PIB Headquarters

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ವೈವಿಧ್ಯತೆಯ ಮಾವು ಮತ್ತು ಹಲಸು ಮೇಳ-2019 ಉದ್ಘಾಟನೆ

Posted On: 28 MAY 2019 4:19PM by PIB Bengaluru

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ

ವೈವಿಧ್ಯತೆಯ ಮಾವು ಮತ್ತು ಹಲಸು ಮೇಳ-2019 ಉದ್ಘಾಟನೆ

 

ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR)ಯು ಮಾವು ಮತ್ತು ಹಲಸಿನ ಹಣ್ಣುಗಳ ವೈವಿಧ್ಯತೆಯನ್ನು ಪ್ರದರ್ಶಿಸಲು ತನ್ನ ಹೆಸರಘಟ್ಟ ಕ್ಯಾಂಪಸ್ ನಲ್ಲಿ ಮೇ 28 ಮತ್ತು 29 ರಂದು ಎರಡು ದಿನಗಳ   ಮಾವು ಮತ್ತು ಹಲಸು ವೈವಿಧ್ಯತಾ ಮೇಳ-2019 ನ್ನು ಆಯೋಜಿಸಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್ ಅವರು ಇಂದು ಮೇಳವನ್ನು ಉದ್ಘಾಟಿಸಿದರು.

500ಕ್ಕೂ ಹೆಚ್ಚು ಬಗೆಯ ಮಾವು ಮತ್ತು 70 ತಳಿಗಳ ಹಲಸಿನ ಹಣ್ಣುಗಳು ಪ್ರದರ್ಶನಲ್ಲಿವೆ. ಮ್ಯಾಂಗಿಫೆರಾ ತಳಿಗಳು, ರಸಭರಿತ ಬಗೆಗಳು, ಅಪ್ಪೆಮಿಡಿ, ಹೈಬ್ರಿಡ್, ವಾಣಿಜ್ಯ ತಳಿಗಳ ಮಾವಿನ ಹಣ್ಣುಗಳು ಹಾಗೂ ಸಕ್ಕರೆ ಪಟ್ಟಣ, ಸಿದ್ದ, ಶಂಕರ, ರುದ್ರಾಕ್ಷಿ ಸೋಂದಾ, ಗುಂಗರಹಟ್ಟಿ, ತೀರ್ಥಹಳ್ಳಿ, ತೆನವರಿಕೆ ಮುಂತಾದ ತಳಿಗಳ ಹಲಸಿನ ಹಣ್ಣುಗಳು ಪ್ರದರ್ಶನದಲ್ಲಿವೆ. IIHR ವಿಜ್ಞಾನಿಗಳ ಪ್ರಕಾರ ಇದು ದೇಶದಲ್ಲೇ ವಿವಿಧ ಬಗೆಯ ಮಾವು ಮತ್ತು ಹಲಸಿನ ಹಣ್ಣುಗಳ ಅತಿದೊಡ್ಡ ಸಂಗ್ರಹವಾಗಿದೆ. ಮಾವು ಮತ್ತು ಹಲಸಿನ ಹಣ್ಣುಗಳ ವೈವಿಧ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಮೇಳದ ಉದ್ದೇಶವಾಗಿದೆ.

ಮಾವು ಮತ್ತು ಹಲಸಿನ ಹಣ್ಣುಗಳ ಮಾರಾಟ ಮಳಿಗೆಗಳ ಜೊತೆಗೆ, ನರ್ಸರಿ ಘಟಕ, ಕೃಷಿ ಸಲಕರಣೆಗಳ ಘಟಕ, ತರಕಾರಿ ಬೀಜಗಳ ಮಾರಾಟ ಕೇಂದ್ರಗಳನ್ನೂ ಮೇಳದಲ್ಲಿ ತೆರೆಯಲಾಗಿದೆ. ತೋಟಗಾರಿಕೆಗೆ ಸಂಬಂಧಿಸಿದ ಪುಸ್ತಕ ಹಾಗೂ ನಿಯತಕಾಲಿಕಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕಿಡಲಾಗಿದೆ.

ಎರಡು ದಿನಗಳ ಈ ಮೇಳಕ್ಕೆ ಸುಮಾರು 5,000 ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೇಳ ತೆರೆದಿರಲಿದ್ದು ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಇದೇ ರೀತಿಯ ಮೇಳವನ್ನು ಜೂನ್ 1 ಮತ್ತು 2 ರಂದು ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಲಾಗುವುದು.



(Release ID: 1572736) Visitor Counter : 130


Read this release in: English