ್ನಾಗಿ ಪರಿವರ್ತಿಸಲು ಸಮಗ್ರ ಚಿಂತನಾ ಪ್ರಕ್ರಿಯೆ ನಡೆಯಬೇಕಿದೆ ಎಂದು ಆಗ್ರಹಿಸಿದ ಪ್ರಧಾನಮಂತ್ರಿ ಅವರು, ಗಂಗಾ ನದಿಗೆ ಸಂಬಂಧಿಸಿದಂತೆ ಆರ್ಥಿಕ ಚಟುವಟಿಕೆಗಳನ್ನು ಕೇಂದ್ರೀಕರಿಸಿದ ಸುಸ್ಥಿರ ಅಭಿವೃದ್ಧಿ ಮಾದರಿಗಳನ್ನು ಹೊಂದಲು ಮುಂದಾಗಬೇಕು ಎಂದು ಕರೆ ನೀಡಿದರು. ಆ ನಿಟ್ಟಿನಲ್ಲಿ ಗಂಗಾ ನದಿ ದಂಡೆಗಳಲ್ಲಿ ನರ್ಸರಿ ಗಿಡಗಳನ್ನು ಬೆಳೆಸುವುದು, ಹಣ್ಣಿನ ಮರಗಳನ್ನು ನೆಡುವುದು, ಶೂನ್ಯ ಬಜೆಟ್ ಕೃಷಿ ಸೇರಿದಂತೆ ರೈತರು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸುವುದು ಅತ್ಯಗತ್ಯ. ಈ ಕಾರ್ಯಕ್ರಮಗಳನ್ನು ಸಂಘಟಿಸಲು ಮಹಿಳಾ ಸ್ವಯಂ ಸೇವಾ ಗುಂಪುಗಳು ಮತ್ತು ನಿವೃತ್ತ ಯೋಧರ ಸಂಘಟನೆಗಳಿಗೆ ಆದ್ಯತೆ ನೀಡಬೇಕು. ಅಲ್ಲದೆ ಜಲ ಕ್ರೀಡೆಗೆ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಮತ್ತು ಸೈಕ್ಲಿಂಗ್, ನಡೆಯುವ ಪಥ, ಶಿಬಿರಗಳ ಸ್ಥಳಗಳ ಅಭಿವೃದ್ಧಿಯಿಂದ ನದಿ ಪಾತ್ರದಲ್ಲಿ ಧಾರ್ಮಿಕ ಹಾಗೂ ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಾ ‘ಹೈಬ್ರಿಡ್’ ಪ್ರವಾಸೋದ್ಯಮ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು. ಪರಿಸರ ಪ್ರವಾಸೋದ್ಯಮ ಮತ್ತು ಗಂಗಾ ವನ್ಯಜೀವಿ ಸಂರಕ್ಷಣೆ ಮತ್ತು ಕ್ರೂಸ್(ಹಡಗು) ಪ್ರವಾಸೋದ್ಯಮ ಮತ್ತಿತರ ಚಟುವಟಿಕೆಗಳಿಂದ ಆದಾಯ ಸೃಷ್ಟಿಗೆ ಒತ್ತು ನೀಡುವುದು ಮತ್ತು ಅದನ್ನು ಗಂಗಾ ನದಿ ಶುದ್ಧೀಕರಣಕ್ಕೆ ಸುಸ್ಥಿರ ರೀತಿಯಲ್ಲಿ ಬಳಸಿಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.
ನಮಾಮಿ ಗಂಗಾ ಮತ್ತು ಅರ್ಥ ಗಂಗಾ ಯೋಜನೆಅಡಿಯಲ್ಲಿ ಕೈಗೊಂಡಿರುವ ಹಲವು ಯೋಜನೆಗಳು ಮತ್ತು ಪ್ರಗತಿಯಲ್ಲಿರುವ ಚಟುವಟಿಕೆಗಳ ಮೇಲೆ ನಿಗಾವಹಿಸಲು ಪ್ರಧಾನಮಂತ್ರಿಗಳು ಗ್ರಾಮಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ದತ್ತಾಂಶವನ್ನು ಒಳಗೊಂಡ ಡಿಜಿಟಲ್ ಡ್ಯಾಶ್ ಬೋರ್ಡ್ಅನ್ನು ಸ್ಥಾಪಿಸಬೇಕು ಎಂದು ಕರೆ ನೀಡಿದರು. ಅದನ್ನು ಪ್ರತಿ ದಿನ ಜಲಶಕ್ತಿ ಸಚಿವಾಲಯ ಮತ್ತು ನೀತಿ ಆಯೋಗ ನಿಗಾವಹಿಸಬೇಕು ಎಂದರು. ಆಶೋತ್ತರ ಜಿಲ್ಲೆಗಳಂತೆ ಗಂಗಾ ನದಿಯ ಎರಡೂ ಬದಿ ಇರುವ ಎಲ್ಲಾ ಜಿಲ್ಲೆಗಳಲ್ಲಿ ನಮಾಮಿ ಗಂಗಾ ಯೋಜನೆಯಡಿ ಮೇಲ್ವಿಚಾರಣೆ ಪ್ರಯತ್ನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಸಭೆಗೂ ಮೊದಲು ಪ್ರಧಾನಮಂತ್ರಿಗಳು, ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ನಂತರ ಚಂದ್ರಶೇಖರ್ ಆಜಾದ್ ಕೃಷಿ ವಿಶ್ವವಿದ್ಯಾಲಯದಲ್ಲಿ ‘ನಮಾಮಿ ಗಂಗಾ’ ಯೋಜನೆಯ ಕುರಿತಾದ ಪ್ರದರ್ಶನವನ್ನು ವೀಕ್ಷಿಸಿದರು. ನಂತರ ಪ್ರಧಾನಿ ಅವರು, ಅಟಲ್ ಘಾಟ್ ಗೆ ಭೇಟಿ ನೀಡಿದರು ಮತ್ತು ಸಿಸಮಾವು ನಾಲೆಯ ಶುದ್ಧೀಕರಣ ಯಶಸ್ವಿಯಾಗಿ ಪೂರ್ಣಗೊಂಡಿರುವುದನ್ನು ತಪಾಸಣೆ ನಡೆಸಿದರು.

 

***


(Release ID: 1596554) Visitor Counter : 134


Read this release in: English , Urdu , Hindi , Tamil